ಮಿಂಟೋದಲ್ಲಿ ಲಾಸಿಕ್ ಲೇಸರ್ ಚಿಕಿತ್ಸೆ
Team Udayavani, Jan 24, 2019, 6:36 AM IST
ಬೆಂಗಳೂರು: ಸಾಮಾನ್ಯರ ಪಾಲಿಗೆ ದುಬಾರಿ ಎನಿಸಿರುವ ಲಾಸಿಕ್ ಲೇಸರ್ ಚಿಕಿತ್ಸೆ ಕಡಿಮೆ ದರದಲ್ಲಿ ದೊರಕಿಸಿಕೊಡಲು ಮಿಂಟೋ ಆಸ್ಪತ್ರೆ ಮುಂದಾಗಿದ್ದು, ಈ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ಸೀಮಿತವಾಗಿದ್ದ ಲೇಸರ್ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲೂ ಲಭ್ಯವಾಗಲಿದೆ.
ಇತ್ತೀಚಿನ ದಿನಗಳಲ್ಲಿ ಐದಾರು ವರ್ಷದ ಮಕ್ಕಳಲ್ಲಿಯೇ ದೃಷ್ಟಿ ದೋಷ ಕಾಣಿಸಿಕೊಳ್ಳುತ್ತಿದ್ದು, ಸ್ಪಷ್ಟ ದೃಷ್ಟಿಗೆ ಆ ಮಕ್ಕಳು ಜೀವನ ಪೂರ್ತಿ ಕನ್ನಡಕ ಧರಿಸಬೇಕಾಗುತ್ತದೆ. ಕನ್ನಡಕ ಬೇಡ ಎನ್ನುವರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗಿ ದುಬಾರಿ ಲ್ಯಾಸಿಕ್ ಚಿಕಿತ್ಸೆ (ಲೇಜರ್ ಚಿಕಿತ್ಸೆ) ಪಡೆದುಕೊಳ್ಳುತ್ತಿದ್ದರು. ಈಗ ಮಿಂಟೋ ಆಸ್ಪತ್ರೆಯಲ್ಲಿ ಈ ಲೇಜರ್ ಚಿಕಿತ್ಸೆ ಸೌಲಭ್ಯ ಆರಂಭವಾಗುತ್ತಿದ್ದು, ಶೇ.50 ರಿಯಾಯಿತಿಯಲ್ಲಿ ದೊರೆಯಲಿದೆ.
12 ಕೋಟಿ ವೆಚ್ಚದ ಯಂತ್ರೋಪಕರಣ: ಎರಡು ವರ್ಷದ ಹಿಂದೆಯೇ ಮಿಂಟೋ ಆಸ್ಪತ್ರೆ ಹೊಸ ಕಟ್ಟಡಕ್ಕೆ ಬಂದರೂ, ಆಸ್ಪತ್ರೆಯಲ್ಲಿ ಹಳೆಯ ಉಪಕರಣಗಳನ್ನು ಬಳಸಲಾಗುತ್ತಿತ್ತು. ಈಗ ಆಸ್ಪತ್ರೆಯನ್ನು ಉನ್ನತೀಕರಿಸುವ ನಿಟ್ಟಿನಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಲಾಸಿಕ್ ಯಂತ್ರ, ಸಿ3ಆರ್ ಯಂತ್ರ, ವಿಕ್ಟ್ರಾಕ್ಟಮಿ ಸೇರಿದಂತೆ 14 ಉಪಕರಣಗಳು ಆಸ್ಪತ್ರೆಗೆ ಬಂದಿವೆ.
ಇವುಗಳಲ್ಲಿ ಲೇಜರ್ ಚಿಕಿತ್ಸೆ, ಕಣ್ಣಿನಲ್ಲಿ ರಕ್ತಸ್ರಾವ ಹಾಗೂ ಕಾರ್ನಿಯಾ ಕೊಲಾಜಿಂಗ್ ಕ್ರಾಸ್‌ಲಿಂಕಿಂಗ್ ಸಮಸ್ಯೆಗಳಿಗೆ ಚಿಕಿತ್ಸೆ ನೀಡಬಹುದು. ಅವುಗಳಲ್ಲಿ ಬಹುತೇಕ ಉಪಕರಣಗಳು ವಿದೇಶಿ ಉಪಕರಣಗಳಾಗಿವೆ ಎಂದು ಆಸ್ಪತ್ರೆ ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು.
ಈಗಾಗಲೇ ಯಂತ್ರಗಳು ಆಸ್ಪತ್ರೆಗೆ ಬಂದಿದ್ದು, ಅವುಗಳ ಪ್ರಾಯೋಗಿಕ ಪರೀಕ್ಷೆಯನ್ನು ಗುರುವಾರ (ಜ.24)ಮಾಡಲಾಗುತ್ತಿದೆ. ಯಂತ್ರೋಪಕರಣಗಳು ಅತ್ಯಂತ ಉತ್ಕೃಷ್ಟವಾಗಿದ್ದು, ನಮ್ಮ ಸಿಬ್ಬಂದಿಗಳಿಗೆ ಅವುಗಳ ಬಗ್ಗೆ ತಿಳಿವಳಿಕೆ ಹಾಗೂ ಅವುಗಳ ವಸ್ತುಸ್ಥಿತಿಯನ್ನು ಕಂಡು ಕೊಳ್ಳಲು ಪ್ರಯೋಗಿಕ ಪರೀಕ್ಷೆ ಮಾಡಲಾಗುತ್ತಿದೆ. ಪರೀಕ್ಷೆಯ ಯಶಸ್ಸನ್ನು ಆಧರಿಸಿ ಚಿಕಿತ್ಸೆ ಆರಂಭಿಸುವ ದಿನಾಂಕವನ್ನು ನಿಗದಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಫೆಬ್ರವರಿ ಅಂತ್ಯಕ್ಕೆ ಚಿಕಿತ್ಸೆ ಆರಂಭ: ಮಿಂಟೋದಲ್ಲಿ ಅನೇಕ ಶಸ್ತ್ರಚಿಕಿತ್ಸೆಗಳನ್ನು ಮ್ಯಾನುಯಲ್ ಮಾದರಿಯಲ್ಲೇ ಮಾಡಲಾಗುತ್ತಿದೆ. ಈಗ ಹೊಸ ಉಪಕರಣಗಳು ಆಸ್ಪತ್ರೆಗೆ ಬಂದಿದ್ದು, ಅವುಗಳಿಗೆ ಫೆಬ್ರವರಿಯಲ್ಲಿ ಅಧಿಕೃತವಾಗಿ ಸಚಿವರು ಚಾಲನೆ ನೀಡಲಿದ್ದಾರೆ. ಆ ತಿಂಗಳ ಅಂತ್ಯಕ್ಕೆ ಲೇಜರ್ ಚಿಕಿತ್ಸೆ ಸೇರಿದಂತೆ ವಿವಿಧ ಅತ್ಯಾಧುನಿಕ ಚಿಕಿತ್ಸೆಗಳು ಆರಂಭವಾಗಲಿವೆ. ಆಸ್ಪತ್ರೆಯಲ್ಲಿ 8 ಶಸ್ತ್ರಚಿಕಿತ್ಸಾ ಕೊಠಡಿಗಳಿದ್ದು, ಎಲ್ಲದಕ್ಕೂ ಹೊಸ ಉಪಕರಣಗಳನ್ನು ಅಳವಡಿಸಲಾಗುತ್ತಿದೆ ಎಂದು ವೈದ್ಯಾಧಿಕಾರಿ ವೆಂಕಟೇಶ್ ತಿಳಿಸಿದರು.
ದರ ಶೇ.50ರಷ್ಟು ಕಡಿಮೆ: ಪ್ರಸ್ತುತ ಲಾಸಿಕ್ ಸರ್ಜರಿಗೆ ಖಾಸಗಿ ಆಸ್ಪತ್ರೆಯಲ್ಲಿ 80 ಸಾವಿರದಿಂದ 1 ಲಕ್ಷ ರೂ. ಶುಲ್ಕವಿದೆ. ಆದರೆ, ಮಿಂಟೋದಲ್ಲಿ ಈ ಚಿಕಿತ್ಸೆಗಳು ಶೇ.50ರಷ್ಟು ರಿಯಾಯಿತಿಯಲ್ಲಿ ಲಭ್ಯವಾಗುವುದರಿಂದ 40 ಸಾವಿರ ರೂ.ಗಿಂತ ಕಡಿಮೆ ವೆಚ್ಚದಲ್ಲಿ ಎರಡೂ ಕಣ್ಣಿನ ಲಾಸಿಕ್ ಸರ್ಜರಿ ಆಗಲಿದೆ. ಜತೆಗೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಸ್ತುತ ಲಭ್ಯವಿರುವ ಎಲ್ಲಾ ಚಿಕಿತ್ಸೆಗಳು ಇಲ್ಲಿ ಅರ್ಧದಷ್ಟು ಬೆಲೆಗೆ ಸಿಗಲಿವೆ. ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿ ಶುಲ್ಕ ನಿಗದಿ ಮಾಡಲಾಗುವುದು ಎಂದು ಮಿಂಟೋ ನಿರ್ದೇಶಕಿ ಸುಜಾತಾ ರಾಥೋಡ್ ತಿಳಿಸಿದರು.
ಆಯುಷ್ಮಾನ್ ಭಾರತದಲ್ಲಿ ಲಭ್ಯವಿಲ್ಲ: ಕಣ್ಣಿನ ಲೇಜರ್ ಚಿಕಿತ್ಸೆಯು ಸೌಂದರ್ಯ ವರ್ಧಕ ಚಿಕಿತ್ಸೆ ಗುಂಪಿಗೆ ಬರುವ ಕಾರಣ, ಅದು ಆರೋಗ್ಯ ಕರ್ನಾಟಕ, ಆಯುಷ್ಮಾನ್ ಭಾರತ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ಈ ಚಿಕಿತ್ಸೆಗೆ ಕಡ್ಡಾಯವಾಗಿ ಶುಲ್ಕ ನೀಡಬೇಕಿದೆ. ಅಲ್ಲದೇ ರಾಜ್ಯ ಸರ್ಕಾರಿ ಆಸ್ಪತ್ರೆಗಳಲ್ಲೇ ಮೊದಲ ಬಾರಿ ಮಿಂಟೋ ಆಸ್ಪತ್ರೆಯಲ್ಲಿಯೇ ಈ ಸೇವೆ ಲಭ್ಯವಾಗುತ್ತಿದೆ.
ಅತಿ ಕಡಿಮೆ ವೆಚ್ಚದಲ್ಲಿ ಮಿಂಟೋ ಆಸ್ಪತ್ರೆಯಲ್ಲಿ ಲೇಸರ್ ಚಿಕಿತ್ಸೆ ಆರಂಭವಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಸಿಗುತಿದ್ದ ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನು ಇನ್ನು ಮುಂದೆ ಅರ್ಧದಷ್ಟು ದರದಲ್ಲಿ ಪಡೆಯಬಹುದಾಗಿದೆ. ಅತ್ಯಾಧುನಿಕ ಚಿಕಿತ್ಸೆಗಳಿಗಾಗಿ 12 ಕೋಟಿ ರೂ. ಮೌಲ್ಯದ ಯಂತ್ರೋಪಕರಣಗಳನ್ನು ಅಳವಡಿಸುತ್ತಿದ್ದು, ಫೆಬ್ರವರಿ ಅಂತ್ಯಕ್ಕೆ ಚಿಕಿತ್ಸೆ ಚಾಲನೆ ದೊರೆಯಲಿದೆ.
-ಡಾ. ಸುಜಾತಾ ರಾಥೋಡ್, ಮಿಂಟೋ ಆಸ್ಪತ್ರೆ ನಿರ್ದೇಶಕಿ
* ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.