ಆಂಧ್ರ ಶಾಸಕನ ಕೊಂದ ನಕ್ಸಲರಿಗೆ ರಾಜ್ಯದ ನಂಟು
Team Udayavani, Oct 10, 2018, 6:00 AM IST
ಬೆಂಗಳೂರು: ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ನಡೆದ ತೆಲುಗು ದೇಶಂ ಪಕ್ಷ (ಟಿಡಿಪಿ)ದ ಹಾಲಿ ಹಾಗೂ ಮಾಜಿ ಶಾಸಕರಿಬ್ಬರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಮೂವರು ಮಾವೋವಾದಿಗಳಿಗೂ ಕರ್ನಾಟಕಕ್ಕೂ ನಂಟಿರುವ ಸ್ಫೋಟಕ ಸಂಗತಿ ತನಿಖೆಯಲ್ಲಿ ಹೊರಬಿದ್ದಿದೆ. ಸೆ.23ರಂದು ದುಂಬ್ರಿಗುಂಡ ಪ್ರದೇಶದ ಲಿವಿರಿಪುಟ್ಟುವಿನಲ್ಲಿ ನಡೆದ ಅರಕು ಶಾಸಕ ಕಿದಾರಿ ಸರ್ವೇಶ್ವರ್ ರಾವ್, ಮಾಜಿ ಶಾಸಕ ಸಿವಾರಿ ಸೋಮು ಅವರನ್ನು ಹತ್ಯೆಗೈದ 50 ಮಂದಿ ಮಾವೋ ನಕ್ಸಲರ ಗುಂಪಿನಲ್ಲಿ ರಾಜ್ಯದ ಹಲವು ನಕ್ಸಲರು ಭಾಗಿಯಾಗಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಆಂಧ್ರದ ವಿಶೇಷ ತನಿಖಾ ತಂಡ ಹಾಗೂ ನಕ್ಸಲ್ ನಿಗ್ರಹ ದಳ ಪೊಲೀಸರಿಗೆ ರಾಜ್ಯ ಪೊಲೀಸರು ಹೆಚ್ಚಿನ ಮಾಹಿತಿ ಒದಗಿಸಿದ್ದಾರೆ. ರಾಜ್ಯ ಪೊಲೀಸ್ ಇಲಾಖೆಯ ವಿಶೇಷ ತಂಡವನ್ನು ಆಂಧ್ರಕ್ಕೆ ಕಳುಹಿಸಿಕೊಡಲು ನಿರ್ಧರಿಸಲಾಗಿದ್ದು, ನಕ್ಸಲರ ಚಟುವಟಿಕೆಗಳು, ಶಾಸಕರಿಬ್ಬರ ಹತ್ಯೆಯಲ್ಲಿ ಭಾಗಿಯಾಗಿರುವ ನಕ್ಸಲರಿಗೂ ರಾಜ್ಯಕ್ಕೆ ಇರುವ ನಂಟಿನ ಬಗ್ಗೆ ಮಾಹಿತಿ ವಿನಿಮಯಕ್ಕೆ ತೆರಳಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಾಕೇತ್ ರಾಜನ್ ಜತೆ ಸಂಪರ್ಕ?
ಟಿಡಿಪಿ ಶಾಸಕರಿಬ್ಬರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ, ಅಲ್ಲಿನ ಸರಕಾರದ ಮೋಸ್ಟ್ ವಾಂಟೆಡ್ ಆರೋಪಿಗಳಾಗಿರುವ ಅರುಣಾ ಅಲಿಯಾಸ್ ವೆಂಕಟ ರವಿ ಚೈತನ್ಯ, ಜೆ. ಶ್ರೀನಿಬಾಬು ಅಲಿಯಾಸ್ ರಹಿನೋ, ಕಾಮೇಶ್ವರಿಗೂ ಕರ್ನಾಟಕ-ಕೇರಳ ಭಾಗಗಳಲ್ಲಿ ಸಕ್ರಿಯರಾಗಿರುವ ನಕ್ಸಲರಿಗೂ ಸಂಪರ್ಕ ಇರುವುದು ಬಹುತೇಕ ಖಚಿತವಾಗಿದೆ. ಈ ಪೈಕಿ ಶಾಸಕರ ಹತ್ಯೆ ಪ್ರಕರಣದ ಮಾಸ್ಟರ್‌ಮೈಂಡ್ ಎಂದು ಗುರುತಿಸಲಾದ ಅರುಣಾ ಮಾವೋ ನಕ್ಸಲರ ನಾಯಕ ಚಲಪತಿಯ ಪತ್ನಿ. ಚಲಪತಿಗೂ 2005ರಲ್ಲಿ ರಾಜ್ಯ ಪೊಲೀಸರ ಗುಂಡೇಟಿಗೆ ಬಲಿಯಾದ ನಕ್ಸಲ್ ನಾಯಕ ಸಾಕೇತ್ ರಾಜನ್‌ಗೂ ಸಂಪರ್ಕ ಇತ್ತು ಎನ್ನಲಾಗಿದೆ.
ಇತ್ತೀಚೆಗೆ ನಕ್ಸಲರು ರಾಜ್ಯದ ಕೆಲವೆಡೆ ಪ್ರತ್ಯಕ್ಷರಾಗಿದ್ದರು. ಈ ಬಗ್ಗೆ ತೀವ್ರ ನಿಗಾ ಇಟ್ಟಿರುವ ರಾಜ್ಯದ ನಕ್ಸಲ್ ನಿಗ್ರಹ ದಳದ ಅಧಿಕಾರಿಗಳು, ಈ ತಂಡಕ್ಕೆ ಆಂಧ್ರ ಪ್ರದೇಶದ ನಂಟಿರುವುದನ್ನು ಪ್ರಮುಖವಾಗಿ ಗಮನಿಸಿದ್ದಾರೆ. ಆಂಧ್ರ – ಒಡಿಶಾ ಗಡಿಭಾಗ ದಲ್ಲಿ ಪ್ರಬಲವಾಗಿರುವ ಮಾವೋ ನಕ್ಸಲರ ಗುಂಪುಗಳ ಜತೆ ಕರ್ನಾಟಕದಲ್ಲಿ ನಕ್ಸಲ್ ಚಟುವಟಿಕೆ ನಿರತ ತಂಡವೂ ಭಾಗಿಯಾಗಿರುವುದು ಗೊತ್ತಾಗಿದೆ. ಈ ತಂಡ ಆಂಧ್ರದ ಶಾಸಕ ಸಹಿತ ಇಬ್ಬರನ್ನು ಕೊಲೆಗೈದಿರುವ ಕೃತ್ಯದಲ್ಲಿ ಭಾಗಿಯಾಗಿರುವ ಸಾಧ್ಯತೆಗಳನ್ನು ತಳ್ಳಿಹಾಕಲು ಆಗುವುದಿಲ್ಲ. ಈ ಬಗ್ಗೆ ವಿಶೇಷ ತಂಡ ಆಂಧ್ರ ಪೊಲೀಸರ ಜತೆ ಚರ್ಚಿಸಿದ ಬಳಿಕ ಸ್ಪಷ್ಟತೆ ಸಿಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ವಿಕ್ರಮ್ ಗೌಡನ ಮೇಲೆ ಕಣ್ಣು
2009ರಲ್ಲಿ ಆಂಧ್ರದಲ್ಲಿ ಸುಧಾಕರ್ ರೆಡ್ಡಿ ಎನ್‌ಕೌಂಟರ್ ಬಳಿಕ ಚಲಪತಿ ಮಾವೋ ನಕ್ಸಲ್ ಗುಂಪಿನ ನಾಯಕನಾಗಿ ಹೊರಹೊಮ್ಮಿದ್ದ. ಆತ ಕರ್ನಾಟಕ ಮತ್ತು ಕೇರಳ ಭಾಗದ ನಕ್ಸಲ್ ತಂಡದ ಸಂಪರ್ಕ ಇರಿಸಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಕರ್ನಾಟಕ ನಕ್ಸಲ್ ತಂಡದ ಪ್ರಮುಖ ವಿಕ್ರಮ್ ಗೌಡನ ಚಟುವಟಿಕೆ ಕುರಿತು ಪೊಲೀಸರು ಮಾಹಿತಿ ಕಲೆಹಾಕಲು ನಿರ್ಧರಿಸಿದ್ದಾರೆ. ಕರ್ನಾಟಕದಲ್ಲಿ ಇದ್ದಾರೆ ಎನ್ನಲಾಗಿರುವ ಇತರ ನಕ್ಸಲ್ ನಾಯಕರಾದ ಮಂಡಗಾರು ಲತಾ, ವನಜಾಕ್ಷಿ, ಅಂಗಡಿ ಪ್ರತಾಪ್, ಬಿ.ಜಿ. ಪ್ರತಾಪ್ ಮೇಲೂ ನಿಗಾ ಇರಿಸಿದ್ದಾರೆ.
ಮಂಜುನಾಥ್ ಲಘುಮೇನಹಳ್ಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.