ಪತಿ ಮುಗಿಸಲು ಮಾಂಗಲ್ಯ ಸುಪಾರಿ!
Team Udayavani, Jan 8, 2019, 4:55 AM IST
ಬೆಂಗಳೂರು: ಪರಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿರುವುದನ್ನು ಅರಿತಿದ್ದ ಪತಿಯ ಜೀವ ತೆಗೆಯಲು ಹಂತಕನಿಗೆ “ಮಾಂಗಲ್ಯ ಸರ’ ಕೊಟ್ಟು ಸುಪಾರಿ ನೀಡಿದ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಆರು ಮಂದಿಯನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.
ಅರಕೆರೆಯ ಬಿಟಿಎಸ್ ಲೇಔಟ್ ನಿವಾಸಿ ಮಮತಾ (28), ಆಕೆಯ ಪ್ರಿಯಕರ ಪ್ರಶಾಂತ್ (20), ಈತನ ಸಹಚರರಾದ ಅನಿಲ್ ಬಿಸ್ವಾಸ್ ಅಲಿ ಯಾಸ್ ಖಾನು (21), ಜಾಕೀರ್‌ಪಾಷ ಅಲಿಯಾಸ್ ಜಾಕ್ ಮಲ್ಲಿಕ್ (20), ಹರೀಶ್ ಕುಮಾರ್ ಅಲಿಯಾಸ್ ಗಲಗಲ (20) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಒಬ್ಬನನ್ನು ಬಂಧಿಸಲಾಗಿದೆ.
ಬಂಧಿತರಿಂದ ಒಂದು ಚಿನ್ನದ ಮಾಂಗಲ್ಯ ಸರ, ಒಂದು ಜತೆ ಓಲೆ, ಮಾಟಿ, ಬೆಳ್ಳಿಯ ಕಾಲು ಚೈನು, ಚಿನ್ನದ ಸರ, ಒಂದು ಕಾರು, ಒಂದು ಬೈಕ್, ಮಂಕಿ ಕ್ಯಾಂಪ್‌ಗ್ಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಡಿ.14ರಂದು ದರೋಡೆಕೋರರ ಸೋಗಿನಲ್ಲಿ ನಾಗರಾಜ್ (39) ಮನೆಗೆ ನುಗ್ಗಿ ಹತ್ಯೆಗೆ ಯತ್ನಿಸಿದ್ದರು. ಅದೃಷ್ಟವಶಾತ್ ನಾಗರಾಜ್ ಪ್ರಾಣಾಪಾಯದಿಂದ ಪಾರಾಗಿದ್ದರು. ಬಂಧಿತರ ಪೈಕಿ ಕಾನೂನು ಸಂಘರ್ಷಕ್ಕೆ ಒಳಗಾಗಿದವನು, ಪ್ರಶಾಂತ್, ಅನಿಲ್ ಬಿಸ್ವಾಸ್, ಜಾಕೀರ್‌ಪಾಷ, ಹರೀಶ್ ಕುಮಾರ್ ಆನ್‌ಲೈನ್ ಮಾರ್ಕೆಟಿಂಗ್ ಸಂಸ್ಥೆಯೊಂದರಲ್ಲಿ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದರು. ಈ ಪೈಕಿ ಜಾಕೀರ್ ವಿರುದ್ಧ ನಗರ ಕೆಲ ಠಾಣೆಗಳಲ್ಲಿ ಹಲ್ಲೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದರು.
ಆಂಧ್ರಪ್ರದೇಶ ಮೂಲದ ನಾಗರಾಜ್ 10 ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದು, ಪತ್ನಿ ಮಮತಾ ಹಾಗೂ ಗಂಡು ಮಗು ಜತೆ ಹುಳಿಮಾವುನಲ್ಲಿ ವಾಸವಿದ್ದರು. 8 ತಿಂಗಳ ಹಿಂದಷ್ಟೇ ಅರಕೆರೆಯ ಬಿಟಿಎಸ್ ಲೇಔಟ್ ನಲ್ಲಿರುವ ಆರೋಪಿ ಪ್ರಶಾಂತ್ ತಂದೆ ಮಾಲೀಕತ್ವದ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದ್ದರು. ನಾಗರಾಜ್ ಪೇಂಟಿಂಗ್ ಕೆಲಸ ಮಾಡುತ್ತಿದ್ದು, ಪತ್ನಿ ಮಮತಾ ಮೆಡಿಕಲ್ ಸ್ಟೋರ್‌ನಲ್ಲಿ ಸಹಾಯಕಿ ಆಗಿದ್ದರು. ಈ ನಡುವೆ ಮಮತಾ ಹಾಗೂ ಪ್ರಶಾಂತ್ ನಡುವೆ ಆತ್ಮೀಯತೆ ಬೆಳೆದಿದ್ದು, ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದರು ಎಂದು ಪೊಲೀಸರು ಹೇಳಿದರು.
ಹತ್ಯೆಗೆ ಸುಪಾರಿ: ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಅನುಮಾನ ಹೊಂದಿದ್ದ ನಾಗರಾಜ್, ಈ ಕುರಿತು ಪತ್ನಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಈ ವಿಚಾರವನ್ನು ಮಮತಾ, ಪ್ರಿಯಕರ ಪ್ರಶಾಂತ್ ಬಳಿ ಹೇಳಿಕೊಂಡಿದ್ದಳು. ಮುಂದಿನ ದಿನಗಳಲ್ಲಿ ತಮ್ಮ ಸಂಬಂಧಕ್ಕೆ ಪತಿ ನಾಗರಾಜ್ ಅಡ್ಡಿಪಡಿ ಸುತ್ತಾರೆ. ಹೀಗಾಗಿ ಅವರನ್ನು ಕೊಲೆಗೈದು ಬೇರೆಡೆ ಹೋಗಿ ಜೀವನ ಸಾಗಿಸೋಣ ಎಂದು ಪ್ರಿಯಕರನಿಗೆ ಸಲಹೆ ನೀಡಿದಳು.
ಬಳಿಕ ಪ್ರಶಾಂತ್ ಮತ್ತು ಮಮತಾ ಸೇರಿ ನಾಗರಾಜ್‌ರನ್ನು ಕೊಲ್ಲಲು ಜಾಕೀರ್ ಪಾಷಗೆ 1.5 ಲಕ್ಷ ರೂ.ಗೆ ಸುಪಾರಿ ಕೊಟ್ಟಿದ್ದರು. ಆದರೆ, ಅಡ್ವಾನ್ಸ್ ಕೊಡಲು ಹಣ ಇಲ್ಲದ್ದರಿಂದ ಮಮತಾ ತನ್ನ ಚಿನ್ನದ ಸರ ಬಿಚ್ಚಿ ಕೊಟ್ಟಿದ್ದಳು. ನಂತರ ತನ್ನ ಚಿನ್ನದ ಸರ ಕಳುವಾಗಿದೆ ಎಂದು ಪತಿಗೆ ಸುಳ್ಳು ಹೇಳಿದ್ದಳು ಎಂದು ಪೊಲೀಸರು ಹೇಳಿದರು.
ದರೋಡೆಕೋರರ ಸೋಗಲ್ಲಿ ಬಂದರು: ಸುಪಾರಿ ಪಡೆದ ಜಾಕೀರ್ ಪಾಷಾ ಮತ್ತು ಸಹಚರರು, ಡಿ.14ರಂದು ರಾತ್ರಿ 9 ಗಂಟೆ ಸುಮಾರಿಗೆ ಮುಸುಕು ಧರಿಸಿ ದರೋಡೆಕೋರರ ಸೋಗಿನಲ್ಲಿ ನಾಗರಾಜ್ ಮನೆಗೆ ನುಗ್ಗಿದ್ದರು. ಟಿ.ವಿ ನೋಡುತ್ತಾ ಕುಳಿತಿದ್ದ ನಾಗರಾಜ್‌ಗೆ ಮಾರಕಾಸ್ತ್ರ ತೋರಿಸಿ, ಚಿನ್ನದ ಸರ, ಮೊಬೈಲ್ ಹಾಗೂ ಮಮತಾ ಬಳಿಯಿದ್ದ ಎರಡು ಉಂಗುರಗಳನ್ನೂ ಸುಲಿಗೆ ಮಾಡಿದ್ದರು. ಬಳಿಕ ನಾಗರಾಜ್‌ರನ್ನು ಕೊಲ್ಲಲು ಮುಂದಾಗಿದ್ದಾರೆ. ನಾಗ ರಾಜ್ ಅದೃಷ್ಟಕ್ಕೆ ಇದೇ ವೇಳೆ ಮಣಿ ಎಂಬುವರು ನೀರಿನ ಕ್ಯಾನ್ ಕೊಡಲು ಮನೆಗೆ ಬಂದಿದ್ದು, ಆತಂಕ ಗೊಂಡ ಆರೋಪಿಗಳು ಪಕ್ಕದ ಕಟ್ಟಡಕ್ಕೆ ನೆಗೆದು, ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು ತೆಗೆದುಕೊಂಡು ಪರಾರಿ ಯಾಗಿದ್ದರು. ಈ ಸಂಬಂಧ ನಾಗರಾಜ್ ದೂರು ನೀಡಿದ್ದರು ಎಂದು ಪೊಲೀಸರು ಹೇಳಿದರು.
ಮಮತಾ-ಪ್ರಶಾಂತ್ ಎಸ್ಕೇಪ್
ಈ ಮಧ್ಯೆ ಡಿ.18ರಂದು ಆರೋಪಿ ಮಮತಾ ತನ್ನ ಪ್ರಿಯಕರ ಪ್ರಶಾಂತ್ ಜತೆ ನಾಪತ್ತೆಯಾಗಿದ್ದಳು. ಡಿ.15ರಂದು ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದ ಪತ್ನಿ ಮಮತಾ ಇದುವರೆಗೂ ವಾಪಸ್ ಬಂದಿಲ್ಲ ಹಾಗೂ ಮನೆ ಮಾಲೀಕರ ಪುತ್ರ ಪ್ರಶಾಂತ್ ಕೂಡ ಕಾಣೆಯಾಗಿದ್ದಾನೆ ಎಂದು ನಾಗರಾಜ್, ದೂರಿನಲ್ಲಿ ಉಲ್ಲೇ ಖೀಸಿದ್ದರು. ದೇ ಅಂಶವನ್ನು ಕೇಂದ್ರವಾಗಿಸಿ ಕೊಂಡು ತನಿಖೆ ನಡೆಸಿ ದಾಗ ಪ್ರಶಾಂತ್ ಮತ್ತು ಮಮತಾ ನಡುವೆ ಅಕ್ರಮ ಸಂಬಂಧ ಇರುವ ಮಾಹಿತಿ ಲಭ್ಯವಾಗಿತ್ತು ಎಂದು ಪೊಲೀಸರು ಹೇಳಿದರು.
ಹಣ ಇಲ್ಲ ಎಂದು ಮಾಂಗಲ್ಯ ಸರ ಕೊಟ್ಟಳು
ಡಿ.18ರಂದು ಮನೆಯಿಂದ ಹೋಗುವಾಗ ಪ್ರಶಾಂತ್ ಮತ್ತು ಮಮತಾ, ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದು ಕೊಂಡೊಯ್ದಿದ್ದರು. ನಂತರ ಆರೋಪಿ ಜಾಕೀರ್ ಪಾಷನನ್ನು ಭೇಟಿಯಾಗಿದ್ದರು. “ನಿನಗೆ ಕೊಡಲು ನನ್ನ ಬಳಿ ಹಣವಿಲ್ಲ. ಹಣದ ಬದಲು ನನ್ನ ಈ ಮಾಂಗಲ್ಯ ಸರ ಇಟ್ಟುಕೋ. ಇದು ಕನಿಷ್ಠ 2 ಲಕ್ಷ ರೂ. ಬೆಲೆಬಾಳುತ್ತದೆ’ ಎಂದು ಮಾಂಗಲ್ಯ ಬಿಚ್ಚಿಕೊಟ್ಟ ಮಮತಾ, ಪ್ರಶಾಂತ್ ಜತೆ ಕಾಲ್ಕಿತ್ತಿದ್ದಳು. ನಂತರ ಹುಬ್ಬಳ್ಳಿ, ಮುಂಬೈನಲ್ಲಿ ಕೆಲವು ದಿನ ಕಳೆದ ಮಮತಾ-ಪ್ರಶಾಂತ್, ಹಣ ಖಾಲಿಯಾಗು ತ್ತಿದ್ದಂತೆ ಬೆಂಗಳೂರಿಗೆ ವಾಪಸ್ ಬಂದಿದ್ದರು. ಈ ಮಾಹಿತಿ ಪಡೆದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ “ಸುಪಾರಿ’ ರಹಸ್ಯ ಬಾಯಿಬಿಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.
ಮನೆ ಬಾಡಿಗೆಗೆ ಕೊಟ್ಟ
ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಗೆ ಅಗತ್ಯವಿದ್ದ ಮಾತ್ರೆ ತರಲು ಪ್ರಶಾಂತ್ ಆಗಾಗ ಮಮತಾ ಕೆಲಸಮಾಡುತ್ತಿದ್ದ ಮೆಡಿಕಲ್ ಸ್ಟೋರ್‌ಗೆ ಹೋಗುತ್ತಿದ್ದ. ಈ ವೇಳೆ ಆಕೆಯ ಪರಿಚಯವಾಗಿ, ಆತ್ಮೀಯತೆ ಬೆಳೆದಿತ್ತು. ಇದೇ ವೇಳೆ ಬಾಡಿಗೆ ಮನೆ ಹುಡುಕಾಟದಲ್ಲಿದ್ದ ಮಮತಾಗೆ ಆರೋಪಿ ಪ್ರಶಾಂತ್, ತನ್ನ ಕಟ್ಟಡದಲ್ಲೇ ಖಾಲಿ ಇದ್ದ ಮನೆಗೇ ಬರುವಂತೆ ಕೇಳಿಕೊಂಡಿದ್ದ. ಕೊನೆಗೆ ಪತಿ ನಾಗ ರಾಜ್‌ನನ್ನು ಒಪ್ಪಿಸಿದ ಮಮತಾ, ಪ್ರಿಯಕರನ ತಂದೆ ಒಡೆ ತನದ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದಳು ಎಂಬುದು ತನಿಖೆ ವೇಳೆ ತಿಳಿದು ಬಂದಿರುವುದಾಗಿ ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.