ಪ್ರೇಯಸಿಗಾಗಿ ಪತ್ನಿ ಕೊಂದವನ ಸೆರೆ
Team Udayavani, Aug 24, 2019, 3:08 AM IST
ಬೆಂಗಳೂರು: ಪ್ರೇಯಸಿಯನ್ನು ಮದುವೆಯಾಗಲು ಅಡ್ಡಿಯಾಗಿದ್ದಳು ಎಂದು ಪತ್ನಿಯನ್ನು ಕೊಲೆ ಮಾಡಿ ಶಿಡ್ಲಘಟ್ಟ ಹೊರವಲಯದಲ್ಲಿ ಮೃತದೇಹ ಎಸೆದು ತಲೆಮರೆಸಿಕೊಂಡಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿ ಕಡೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಮೇ 31ರಂದು ಮುಂಜಾನೆ ಏರ್‌ಪೋರ್ಟ್ ಸಮೀಪ ನಡೆದಿದ್ದ ಪೂಜಾ ಸಿಂಗ್ ಕೊಲೆ ಪ್ರಕರಣದ ಬೆನ್ನತ್ತಿದ್ದ ಬಾಗಲೂರು ಪೊಲೀಸರ ತನಿಖೆಯಲ್ಲೇ ಮತ್ತೂಂದು ಕೇಸ್ ಬಯಲಿಗೆ ಬಂದಿದೆ. ಜು.19ರಂದು ಪತ್ನಿ ಹಲೀಮಾಳನ್ನು ಕೊಂದು ಮೃತದೇಹ ಶಿಡ್ಲಘಟ್ಟದಲ್ಲಿ ಎಸೆದಿದ್ದ ಸಾಗರ್ ಶೇಖ್ ಹಾಗೂ ಸೋನು ಹಜ್ರಾ ಸಿಕ್ಕಿಬಿದ್ದಿದ್ದಾರೆ.
ಮೇ 31ರಂದು ವಿಮಾನ ನಿಲ್ದಾಣದ ಬಳಿ ಕೊಲೆಯಾದ ಮಹಿಳೆ ಪೂಜಾ ಸಿಂಗ್ ಎಂಬುದು ಇನ್ನೂ ಖಚಿತಪಟ್ಟಿರಲಿಲ್ಲ. ಹೀಗಾಗಿ, ಕೊಲೆಯಾದ ಮಹಿಳೆಯ ಗುರುತು ಪತ್ತೆಗೆ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಹೋಟೆಲ್ ಮ್ಯಾನೇಜರ್ ಒಬ್ಬ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂಬ ಬಗ್ಗೆ ಮಾಹಿತಿ ದೊರೆಯಿತು.
ಆ ಬಗ್ಗೆ ತನಿಖೆ ನಡೆಸುತ್ತಿದ್ದಾಗ ಎಚ್‌ಎಎಲ್‌ನಲ್ಲಿದ್ದ ಪಶ್ಚಿಮ ಬಂಗಾಳ ಮೂಲದ ಸಾಗರ್ ಶೇಖ್ (29) ಹಾಗೂ ಆತನ ಪ್ರೇಯಸಿ ಸೋನು ಹಜ್ರಾಳನ್ನು (21) ಸಿಕ್ಕಿಬಿದ್ದರು. ವಿಚಾರಣೆಯಲ್ಲಿ ಆರೋಪಿಗಳಿಬ್ಬರೂ ನಾವು ಯಾವುದೇ ಕೊಲೆ ಮಾಡಿಲ್ಲ ಎಂದೇ ಹೇಳುತ್ತಿದ್ದರು. ಅವರೇ ಕೊಲೆ ಮಾಡಿದ್ದಾರೆ ಎಂಬುದಕ್ಕೆ ಪೂರಕ ಸಾಕ್ಷ್ಯಗಳು ಲಭ್ಯವಾಗುತ್ತಿರಲಿಲ್ಲ.
ಪೊಲೀಸರನ್ನೇ ಯಾಮಾರಿಸಿದ: ವಿಚಾರಣೆ ತೀವ್ರಗೊಳಿಸಿದ ಪೊಲೀಸರು, “ನೀನು ನಿನ್ನ ಪತ್ನಿಯನ್ನು ಕೊಲೆ ಮಾಡಿದ್ದೀರ ಎಂಬ ಬಗ್ಗೆ ನಮಗೆ ಮಾಹಿತಿ ಇದೆ. ಆಕೆ ಕೂಡ ಮನೆಯಲ್ಲಿಲ್ಲ. ಎಲ್ಲಿ ಹೋದಳು?’ ಎಂದು ವಿಚಾರಿಸಿದ್ದರು. ಆಗ, “ಪತ್ನಿ ಹಲೀಮಾ ಪಶ್ಚಿಮ ಬಂಗಾಳದಲ್ಲಿದ್ದಾಳೆ’ ಎಂದು ಆರೋಪಿ ಸುಳ್ಳು ಹೇಳಿದ್ದ.
ಜತೆಗೆ, ಪೊಲೀಸರ ಎದುರೇ ಸ್ನೇಹಿತೆ ಒಬ್ಬರಿಗೆ ವಿಡಿಯೋ ಕಾಲ್ ಮಾಡಿ, “ಇವಳೇ ನನ್ನ ಪತ್ನಿ’ ಎಂದು ಹೇಳಿದ್ದ. ವಿಡಿಯೋ ಕಾಲ್‌ನಲ್ಲಿದ್ದ ಮಹಿಳೆ ಕೂಡ ತಾನೇ ಆತನ ಪತ್ನಿ ಎಂದು ಹೇಳಿದ್ದಳು. ಆದರೆ, ಇಷ್ಟಕ್ಕೇ ಪೊಲೀಸರ ಅನುಮಾನ ಪರಿಹಾರವಾಗಿರಲಿಲ್ಲ.
ಹೀಗಾಗಿ ಆತನ ಪ್ರೇಯಸಿ ಸೋನುಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದಾಗ, ವಿಡಿಯೋ ಕಾಲ್ ಮಾಡಿದ್ದ ಮಹಿಳೆ ಆತನ ಪತ್ನಿಯಲ್ಲ ಎಂದು ಬಾಯ್ಬಿಟ್ಟಳು. ಇದೇ ಮಾಹಿತಿ ಆಧರಿಸಿ ಸಾಗರ್‌ನನ್ನು ವಿಚಾರಿಸಿದಾಗ ಜು.19ರಂದು ರಾತ್ರಿ ಪತ್ನಿ ಹಲೀಮಾಳನ್ನು ಕೊಲೆಗೈದು ಮೃತದೇಹವನ್ನು ಶಿಡ್ಲಘಟ್ಟ ಹೊರವಲಯದಲ್ಲಿ ಎಸೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ನಂದಿ ಬೆಟ್ಟದಲ್ಲಿ ಎಸೆಯಲು ಹೋಗಿದ್ದರು: ಸಾಗರ್, ಸದಾ ಸೋನು ಜತೆ ಇರುತ್ತಿದ್ದ ಕಾರಣಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಹಲೀಮಾ, ಆತನೊಂದಿಗೆ ಜಗಳ ಮಾಡುತ್ತಿದ್ದಳು. ಹೀಗಾಗಿ, ಆಕೆಯನ್ನು ಕೊಲೆ ಮಾಡಿದರೆ ಸೋನುಳನ್ನು ಮದುವೆಯಾಗಲು ಸುಲಭವಾಗಲಿದೆ ಎಂದು ನಿರ್ಧರಿಸಿದ ಸಾಗರ್, ಜು.19ರಂದು ಎಚ್‌ಎಎಲ್ ನಿವಾಸದಲ್ಲಿ ಮಲಗಿದ್ದ ಹಲೀಮಾಳನ್ನು ಕತ್ತುಹಿಸುಕಿ ಕೊಲೆ ಮಾಡಿದ್ದ.
ಬಳಿಕ ಪ್ರೇಯಸಿ ಸೋನು ಜತೆ ಸೇರಿ ಮೃತದೇಹವನ್ನು ನಂದಿ ಬೆಟ್ಟದಲ್ಲಿ ಎಸೆದರೆ ಯಾರೂ ಹುಡುಕಾಡುವುದಿಲ್ಲ ಎಂದು ಲೆಕ್ಕಾಚಾರ ಹಾಕಿದ ಇಬ್ಬರೂ, ಕಾರಿನಲ್ಲಿ ಮೃತದೇಹ ಇರಿಸಿಕೊಂಡು ನಂದಿ ಬೆಟ್ಟಕ್ಕೆ ಹೋಗಿದ್ದರು. ಆದರೆ ಎಚ್.ಕ್ರಾಸ್ ಬಳಿ ದಾರಿ ತಪ್ಪಿ ಶಿಡ್ಲಘಟ್ಟ ಸಮೀಪದ ಗಂಭೀರನಹಳ್ಳಿ ಅರಣ್ಯಪ್ರದೇಶ ತಲುಪಿ, ಅಲ್ಲಿಯೇ ಹಲೀಮಾಳ ಶವ ಎಸೆದು ವಾಪಸ್ ಬಂದಿದ್ದರು.
ಕೆಲದಿನಗಳ ಬಳಿಕ ಮೃತದೇಹ ಪತ್ತೆಯಾಗಿದ್ದು, ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಆರೋಪಿಗಳ ಹೇಳಿಕೆ ದಾಖಲಿಸಿಕೊಂಡು ಶಿಡ್ಲಘಟ್ಟ ಪೊಲೀಸರಿಗೆ ಇಬ್ಬರೂ ಆರೋಪಿಗಳನ್ನು ಒಪ್ಪಿಸಲಾಯಿತು ಎಂದು ಅಧಿಕಾರಿ ವಿವರಿಸಿದರು. ಸಾಗರ್ ಶೇಖ್ ಹಾಗೂ ಸೋನುಳ ವಿಚಾರಣೆ ನಡೆಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಶಿಡ್ಲಘಟ್ಟ ಪೊಲೀಸರು ತಿಳಿಸಿದರು.
* ಮಂಜುನಾಥ ಲಘುಮೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.