ಸಮೀಕ್ಷೆ ಸೈ ಎಂದರಷ್ಟೇ ಎಲ್‌ಇಡಿ ಬೆಳಕು
Team Udayavani, Jan 10, 2020, 10:49 AM IST
ಸಾಂಧರ್ಬಿಕ ಚಿತ್ರ
ಬೆಂಗಳೂರು: ನಗರದ ಬೀದಿಗಳಲ್ಲಿ ಎಲ್‌ಇಡಿ ಬೆಳಕು ಚೆಲ್ಲಿ ಪಾಲಿಕೆಯ ಆರ್ಥಿಕ ಸೋರಿಕೆ ತಡೆಯುವ ಬಿಬಿಎಂಪಿಯ ಮಹಾತ್ವಾಕಾಂಕ್ಷಿ “ಎಲ್‌ಇಡಿ ದೀಪ ಯೋಜನೆ’ ಈಗ ಸಮೀಕ್ಷಾ ವರದಿಯ ಮೇಲೆ ನಿಂತಿದೆ!
ನಗರದಲ್ಲಿ ಸಾಂಪ್ರದಾಯಿಕ ದೀಪಗಳ ಬದಲಿಗೆ ಎಲ್‌ಇಡಿ ದೀಪಗಳನ್ನು ಅಳವಡಿಸುವ ಯೋಜನೆ ಅನುಷ್ಠಾನ ಕುರಿತು ಸಮೀಕ್ಷೆ ನಡೆಸಲು ಪ್ರೈಸ್ ವಾಟರ್ ಹೌಸ್ ಕೂಪರ್ ಇಂಡಿಪೆಂಡೆಂಟ್ ಎಂಜಿನಿಯರ್ ಎಂಬ ಸಂಸ್ಥೆಗೆ ಕಾರ್ಯಾದೇಶ ನೀಡಲು ಪಾಲಿಕೆ ಮುಂದಾಗಿದ್ದು, ಮುಂದಿನ ಪಾಲಿಕೆ ಸಭೆಯಲ್ಲಿ ಇದಕ್ಕೆ ಅನುಮೋದನೆ ಪಡೆದುಕೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯ 4.85 ಲಕ್ಷ ಬೀದಿ ದೀಪಗಳನ್ನು ಎಲ್ ಇಡಿ ದೀಪಗಳನ್ನಾಗಿ ಪರಿವರ್ತಿಸುವ ಯೋಜನೆಗೆ ಈ ಹಿಂದೆ ಅನುಮೋದನೆ ಪಡೆದುಕೊಳ್ಳಲಾಗಿತ್ತು. ಇದರಿಂದ ವಾರ್ಷಿಕ ವಿದ್ಯತ್ ಬಿಲ್‌ನಲ್ಲಿ ಪಾಲಿಕೆಗೆ 175 ಕೋಟಿ ರೂ. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿತ್ತು. ಶಾಪೂರ್ಜಿ ಪಲ್ಲೋಂಜಿ ಕನ್ಸೋರ್ಟಿಯಂ ಕಂಪನಿಯು ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿದೆ. ಈ ಸಂಸ್ಥೆಗೆ ಕಾರ್ಯದೇಶ ನೀಡುವುದಕ್ಕೂ ಮುನ್ನ ಪ್ರೈಸ್ ವಾಟರ್‌ಹೌಸ್ ಕೂಪರ್ ಸಂಸ್ಥೆಯಿಂದ ನಗರದಲ್ಲಿ ಎಲ್ಲೆಲ್ಲಿ ಸಾಂಪ್ರದಾಯಿಕ ದೀಪಗಳಿವೆ, ಎಲ್‌ಇಡಿ ದೀಪಗಳನ್ನು ಅಳವಡಿಸುವುದರಿಂದ ಪಾಲಿಕೆಗೆ ನಿಜಕ್ಕೂ ಲಾಭವಾಗಲಿದೆಯೇ, ಇದರ ಸಾಮರ್ಥ್ಯವೇನು ಎನ್ನುವುದು ಸೇರಿದಂತೆ ಸಮಗ್ರ ವರದಿ ನೀಡುವ ಸಂಬಂಧ ಸಮೀಕ್ಷೆ ನಡೆಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕಂಪನಿಯು 6 ಕೋಟಿ ರೂ. ನಮೂದಿಸಿದ್ದು ಈಗ ಅಂತಿಮ ಹಂತ ತಲುಪಿದೆ.
ಈ ಬಗ್ಗೆ ಉದಯವಾಣಿಗೆ ಪ್ರತಿಕ್ರಿಯೆ ನೀಡಿದ ಮೇಯರ್ ಎಂ.ಗೌತಮ್‌ಕುಮಾರ್, “ಈ ಪ್ರಸ್ತಾವನೆ ಹಲವು ದಿನಗಳಿಂದ ನನೆಗುದಿಗೆ ಬಿದ್ದಿದೆ. ಎಲ್‌ಇಡಿ ದೀಪಗಳ ಬಗ್ಗೆ ಲೋಪದೋಷಗಳು ಕಂಡು ಬರುತ್ತಿವೆ. ಅವರಿಂದ ಪಾಲಿಕೆಗೆ ಲಾಭವಿಲ್ಲ’ ಎಂದರು. ಈ ನಿಟ್ಟಿನಲ್ಲಿ ಪರಿಶೀಲಿಸಿ ಗುಣಮಟ್ಟದಲ್ಲಿ ಇದ್ದರೆ ಮಾತ್ರ ತೆಗೆದುಕೊಳ್ಳಿ ಇಲ್ಲವಾದರೆ, ಟೆಂಡರ್ ರದ್ದುಪಡಿಸಿ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಅವರಿಗೆ ಸಲಹೆ ನೀಡಿದ್ದೇನೆ ಎಂದು ಹೇಳಿದರು.
ಎಲ್‌ಇಡಿ ಅಳವಡಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಪರಿಶೀಲನೆ ಮಾಡುವುದಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಸಂಸ್ಥೆಯಿಂದ ಪರಿಶೀಲನೆ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ “ಸಮೀಕ್ಷೆಯ ಬಗ್ಗೆ ಆಯುಕ್ತರೊಂದಿಗೆ ಚರ್ಚೆ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.
ನಗರದಲ್ಲಿ ಎಲ್‌ಇಡಿ ಬಳಕೆಯಿಂದ ಶೇ.85ರಷ್ಟು ವಿದ್ಯುತ್ ಉಳಿತಾಯವಾಗಲಿದೆ ಎಂದು ಖಾಸಗಿ ಸಂಸ್ಥೆ ಹೇಳಿತ್ತು. ಆದರೆ, ಸಮೀಕ್ಷೆ ಪೂರ್ಣಗೊಳ್ಳದ ಹೊರತು, ಎಲ್‌ಇಡಿ ದೀಪಗಳ ಅಳವಡಿಕೆಯ ಗುತ್ತಿಗೆ ಪಡೆದಿರುವ ಕಂಪನಿ ಕೆಲಸ ಆರಂಭಿಸಲು ಆಗುವುದಿಲ್ಲ. ಈ ರೀತಿಯ ಗೊಂದಲಗಳಿಂದ ಯೋಜನೆ ನನೆಗುದಿಗೆ ಬಿದ್ದಿತ್ತು. ಈಗ ಸಮೀಕ್ಷೆ ನಡೆಸಲು ಪಾಲಿಕೆ ಮುಂದಾಗಿದ್ದು, ಸಮೀಕ್ಷಾ ವರದಿಯಲ್ಲಿ ಯೋಜನೆಯ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಮಾತ್ರ ಯೋಜನೆ ಅನುಷ್ಠಾನವಾಗಲಿದೆ. ಹೆಸರು ಹೇಳಲಿಚ್ಛಿಸದ ಬಿಬಿಎಂಪಿಯ ಅಧಿಕಾರಿಗಳು ಹೇಳುವಂತೆ ಈ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಮೇಯರ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಹೀಗಾಗಿ, ಯೋಜನೆ ಕೈಬಿಡುವ ಸಾಧ್ಯತೆಯೂ ಇದೆ ಎಂದಿದ್ದಾರೆ. ಎಲ್‌ಇಡಿ ಬೀದಿ ದೀಪಗಳ ಅಳವಡಿಕೆ ಯೋಜನೆಗೆ ಬಿಬಿಎಂಪಿ ಹಣ ಖರ್ಚು ಮಾಡುತ್ತಿಲ್ಲ. ಖಾಸಗಿ ಸಂಸ್ಥೆಯೇ 10 ವರ್ಷ ನಿರ್ವಹಣೆ ಮಾಡಲಿತ್ತು. ಒಟ್ಟು 800 ಕೋಟಿ ರೂ. ಹೂಡಿಕೆ ಮಾಡುವುದಾಗಿ ಹಾಗೂ ಪ್ರತಿ ತಿಂಗಳ ವಿದ್ಯುತ್ ಬಿಲ್‌ನಲ್ಲಿ 17 ಕೋಟಿ ರೂ. ಉಳಿಯವಾಗಲಿದೆ ಎಂದೂ ಅಂದಾಜಿಸಲಾಗಿತ್ತು. ಪೈಕಿ 13.50 ಕೋಟಿ ರೂ.ಗಳನ್ನು ಪಾಲಿಕೆಯೇ ಕಂಪನಿಗೆ ಪಾವತಿ ಮಾಡುವ ಕುರಿತು ಒಪ್ಪಂದವಾಗಿತ್ತು. ಪಾಲಿಕೆ ವ್ಯಾಪ್ತಿಯಲ್ಲಿ 4.85 ಲಕ್ಷ ಬೀದಿ ದೀಪಗಳಿದ್ದು, ಇವುಗಳ ವಾರ್ಷಿಕ ವಿದ್ಯುತ್ ವೆಚ್ಚ 200 ಕೋಟಿ ರೂ. ಬರುತ್ತಿದೆ. 40ರಿಂದ 50 ಕೋಟಿ ರೂ. ನಿರ್ವಹಣೆಗೆ ಖರ್ಚಾಗುತ್ತಿದೆ. ಇದನ್ನು ಉಳಿಸುವ ಉದ್ದೇಶದಿಂದಲೇ ಈ ಯೋಜನೆ ರೂಪಿಸಿಕೊಳ್ಳಲಾಗಿತ್ತು. ನಂತರದ ದಿನಗಳಲ್ಲಿ ಹಲವು ಗೊಂದಲಗಳು ಸೃಷ್ಟಿಯಾಗಿತ್ತು.
ಸಮೀಕ್ಷೆಗೆ ಕಾರ್ಯಾದೇಶ ನೀಡಲು ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲಾಗುವುದು. ವರದಿ ನೋಡಿಕೊಂಡು ಯೋಜನೆ ಅನುಷ್ಠಾನದ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು. –ಬಿ.ಎಚ್.ಅನಿಲ್‌ಕುಮಾರ್, ಬಿಬಿಎಂಪಿ ಆಯುಕ್ತ
-ಹಿತೇಶ್ ವೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.