ಮೇಯರ್ ಮೀಸಲು ಬದಲಿಸಲು ಕಸರತ್ತು
Team Udayavani, Aug 30, 2018, 12:36 PM IST
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನೂತನ ಮೇಯರ್- ಉಪ ಮೇಯರ್ ಚುನಾವಣೆಗೆ ಒಂದು ತಿಂಗಳು ಬಾಕಿ ಇರುವಾಗಲೇ ಲಾಬಿ ಪ್ರಾರಂಭವಾಗಿದೆ. ಒಂದೆಡೆ ಈಗಿರುವ ಮೀಸಲಾತಿಯಡಿ ಮೇಯರ್, ಉಪ ಮೇಯರ್ ಸ್ಥಾನ ಪಡೆಯಲು ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಆಕಾಂಕ್ಷಿಗಳು ನಾಯಕರ ದುಂಬಾಲು ಬಿದ್ದಿದ್ದರೆ ಮತ್ತೂಂದೆಡೆ ಎರಡೂ ಪಕ್ಷಗಳ ನಾಯಕರು ಸರ್ಕಾರದ ಮಟ್ಟದಲ್ಲಿ ಮೀಸಲು ಬದಲಾಯಿಸುವ ಯತ್ನಕ್ಕೂ ಕೈ ಹಾಕಿದ್ದಾರೆ.
ಪ್ರಸ್ತುತ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಇದೀಗ ಮೇಯರ್ ಸ್ಥಾನ ಹಿಂದುಳಿದ ವರ್ಗಕ್ಕೆ ಬದಲಾಯಿಸುವ ಪ್ರಯತ್ನ ನಡೆದಿದೆ. ಮುಸ್ಲಿಂ ಸಮುದಾಯಕ್ಕೆ ಮೇಯರ್ ಸ್ಥಾನ ನೀಡುವ ಉದ್ದೇಶವಿದೆ ಎಂದು ಹೇಳಲಾಗಿದೆಯಾದರೂ ಆಕಾಂಕ್ಷಿಗಳ ಒತ್ತಡದ ಮೇರೆಗೆ ಇಂತಹ ಪ್ರಯತ್ನಕ್ಕೆ ಕೈ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ, ಮತ್ತೂಮ್ಮೆ ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಸಿದ್ಧತೆ ನಡೆಸಿದ್ದು ಮ್ಯಾಜಿಕ್ ನಂಬರ್ ತಲುಪಲು ಬೇಕಾದ ಸಂಖ್ಯಾಬಲ ಸಿದ್ಧಪಡಿಸಿಕೊಳ್ಳುತ್ತಿದೆ. ಬುಧವಾರ ಪ್ರಾದೇಶಿಕ ಆಯುಕ್ತರಿಗೆ ಮೇಯರ್- ಉಪ ಮೇಯರ್, ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯಲ್ಲಿ ಮತದಾನದ ಹಕ್ಕು ಹೊಂದಿರುವ ಅರ್ಹ ಮತದಾರರ ಪಟ್ಟಿ ಸಲ್ಲಿಕೆಯಾಗಬೇಕಿತ್ತಾದರೂ ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಸೇರಿ ಕೆಲವರ ಹೆಸರು ಇಲ್ಲದ ಕಾರಣ ತಡೆಹಿಡಿಯಲಾಗಿದೆ ಎಂದು ಹೇಳಲಾಗಿದೆ.
ಈ ಮಧ್ಯೆ, ಮ್ಯಾಜಿಕ್ ಸಂಖ್ಯಾಬಲದಲ್ಲಿ ಕೊರತೆ ಉಂಟಾದರೆ ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿಯೂ ತೆರೆಮೆರೆಯ ಕಾರ್ಯತಂತ್ರ ರೂಪಿಸುತ್ತಿದೆ. ಇದರ ನಡುವೆಯೇ ಮೇಯರ್ ಸ್ಥಾನಕ್ಕೆ ನಿಗದಿಪಡಿಸಿರುವ ಮೀಸಲಾತಿಯನ್ನೇ ಬದಲಿಸಿ ಅಲ್ಪಸಂಖ್ಯಾತ ವರ್ಗದ ಸದಸ್ಯರಿಗೆ ಮೀಸಲಿಡಲು ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ.
ಬೆಂಗಳೂರು ಮಹಾನಗರ ಪಾಲಿಕೆ (ಬಿಎಂಪಿ) ಅಸ್ತಿತ್ವದಲ್ಲಿದ್ದಾಗ ಮುಮ್ತಾಜ್ ಬೇಗಂ ಮೇಯರ್ ಆಗಿದ್ದರು. ನಂತರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ (ಬಿಬಿಎಂಪಿ) ಮೇಲ್ದರ್ಜೆಗೇರಿದ ನಂತರ ಈವರೆಗೆ ಮುಸ್ಲಿಂ ಸದಸ್ಯರು ಮೇಯರ್ ಆಗಿಲ್ಲ. ಹೀಗಾಗಿ 2018-19ನೇ ಅವಧಿಯ ಮೇಯರ್ ಹುದ್ದೆಗೆ ಈಗಿರುವ ಸಾಮಾನ್ಯ (ಮಹಿಳೆ) ಮೀಸಲನ್ನು ಬಿಸಿಎಗೆ ಬದಲಿಸುವಂತೆ ಒತ್ತಡ ಹೇರಲಾಗುತ್ತಿದೆ.
ಈ ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದು, ಮೀಸಲಾತಿ ಬದಲಿಸಲು ಸರ್ಕಾರ ಒಪ್ಪಿದೆ ಎಂದು ಮೂಲಗಳು ತಿಳಿಸಿವೆ. ಅಲ್ಪಸಂಖ್ಯಾತ ಸದಸ್ಯರಿಗೆ ಮೇಯರ್ ಹುದ್ದೆ ಸಿಗಬೇಕೆಂಬ ಉದ್ದೇಶದಿಂದ ಮೀಸಲಾತಿ ಬದಲಿಸಲು ಒತ್ತಡ ಹೇರಲಾಗಿದೆ. ಮೀಸಲು ಬದಲಾದರೂ ಮೇಯರ್ ಹುದ್ದೆಗೆ ಭಾರಿ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.
ಮೇಯರ್ ಹುದ್ದೆಯ ಮೀಸಲಾತಿಯನ್ನು ಸಾಮಾನ್ಯ (ಮಹಿಳೆ) ಬದಲಿಗೆ ಬಿಸಿಎ ಮಾಡಿದರೆ, ಕಾಂಗ್ರೆಸ್‌ನ ಆಡಳಿತ ಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಎಂ.ಶಿವರಾಜು ಹಾಗೂ ಜಯಮಹಲ್ ವಾರ್ಡ್ ಸದಸ್ಯ ಎಂ.ಕೆ.ಗುಣಶೇಖರ್ ಮತ್ತು ಗುರಪ್ಪನಪಾಳ್ಯ ವಾರ್ಡ್‌ನ ಅಲ್ಪಸಂಖ್ಯಾತ ವರ್ಗದ ಸದಸ್ಯ ಮಹಮದ್ ರಿಜ್ವಾನ್ ನವಾಬ್ ನಡುವೆ ಮೇಯರ್ ಹುದ್ದೆಗೆ ಪ್ರಬಲ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ.
ಜೆಡಿಎಸ್ ಪಟ್ಟು: ಈ ಬಾರಿ ಮೇಯರ್ ಹುದ್ದೆಯನ್ನು ತಮಗೇ ಬಿಟ್ಟುಕೊಡಬೇಕು ಎಂದು ಜೆಡಿಎಸ್ ಪಟ್ಟು ಹಿಡಿದಿದೆ. ಶಾಸಕ ಗೋಪಾಲಯ್ಯ ಅವರ ಪತ್ನಿ, ಬಿಬಿಎಂಪಿ ಸದಸ್ಯೆ ಹೇಮಲತಾ, ಜೆಡಿಎಸ್ ಪಾಳಯದಲ್ಲಿ ಮಹಾಪೌರ ಹುದ್ದೆಗೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಸದ್ಯದ ಮೀಸಲಾತಿ ಪ್ರಕಾರ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಸೌಮ್ಯಾ, ಲಾವಣ್ಯ, ಆಶಾ ಸುರೇಶ್ ಮತ್ತು ಗಂಗಾಂಬಿಕೆ ಪ್ರಬಲ ಸ್ಪರ್ಧಿಗಳಾಗಿದ್ದಾರೆ. ಜಯನಗರ ವಾರ್ಡ್ ಸದಸ್ಯೆ ಗಂಗಾಂಬಿಕೆ ಪರ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಲಾಬಿ ನಡೆಸುತ್ತಿದ್ದಾರೆ.
ಬಿಜೆಪಿ-ಕಾಂಗ್ರೆಸ್ ಕಾರ್ಯತಂತ್ರ?: ಇನ್ನೊಂದೆಡೆ ಮೇಯರ್, ಉಪ ಮೇಯರ್ ಚುನಾವಣೆ ಮೂಲಕ ಸಮ್ಮಿಶ್ರ ಸರ್ಕಾರಕ್ಕೆ ಶಾಕ್ ನೀಡುವ ಸಿದ್ಧತೆಯಲ್ಲಿ ನಗರದ ಕಾಂಗ್ರೆಸ್ ಶಾಸಕರು ತಂತ್ರ ರೂಪಿಸಿದ್ದಾರೆ. ಈ ಸಂಬಂಧ ಅತೃಪ್ತ ಕಾಂಗ್ರೆಸ್ ಶಾಸಕರು, ನಗರ ಬಿಜೆಪಿ ನಾಯಕರ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.
ತಾವು ಹೇಳಿದವರಿಗೆ ಮೇಯರ್ ಸ್ಥಾನ ಸಿಗದಿದ್ದರೆ ರಾಮಲಿಂಗಾ ರೆಡ್ಡಿ ಅವರು ಪ್ರಕ್ರಿಯೆಯಿಂದಲೇ ದೂರ ಉಳಿಯಲಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕೆಲವು ಕಾರ್ಪೊರೇಟರ್‌ಗಳು ವಿದೇಶ ಪ್ರವಾಸಕ್ಕೆ ಹೋಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ನಡುವೆಯೇ ಶಾಸಕರಾದ ಎಸ್.ಟಿ.ಸೋಮಶೇಖರ್, ಮುನಿರತ್ನ, ಭೈರತಿ ಬಸವರಾಜ್ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಚರ್ಚಿಸಿರುವುದು ಕುತೂಹಲ ಮೂಡಿಸಿದೆ.
ಪಕ್ಷಗಳ ಬಲಾ-ಬಲ
-ಬಿಜೆಪಿ 100
-ಕಾಂಗ್ರೆಸ್ 75
-ಜೆಡಿಎಸ್ 15
-ಇತರೆ 08
ಸದ್ಯ ನಿಗದಿಯಾಗಿರುವ ಮೀಸಲು
ಮೇಯರ್: ಸಾಮಾನ್ಯ (ಮಹಿಳೆ)
ಉಪಮೇಯರ್: ಸಾಮಾನ್ಯ
ಮೂರು ಬಾರಿ ಮೇಯರ್ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಾಗಿದೆ. ಈ ಬಾರಿ ಮೇಯರ್ ಹುದ್ದೆಯನ್ನು ಜೆಡಿಎಸ್‌ಗೆ ಬಿಟ್ಟುಕೊಡುವಂತೆ ಕಾಂಗ್ರೆಸ್ ಮುಖಂಡರನ್ನು ಕೇಳಲಾಗುವುದು.
-ಗೋಪಾಲಯ್ಯ, ಜೆಡಿಎಸ್ ಶಾಸಕ
ಮೇಯರ್ ಸ್ಥಾನ ಕಾಂಗ್ರೆಸ್‌ಗೆ ಉಪ ಮೇಯರ್ ಸ್ಥಾನ ಜೆಡಿಎಸ್‌ಗೆ ಎಂದು ನಿರ್ಧಾರವಾಗಿದೆ. ಯಾವ ಸದಸ್ಯರೂ ವಿದೇಶ ಪ್ರವಾಸ ತೆರಳುತ್ತಿಲ್ಲ. ಕಾಂಗ್ರೆಸ್‌ನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ.
-ಎಸ್.ಟಿ. ಸೋಮಶೇಖರ್, ಕಾಂಗ್ರೆಸ್ ಶಾಸಕ
ಮೇಯರ್ ಯಾರಾಗಬೇಕು ಎಂಬುದನ್ನು ಪಕ್ಷದ ನಾಯಕರು ನಿರ್ಧರಿಸುತ್ತಾರೆ. ಮೇಯರ್ ಆಯ್ಕೆಯ ಹಕ್ಕು ಪಾಲಿಕೆ ಸದಸ್ಯರಿಗಿದ್ದು, ಈ ಕುರಿತು ಪಕ್ಷದ ನಾಯಕರೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ.
-ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.