ಪ್ರಧಾನಿ ವಿರುದ್ಧ ಸಂದೇಶ: ತನಿಖಾಧಿಕಾರಿಗೆ ಮಂಗಳಾರತಿ
Team Udayavani, Mar 20, 2019, 6:35 AM IST
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಕುರಿತು ವಾಟ್ಸ್‌ಆ್ಯಪ್ ಗ್ರೂಪ್ ಒಂದರಲ್ಲಿ ಅವಹೇಳನಕಾರಿ ಹಾಗೂ ಪ್ರಚೋದನಕಾರಿ ಸಂದೇಶ ರವಾನಿಸಿದ್ದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ವಿಚಾರದಲ್ಲಿ ಕಾನೂನು ಲೋಪ ಮಾಡಿದ ಪೊಲೀಸ್ ಅಧಿಕಾರಿಗೆ ಹೈಕೋರ್ಟ್ ಮಂಗಳವಾರ “ಮಂಗಳಾರತಿ’ ಮಾಡಿತು.
ಪ್ರಧಾನಿ ವಿರುದ್ಧ ವಾಟ್ಸಪ್ ಗ್ರೂಪ್‌ನಲ್ಲಿ ಸಂದೇಶ ಹಾಕಿಕೊಂಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಚಿತ್ರದುರ್ಗ ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ರತೀಶ್ ಜಾನ್ಸನ್ ಸಲ್ಲಿಸಿದ್ದ ಅರ್ಜಿಯು ನ್ಯಾ. ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಈ ವೇಳೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಲ್ಲಿ ಕಾನೂನು ಲೋಪ ಆಗಿರುವುದನ್ನು ಗಮನಿಸಿದ ನ್ಯಾಯಪೀಠ, ಪ್ರಕರಣದ ತನಿಖಾಧಿಕಾರಿಯಾಗಿರುವ ಚಿತ್ರದುರ್ಗ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು. ಕಾನೂನು ಲೋಪ ಎಸಗಿದ ಇನ್ಸ್‌ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳಿ, ಇಲ್ಲದಿದ್ದರೆ ನ್ಯಾಯಾಲಯವೇ ಕ್ರಮ ಜರುಗಿಸಲಿದೆ.
ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಲಾಗುವುದು ಎಂದು ಸರ್ಕಾರಿ ಅಭಿಯೋಜಕರಿಗೆ ಎಚ್ಚರಿಕೆ ನೀಡಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ತಮ್ಮ ಕಕ್ಷಿದಾರರ ವಿರುದ್ಧ ಎಫ್ಐಆರ್ ದಾಖಲಿಸುವಲ್ಲಿ ಇನ್ಸ್‌ಪೆಕ್ಟರ್ ಕಾನೂನು ಲೋಪ ಎಸಗಿದ್ದಾರೆ. ರತೀಶ್ ಜಾನ್ಸನ್ ವಿರುದ್ಧ ಐಪಿಸಿ ಸೆಕ್ಷನ್ 504 ಮತ್ತು 505 (1)(ಬಿ) ಅನ್ವಯ ಎಫ್ಐಆರ್ ದಾಖಲಿಸಲಾಗಿದೆ.
ಆದರೆ, ಈ ಸೆಕ್ಷನ್‌ಗಳು “ನಾನ್ ಕಾಗ್ನಿಜೆಬಲ್ ಅಫೆನ್ಸ್’ (ವಿಚಾರಣಾರ್ಹವಲ್ಲದ) ಅಪರಾಧ ಕೃತ್ಯಗಳಾಗಿವೆ. ಇಂತಹ ಪ್ರಕರಣಗಳಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸಬೇಕು. ಆದರೆ, ಈ ಪ್ರಕರಣದಲ್ಲಿ ನೇರವಾಗಿ ಎಫ್ಐಆರ್ ದಾಖಲಿಸಲಾಗಿದೆ. ಆದ್ದರಿಂದ ಅರ್ಜಿದಾರನ ವಿರುದ್ಧದ ಎಫ್ಐಆರ್ ರದ್ದುಪಡಿಸಬೇಕು ಎಂದು ಕೋರಿದರು.
ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ಪೂರ್ವಾನುಮತಿ ಪಡೆಯದೆಯೇ ಹೇಗೆ ಎಫ್ಐಆರ್ ದಾಖಲಿಸಲಾಗಿದೆ? ಇನ್ಸ್‌ಪೆಕ್ಟರ್‌ಗೆ ಕಾನೂನಿನ ಜ್ಞಾನವಿಲ್ಲವೇ?. ನಿಯಮಗಳ ಪ್ರಕಾರ ಪ್ರಕರಣ ದಾಖಲಿಸಬೇಕಿತ್ತಲ್ಲವೇ? ಎಂದು ಸರ್ಕಾರಿ ಅಭಿಯೋಜಕರನ್ನು ಪ್ರಶ್ನಿಸಿದರು.
ಮಾಜಿ ಪೊಲೀಸ್ ಪೇದೆಯೊಬ್ಬರು ರಾಜ್ಯ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಕಾರಣಕ್ಕೆ ಆತನ ವಿರುದ್ಧ ಪದೇ ಪದೇ ಕೇಸು ದಾಖಲಿಸುತ್ತೀರಿ. ಈ ಪ್ರಕರಣದಲ್ಲಿ ಪ್ರಧಾನಿ ಮೋದಿ ವಿರುದ್ಧ ಅರ್ಜಿದಾರ ಪೋಸ್ಟ್ ಹಾಕಿದ್ದರೂ ಪ್ರಕರಣದ ದಾಖಲಿಸುವಾಗ ನಿಯಮ ಪಾಲಿಸಿಲ್ಲ ಎಂದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ವಿಚಾರಣೆಯನ್ನು ಮಾ.26ಕ್ಕೆ ಮುಂದೂಡಿತು.
ಪ್ರಧಾನಿ ಸ್ಮಾರಕ ಕುರಿತ ಸಂದೇಶ: “ಒಂದೊಮ್ಮ ಪ್ರಧಾನಿ ನರೇಂದ್ರ ಮೋದಿಗೆ ಗುಂಡು ಹಾರಿಸಿದರೆ ಅಥವಾ ಬಾಂಬ್ ಸ್ಫೋಟಿಸಿ ಕೊಲೆಗೈದರೆ ಸ್ಮಾರಕ ನಿರ್ಮಿಸಬಹುದು. ಅದಕ್ಕೆ ಅವಸರ ಅಥವಾ ತುರ್ತು ಏನಿಲ್ಲ!’ ಎಂಬ ಅರ್ಥ ಕೊಡುವ ರೀತಿಯಲ್ಲಿ ರತೀಶ್ ಜಾನ್ಸನ್ ಎಂಬುವರು ವಾಟ್ಸಪ್ ಗ್ರೂಪ್‌ನಲ್ಲಿ ಇಂಗ್ಲಿಷ್‌ನಲ್ಲಿ ಮೆಸೇಜ್ ಪೋಸ್ಟ್ ಮಾಡಿದ್ದರು.
ಈ ಕಾರಣಕ್ಕೆ ಅರ್ಜಿದಾರನ ವಿರುದ್ಧ 2019ರ ಫೆ.27ರಂದು ಚಿತ್ರದುರ್ಗ ನಗರ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಸ್ವಯಂಪ್ರೇರಿತವಾಗಿ ಎಫ್ಐಆರ್ ದಾಖಲಿಸಿದ್ದರು. ಅದನ್ನು ರದ್ದುಗೊಳಿಸುವಂತೆ ಕೋರಿ ಜಾನ್ಸನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Bengaluru: ಏರ್ಪೋರ್ಟ್ ಟಿ-2ಗೆ ವರ್ಟಿಕಲ್ ಗಾರ್ಡನ್ ರಂಗು
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.