ಯಾತ್ರೆ ಸಂಕಷ್ಟ; ನೇಪಾಳದಲ್ಲಿ ಮಳೆಗೆ ಸಿಲುಕಿದ 290 ಕನ್ನಡಿಗರು
Team Udayavani, Jul 3, 2018, 6:00 AM IST
ಬೆಂಗಳೂರು: ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಕರ್ನಾಟಕದ 290 ಯಾತ್ರಿಗಳು ಭಾರೀ ಮಳೆಯಿಂದ ರಸ್ತೆ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ನೇಪಾಳದ ಸಿಮಿಕೋಟ್‌ನಲ್ಲಿ ಸಿಲುಕಿಕೊಂಡಿದ್ದಾರೆ.
ಟ್ರಾವೆಲ್ ಏಜೆನ್ಸಿಗಳ ಮೂಲಕ ಜೂ. 21ರಂದು ರಾಜ್ಯದಿಂದ ಪ್ರವಾಸ ಆರಂಭಿಸಿದ ಯಾತ್ರಿಗಳು ಮಾನಸ ಸರೋ ವರಕ್ಕೆ ತೆರಳಿ ಅಲ್ಲಿಂದ ಅಮರನಾಥಕ್ಕೆ ತೆರಳಬೇಕಿತ್ತು. ಆದರೆ, ಅಷ್ಟರಲ್ಲಿ ಭಾರೀ ಮಳೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ನೇಪಾಳದ ಸಿಮಿಕೋಟ್ ಎಂಬ ಪ್ರದೇಶದಲ್ಲಿ ಯಾತ್ರಿಗಳು ವಾಸ್ತವ್ಯ ಹೂಡಿದ್ದಾರೆ.
ಈ ಪೈಕಿ ಮಂಡ್ಯ, ಮೈಸೂರು, ರಾಮನಗರ ಭಾಗದಿಂದ ತೆರಳಿದ ಯಾತ್ರಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಕಳೆದ ನಾಲ್ಕು ದಿನಗಳಿಂದ ಸಿಮಿಕೋಟ್‌ನಲ್ಲೇ ಉಳಿದುಕೊಂಡಿದ್ದಾರೆ. ಊಟ, ತಿಂಡಿ ಇಲ್ಲದೆ ಮಳೆ ಮತ್ತು ಮಂಜಿನಲ್ಲಿ ಸಿಲುಕಿ ಕೆಲವರು ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿರುವುದರಿಂದ ಅತ್ತ ಅಮರನಾಥ ಯಾತ್ರೆ ಮುಂದುವರಿಸಲಾಗದೆ, ಇತ್ತ ಊರಿಗೆ ವಾಪಸಾಗಲೂ ಸಾಧ್ಯವಿಲ್ಲದೆ ಪರದಾಡುತ್ತಿದ್ದಾರೆ.
ಯಾತ್ರಾರ್ಥಿಗಳು ಸಿಲುಕಿಕೊಂಡಿರುವ ಸಿಮಿಕೋಟ್ ಪ್ರದೇಶದ ರಸ್ತೆಗಳು ತೀರಾ ಚಿಕ್ಕದಾಗಿದ್ದು, ಮಿನಿ ಜೆಟ್‌ಗಳ ಮೂಲಕವೇ ಅವರನ್ನು ಅಲ್ಲಿಂದ ರಕ್ಷಿಸಿ ಕರೆತರುವ ಕೆಲಸವಾಗಬೇಕಿದೆ. ಆದರೆ, ಇದಕ್ಕೆ ಹೆಚ್ಚು ಹಣ ವೆಚ್ಚವಾಗುತ್ತದೆ ಎಂಬ ಕಾರಣಕ್ಕೆ ಯಾತ್ರೆಯ ಹೊಣೆ ಹೊತ್ತ ಖಾಸಗಿ ವಾಹಿನಿ ಹಾಗೂ ಏಜೆನ್ಸಿಯವರು ಅಲ್ಲಿಂದ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಮಧ್ಯೆ ಕಡಿದಾದ ರಸ್ತೆಯಲ್ಲಿ ಸಿಲುಕಿರುವವರಿಗೆ ನೇಪಾಳದ ಕಠ್ಮಂಡುವಿನಿಂದ ಆಹಾರ ಪೂರೈಕೆ
ಮಾಡಬೇಕಾಗಿದೆ. ಆದರೆ, ರಸ್ತೆ ಸಂಪರ್ಕವೇ ಕಡಿತಗೊಂಡಿರುವುದರಿಂದ ಆಹಾರ ಪೂರೈಕೆ ಕೂಡ ಸಮರ್ಪಕವಾಗಿಲ್ಲ. ಮಾರ್ಗಮಧ್ಯೆ ಸಿಲುಕಿಕೊಂಡಿರುವ ಯಾತ್ರಾರ್ಥಿಗಳ ಪೈಕಿ ವಯೋವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಆಹಾರದ ಕೊರತೆ ಹಾಗೂ ಮಳೆ ಮತ್ತು ಮಂಜು ತುಂಬಿದ ವಾತಾವರಣದಿಂದ ಅವರಲ್ಲಿ ಅನಾರೋಗ್ಯ ಸಮಸ್ಯೆಯೂ ಕಾಣಿಸಿಕೊಂಡಿದೆ. ಆದ್ದರಿಂದ ಶೀಘ್ರ ನಮ್ಮನ್ನು ತೆರವುಗೊಳಿಸುವಂತೆ ಪ್ರವಾಸಿಗರು ಮೊರೆ ಇಡುತ್ತಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಪ್ರಯಾಣಿಕರು, ನಮ್ಮನ್ನು ಯಾತ್ರೆಗೆ ಕರೆತಂದಿದ್ದ ಟ್ರಾವೆಲ್ ಏಜನ್ಸಿ ಮತ್ತು ಖಾಸಗಿ ವಾಹಿನಿಯವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಕಳೆದ ಮೂರು ದಿನಗಳಿಂದ ಊಟ, ತಿಂಡಿ, ಶೌಚಾಲಯ ಇಲ್ಲದೆ ಪರದಾಡುವಂತಾಗಿದೆ. ಕುಡಿಯುವ ನೀರೂ ಇಲ್ಲ. ಸ್ನಾನ ಮಾಡಲು ಸಾಧ್ಯವಾಗುತ್ತಿಲ್ಲ. ಯಾರಧ್ದೋ ಸಣ್ಣ ಮನೆಯೊಂದರಲ್ಲಿ 25 ಮಂದಿ ಇರುವಂತಾಗಿದೆ. ನಮ್ಮನ್ನು ಕರೆತಂದವರೂ ಕೈಗೆ ಸಿಗದೆ ಮುಂದಿನ ದಾರಿ ಕಾಣದಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಮಧ್ಯೆ ಹವಾಮಾನ ವೈಪರೀತ್ಯ ಮತ್ತು ಭಾರೀ ಮಳೆಯಿಂದ ಮೂರು ದಿನಗಳ ಹಿಂದೆ ಸ್ಥಗಿತಗೊಂಡಿದ್ದ 4ನೇ ತಂಡದ ಅಮರನಾಥ ಯಾತ್ರೆ ಸೋಮವಾರದಿಂದ ಮತ್ತೆ ಆರಂಭವಾಗಿದೆ.ಒಟ್ಟು 6877 ಭಕ್ತಾದಿಗಳು ಈ ತಂಡದಲ್ಲಿದ್ದು,1429 ಮಹಿಳೆಯರು, 250 ಸಾಧುಗಳು ಭಗವತಿ ಬೇಸ್ ಕ್ಯಾಂಪ್‌ನಿಂದ ಹೊರಟಿದ್ದಾರೆ. ಬಿಗ್ ಪೊಲೀಸ್ ಭದ್ರತೆಯ ನಡುವೆ 229 ವಾಹನಗಳಲ್ಲಿ ಯಾತ್ರಿಕರು ಪಯಣ ಬೆಳೆಸಿದ್ದಾರೆ.
ತುರ್ತು ಕ್ರಮಕ್ಕೆ ಸಿಎಂ ನಿರ್ದೇಶನ
ಬೆಂಗಳೂರು: ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡು ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಯಾತ್ರಾ ರ್ಥಿಗಳ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿರ್ದೇಶನ ನೀಡಿದ್ದಾರೆ. ಈ ಸಂಬಂಧ ಎಲ್ಲಾ ಅಗತ್ಯ ತುರ್ತು ಕ್ರಮ ಕೈಗೊಳ್ಳುವಂತೆ ದೆಹಲಿಯ ಕರ್ನಾಟಕ ಭವನದಲ್ಲಿರುವ ಸ್ಥಾನಿಕ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.ಸ್ಥಾನಿಕ ಆಯುಕ್ತರು ನೇಪಾಳ ಸರ್ಕಾರ ಹಾಗೂ ಭಾರತದ ರಾಯ ಭಾರ ಕಚೇರಿ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದ್ದು, ಸೂಕ್ತ ರಕ್ಷಣೆ ವ್ಯವಸ್ಥೆ ಮಾಡಲು ತಿಳಿಸಿದ್ದಾರೆ.
ನೇಪಾಳದ ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ಕರ್ನಾಟಕ ಸರ್ಕಾರದ ಮನವಿಗೆ ಸ್ಪಂದಿಸಿ ತಕ್ಷಣ ಅಗತ್ಯ ನೆರವು ನೀಡುವುದಾಗಿ ತಿಳಿಸಿದ್ದಾರೆ.
ಕೈಲಾಸ ಮಾನಸ ಸರೋವರ ಯಾತ್ರೆಗೆ ಖಾಸಗಿ ಟ್ರಾವೆಲ್ ಏಜೆನ್ಸಿಗಳ ಮೂಲಕ ರಾಜ್ಯದ ಯಾತ್ರಿಗಳು ತೆರಳಿದ್ದು, ಸುಮಾರು 290 ಜನ ಸಿಲುಕಿದ್ದು ಸದ್ಯಕ್ಕೆ ಎಲ್ಲರೂ ಸುರಕ್ಷಿತವಾಗಿದ್ದಾರೆ. ರಾಜ್ಯ ಸರ್ಕಾರದ ವತಿಯಿಂದ ಸಂಕಷ್ಟದಲ್ಲಿರುವ ಯಾತ್ರಿಗಳ ರಕ್ಷಣೆಗೆ ಎಲ್ಲ ರೀತಿಯ ಪ್ರಯತ್ನಗಳು ನಡೆದಿವೆ. ಕೇಂದ್ರ ಗೃಹ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ನೇಪಾಳದಲ್ಲಿರುವ ಭಾರತದ ರಾಯಭಾರ ಕಚೇರಿ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ.ಅಲ್ಲಿಂದ ಸೂಕ್ತ ಭರವಸೆಯೂ ಸಿಕ್ಕಿದೆ. ಮಂಗಳವಾರ ಸ್ಪಷ್ಟ ಚಿತ್ರಣ ದೊರೆಯಲಿದೆ.
– ಗಂಗಾರಾಮ್ ಬಡೇರಿಯಾ, ಮುಖ್ಯಸ್ಥರು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ
ಕೇರಳದ ಯಾತ್ರಿ ಸಾವು
ಚೆನ್ನೈ: ಕೇರಳದ ಮಲಪ್ಪುರಂ ಜಿಲ್ಲೆಯ ಯಾತ್ರಿ ವಂಡೂರ್ ಲೀಲಾ ನಂಬೂರಿಪ್ಪಾಡ್ (56) ಎಂಬುವರು ಹೃದಯಾಘಾತದಿಂದ ಅಸುನೀಗಿದ್ದಾರೆ. ಇದೇ ವೇಳೆ ಇತರ ರಾಜ್ಯಗಳ 210 ಮಂದಿ ಯಾತ್ರಾರ್ಥಿಗಳೂ ನೇಪಾಳದ ಸಿಮಿಕೋಟ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಸೋಮವಾರ ಸತತ ಐದನೇ ದಿನವಾಗಿದ್ದು, ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಈ ಸ್ಥಳಕ್ಕೆ ವಿಮಾನ ಯಾನ ಹಾರಾಟ ರದ್ದು ಮಾಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಉಂಟಾಗಿದೆ. ತೀರ್ಥಯಾತ್ರಿಗಳು ಸಮೀಪದ ವಾಣಿಜ್ಯ ಮಳಿಗೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಇದರ ಜತೆಗೆ ಸ್ಥಳೀಯ ಹೋಟೆಲ್‌ಗಳಲ್ಲಿಯೂ ಆಶ್ರಯ ಪಡೆದಿದ್ದಾರೆ. 2016ರಲ್ಲಿಯೂ ನೇಪಾಳದಲ್ಲಿ 500ಕ್ಕೂ ಅಧಿಕ ಮಂದಿ ಭಾರತೀಯ ಯಾತ್ರಿಗಳು ಸಿಕ್ಕಿಹಾಕಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!
ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ
MUST WATCH
ಹೊಸ ಸೇರ್ಪಡೆ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.