ಮೀಟರ್ ಬಡ್ಡಿ ಕಿರುಕುಳ ತಾಳದೆ ಕೊಲೆ
Team Udayavani, Nov 29, 2018, 10:36 AM IST
ಬೆಂಗಳೂರು: ಶಿವಾಜಿನಗರದ ಅಕ್ವೇರಿಯಂ ಅಂಗಡಿ ಮಾಲೀಕ ಸೈಯದ್ ಇರ್ಫಾನ್ ಕೊಲೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಇರ್ಫಾನ್ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ಕೊಲೆ ಮಾಡಿದ್ದಾಗಿ ಆರೋಪಿಗಳು ಹೇಳಿದ್ದಾರೆ.
ಓಲ್ಡ್ ಸಿಮೆಟ್ರಿ ರಸ್ತೆಯಲ್ಲಿ ನ.19ರಂದು ರಾತ್ರಿ ನಡೆದಿದ್ದ ಸೈಯದ್ ಇರ್ಫಾನ್ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದ ಶಿವಾಜಿನಗರ ಠಾಣೆ ಪೊಲೀಸರು, ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಇರ್ಫಾನ್ ಕೊಲೆಗೆ ಮೀಟರ್ ಬಡ್ಡಿ ವ್ಯವಹಾರ ಕಾರಣ ಎಂಬ ಸಂಗತಿ ಬಯಲಾಗಿದೆ.
ಪ್ರಕರಣ ಸಂಬಂಧ ಕಟ್ಟಡ ಗುತ್ತಿಗೆದಾರ ಇರ್ಫಾನ್ ಷರೀಪ್, ರೌಡಿಶೀಟರ್‌ಗಳಾದ ಬರ್ಖತ್ ಅಹ್ಮದ್, ಇಲಿಯಾಸ್, ಮುಬಾರಕ್, ಮೊಹಮದ್ ಸಮಿ ಎಂಬುವವರನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ತಲೆಮರೆಸಿ ಕೊಂಡಿರುವ ಇಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಪ್ರಕರಣದ ಜಾಡುಹಿಡಿದು ಸೈಯದ್ ಇರ್ಫಾನ್ ದೂರವಾಣಿ ಕರೆಗಳನ್ನು ಪರಿಶೀಲಿಸುವಾಗ, ಇರ್ಫಾನ್ ಷರೀಪ್ ಜತೆ ಹೆಚ್ಚು ಸಂಭಾಷಣೆ ನಡೆಸಿರುವುದು ತಿಳಿದು ಬಂದಿತ್ತು. ಹೀಗಾಗಿ, ಆತನ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ರಹಸ್ಯ ಬಯಲಾಯಿತು. ಆತ ನೀಡಿದ ಮಾಹಿತಿ ಮೇರೆಗೆ ಉಳಿದ ಆರೋಪಿಗಳನ್ನು ಬಂಧಿಸಲಾಯಿತು. ಸದ್ಯ ಪ್ರಕರಣದ ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಪತ್ನಿ, ಮಗಳ ರೇಪ್ ಮಾಡುತ್ತೇನೆ ಎಂದಿದ್ದ ಸೈಯದ್ ಇರ್ಫಾನ್ ಆಕ್ವೇರಿಯಂಗಳ ವ್ಯಾಪಾರ ಮಾಡುತ್ತಿದ್ದ ಸೈಯದ್ ಇರ್ಫಾನ್ ಅಲಿಯಾಸ್ ಮಚ್ಚಿ ಇರ್ಫಾನ್, ಬಡ್ಡಿ ವ್ಯವಹಾರ ನಡೆಸುತ್ತಿದ್ದು, ಸಾಲ ಪಡೆದವರಿಂದ ಶೇ.30ರಷ್ಟು ಬಡ್ಡಿ ವಸೂಲಿ ಮಾಡುತ್ತಿದ್ದ. ಅದರಂತೆ ಮನೆ ನಿರ್ಮಾಣಕ್ಕೆಂದು ಗುತ್ತಿಗೆದಾರ ಇರ್ಫಾನ್ ಷರೀಪ್‌ಗೆ ಮುಂಗಡವಾಗಿ 30 ಲಕ್ಷ ರೂ. ನೀಡಿದ್ದ.
ಜತೆಗೆ ಆತನಿಗೆ ಶೇ.30ರ ಬಡ್ಡಿಗೆ 10 ಲಕ್ಷ ರೂ. ಸಾಲ ನೀಡಿದ್ದ. ಆದರೆ, ಷರಿಫ್ ಬಡ್ಡಿ ಕಟ್ಟಲು ವಿಫಲನಾಗಿದ್ದ. ಬಡ್ಡಿಗೆ ಬಡ್ಡಿ ಸೇರಿ ಸಾಲದ ಮೊತ್ತ 50 ಲಕ್ಷ ರೂ. ಆಗಿತ್ತು. ಅದೇ ಹಣದಲ್ಲಿ ಮನೆ ನಿರ್ಮಾಣ ಪೂರ್ಣಗೊಳಿಸುವಂತೆ ಇರ್ಫಾನ್ ಕಿರುಕುಳ ನೀಡುತ್ತಿದ್ದ. ಜತೆಗೆ, ಹಣ ವಾಪಾಸ್ ನೀಡದಿದ್ದರೆ ಪತ್ನಿ ಹಾಗೂ ಮಗಳನ್ನು ರೇಪ್ ಮಾಡಿ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಒಡ್ಡಿದ್ದ.
ಆರೋಪಿ ಇರ್ಫಾನ್ ಷರೀಪ್ ಹಾಗೂ ಬರ್ಖತ್ ಅಹ್ಮದ್ ಕೆಲ ದಿನಗಳ ಹಿಂದೆ ಜತೆಯಲ್ಲಿದ್ದಾಗಲೇ ಇರ್ಫಾನ್ ಪೋನ್ ಮಾಡಿ, ಹಣ ನೀಡುವಂತೆ ಅವಾಚ್ಯವಾಗಿ ನಿಂದಿಸಿದ್ದ. ಹೀಗಾಗಿ ಷರೀಪ್, ಮೀಟರ್ ಬಡ್ಡಿಗೆ ಇದುವರೆಗೂ ಹಲವು ಲಕ್ಷ ರೂ. ಕಟ್ಟಿದ್ದೇನೆ. ದುಡಿದ ಹಣವೆಲ್ಲಾ ಆತನಿಗೆ ಕೊಡಬೇಕಾಗಿ ಬಂದಿದೆ. ಹೀಗಿದ್ದರೂ ಕಿರುಕುಳ ನಿಲ್ಲಿಸಿಲ್ಲ ಎಂದು ಬರ್ಖತ್ ಬಳಿ ಹೇಳಿಕೊಂಡಿದ್ದ. ಈ ವೇಳೆ ಬರ್ಖತ್, ಇರ್ಫಾನ್‌ನನ್ನು ಮಗಿಸಲು ಹೇಳಿ, ಇತರ ಆರೋಪಿಗಳ ಜತೆ ಸೇರಿ ಒಳಸಂಚು ರೂಪಿಸಿದ್ದ. ಅದರಂತೆ ನ.19ರಂದು ರಾತ್ರಿ 11.55ರ ಸುಮಾರಿಗೆ ಓಲ್ಡ್ ಸಿಮೆಟ್ರಿ ರಸ್ತೆಯಲ್ಲಿ ಇರ್ಫಾನ್ ನಿಂತಿದ್ದಾಗ, ಹೆಲ್ಮೆಟ್ ಧರಿಸಿ ಬೈಕ್ ಗಳಲ್ಲಿ ಬಂದ ದುಷ್ಕರ್ಮಿಗಳು,
ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಕೊಲೆಯಾದ ಇರ್ಫಾನ್ ಹಲವು ವರ್ಷಗಳಿಂದ ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದು, ವ್ಯಾಪಾರಿಗಳು, ಆಟೋ ಚಾಲಕರು
ಸೇರಿ ಹಲವರಿಗೆ ಬಡ್ಡಿಗೆ ಹಣ ನೀಡುತ್ತಿದ್ದ. ಈತನ ಕಿರುಕುಳಕ್ಕೆ ಬೇಸತ್ತು ಮುಜೀಬ್ ಎಂಬಾತ 2017ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಂಬ ಆರೋಪವೂ ಕೇಳಿಬಂದಿತ್ತು. ಈ ಸಂಬಂಧ ಪ್ರಕರಣ ಕೂಡ ದಾಖಲಾಗಿತ್ತು ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.