ಅಂತಿಮ ಸಂಸ್ಕಾರಕ್ಕೆ ಸಾಕ್ಷಿಯಾದ ಸಹಸ್ರಾರು ಜನ
Team Udayavani, Nov 27, 2018, 11:39 AM IST
ಬೆಂಗಳೂರು: ಮನುಷ್ಯನ ಬದುಕಿನ ಸಾರ್ಥಕತೆ ಆತನ ಸಾವಿನಲ್ಲಿ ಕಾಣುತ್ತದೆ ಎಂಬ ಮಾತಿದೆ. ಹಿರಿಯ ನಟ ಅಂಬರೀಶ್ ಅವರಿಗೆ ಈ ಮಾತು ಸರ್ವತಃ ಒಪ್ಪುವಂತೆ ಕಂಠೀರವ ಸ್ಟುಡಿಯೋದಲ್ಲಿ ನಡೆದ ಅವರ ಅಂತಿಮ ಸಂಸ್ಕಾರಕ್ಕೆ ಜನಸಾಗರ ಸಾಕ್ಷಿಯಾಗಿತ್ತು.
ಚಿತ್ರರಂಗ ಹಾಗೂ ರಾಜಕಾರಣ ಎರಡೂ ದೋಣಿಗಳಲ್ಲಿ ಪಯಣಿಸಿ ಇಹಲೋಕದ ಯಾತ್ರೆ ಮುಗಿಸಿದ ಕಲಿಯುಗದ ಕರ್ಣ ಬಿರುದಾಂಕಿತ ಅಂಬರೀಶ್ ಅವರ ಅಂತ್ಯಕ್ರಿಯೆ ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳ ದಂಡೇ ನೆರೆದಿತ್ತು.
ನೆಚ್ಚಿನ ನಟನ ಅಂತಿಮ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು, ಬೆಂಬಲಿಗರು, ಮಹಿಳೆಯರಾದಿಯಾಗಿ ಸಾವಿರಾರು ಮಂದಿ ಸೋಮವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಸ್ಟುಡಿಯೋ ಕಡೆ ಹೆಜ್ಜೆ ಹಾಕಿದ್ದರು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಬೆಳಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದ್ದ ಸ್ಥಳದಲ್ಲಿ ಸಿದ್ಧತಾ ಕಾರ್ಯದ ಪರಿಶೀಲನೆ ನಡೆಸಿದರು.
ಮಧ್ಯಾಹ್ನದ ಹೊತ್ತಿಗೆ ಸ್ಟೇಡಿಯಂನಲ್ಲಿ ಕಣ್ಣು ಹಾಯಿಸಿದಷ್ಟು ದೂರ ಜನ ಸಮೂಹವೇ ಕಾಣುತ್ತಿತ್ತು.ಅಂತಿಮ ಸಂಸ್ಕಾರ ನಡೆಸುವ ಸಮೀಪದಲ್ಲಿ ಸಾರ್ವಜನಿಕರಿಗಾಗಿಯೇ ಮೀಸಲಿರಿದ್ದ ಜಾಗದಲ್ಲಿ ಹಾಕಲಾಗಿದ್ದ ಕುರ್ಚಿಗಳು ಭರ್ತಿಯಾಗಿ ಸಾವಿರಾರು ಮಂದಿ ನಿಂತಿದ್ದರು. ಇನ್ನೂ ಹಲವರು ಮರಗಳನ್ನೇರಿ ಅರ್ಧ ಗಂಟೆಗೂ ಹೆಚ್ಚುಕಾಲ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ವೀಕ್ಷಿಸಿದರು.
ಸ್ಟುಡಿಯೋ ಮುಖ್ಯದ್ವಾರದಿಂದ ಒಂದೂವರೆ ಕಿ.ಮೀ. ಉದ್ದಕ್ಕೂ ಎರಡೂ ರಸ್ತೆಯ ಕ್ಕೆಲಗಳಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಸ್ಟುಡಿಯೋ ಮುಂಭಾಗದ ರಸ್ತೆಬದಿಯ ಮಹಡಿ ಮನೆಗಳ ಮೇಲೆರಿದ್ದ ಜನಸಮೂಹ ಎಲ್‌ಇಡಿ ಪರದೆಯಲ್ಲಿ ಅಂತಿಮ ಕ್ರಿಯಾವಿಧಿಗಳನ್ನು ಕಣ್ತುಂಬಿಕೊಂಡರು. ರೆಬೆಲ್ ಸ್ಟಾರ್, ಕಲಿಯುಗದ ಕರ್ಣ ಅಮರ ಎಂಬ ಘೋಷಣೆಗಳು ಮುಗಿಲು ಮುಟ್ಟಿದ್ದವು.
ಖಾಕಿ ಕಣ್ಗಾವಲು: ಕಂಠೀರವ ಸ್ಟುಡಿಯೋ ಸುತ್ತಲೂ ಪೊಲೀಸ್ ಇಲಾಖೆ ಭದ್ರಕೋಟೆಯನ್ನೇ ನಿರ್ಮಿಸಿತ್ತು. ಹೆಚ್ಚುವರಿ ಪೊಲೀಸ್ ಆಯುಕ್ತರಾದ ಅಲೋಕ್ ಕುಮಾರ್, ಪಿ. ಹರಿಶೇಖರನ್, ಡಿಸಿಪಿಗಳಾದ ಚೇತನ್‌ಸಿಂಗ್ ರಾಥೋಡ್, ಕಲಾ ಕೃಷ್ಣಮೂರ್ತಿ, ಗಿರೀಶ್ ಸ್ಥಳದಲ್ಲೇ ಮೊಕ್ಕಾಂ ಹೂಡಿ ಬಿಗಿ ಬಂದೋಬಸ್ತ್ ಉಸ್ತುವಾರಿ ಹೊತ್ತು ಪರಿಶೀಲನೆ ನಡೆಸುತ್ತಿದ್ದರು.
ಎಲ್ಲಿಯೂ, ಗದ್ದಲ, ಗಲಾಟೆಗಳಿಗೆ ಅವಕಾಶವಾಗದಂತೆ ಪೊಲೀಸ್ ಸಿಬ್ಬಂದಿ ಪರಿಸ್ಥಿತಿ ನಿಭಾಯಿಸಿದರು. ಅಂತ್ಯಕ್ರಿಯೆ ನಡೆದ ಸುತ್ತಮುತ್ತಲ ಭಾಗಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಜತೆಗೆ, ಡ್ರೋನ್ ಕ್ಯಾಮೆರಾ ಕೂಡ ಜನರ ಚಲನವಲನಗಳ ಮೇಲೆ ನಿಗಾ ಇಟ್ಟಿತ್ತು.
ಜತೆಗೆ, ಕೆಲ ಪೊಲೀಸ್ ಸಿಬ್ಬಂದಿ ಹ್ಯಾಂಡಿಕ್ಯಾಮ್‌ನಲ್ಲಿ ಜನಸಮೂಹ, ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದರು. ಸ್ಟುಡಿಯೋ ಆವರಣದಲ್ಲಿ ಸಹಸ್ರಾರು ಮಂದಿ ಕಿರುಚಾಟ, ಘೋಷಣೆ ಕೂಗಿದಾಗ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟ ದೃಶ್ಯ ಸಾಮಾನ್ಯವಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.