“ಲೋಕಾಯುಕ್ತ ಹಲ್ಲು ಕಿತ್ತ ಹಾವಿನಂತಾಗಿದೆ’
Team Udayavani, Jan 11, 2020, 3:06 AM IST
ಬೆಂಗಳೂರು: ಲೋಕಾಯುಕ್ತ ಸಂಸ್ಥೆಯ ಅಧಿಕಾರ ಕಸಿದುಕೊಳ್ಳಲಾಗಿದ್ದು, ಅದನ್ನು ದುರ್ಬಲ ಮಾಡಲಾಗಿದೆ. ಸದ್ಯ ಲೋಕಾಯುಕ್ತ ಸಂಸ್ಥೆಯು “ಹಲ್ಲು ಕಿತ್ತುಕೊಂಡ’ ಹಾವಿನ ಸ್ಥಿತಿಯಲ್ಲಿದೆ ಎಂದು ಲೋಕಾಯುಕ್ತ ಸಂಸ್ಥೆ ಪರ ವಕೀಲರು ಹೈಕೋರ್ಟ್‌ನಲ್ಲಿ ವಾದಿಸಿದ್ದಾರೆ.
ಲೋಕಾಯುಕ್ತ ಸಂಸ್ಥೆಯ ಬಳಿ ಇದ್ದ ಪೊಲೀಸ್ ಠಾಣೆ ಸ್ಥಾನಮಾನ ರದ್ದುಗೊಳಿಸಿ, ಹೊಸದಾಗಿ ಭ್ರಷ್ಟಾಚಾರ ನಿಗ್ರಹ ದಳ ರಚನೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳು ನ್ಯಾ. ಅರವಿಂದ ಕುಮಾರ್ ಹಾಗೂ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ವಿಭಾ ಗೀಯ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿದ್ದವು.
ಈ ವೇಳೆ ಲೋಕಾಯುಕ್ತ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಅಶೋಕ ಹಾರನ ಹಳ್ಳಿ, ಲೋಕಾ ಯುಕ್ತವನ್ನು ಈಗ ಕೇವಲ ವಿಚಾರಣಾ ಆಯೋಗದ ರೀತಿ ಮಾಡಲಾಗಿದೆ. ಅದಕ್ಕಿದ್ದ ಪೊಲೀಸ್ ಠಾಣೆಯ ಸ್ಥಾನವನ್ನು ರದ್ದುಗೊ ಳಿಸಲಾಗಿದೆ. ಮೊದಲಿದ್ದ ವ್ಯವಸ್ಥೆಯಲ್ಲಿ ಎಡಿಜಿಪಿ ಸರ್ಕಾರದ ಅಧೀನದಲ್ಲಿ ಇರುತ್ತಿರಲಿಲ್ಲ. ಹೀಗಾಗಿ, ನಿಷ್ಪಕ್ಷಪಾತದಿಂದ ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಲು ಸಾಧ್ಯವಿತ್ತು.
ಆದರೆ, ಲೋಕಾಯುಕ್ತ ಸಂಸ್ಥೆಗಿದ್ದ ಅಧಿಕಾರ ಕಸಿದು ಕೊಂಡು ಎಸಿಬಿ ರಚನೆ ಮಾಡಲಾಗಿದೆ. ಲೋಕಾಯುಕ್ತ ಇದ್ದಾಗ ಎಸಿಬಿ ರಚಿಸಿರುವುದು ಕಾನೂನುಬಾಹಿರ. ಈಗ ಲೋಕಾಯುಕ್ತ ಸಂಸ್ಥೆ ದುರ್ಬಲಗೊಂಡಿದ್ದು, ಅದಕ್ಕೆ ಯಾವುದೇ ಅಧಿಕಾರವಿಲ್ಲ. ಸದ್ಯ ಅದು ಹಲ್ಲಿ ಲ್ಲದ ಹಾವಿನಂತೆ ಆಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತನಿಖೆಯ ಅಧಿಕಾರ ನೀಡದಿದ್ದರೆ ಭ್ರಷ್ಟಾಚಾರ ತಡೆ ಗಟ್ಟಲು ಸಾಧ್ಯವಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ವಿಚಾರಣೆ ವೇಳೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988 ರಡಿ ಭ್ರಷ್ಟಾಚಾರ ಆರೋಪಗಳ ಬಗ್ಗೆ ತನಿಖೆ ನಡೆಸುವ ಅಧಿಕಾರವನ್ನು ಲೋಕಾಯುಕ್ತದಿಂದ ಪಡೆದು ಆ ಅಧಿಕಾರವನ್ನು ಎಸಿಬಿಗೆ ನೀಡಿರುವುದನ್ನು ಸರ್ಕಾರ ಬಲವಾಗಿ ಸಮರ್ಥಿಸಿಕೊಂಡಿತು. ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್, ಎಸಿಬಿ ರಚನೆಗೆ ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ.
2016ರ ಮಾ.14ರಿಂದ ಜಾರಿಗೆ ಬರುವಂತೆ ಎಸಿಬಿಯನ್ನು ರಚನೆ ಮಾಡಲಾಗಿದೆ. ಅದು ಲೋಕಾಯುಕ್ತಕ್ಕೆ ಪೂರಕವಾಗಿರಲಿದೆಯೇ ಹೊರತು, ಲೋಕಾಯುಕ್ತ ವನ್ನು ದುರ್ಬಲಗೊಳಿಸುವ ಉದ್ದೇಶಕ್ಕಲ್ಲ. ಲೋಕಾಯುಕ್ತವನ್ನು ದುರ್ಬಲಗೊಳಿಸಿ, ಎಸಿಬಿ ರಚನೆ ಮಾಡಲಾಗಿದೆ, ಲೋಕಾಯುಕ್ತ ಸಂಸ್ಥೆಯ ಹಲ್ಲು ಕಿತ್ತು ಹಾಕಲಾಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದರು.
ಸಾರಿಗೆ ನಿಗಮಗಳಿಗೆ ನೋಟಿಸ್
ಬೆಂಗಳೂರು: ಸರಕು ಸಾಗಣೆ ವಾಹನಗಳಲ್ಲಿ ಶಾಲಾ ಮಕ್ಕಳು ಸೇರಿ ಕಾರ್ಮಿಕರು ಹಾಗೂ ಸಾಮಾನ್ಯ ಪ್ರಯಾಣಿಕರನ್ನು ಕೊಂಡೊಯ್ಯುವುದನ್ನು ತಡೆಯಲು ಅಗತ್ಯ ಪ್ರಮಾಣದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಸಂಬಂಧ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಈ ಕುರಿತಂತೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ.ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು. ಈ ವೇಳೆ ಸರ್ಕಾರದ ಪರ ವಕೀಲರು ಹೆಚ್ಚುವರಿ ಆಕ್ಷೇಪಣಾ ಪ್ರಮಾಣಪತ್ರವನ್ನು ಸಲ್ಲಿಸಿದರು. ಅದನ್ನು ಗಮನಿಸಿದ ನ್ಯಾಯಪೀಠ ಸಮೂಹ ಸಾರಿಗೆ ಸೌಲಭ್ಯ ಒದಗಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ತಿಳಿಯಲು ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಎನ್‌ಇಕೆಆರ್‌ಟಿಸಿ, ಎನ್‌ಡಬ್ಲೂಕೆಆರ್‌ಟಿಸಿ ಹಾಗೂ ಬಿಎಂಟಿಸಿ ಗಳನ್ನು ಪ್ರತಿವಾದಿಗಳನ್ನಾಗಿಸಲು ನಿರ್ದೇಶನ ನೀಡಿತು.
ಅಲ್ಲದೇ ಈ ನಾಲ್ಕು ನಿಗಮಗಳಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ, ಮುಂದಿನ ವಿಚಾರಣೆ ವೇಳೆ ವರದಿ ಸಲ್ಲಿಸುವಂತೆ ಸಾರಿಗೆ ನಿಗಮಗಳು ಹಾಗೂ ಸಾರಿಗೆ ಆಯುಕ್ತರಿಗೆ ನಿರ್ದೇಶನ ನೀಡಿತು. ಜೊತೆಗೆ, ಶಿಕ್ಷಣ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯಿಂದ ವರದಿ ಕೇಳಿದ ನ್ಯಾಯಪೀಠ, ವಿಚಾರಣೆಯನ್ನು ಫೆ.5ಕ್ಕೆ ಮುಂದೂಡಿತು
ಅಶ್ಲೀಲ ಚಿತ್ರಕ್ಕೆ ಮಕ್ಕಳ ಬಳಕೆ: ಎಚ್ಚರಿಕೆ
ಬೆಂಗಳೂರು: ರಾಜ್ಯದಲ್ಲಿ ಒಟ್ಟು 113 ಮಕ್ಕಳನ್ನು ಅಶ್ಲೀಲ ಚಿತ್ರಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳದಿದ್ದರೆ ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ನ್ಯಾಯಾಲಯಕ್ಕೆ ಕರೆಯಿಸಬೇಕಾಗುತ್ತದೆ ಎಂದು ಹೈಕೋರ್ಟ್ ಕಟು ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಬಾಲ ನ್ಯಾಯ (ಮಕ್ಕಳ ಕಾಳಜಿ ಹಾಗೂ ಸುರಕ್ಷತೆ) ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನು ಷ್ಠಾನಗೊಳಿಸಲು ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿ ರುವ ಪಿಐಎಲ್, ಬಚಪನ್ ಬಚಾವೋ ಸ್ವಯಂ ಸೇವಾ ಸಂಸ್ಥೆ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಮತ್ತು ನ್ಯಾ.ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.
ಈ ವೇಳೆ ಪ್ರಕರಣದ ಬಗ್ಗೆ ಹೈಕೋರ್ಟ್ 2-3 ಸಲ ಸೂಚನೆ ನೀಡಿದ್ದರೂ ಕ್ರಮ ಕೈಗೊಳ್ಳದ ಪೊಲೀಸರ ಕ್ರಮವನ್ನು ತೀವ್ರ ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಪೊಲೀಸರು ತನಿಖೆ ನಡೆಸದೆ ಏನೂ ನಡೆದಿಲ್ಲ ಎಂದು ಹೇಳುವುದನ್ನು ನಂಬಲಾಗದು, ತನಿಖೆ ನಡೆಸದಿದ್ದರೆ ಹಿರಿಯ ಅಧಿಕಾರಿಗಳನ್ನೇ ಕೋರ್ಟ್‌ಗೆ ಕರೆಯಿಸಬೇಕಾಗುತ್ತದೆ ಎಂದು ಹೇಳಿತು. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಈ ಹಿಂದೆ ತಿಳಿಸಿ ದಂತೆ ಮಕ್ಕಳನ್ನು ಅಶ್ಲೀಲ ಚಿತ್ರಗಳಿಗೆ ಬಳಸಿ ಕೊಂಡಿರುವ ಘಟನೆ ನಡೆದಿಲ್ಲ. ಶೋಷಣೆ ಗೊಳ ಗಾದ ಮಕ್ಕಳು ಬಾಲ ಮಂದಿರಗಳಲ್ಲಿ ಇರುವ ಬಗ್ಗೆ ಮಾಹಿತಿ ಇಲ್ಲ ಎಂದರು.
ಅದಕ್ಕೆ ಅಸಮಾಧಾನಗೊಂಡ ನ್ಯಾಯಪೀಠ, ಎಫ್ಐಆರ್ ದಾಖಲಿಸಿ, ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕಳೆದ ಬಾರಿಯೇ ಹೇಳಲಾಗಿತ್ತು. ಆ ಆದೇಶ ಪಾಲನೆ ಮಾಡದೆ ರಾಜ್ಯ ಸರ್ಕಾರದ ಹೇಳಿಕೆ ಆಘಾತಕಾರಿ. ಕೇಂದ್ರ ಸರ್ಕಾರದ ವರದಿಯಲ್ಲಿ 2018ರಲ್ಲಿ ಕರ್ನಾಟಕದಲ್ಲಿ 113 ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ನಡೆದಿವೆ ಎಂದು ಗಂಭೀರ ಕಳವಳ ವ್ಯಕ್ತಪಡಿಸಿದೆ. ಆ ಬಗ್ಗೆ ಏಕೆ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಟುವಾಗಿ ಪ್ರಶ್ನಿಸಿ, ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಬಗ್ಗೆ ತಿಳಿಸುವಂತೆ ಸೂಚಿಸಿ ವಿಚಾರಣೆಯನ್ನು ಜ.13ಕ್ಕೆ ಮುಂದೂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.