Manipal Hospitals; ಮಹಿಳಾ ದಿನ ಮತ್ತು ವಿಶ್ವ ಕಿಡ್ನಿ ದಿನದ ಜಂಟಿ ಆಚರಣೆ
Team Udayavani, Mar 9, 2024, 7:17 PM IST
ಬೆಂಗಳೂರು: ಮಣಿಪಾಲ್ ಆಸ್ಪತ್ರೆಗಳು ಇಂದು ಮಹಿಳೆಯರ ಸ್ಥೈರ್ಯ ಮತ್ತು ಶಕ್ತಿಯನ್ನು ಆಚರಿಸುವ ಮತ್ತು ಕಿಡ್ನಿ ಆರೋಗ್ಯದ ಮಹತ್ವವನ್ನು ತಿಳಿಸುವ ಎರಡು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ವಿಶ್ವ ಕಿಡ್ನಿ ದಿನ ಎರಡನ್ನೂ ಒಟ್ಟಿಗೆ ಆಚರಿಸುವ ಈ ಕಾರ್ಯಕ್ರಮದಲ್ಲಿ ದಿವಂಗತ ಉಷಾ ಗೌರಿಯವರಿಗೆ ಗೌರವ ಸಲ್ಲಿಸಲಾಯಿತು. ಇವರ ಪೋಷಕರು ಇವರ ಮರಣದ ನಂತರ ಅಂಗಗಳನ್ನು ದಾನ ಮಾಡುವ ನಿಸ್ವಾರ್ಥ ನಿರ್ಧಾರದ ಮೂಲಕ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲು ನಿರ್ಧರಿಸಿದ್ದರು.
ಸಮಾರಂಭದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಮತ್ತು ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷರಾದ ಡಾ. ಸುದರ್ಶನ್ ಬಲ್ಲಾಳ್ ಅವರು ಉಪಸ್ಥಿತರಿದ್ದರು.
ಉದಯೋನ್ಮುಖ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಉಷಾ ಜನವರಿ 26, 1998 ರಂದು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದರು. ಈ ದುಃಖದ ನಡುವೆಯೂ, ಆಕೆಯ ಕುಟುಂಬವು ಆಕೆಯ ಕಿಡ್ನಿಯನ್ನು ದಾನ ಮಾಡಲು ನಿರ್ಧರಿಸಿತ್ತು. ಹಳೆ ಏರ್‌ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಶವದ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಅಂದಿನಿಂದ, ಮಾನವ ಅಂಗ ಮತ್ತು ಅಂಗಾಂಶ ಕಸಿ ಕಾಯಿದೆಯಡಿಯಲ್ಲಿ ಉಷಾ ಅವರನ್ನು ಕರ್ನಾಟಕದ ಮೊದಲ ಶವ ಕಿಡ್ನಿ ದಾನಿ ಎಂದು ಕರೆಯಲಾಗುತ್ತದೆ.
ದಿನೇಶ್ ಗುಂಡೂರಾವ್ ಮಾತನಾಡಿ, “ಒಬ್ಬ ಅಂಗಾಂಗ ದಾನಿಯು ಎಂಟು ಜೀವಗಳನ್ನು ಉಳಿಸುವ ಮತ್ತು 75 ಕ್ಕೂ ಹೆಚ್ಚು ಇತರರ ಜನರ ಆರೋಗ್ಯವನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾನೆ. ರೊಬೊಟಿಕ್ ನೆರವಿನ ಶಸ್ತ್ರಚಿಕಿತ್ಸೆಗಳ ಪರಿಚಯವು ಟ್ರಾನ್ಸ್‌ಪ್ಲಾಂಟ್ ಕಾರ್ಯವಿಧಾನಗಳಿಗೆ ಹೊಸ ಮಾರ್ಗವನ್ನು ನೀಡಿದೆ, ಆ ಮೂಲಕ ಶಸ್ತ್ರಚಿಕಿತ್ಸಕರು ಅತ್ಯುತ್ತಮ ನಿಖರತೆಯೊಂದಿಗೆ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಉಷಾ ಅವರ ಕಥೆಯು ಭರವಸೆ ಮತ್ತು ಸ್ಫೂರ್ತಿಯ ಬೆಳಕಾಗಿದೆ. ಅವರ ಅಂಗಾಂಗ ದಾನದ ನಿಸ್ವಾರ್ಥ ಸೇವೆಯು ಮಾನವೀಯತೆಯ ಮೌಲ್ಯವನ್ನು ಎತ್ತಿ ತೋರಿಸುತ್ತದೆ ಮತ್ತು ಜೀವಗಳನ್ನು ಉಳಿಸುವಲ್ಲಿ ಅಂಗಾಂಗ ದಾನದ ಮಹತ್ವವನ್ನು ಒತ್ತಿಹೇಳುತ್ತದೆ.” ಎಂದರು.
ಉಷಾ ಅವರ ಪೋಷಕರ ನಿಸ್ವಾರ್ಥ ಕಾರ್ಯವನ್ನು ಶ್ಲಾಘಿಸಿದ ತೇಜಸ್ವಿ ಸೂರ್ಯ, ವಿಮಾ ಕಂಪನಿಗಳು ನಗದು ರಹಿತ ಶಸ್ತ್ರಚಿಕಿತ್ಸಾ ಚಿಕಿತ್ಸೆಯ ಅಡಿಯಲ್ಲಿ ರೊಬೊಟಿಕ್ ನೆರವಿನ ಶಸ್ತ್ರಚಿಕಿತ್ಸೆಗಳನ್ನು ಸೇರಿಸುವ ಕುರಿತು ಮಾತನಾಡಿದರು, “ನವೀನ ಆರೋಗ್ಯ ತಂತ್ರಜ್ಞಾನವು ಕನಿಷ್ಟ ದೋಷಗಳೊಂದಿಗೆ ಕನಿಷ್ಠ ಅಪಾಯಕಾರಿ ಶಸ್ತ್ರಚಿಕಿತ್ಸೆಗಳನ್ನು ಖಾತ್ರಿಪಡಿಸುತ್ತದೆ. ಅಲ್ಲದೆ, ಸಾಂಪ್ರದಾಯಿಕ ವಿಧಾನಗಳಿಗಿಂತ ಶಸ್ತ್ರಚಿಕಿತ್ಸೆಗಳಿಗೆ ಅವುಗಳು ಉತ್ತಮವಾಗಿವೆ. ರೊಬೊಟಿಕ್ಸ್ ಶಸ್ತ್ರಚಿಕಿತ್ಸೆಗಳು ದುಬಾರಿಯಾಗಿವೆ ಮತ್ತು ಹೆಲ್ತ್ ಪ್ಲಾನ್ ಗಳಲ್ಲಿ ನಗದು ರಹಿತ ಪಾವತಿಗಳ ಅಡಿಯಲ್ಲಿ ಅದನ್ನು ವಿಮಾದಾರರು ಕವರ್ ಮಾಡಿದರೆ, ಇದು ಜನರಿಗೆ ಆರ್ಥಿಕವಾಗಿ ತುಂಬಾ ಸಹಾಯವಾಗುತ್ತದೆ. ಇದು ಸುಧಾರಿತ ಆರೋಗ್ಯ ಚಿಕಿತ್ಸೆಗಳ ಅಗತ್ಯವಿರುವ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ” ಎಂದರು.
ಉಷಾ ಅವರ ಧೈರ್ಯ ಮತ್ತು ಉದಾರತೆಯನ್ನು ಗುರುತಿಸಿ, ಡಾ. ಸುದರ್ಶನ್ ಬಲ್ಲಾಳ್ ಅವರು ಮಾಸಿಕ ಅನುದಾನಿತ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸಾ ಕಾರ್ಯಕ್ರಮವನ್ನು ‘ಉಷಾಸ್ ಡೇ’ ಎಂದು ಘೋಷಿಸಿದರು. ಅವರು ಮಾತನಾಡಿ, ” ರೊಬೊಟಿಕ್ ತಂತ್ರಜ್ಞಾನದ ಸಹಾಯದಿಂದ ಆರೈಕೆಯ ಗುಣಮಟ್ಟವು ಹೆಚ್ಚಾಗಿದೆ, ಇದು ರೋಗಿಗಳ ಚಿಕಿತ್ಸಾ ಫಲಿತಾಂಶ ಮತ್ತು ಅರೋಗ್ಯ ತೃಪ್ತಿಯನ್ನು ಹೆಚ್ಚಿಸುತ್ತದೆ. ಈ ನಾವೀನ್ಯತೆ ಮತ್ತು ಶ್ರೇಷ್ಠತೆಯೊಂದಿಗೆ, ಮಣಿಪಾಲ್ ಆಸ್ಪತ್ರೆಯು ಟ್ರಾನ್ಸ್‌ಪ್ಲಾಂಟ್ ಶಸ್ತ್ರಚಿಕಿತ್ಸೆಗಳನ್ನು ಮುಂಚೂಣಿಗೆ ತರಲು ದೃಢ ನಿರ್ಧಾರ ಮಾಡಿದೆ. ಉಷಾ ಅವರು ಮಾಡಿದ ದಾನವು ಅಂಗಾಂಗ ದಾನದ ಗಣನೀಯ ಪ್ರಭಾವವನ್ನು ಮತ್ತು ಕರುಣೆ ಮತ್ತು ಉದಾರತೆಯು ನೀಡಬಲ್ಲ ಶಕ್ತಿಯನ್ನು ಎತ್ತಿ ತೋರಿಸುತ್ತದೆ. ಈ ಕಾರ್ಯಕ್ರಮದ ಮೂಲಕ, ನಾವು ಇತರರಿಗೆ ಕೂಡ ತಮ್ಮ ಅಂಗಗಳನ್ನು ದಾನ ಮಾಡಲು ಪ್ರೋತ್ಸಾಹಿಸುತ್ತೇವೆ, ಆ ಮೂಲಕ ಸಹಾನುಭೂತಿ ಮತ್ತು ನಿಸ್ವಾರ್ಥತೆಯ ಸಂಸ್ಕೃತಿಯನ್ನು ಬೆಳೆಸಲು ನೋಡುತ್ತಿದ್ದೇವೆ” ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.