ಡಿ.8ರಿಂದ ಕಂಠೀರವ ಕ್ರೀಡಾಂಗಣದಲ್ಲಿ ಮತ್ಸ್ಯಮೇಳ
Team Udayavani, Dec 6, 2017, 12:37 PM IST
ಬೆಂಗಳೂರು: ಮೀನುಗಾರಿಕೆ ಇಲಾಖೆಗೆ 60 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಮೀನುಗಳ ಬಗ್ಗೆ ಮಾಹಿತಿ ನೀಡಲು ಡಿ.8ರಿಂದ 11ರ ತನಕ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಮತ್ಸ್ಯ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಮಾಹಿತಿ ನೀಡಿದರು.
ಮಂಗಳವಾರ ವಿಕಾಸಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಶೇ.25ರಷ್ಟು ಜನ ಬೆಂಗಳೂರಿನಲ್ಲಿದ್ದಾರೆ. ಪೌಷ್ಟಿಕ ಆಹಾರವಾಗಿರುವ ಮೀನನ್ನು ಎಲ್ಲರಿಗೂ ಪರಿಚಯಿಸುವ ಉದ್ದೇಶದಿಂದ ಮತ್ಸ್ಯಮೇಳ ಆಯೋಜಿಸಲಾಗಿದೆ. ಮೇಳದಲ್ಲಿ ವಿವಿಧ ಮೀನುಗಳ ಬಗ್ಗೆ ಮಾಹಿತಿ, ಮೀನಿನ ಖಾದ್ಯಗಳು, ಹಸಿ ಮೀನು ಮತ್ತು ಅಕ್ವೇರಿಯಂ ಮೀನುಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ ಎಂದರು.
ಮೀನುಗಾರಿಕೆ ಸಂಶೋಧನಾ ಸಂಸ್ಥೆಯಿಂದ 13 ಮಳಿಗೆ, ಮೀನಿನ ಖಾದ್ಯದ (ಫುಡ್ ಕೋರ್ಟ್) 10 ಮಳಿಗೆ, ಅಲಂಕಾರಿಕ ಮೀನುಗಳ ಅಕ್ವೇರಿಯಂ 25, ಹಸಿ ಮೀನಿನ ಮಳಿಗೆ 5 ಸೇರಿದಂತೆ 60 ಮಳಿಗೆ ತೆರೆಯಲಾಗುವುದು. ನಾಲ್ಕು ದಿನದ ಮೇಳದಲ್ಲಿ 4 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.
ಮೀನುಗಾರಿಕೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತಿದೆ. ಈ ವರ್ಷ 1500 ಕೋಟಿ ರೂ. ಮೌಲ್ಯದ ಮೀನನ್ನು ವಿದೇಶಗಳಿಗೆ ರಫ್ತು ಮಾಡುತ್ತಿದ್ದೇವೆ ಎಂಬ ಮಾಹಿತಿ ನೀಡಿದರು. ಇಲಾಖೆ ನಿರ್ದೇಶಕ ಎಚ್.ಎಸ್.ವೀರಪ್ಪ ಗೌಡ, ಕ್ರೀಡಾ ಇಲಾಖೆ ನಿರ್ದೇಶಕ ಅನುಪಮ್ ಅಗರ್‌ವಾಲ್ ಇತರರಿದ್ದರು.
ಮತ್ಸ್ಯ ಮೇಳ ಉದ್ಘಾಟನೆ: ಮೀನುಗಾರಿಕೆ ಇಲಾಖೆಯಿಂದ ಆಯೋಜಿಸಿರುವ ಮತ್ಸ್ಯ ಮೇಳವನ್ನು ಶುಕ್ರವಾರ ಬೆಳಗ್ಗೆ 11ಗಂಟೆಗೆ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟನೆ ಮಾಡಲಿದ್ದಾರೆ. ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಅನಂತ್ ಕುಮಾರ್, ನಿರ್ಮಲಾ ಸೀತಾರಾಮನ್, ರಾಜ್ಯ ಗೃಹ ಸಚಿವ ರಾಮಲಿಂಗಾರೆಡ್ಡಿ, ಸಚಿವರಾದ ಆರ್.ರೋಷನ್ ಬೇಗ್, ಕೆ.ಜೆ.ಜಾರ್ಜ್ ಇತರರು ಭಾಗವಹಿಸಲಿದ್ದಾರೆ.
ಮೀನು ಪೌಷ್ಟಿಕಾಂಶಯುಕ್ತ ಆಹಾರ. ಮೀನು ತಿನ್ನದವರಿಗೂ ಮೀನನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದೇವೆ. ಯಾವುದೇ ರಾಸಾಯನಿಕ ಮಿಶ್ರಿತ ಇಲ್ಲದೇ ಇರುವ ಒಂದೇ ಒಂದು ಆಹಾರ ಎಂದರೇ ಮೀನು. ಮೀನು ತಿನ್ನುವವರ ಸಂಖ್ಯೆ ಹೆಚ್ಚಾಗಬೇಕು.
-ಪ್ರಮೋದ್ ಮಧ್ವರಾಜ್, ಮೀನುಗಾರಿಕೆ ಸಚಿವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.