ಶಾಸಕರ ನಿಧಿಗೆ ಕತ್ತರಿ; ವೆಚ್ಚ ಮಾಡದ ಕಾರಣಕ್ಕೆ ಸರ್ಕಾರದ ಚಿಂತನೆ
Team Udayavani, Dec 15, 2017, 6:00 AM IST
ಬೆಂಗಳೂರು: ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಮೊತ್ತವನ್ನು 2ರಿಂದ 5 ಕೋಟಿ ರೂ.ಗೆ ಏರಿಸಬೇಕು ಎಂಬ ಶಾಸಕರ ಒತ್ತಾಯದ ನಡುವೆಯೇ ಈ ಮೊತ್ತವನ್ನು 1.5 ಕೋಟಿ ರೂ.ಗೆ ಇಳಿಸಲು ಸರ್ಕಾರ ಚಿಂತನೆ ನಡೆಸಿದೆ.
ಇದಕ್ಕೆ ಕಾರಣ ಬಹುತೇಕ ಎಲ್ಲಾ ಶಾಸಕರು ಪ್ರದೇಶಾಭಿವೃದ್ಧಿ ನಿಧಿಯನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡದೇ ಇರುವುದು. ಹೀಗಾಗಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು 2 ಕೋಟಿ ರೂ.ನಿಂದ 1.5 ಕೋಟಿ ರೂ.ಗೆ ಇಳಿಸಲು ಚಿಂತನೆ ನಡೆಸಲಾಗಿದೆ. ಯಾವುದೇ ಶಾಸಕರು 1.5 ಕೋಟಿ ರೂ. ವೆಚ್ಚ ಮಾಡಿ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇಟ್ಟರೆ ಅಂಥವರಿಗೆ 50 ಲಕ್ಷ ರೂ.ವರೆಗೆ ಬಿಡುಗಡೆ ಮಾಡುವ ಬಗ್ಗೆ ಯೋಚಿಸಲಾಗಿದೆ ಎಂದು ಯೋಜನಾ ಸಚಿವ ಎಂ.ಆರ್.ಸೀತಾರಾಂ ಹೇಳಿದ್ದಾರೆ.
ಸದ್ಯ ಪ್ರತಿ ವರ್ಷ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಪ್ರತಿ ಶಾಸಕರಿಗೆ 2 ಕೋಟಿ ರೂ. ನೀಡಲಾಗುತ್ತದೆ. ಆದರೆ, ಅನೇಕರು ಅದನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳದಿರುವುದರಿಂದ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲೇ ಹಣ ಉಳಿಯುತ್ತಿದೆ. ಇದು ಸರ್ಕಾರದ ಮೇಲೆ ಅನಗತ್ಯ ಹೊರೆ ಉಂಟು ಮಾಡುತ್ತದೆ. ಹೀಗಾಗಿ ಈ ನಿಧಿಯ ಮೊತ್ತವನ್ನು ಕಡಿಮೆ ಮಾಡಬೇಕು. ಶಾಸಕರು 1.5 ಕೋಟಿ ರೂ. ಬಳಸಿಕೊಂಡು ಮತ್ತೆ ಬೇಡಿಕೆ ಸಲ್ಲಿಸಿದಲ್ಲಿ ಇನ್ನೂ 50 ಲಕ್ಷರೂ. ಒದಗಿಸಬಹುದು. ಈ ಬಗ್ಗೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಚಿವರು ತಿಳಿಸಿದರು.
ಏನಿದು ಶಾಸಕರ ಪ್ರದೇಶಾಭಿವೃದ್ಧಿ ನಿಧಿ?:
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಎಂಬ ನೂತನ ಕಾರ್ಯಕ್ರಮ ಜಾರಿಗೆ ತಂದಿದ್ದರು. ಕ್ರಮೇಣ ಈ ಮೊತ್ತವನ್ನು 25 ಲಕ್ಷ, 50 ಲಕ್ಷ ಮತ್ತು ಒಂದು ಕೋಟಿ ರೂ.ಗೆ ಹೆಚ್ಚಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು 2 ಕೋಟಿ ರೂ.ಗೆ ಏರಿಸಲಾಗಿತ್ತು.
ಈ ನಿಧಿಯನ್ನು ರಾಜ್ಯ ಸರ್ಕಾರ ವಾರ್ಷಿಕ ನಾಲ್ಕು ಕಂತುಗಳಲ್ಲಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಗೆ ಬಿಡುಗಡೆ ಮಾಡುತ್ತದೆ. ತಮಗೆ ಬಿಡುಗಡೆಯಾಗಲಿರುವ ನಿಧಿಗೆ ಸಂಬಂಧಿಸಿದಂತೆ ಶಾಸಕರು ಒಂದೇ ಬಾರಿ 2 ಕೋಟಿ ರೂ. ವೆಚ್ಚದ ಪ್ರಸ್ತಾವನೆಗಳನ್ನು ಸಲ್ಲಿಸಬೇಕು. ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತಿದ್ದಂತೆ ಜಿಲ್ಲಾಧಿಕಾರಿಗಳು ಪ್ರಸ್ತಾವನೆಯಲ್ಲಿರುವ ಯೋಜನೆಗಳಿಗೆ ಆದ್ಯತೆ ಮೇಲೆ ಹಣ ಬಿಡುಗಡೆ ಮಾಡುತ್ತಾರೆ.
ಆದರೆ, 2 ಕೋಟಿ ರೂ. ಯಾವುದಕ್ಕೂ ಸಾಲುತ್ತಿಲ್ಲ. ಪ್ರದೇಶಾಭಿವೃದ್ಧಿ ನಿಧಿಯನ್ನು ಕನಿಷ್ಠ 5 ಕೋಟಿ ರೂ.ಗೆ ಏರಿಸಬೇಕು ಎಂಬ ಒತ್ತಾಯ ಬಹುತೇಕ ಶಾಸಕರಿಂದ ಕೇಳಿಬರಲಾರಂಭಿಸಿದೆ. ಹೀಗಾಗಿ 2018-19ನೇ ಸಾಲಿನಿಂದ ಪ್ರಸ್ತುತ ಇರುವ 2 ಕೋಟಿ ರೂ.ಅನ್ನು 3 ಕೋಟಿ ರೂ.ಗೆ ಏರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದರು. ಆದರೆ, ಈಗ ನೀಡುತ್ತಿರುವ ಹಣವೇ ಪೂರ್ಣ ಪ್ರಮಾಣದಲ್ಲಿ ಖರ್ಚಾಗುತ್ತಿಲ್ಲ. 2002-03ನೇ ಸಾಲಿನಿಂದ 2017ರ ಸೆಪ್ಟೆಂಬರ್ ಅಂತ್ಯಕ್ಕೆ ನಿಧಿಯ 1000 ಕೋಟಿ ರೂ. ಬಳಕೆಯಾಗದೆ ಉಳಿದಿದೆ. 2017-18ನೇ ಸಾಲಿನ ಇನ್ನೂ ಎರಡು ಕಂತಿನ ಹಣ ಬಿಡುಗಡೆ ಬಾಕಿ ಇದ್ದು, ಆಗ ಈ ಮೊತ್ತ 1300 ಕೋಟಿ ರೂ.ಗೆ ಏರಲಿದೆ.
2017-18ನೇ ಸಾಲಿನಲ್ಲಿ ಬಿಡುಗಡೆಯಾಗಿರುವ 300 ಕೋಟಿ ರೂ. ಸೇರಿದಂತೆ 2014-15ಲೇ ಸಾಲಿನಿಂದ ಇದುವರೆಗೆ 594 ಕೋಟಿ ರೂ. ಇನ್ನೂ ಖರ್ಚಾಗದೆ ಉಳಿದಿದೆ. ಆರ್ಥಿಕ ವರ್ಷಾಂತ್ಯದ ವೇಳೆಗೆ ಇನ್ನೂ 300 ಕೋಟಿ ರೂ. ಬಿಡುಗಡೆಯಾಗಲಿದೆ. ಆದರೆ, ಅಷ್ಟೊಂದು ಹಣ ಖರ್ಚಾಗುವ ಸಾಧ್ಯತೆ ಇಲ್ಲ. ಹೀಗಾಗಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು 2 ಕೋಟಿಯಿಂದ 1.5 ಕೋಟಿ ರೂ.ಗೆ ಇಳಿಸಲು ಸರ್ಕಾರ ಚಿಂತನೆ ನಡೆಸಿದೆ.
ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಪೂರ್ಣ ಪ್ರಮಾಣದಲ್ಲಿ ಖರ್ಚಾಗದೇ ಇರುವುದರಿಂದ ಪ್ರಸ್ತುತ ಇರುವ 2 ಕೋಟಿ ರೂ.ಅನ್ನು 1.5 ಕೋಟಿ ರೂ.ಗೆ ಇಳಿಸಬೇಕು. ಶಾಸಕರು 1.5 ಕೋಟಿ ರೂ. ಖರ್ಚು ಮಾಡಿ ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇದ್ದರೆ ಅಂಥವರಿಗೆ ಮತ್ತೆ 50 ಲಕ್ಷ ರೂ. ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ.
– ಎಂ.ಆರ್.ಸೀತಾರಾಂ, ಯೋಜನಾ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
MUST WATCH
ಹೊಸ ಸೇರ್ಪಡೆ
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.