ಕೆರೆ ಏರಿ, ಕೋಡಿಗಳು ಯಥಾಸ್ಥಿತಿ!


Team Udayavani, Nov 28, 2019, 3:10 AM IST

kere-ari

ಬೆಂಗಳೂರು: ಹುಳಿಮಾವು ಕೆರೆ ಏರಿ ಒಡೆದಿರುವುದು ದೊಡ್ಡ ಸುದ್ದಿಯಾಗಿದೆ. ಎಲ್ಲರ ದೃಷ್ಟಿ ಈಗ ಅದರತ್ತ ನೆಟ್ಟಿದೆ. ಆದರೆ, ಇದಕ್ಕೂ ಮುನ್ನ ಎರಡು ಕೆರೆಗಳು ಸುದ್ದಿಯಾಗಿದ್ದವು. ಅದಾಗಿ ಹದಿನೈದು ದಿನ ಕಳೆದರೂ ಸಮಸ್ಯೆಗಳು ಮಾತ್ರ ಇನ್ನೂ ಜೀವಂತವಾಗಿವೆ. ಪರಿಣಾಮ ಸ್ಥಳೀಯರು ಈಗಲೂ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.

ಯಶವಂತಪುರ ವಿಧಾನಸಭಾ ಕ್ಷೇತ್ರದ ದೊಡ್ಡಬಿದರಕಲ್ಲು ಕೆರೆ ಕೋಡಿ ಒಡೆದು ತಿಂಗಳಾಗಿದೆ. ಇನ್ನು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಹೊಸಕೆರೆ ಹಳ್ಳಿ ಕೆರೆ ಏರಿ ಒಡೆದು ಹದಿನೈದು ದಿನಗಳಾಗಿವೆ. ಎರಡೂ ಪ್ರದೇಶಗಳ ಸ್ಥಿತಿ ಚಿಂತಾಜನಕವಾಗಿದೆ. ಈಗಲೂ ಜೋರು ಮಳೆಯಾದರೆ, ತಗ್ಗು ಪ್ರದೇಶದಲ್ಲಿರುವ ಬಡವಾಣೆಗೆ ನೀರು ನುಗ್ಗಲಿದ್ದು, ಇಡೀ ಪ್ರದೇಶ ಮತ್ತೆ ಜಲಾವೃತವಾದರೂ ಅಚ್ಚರಿ ಇಲ್ಲ.

ಹುಳಿಮಾವು ಕೆರೆ ಏರಿ ಒಡೆದ ಬೆನ್ನಲ್ಲೇ “ಉದಯವಾಣಿ’ ಹಿಂದಿನ ಎರಡೂ ಘಟನೆಗಳು ನಡೆದ ಸ್ಥಳಕ್ಕೆ ಭೇಟಿ ನೀಡಿ ರಿಯಾಲಿಟಿ ಚೆಕ್‌ ನಡೆಸಿದ್ದು, ಅಲ್ಲಿನ ಚಿತ್ರಣ ಇಲ್ಲಿದೆ. ದೊಡ್ಡಬಿದರಕಲ್ಲು ಸುತ್ತಮತ್ತ ಇಂದಿಗೂ ಜನ ಆತಂಕದ ವಾತಾವರಣದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಮುಖ್ಯವಾಗಿ ಈ ಭಾಗದಲ್ಲಿನ ರಾಜಕಾಲುವೆ ಮಾರ್ಗಗಳು ಅತ್ಯಂತ ಕಿರಿದಾಗಿದ್ದು, ಸಣ್ಣ ಮಳೆಗೂ ಮನೆಗಳಿಗೆ ನೀರು ನುಗ್ಗಲಿದೆ.

ಅಲ್ಲದೆ, ಈ ಭಾಗದ ರಾಜಕಾಲುವೆಗಳಲ್ಲಿ ಕಟ್ಟಡ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಇದರ ಹೊರತಾಗಿ ನಿರ್ದಿಷ್ಟ ರಾಜಕಾಲುವೆ ಮಾರ್ಗವೇ ಈ ಭಾಗದಲ್ಲಿ ನಿರ್ಮಾಣವಾಗಿಲ್ಲ. “ವಸತಿ ಸಮುಚ್ಛಯಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರಾಜಕಾಲುವೆ ಮಾರ್ಗ ಬದಲಾಯಿಸಲಾಗಿದೆ’ ಎಂದು ಸ್ಥಳೀಯರಾದ ಬಾಲರಾಜು ಆರೋಪಿಸುತ್ತಾರೆ. ಅಲ್ಲದೆ, ಈ ಭಾಗದಲ್ಲಿ ಅನಾಹುತವಾದ ನಂತರವೂ ಹೇಳಿಕೊಳ್ಳುವಂತಹ ಯಾವುದೇ ಬದಲಾವಣೆಗಳು ಆಗಿಲ್ಲ. ರಸ್ತೆಗಳ ದುರಸ್ತಿ ಕಾರ್ಯವೂ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಬದಲಾಗದ ರಾಜಕಾಲುವೆಗಳ ಸ್ಥಿತಿ: ಅನಾಹುತ ಉಂಟಾಗಿದ್ದ ಎರಡೂ ಭಾಗಗಳಲ್ಲಿ ಮುಖ್ಯವಾಗಿ ರಾಜಕಾಲುವೆಗಳನ್ನು ಸ್ವಚ್ಛ ಮಾಡುವ, ಒತ್ತುವರಿ ತೆರವು ಮಾಡುವ ಕೆಲಸವಾಗಿಲ್ಲ. ಈ ಭಾಗದಲ್ಲಿ ರಾಜಕಾಲುವೆ ಮಾರ್ಗಗಳು ಬಹುತೇಕ ಕಿರಿದಾಗಿದ್ದು, ಅದನ್ನು ವಿಸ್ತರಿಸುವ ಕೆಸಲವಾಗಬೇಕಿದೆ. ಆದರೆ, ಈ ಬಗ್ಗೆ ಬಿಬಿಎಂಪಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ದೊಡ್ಡಬಿದರಕಲ್ಲು ಕೆರೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ, ಕೆಲವು ಭಾಗಗಳನ್ನು ಕಡೆಗಣಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಅದೇ ರೀತಿ ಕೋಡಿ ಒಡೆದು, ಜಲಾವೃತ್ತವಾಗಿದ್ದ ತಗ್ಗುಪ್ರದೇಶಗಳಲ್ಲಿ ಮತ್ತೆ ಸಮಸ್ಯೆಯಾಗದಂತೆ ತಡೆಯುವ ಯಾವ ಪ್ರಯತ್ನವನ್ನೂ ಬಿಬಿಎಂಪಿ ಮಾಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಇದು ಯಥಾಸ್ಥಿತಿ: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಹೊಸಕೆರೆಹಳ್ಳಿ ಏರಿ ಒಡೆದು ಅನಾಹುತ ಉಂಟಾದ ಮೇಲೂ ಈ ಕೆರೆಯನ್ನು ಕೇಳುವವರು ಇಲ್ಲ. ಈ ಕೆರೆ ಬಿಡಿಎ ಅಧೀನದಲ್ಲಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ, ಬಿಡಿಎ ಇದರ ನಿರ್ವಹಣೆ ಮಾಡಲಿದೆ ಎನ್ನುವುದು ಬಿಬಿಎಂಪಿ ಅಧಿಕಾರಿಗಳ ವಾದ. ಬಿಡಿಎ ತನ್ನ ಅಧೀನದಲ್ಲಿ ಇಂತಹದೊಂದು ಕೆರೆ ಇದೆ ಎನ್ನುವುದನ್ನೇ ಮರೆತಿರುವಂತಿದ್ದು, ಈ ಕೆರೆಗೆ ತಾತ್ಕಾಲಿಕ ತಡೆಗೋಡೆಯನ್ನು ಮಾತ್ರ ನಿರ್ಮಾಣ ಮಾಡಲಾಗಿದೆ. ಉಳಿದಂತೆ ಯಾವುದೇ ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿಲ್ಲ.

ಎರಡೂ ಕಡೆ ಶಾಸಕರಿಲ್ಲ: ರಾಜರಾಜೇಶ್ವರಿ ಮತ್ತು ಯಶವಂತಪುರ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರಿಲ್ಲದೆ ಇರುವುದು. ಈ ಕ್ಷೇತ್ರಗಳಲ್ಲಿನ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಸಿಗುತ್ತಿಲ್ಲ. ಅಷ್ಟೇ ಅಲ್ಲ, ಈ ಭಾಗಗಳಲ್ಲಿನ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎನ್ನುವುದು ತಿಳಿಯದೆ ಸಾರ್ವಜನಿಕರು ಪರದಾಡುತ್ತಿದ್ದಾರೆ.

ಅನಾಹುತಗಳಿಂದ ಕೋಟ್ಯಂತರ ರೂ.ನಷ್ಟ: ಕೆರೆ ಭಾಗದಲ್ಲಿ ಅನಿರೀಕ್ಷಿತವಾಗಿ ಉಂಟಾದ ಅನಾಹುತಗಳಿಂದ ಬಿಬಿಎಂಪಿಗೆ ಕೋಟ್ಯಂತರ ರೂ. ನಷ್ಟವಾಗಿದೆ. ದೊಡ್ಡಬಿದರಕಲ್ಲು ಏರಿ ಒಡೆದು 20 ಕೋಟಿ ಹಾಗೂ ಹುಳಿಮಾವು ಕೆರೆಯ ಭಾಗದಲ್ಲಿ ದೊಡ್ಡಬಿದರಕಲ್ಲು ಭಾಗದ ಮೂರು ಪಟ್ಟು ಹಾನಿಯಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಅಂದಾಜಿಸಿದ್ದಾರೆ. ಈ ಭಾಗದಲ್ಲಿನ ಸಂತ್ರಸ್ತರಿಗೆ ಬಿಬಿಎಂಪಿ ನಿಯಮಾನುಸಾರ ಪರಿಹಾರ ನೀಡಿದೆ. ಆದರೆ, ಬಹುತೇಕರಿಗೆ ಪರಿಹಾರ ಮೊತ್ತಕ್ಕಿಂತ ಹೆಚ್ಚು ಹಾನಿಯಾಗಿದೆ.

ಸಮನ್ವಯ ಸಭೆಗಳಲ್ಲಿ ಏನಾಗುತ್ತಿದೆ?: ಪ್ರತಿವಾರವೂ ಸರ್ಕಾರ ಬಿಬಿಎಂಪಿ, ಬಿಡಿಎ ಹಾಗೂ ಜಲ ಮಂಡಳಿ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳ ಸಮನ್ವಯ ಸಭೆ ನಡೆಸುತ್ತದೆ. ಇದರಲ್ಲಿ ಏಕೆ ಸಮಸ್ಯೆ ಗಳು ಪರಿಹಾರವಾಗುತ್ತಿಲ್ಲ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌ ಪ್ರಶ್ನೆ ಮಾಡಿದ್ದಾರೆ. ಮೂರು ಕೆರೆಗಳ ಹಾನಿಯಿಂದ ಯಾವುದೇ ಪ್ರಾಣಿ ಹಾನಿಯಾಗಿಲ್ಲ. ಆದರೆ, ಈ ಘಟನೆಗಳನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸಮಿತಿ ರಚನೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕೆರೆ ಏರಿ ಒಡೆಯಲು ಕಾರಣವೇನು?
ಬೆಂಗಳೂರು: ಹುಳಿಮಾವು ಕೆರೆ ಏರಿ ಒಡೆಯಲು ಕಾರಣವೇನು, ಅದರ ಹಿನ್ನೆಲೆಯೇನು ಅನ್ನುವುದನ್ನು ಪತ್ತೆ ಹಚ್ಚಲು ಸೂಕ್ತ ತನಿಖೆ ನಡೆಸಿ ಡಿ.17ರೊಳಗೆ ವರದಿ ಸಲ್ಲಿಸುವಂತೆ ಹೈಕೋರ್ಟ್‌ ಸರ್ಕಾರಕ್ಕೆ ಆದೇಶಿಸಿದೆ. ನಗರದ ಕೆರೆಗಳ ಸಂರಕ್ಷಣೆ ಹಾಗೂ ರಾಜಕಾಲುವೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಿಗೆ ವಕೀಲೆ ಗೀತಾ ಮಿಶ್ರಾ ಎಂಬವರು ಸಲ್ಲಿಸಿದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕಾ ಮತ್ತು ನ್ಯಾ. ಪ್ರದೀಪ್‌ ಸಿಂಗ್‌ ಯೆರೂರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ಈ ಆದೇಶ ನೀಡಿದೆ.

ವಿಚಾರಣೆ ವೇಳೆ, ಕೆರೆ ಏರಿ ಒಡೆದು ಜನರಿಗೆ ತೊಂದರೆಯಾಗಿದೆ. ಆದರೆ, ಬಿಬಿಎಂಪಿ ಹಾಗೂ ಬಿಡಿಎ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ. ಇದು ಸರಿಯಲ್ಲ ಎಂದ ನ್ಯಾಯಪೀಠ, ಬಿಬಿಎಂಪಿ ಹಾಗೂ ಬಿಡಿಎ ಮಧ್ಯೆ ಸರ್ಕಾರ ಮಧ್ಯಸ್ತಿಕೆ ವಹಿಸಬೇಕು. ಘಟನೆಗೆ ಕಾರಣವೇನೆಂದು ಪತ್ತೆಹಚ್ಚಲು ಸೂಕ್ತ ತನಿಖೆ ನಡೆಸಿ ಡಿ.17ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿತು.

ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು. ಅದಕ್ಕಾಗಿ ಅಗತ್ಯವಿದ್ದರೆ ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್‌ ಸಂಸ್ಥೆ (ನೀರಿ) ಸಹಾಯವನ್ನೂ ಪಡೆಯಬಹುದು ಎಂದು ಸಲಹೆ ನೀಡಿದ ನ್ಯಾಯಪೀಠ, ಕಳೆದೊಂದು ತಿಂಗಳ ಅವಧಿಯಲ್ಲಿ ಮೂರು ಕೆರೆಗಳ ಏರಿ ಒಡೆದಿವೆ. ಇಂತಹ ಅನಾಹುತಗಳನ್ನು ತಡೆಯಲು ಯಾವ ಕ್ರಮ ಕೈಗೊಳ್ಳಲಾಗುತ್ತದೆ, ಕೆರೆ ಒಡೆದ ಪರಿಣಾಮ ತೊಂದರೆಗೀಡಾಗಿರುವ ಸಾವಿರಾರು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಕೈಗೊಳ್ಳುವ ಕ್ರಮಗಳ ಬಗ್ಗೆಯೂ ಮುಂದಿನ ವಿಚಾರಣೆ ವೇಳೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಡಿ.17ಕ್ಕೆ ಮುಂದೂಡಿತು.

ಬಡವರಿಗೆ ಮೋಸವಾಗದಂತೆ ಎಚ್ಚರ ವಹಿಸಿ: ಬಿಬಿಎಂಪಿ ಆಯುಕ್ತ
ಬೆಂಗಳೂರು: ಹುಳಿಮಾವು ಕೆರೆಯ ಏರಿ ಒಡೆದದ್ದರಿಂದ ಸಂತ್ರಸ್ತರಾಗಿರುವ ಬಡವರಿಗೆ ಪರಿಹಾರ ನೀಡುವುದರಲ್ಲಿ ಯಾವುದೇ ಮೋಸವಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಹೇಳಿದ್ದಾರೆ.

ಈ ಸಂಬಂಧ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿಯವರೆಗೂ 353 ಮನೆಗಳ ಸರ್ವೇ ಕಾರ್ಯಾಚರಣೆ ನಡೆದಿದ್ದು, ಇದರಲ್ಲಿ 153 ಕುಟುಂಬಗಳಿಗೆ ತಲಾ 50 ಸಾವಿರದಂತೆ ಪರಿಹಾರ ನೀಡಲಾಗಿದೆ. ಬಡವರಿಗೆ ಆದ್ಯತೆ ಮೇಲೆ ಪರಿಹಾರ ನೀಡಲಾಗಿದೆ. ಉಳಿದ 200 ಕುಟುಂಬಗಳಲ್ಲಿ ಕೆಲವರು ಆರ್ಥಿಕವಾಗಿ ಸದೃಢವಾಗಿದ್ದು, ಅವರಿಗೆ ಪರಿಹಾರ ನೀಡುವ ಬಗ್ಗೆ ಮತ್ತೂಮ್ಮೆ ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದರು.

ವಂಚಿಸಿದವರಿಗೆ ಪರಿಹಾರವಿಲ್ಲ: ಈ ಭಾಗದಲ್ಲಿ ಕೆಲವರು ದಾಖಲೆಗಳಲ್ಲಿ ಪಾರ್ಕಿಂಗ್‌ ತಾಣ ಎಂದು ತೋರಿಸಿ ಅಕ್ರಮವಾಗಿ ವಾಣಿಜ್ಯ ಚಟುವಟಿಕೆ ನಡೆಸಿರುವುದು ಕಂಡು ಬಂದಿದೆ. ಈ ರೀತಿ ಬಿಬಿಎಂಪಿಗೆ ವಂಚನೆ ಮಾಡಿದವರಿಗೆ ಯಾವುದೇ ಪರಿಹಾರ ನೀಡುವುದಿಲ್ಲ. ಮೋಸ ಮಾಡಿದವರ ಮೇಲೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎನ್ನುವ ನಿಟ್ಟಿನಲ್ಲೂ ಚರ್ಚೆ ನಡೆಯುತ್ತಿದೆ ಎಂದು ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದ್ದಾರೆ.

ದೊಡ್ಡಬಿದರಕಲ್ಲು ಕೆರೆ ಕೋಡಿ ಒಡೆದದ್ದರಿಂದ ನಮಗೆ ಅಂದಾಜು ಒಂದು ಲಕ್ಷ ರೂ. ಹಾನಿಯಾಗಿದೆ. ಹಂತ ಹಂತವಾಗಿ ಪರಿಹಾರ ನೀಡುತ್ತಿದ್ದೇವೆ ಎಂದು ಬಿಬಿಎಂಪಿಯ ಅಧಿಕಾರಿಗಳು ಹೇಳಿದ್ದಾರೆ. ಇಲ್ಲಿಯವರೆಗೆ ಪರಿಹಾರ ಸಿಕ್ಕಿಲ್ಲ.
-ಮಮತಾ, ದೊಡ್ಡಬಿದರಕಲ್ಲು ವಾರ್ಡ್‌ ನಿವಾಸಿ

ದೊಡ್ಡಬಿದರಕಲ್ಲು ವಾರ್ಡ್‌ನ ವಿವಿಧೆಡೆ ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ಸರ್ವೇ ಕಾರ್ಯಾಚರಣೆ ನಡೆಯುತ್ತಿದ್ದು, ಶೀಘ್ರವೇ ಲೋಪಗಳನ್ನು ಸರಿಪಡಿಸಲಾಗುವುದು. ವಾರ್ಡ್‌ಗಳಲ್ಲಿನ ಸಂತ್ರಸ್ತರಿಗೆ ಪರಿಹಾರ ನೀಡಲಾಗಿದೆ.
-ಲೋಕೇಶ್‌, ದಕ್ಷಿಣ ಮತ್ತು ಆರ್‌.ಆರ್‌. ನಗರ, ವಿಶೇಷ ಆಯುಕ್ತ (ಹಣಕಾಸು)

* ಹಿತೇಶ್‌ ವೈ

ಟಾಪ್ ನ್ಯೂಸ್

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.