Bengaluru: ಬೆಟ್ಟಿಂಗ್‌ನಿಂದ ಸಾಲ: ಯುವಕ ಆತ್ಮಹತ್ಯೆ!
Team Udayavani, Dec 5, 2024, 1:02 PM IST
ಬೆಂಗಳೂರು: ಆನ್‌ಲೈನ್ ಬೆಟ್ಟಿಂಗ್‌ನ ಸಾಲದ ಸುಳಿಗೆ ಸಿಲುಕಿದ ಯುವಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ಪುರಂ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೆ.ಆರ್.ಪುರಂ ನಿವಾಸಿ ಪ್ರವೀಣ್ (20) ಆತ್ಮಹತ್ಯೆ ಮಾಡಿಕೊಂಡ ಯುವಕ. ಮೃತನ ತಂದೆ ಮುನಿಸ್ವಾಮಿ ನೀಡಿದ ದೂರಿನ ಮೇರೆಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರವೀಣ್‌ನ ಸ್ನೇಹಿತರಾದ ಸೋಮು, ಜಯಾ ಹಾಗೂ ಸಲ್ಮಾನ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬಿಬಿಎ ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿದ್ದ ಪ್ರವೀಣ್, ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾನೆ. ಕಳೆದ ಎರಡು ವರ್ಷಗಳಿಂದ ಆನ್‌ಲೈನ್ ಬೆಟ್ಟಿಂಗ್ ಆಟಕ್ಕೆ ದಾಸನಾಗಿದ್ದ. ಮನೆಯವರಿಂದ ಹಣ ಪಡೆದು ಬೆಟ್ಟಿಂಗ್ ಆಡಿ ಹಣ ಕಳೆದುಕೊಂಡಿದ್ದ. ಬೆಟ್ಟಿಂಗ್ ಆಡಲು ಸ್ನೇಹಿತರಿಂದಲೂ ಹಣ ಪಡೆದುಕೊಂಡಿದ್ದ. ಹಣ ವಾಪಸ್ ನೀಡದ ಕಾರಣಕ್ಕೆ ಆರೋಪಿತ ಸ್ನೇಹಿತರು ಪ್ರವೀಣ್ ಜತೆ ಗಲಾಟೆ ಮಾಡಿದ್ದರು. ಅದರಿಂದ ನೊಂದ ಪ್ರವೀಣ್, ನ.26ರಂದು ಬೆಳಗ್ಗೆ ಮನೆಯಲ್ಲೇ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂಲಗಳ ಪ್ರಕಾರ ಪ್ರವೀಣ್ 15 ಲಕ್ಷ ರೂ.ಗೂ ಅಧಿಕ ಸಾಲ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ. ಆತನ ಮೊಬೈಲ್ ಹಾಗೂ ಬ್ಯಾಂಕ್ ಮಾಹಿತಿ ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.