ಪ್ರಣಾಳಿಕೆ ಅಂಶಗಳು ಹಾಸ್ಯಾಸ್ಪದ
Team Udayavani, Apr 28, 2018, 11:40 AM IST
ಬೆಂಗಳೂರು: ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿದ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಲೋಕಾಯುಕ್ತವನ್ನು ಬಲಪಡಿಸುವುದಾಗಿ ಹೇಳಿರುವುದು ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ನಿರ್ಮೂಲನೆಗಾಗಿ ಲೋಕಾಯುಕ್ತ ಅಸ್ತಿತ್ವಕ್ಕೆ ಬಂದಿತ್ತು. ಆದರೆ, ಅದನ್ನು ದುರ್ಬಲಗೊಳಿಸಿ ತಮ್ಮ ಅನುಕೂಲಕ್ಕಾಗಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ವನ್ನು ತರಲಾಯಿತು. ಆದರೆ, ಈಗ ತನ್ನ ಪ್ರಣಾಳಿಕೆಯಲ್ಲಿ ಲೋಕಾಯುಕ್ತವನ್ನು ಬಲಪಡಿಸುವುದಾಗಿ ಹೇಳಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಸುಳ್ಳು ಭರವಸೆಗಳ ಪತ್ರ; ಅನಂತಕುಮಾರ್: ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, ಕಳೆದ ಚುನಾವಣೆ ವೇಳೆ ಕಾಂಗ್ರೆಸ್ 240 ಭರವಸೆಗಳನ್ನು ಒಳಗೊಂಡ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಅದರಲ್ಲಿ ಇದುವರೆಗೆ ಅರ್ಧದಷ್ಟು ಈಡೇರಿಲ್ಲ. ಈಗ ಮತ್ತಷ್ಟು ಭರವಸೆಗಳನ್ನು ನೀಡಿ ಜನರನ್ನು ಮೋಸ ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪ್ರಣಾಳಿಕೆ ಬರೆದವರು ಸುಳ್ಳಿನ ಸರದಾರ ಡಾ.ಎಂ.ವೀರಪ್ಪ ಮೊಯ್ಲಿ. ಇದನ್ನು ರೂಪಿಸಿದವರು ನಿದ್ದೆ ಸಾರ್ವಭೌಮ ಎಂದೇ ಜನಜನಿತರಾಗಿರುವ ಸಿದ್ದರಾಮಯ್ಯ. ಪ್ರಣಾಳಿಕೆಗೆ ಸ್ಫೂರ್ತಿಯಾದವರು ದೂರದೃಷ್ಟಿ ಇಲ್ಲದ ಹಾಗೂ ನೈಜಸ್ಥಿತಿ ಅರಿವಿಲ್ಲದ ರಾಹುಲ್‌ಗಾಂಧಿ. ಹಾಗಾಗಿ, ಇದೊಂದು ಅಂಕಿ-ಅಂಶ, ದಿಕ್ಕು-ದೆಶೆ ಇಲ್ಲದ ಸುಳ್ಳು ಭರವಸೆಗಳ ಪತ್ರ. ಜನರಿಗೆ ಮಂಕುಬೂದಿ ಎರಚುವ ಪ್ರಯತ್ನ ಇದಾಗಿದೆ ಎಂದು ದೂರಿದರು.
ರಾಜ್ಯದಲ್ಲಿ ಅತಿ ಹೆಚ್ಚು 3,800 ರೈತರು ಆತ್ಮಹತ್ಯೆಗೆ ಶರಣಾಗಿದ್ದು, ಇದಕ್ಕೆ ಕಾರಣ ಏನು? ಪರಿಹಾರ ಏನು ಎಂಬುದರ ಬಗ್ಗೆ ಕಾಂಗ್ರೆಸ್ ಸರ್ಕಾರ ಪ್ರಸ್ತಾಪಿಸಿಲ್ಲ. ಅಷ್ಟೇ ಅಲ್ಲ, 2013ರಿಂದ 2018ರವರೆಗೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದಿರುವ ಕರ್ನಾಟಕ, ಅಪರಾಧ, ಭ್ರಷ್ಟಾಚಾರ, ಆತ್ಮಹತ್ಯೆ ಪ್ರಮಾಣಗಳಲ್ಲಿ ಮುಂದಿದೆ. ಜನರ ಜೀವನಮಟ್ಟ ಸುಧಾರಣೆ ಬಗ್ಗೆ ಪ್ರಸ್ತಾಪ ಇಲ್ಲ ಎಂದು ಆರೋಪಿಸಿದ ಅವರು, ಭ್ರಷ್ಟಾಚಾರದಲ್ಲಿ ಸರ್ಕಾರ ಮೊದಲ ಸ್ಥಾನದಲ್ಲಿದೆ. ಇದಕ್ಕೆ ಅನೇಕ ವರದಿಗಳೇ ಸಾಕ್ಷಿ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.