ಕೌರ್ಯ ಭಾವಹಿಂಸೆ ಎರಡೂ ನಿಲ್ಲಲಿ
Team Udayavani, Jan 23, 2018, 11:59 AM IST
ಬೆಂಗಳೂರು: ಭಯೋತ್ಪಾದನೆಯಂತಹ ಕ್ರೂರಹಿಂಸೆ ಮತ್ತು ಮನಸ್ಸಿಗೆ ನೀಡುವ ಭಾವಹಿಂಸೆ ಎರಡೂ ನಿಲ್ಲಬೇಕೆನ್ನುವ ಆಶಯದೊಂದಿಗೆ ಶ್ರೀ ಬಾಹುಬಲಿ ಅಹಿಂಸಾದಿಗ್ವಿಜಯಂ ರಚನೆ ಮಾಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಹಾಗೂ ಸರಸ್ವತಿ ಸಮ್ಮಾನ ಪುರಸ್ಕೃತರಾದ ಡಾ.ಎಂ.ವೀರಪ್ಪ ಮೊಯ್ಲಿ ಹೇಳಿದರು.
ಸೋಮವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ತಮ್ಮ ಶ್ರೀ ಬಾಹುಬಲಿ ಅಹಿಂಸಾದಿಗ್ವಿಜಯಂ ಮಹಾಕಾವ್ಯದ ಕುರಿತು ಮಾತನಾಡಿದ ಅವರು, ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕಕ್ಕೆ ತಯಾರಿ ನಡೆಯುತ್ತಿದೆ. ಇಂತಹ ಶುಭಗಳಿಗೆಯಲ್ಲಿ ಬಾಹುಬಲಿಗೆ ಕಾವ್ಯಾಭಿಷೇಕ ಮಾಡಲು ಈ ಮಹಾಕಾವ್ಯ ರಚಿಸಿದ್ದೇನೆ. ಅಹಿಂಸೆಯ ಪ್ರತಿಪಾದಕನಾಗಿದ್ದ ಬಾಹುಬಲಿಯನ್ನು ನೆನೆಯುತ್ತಾ 21ನೇ ಶತಮಾನದ ಕ್ರೂರಹಿಂಸೆ ಮತ್ತು ಭಾವಹಿಂಸೆ ದೂರಾಗಬೇಕು ಎಂದು ಹೇಳಿದರು.
ಆರಂಭದಲ್ಲಿ ಒಂದು ಕಾವ್ಯ ಬರೆಯುವ ಮನಸ್ಸು ಮಾಡಿದೆ. ಶ್ರೀ ರಾಮಾಯಣ ಮಹಾನ್ವೇಷಣಂ ಮಹಾಕಾವ್ಯ ಹೊರಬಂತು. ನಂತರ ಮಹಾಭಾರತದ ದ್ರೌಪದಿಯನ್ನು ಕಥಾನಾಯಕಿಯಾಗಿಟ್ಟುಕೊಂಡು ಸಿರಿಮುಡಿ ಪರಿಕ್ರಮಣ ಎಂಬ ಮಹಾಕಾವ್ಯ ರಚಿಸಿದೆ. ಇದಾದ ನಂತರ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಯವರ ಸಲಹೆಯಂತೆ ಶ್ರೀ ಬಾಹುಬಲಿ ಅಹಿಂಸಾದಿಗ್ವಿಜಯ ಮಹಾಕಾವ್ಯ ಬರೆದು ಮುಗಿಸಿದ್ದೇನೆ. ಜ.24ರಂದು ಶ್ರವಣಬೆಳಗೊಳದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ ಎಂದು ವಿವರಿಸಿದರು.
ಮೂಡುಬಿದಿರೆಯ ಜೈನರ ನಾಡಿನಲ್ಲಿ ಹುಟ್ಟಿ, ರತ್ನಾಕರವರ್ಣಿಯ ಕಾವ್ಯದಾಡಂಬರ ನೋಡಿ ಬೆಳದ ನಿಮ್ಮಿಂದ ಮಾತ್ರ ಬಾಹುಬಲಿ ಬಗ್ಗೆ ಮಹಾಕಾವ್ಯ ರಚಿಸಲು ಸಾಧ್ಯ ಎಂದು ಸ್ವಾಮೀಜಿಯವರು ಹೇಳಿದ ನಂತರವೇ ಮಹಾಕಾವ್ಯ ಬರೆಯಲು ಒಪ್ಪಿಕೊಂಡು, 2014ರಲ್ಲಿ ಬರೆಯಲು ಆರಂಭಿಸಿದೆ. ಇದಕ್ಕೆ ಸಂಬಂಧಿಸಿದಂತೆ ದೇಶ ವಿದೇಶದ ಪ್ರಸಿದ್ಧ ಮನಃಶಾಸ್ತ್ರ ಕೃತಿಗಳನ್ನು ಅಧ್ಯಯನ ಮಾಡಿದ್ದೇನೆ.
ಜೈನ ಸಿದ್ಧಾಂತದ ಸಂಶೋಧನೆ ನಡೆಸಿದ್ದೇವೆ ಹಾಗೂ ಹಿರಿಯರಿಂದ ಅನೇಕ ವಿಷಯವನ್ನು ಕೇಳಿಕೊಂಡಿದ್ದೇನೆ. ಶ್ರೀ ರಾಮಾಯಣ ಮಹಾನ್ವೇಷಣಂ ರಚನೆಗೆ 10 ವರ್ಷ, ಸಿರಿಮುಡಿ ಪರಿಕ್ರಮಣ ರಚನೆಗೆ 5 ವರ್ಷ ತೆಗೆದುಕೊಂಡಿತ್ತು. ಬಹುಬಲಿ ಕುರಿತಾದ ಮಹಾಕಾವ್ಯ ನಾಲ್ಕು ವರ್ಷದಲ್ಲಿ ಪೂರ್ಣಗೊಂಡಿದೆ ಎಂದು ಹೇಳಿದರು.
ಇದರ ಇಂಗ್ಲಿಷ್ ಅನುವಾದ ಕೂಡ ಸಿದ್ಧವಾಗಿದೆ. ಜೈನ ಸಾಹಿತ್ಯ, ಪುರಾಣ, ಭರತ-ಬಾಹುಬಲಿಯ ತ್ಯಾಗದ ಇತಿಹಾಸದ ಜತೆಗೆ 21ನೇ ಶತಮಾನದ ತಲ್ಲಣ, ಭಯೋತ್ಪಾದನೆ, ಹಿಂಸೆ, ಶೀತಲ ಸಮರ, ಶೋಷಣೆ, ದುರಾಕ್ರಮಣಗಳ ಮೇಲೆಯೂ ಬೆಳಕು ಚೆಲ್ಲಿದ್ದೇನೆ. ಈ ಮಹಾಕಾವ್ಯ ನನ್ನೊಳಗೂ ಬದಲಾವಣೆ ತಂದಿದೆ. ಮಾಂಸಹಾರದಿಂದ ಶಾಖಾಹಾರಕ್ಕೆ ಪರಿವರ್ತನೆ ಗೊಳ್ಳುವಂತೆ ಮಾಡಿದೆ ಎಂದು ಮನದ ಮಾತು ಹಂಚಿಕೊಂಡರು.
ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ಮಾತನಾಡಿ, ಆಧುನಿಕ ಮಹಾಕಾವ್ಯದಲ್ಲಿ ಬಾಹುಬಲಿ ಕೇಂದ್ರಿತವಾಗಿ ಯಾವ ಕಾವ್ಯವೂ ಬಂದಿಲ್ಲ. ಈ ಸಾಹಸವನ್ನು ಮೊಯ್ಲಿಯವರು ಮಾಡಿದ್ದಾರೆ. ಅಣುವಸ್ತ್ರದಿಂದ ಅನುವರ್ತದ ದಾರಿಗೆ ಕೊಂಡೊಯ್ಯುವ ವಿಶೇಷ ಕಾವ್ಯ ಇದಾಗಿದೆ. ರಾಮ, ಲಕ್ಷ್ಮಣ, ಭರತ ಹಾಗೂ ಬಾಹುಬಲಿ ಭಾರತದ ಸಾಂಸ್ಕೃತಿಕ ನಾಯಕರಾಗಿದ್ದು, ಬಾಹುಬಲಿ ಹೊರತುಪಡಿಸಿ ಬೇರೆಲ್ಲ ಬಗ್ಗೆಯೂ ಮಹಾಕಾವ್ಯ ಬಂದಿದೆ.
ಮೊಯ್ಲಿಯವರು ಬಾಹುಬಲಿಯ ಬಗ್ಗೆ ಬರೆದಿದ್ದಾರೆ. ಅಹಿಂಸೆ ದಿಗ್ವಿಜಯದ ಕಡೆಗೆ ಕೊಂಡೊಯ್ಯುವ ಕೃತಿ ಇದಾಗಿದೆ ಎಂದು ಹೇಳಿದರು. ಸಾಹಿತಿ ಪ್ರೊ. ಪದ್ಮಪ್ರಸಾದ್ ಜೈನ್ ಮಾತನಾಡಿ, ಜೈನ ಸಿದ್ಧಾಂತಗಳನ್ನು ಓದಿ, ನಾಲ್ಕು ವರ್ಷದ ಪರಿಶ್ರಮದಿಂದ ಈ ಮಹಾಕಾವ್ಯ ರಚನೆ ಮಾಡಿದ್ದಾರೆ. ಭರತನ ಅಸ್ಥಿತ್ವವನ್ನು ಕುಬjವಾಗಿಸದೇ,
ಕಥಾ ನಾಯಕನ ಗೌರವ ಕಡಿಮೆಯಾಗದ ರೀತಿಯಲ್ಲಿ ಮಹಾಕಾವ್ಯ ರಚನೆ ಮಾಡಿದ್ದಾರೆ. ಸಹನೆ ಮತ್ತು ತಾಳ್ಮೆ ಇದ್ದಾಗ ಮಾತ್ರ ಇಂತಹ ಕಾರ್ಯ ಮಾಡಿ ಮುಗಿಸಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಶಿಕ್ಷಣ ತಜ್ಞ ಡಾ.ಕೆ.ಇ.ರಾಧಾಕೃಷ್ಣ, ಸಾಹಿತಿ ಬೈರಮಂಗಲ ರಾಮೇಗೌಡ, ಮಾಹೇಶ್ವರಿ ಪ್ರಕಾಶನದ ಕೆ.ಆರ್.ಕಮಲೇಶ್ ಮೊದಲಾದವರು ಉಪಸ್ಥಿತರಿದ್ದರು.
ಚಿಕ್ಕಂದಿನಿಂದಲೂ ಸಣ್ಣ ಕಥೆ, ಕಾವ್ಯ ಹಾಗೂ ನಾಟಕಗಳನ್ನು ಬರೆಯುತ್ತಿದ್ದೆ. ಶಾಲೆಯಲ್ಲಿ ಅನೇಕ ಕಾರ್ಯಕ್ರಮಕ್ಕೆ ನಾನೇ ನಾಟಕ ಬರೆದುಕೊಟ್ಟಿದ್ದೇನೆ. ಸಾಹಿತ್ಯ ಆಸಕ್ತಿ ಇದ್ದುದ್ದರಿಂದಲೇ ಯಶಸ್ವಿ ರಾಜಕಾರಣಿ ಹಾಗೂ ಆಡಳಿತಾಗರನಾಗಲು ಸಾಧ್ಯವಾಗಿದ್ದು. ಸಮಯದ ಸದುಪಯೋಗ ಮಾಡಿಕೊಂಡಾಗ ಎಲ್ಲವೂ ಸಾಧ್ಯ. ಸಾಹಿತ್ಯದ ಕಾರ್ಯಕ್ಕೆ ರಾಜಕೀಯ ಎಂದೂ ಅಡ್ಡಿ ಬಂದಿಲ್ಲ.
-ಡಾ.ಎಂ.ವೀರಪ್ಪ ಮೊಯ್ಲಿ, ಸಂಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.