ಮುನಿರತ್ನ ನಿರೀಕ್ಷಿತ ವಿಜಯೋತ್ಸವ
Team Udayavani, Jun 1, 2018, 11:56 AM IST
ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ಬೆನ್ನಲ್ಲೇ ಎದುರಾದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮುನಿರತ್ನ ಜಯಭೇರಿ ಬಾರಿಸಿದ್ದು, ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ ಮಾತ್ರವಲ್ಲದೇ ಸಮ್ಮಿಶ್ರ ಸರ್ಕಾರದ ಸಂಖ್ಯಾಬಲವು ಹೆಚ್ಚಾಗಿದೆ.
ಕಾಂಗ್ರೆಸ್‌ನ ಮುನಿರತ್ನ 1,08,064 ಮತ ಗಳಿಸುವ ಮೂಲಕ ಬಿಜೆಪಿಯ ಮುನಿರಾಜುಗೌಡ ಅವರನ್ನು 25,492 ಮತಗಳ ಅಂತರದಿಂದ ಪರಾಭವಗೊಳಿಸಿ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮುನಿರಾಜುಗೌಡ 82,572 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಟಿಕೆಟ್ ಸಿಗದ ಕಾರಣ ಬಿಜೆಪಿ ತೊರೆದು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಜಿ.ಎಚ್.ರಾಮಚಂದ್ರ 60,360 ಮತ ಪಡೆದು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಹಲಗೇ ವಡೇರಹಳ್ಳಿಯ ಜ್ಞಾನಶಕ್ತಿ ವಿದ್ಯಾನಿಕೇತನ ಶಾಲೆಯ ಕೇಂದ್ರದಲ್ಲಿ ಗುರುವಾರ ಬೆಳಗ್ಗೆ ಮತ ಎಣಿಕೆ ಆರಂಭವಾಯಿತು. ಮೊದಲಿಗೆ 526 ಅಂಚೆ ಮತ ಎಣಿಕೆ ನಡೆಯಿತು. ಇದರಲ್ಲಿ 145 ಕಾಂಗ್ರೆಸ್‌ಗೆ, 189 ಬಿಜೆಪಿಗೆ ಹಾಗೂ 182 ಮತ ಜೆಡಿಎಸ್ ಮತಗಳಿದ್ದವು. ಒಮ್ಮೆಗೆ 24 ಟೇಬಲ್ ವ್ಯವಸ್ಥೆ ಮಾಡಿ, ಒಟ್ಟು 18 ಸುತ್ತಿನಲ್ಲಿ ಮತ ಎಣಿಕೆ ನಡೆಯಿತು.
ಮೊದಲ ಸುತ್ತಿನಲ್ಲಿಯೇ ಮುನಿರತ್ನ ಅವರು ಬಿಜೆಪಿಯ ಮುನಿರಾಜುಗೌಡ ಅವರಿಗಿಂತ 4,222 ಮತಗಳ ಮುನ್ನಡೆ ಸಾಧಿಸಿದರು. ನಂತರದ ಎಲ್ಲ ಸುತ್ತಿನಲ್ಲೂ ನಿರಂತರ ಮುನ್ನಡೆ ಕಾಯ್ದುಕೊಂಡರು. ಪ್ರತಿ ಸುತ್ತಿನಲ್ಲೂ ಕಾಂಗ್ರೆಸ್, ಬಿಜೆಪಿ ನಡುವಿನ ಅಂತರ ಹಿಗ್ಗುತ್ತಲೇ ಹೋಯಿತು. 10ನೇ ಸುತ್ತಿನಲ್ಲೂ ಮುನಿರತ್ನ ಭಾರಿ ಮುನ್ನಡೆ ಕಾಯ್ದುಕೊಂಡಿದ್ದರಿಂದ ಬೆಂಬಲಿಗರು, ಕಾರ್ಯಕರ್ತರು ಜೈಕಾರ ಕೂಗುತ್ತಾ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಿಹಿ ಹಂಚಿದರು.
12ನೇ ಸುತ್ತಿನಲ್ಲಿ 46,593 ಮತಗಳ ಮುನ್ನಡೆ ಸಾಧಿಸಿ ಭಾರಿ ಅಂತರದಲ್ಲಿ ಜಯ ಗಳಿಸುವ ಲೆಕ್ಕಾಚಾರ ಮೂಡಿತ್ತು. ನಂತರದ ಸುತ್ತುಗಳಲ್ಲಿ ಮುನಿರತ್ನ ಮುನ್ನಡೆಯ ಅಂತರ ಕಡಿಮೆಯಾಯಿತು. ಆದರೆ ಯಾವ ಸುತ್ತಿನಲ್ಲೂ ಬಿಜೆಪಿ, ಜೆಡಿಎಸ್‌ನ ಅಭ್ಯರ್ಥಿಗಳು ಕಾಂಗ್ರೆಸ್‌ನ ಮುನಿರತ್ನ ಅವರಿಗೆ ಪೈಪೋಟಿ ನೀಡಲೇ ಇಲ್ಲ.
ನಂತರದ ಸುತ್ತಿನಲ್ಲಿ ಮುನಿರತ್ನ ಅವರ ಮುನ್ನಡೆಯ ಅಂತರ ಕಡಿಮೆಯಾದರೂ ಹಾಗಿದ್ದರೂ ಅಂತಿಮ 18ನೇ ಸುತ್ತಿನವರೆಗೂ ಮುನ್ನಡೆ ಕಾಯ್ದುಕೊಂಡ ಮುನಿರತ್ನ 25,492 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಮುನಿರತ್ನ ಅವರು ಜೆಡಿಎಸ್‌ನ ಕೆ.ಎಲ್.ತಿಮ್ಮನಂಜಯ್ಯ ಅವರನ್ನು 18,813 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.
ಖಾಸಗಿ ಕಟ್ಟಡದಲ್ಲಿ ಸಾವಿರಾರು ಮತದಾರರ ಗುರುತಿನ ಚೀಟಿ ಪತ್ತೆಯಾದ ಹಿನ್ನೆಲೆಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದ ಮತದಾನವು ಮೇ 28ಕ್ಕೆ ಮುಂದೂಡಿಕೆಯಾಯಿತು. ನಂತರದ ಬೆಳವಣಿಗೆಯಲ್ಲಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾದರೂ ದೋಸ್ತಿ ಪಕ್ಷಗಳು ಕ್ಷೇತ್ರದಲ್ಲಿ ಪರಸ್ಪರ ಎದುರಾಳಿಗಳಾಗಿ ಸ್ಪರ್ಧಿಸಿದ್ದರಿಂದ ತೀವ್ರ ಕುತೂಹಲ ಮೂಡಿಸಿತ್ತು.
ಬಿಜೆಪಿ ಅಭ್ಯರ್ಥಿ ಪರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ಅಭ್ಯರ್ಥಿ ಪರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಪ್ರಚಾರ ನಡೆಸಿದ್ದರು. ಆದರೆ ಮುನಿರತ್ನ ಪರ ಪಕ್ಷದ ಹಿರಿಯ ಮುಖಂಡರಿಗಿಂತ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಬಿರುಸಿನ ಪ್ರಚಾರ ನಡೆಸಿದ್ದರು.
ಬೆಂಗಳೂರಿನಲ್ಲಿ ಕಾಂಗ್ರೆಸ್ ಸಂಖ್ಯಾಬಲ 14: ಮೇ 12ರಂದು ನಡೆದ ಬೆಂಗಳೂರಿನ 26 ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ 13 ಸ್ಥಾನ ಪಡೆದರೆ ಬಿಜೆಪಿ 11 ಹಾಗೂ ಜೆಡಿಎಸ್ 2 ಸ್ಥಾನ ಗಳಿಸಿತ್ತು. ಇದೀಗ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕರ ಬಲ 14ಕ್ಕೆ ಏರಿಕೆಯಾಗಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಸದಸ್ಯ ಬಲ 78ಕ್ಕೆ ಏರಿಕೆಯಾಗಿದೆ (ಜಮಖಂಡಿ ಶಾಸಕರಾಗಿದ್ದ ಸಿದ್ದು ನ್ಯಾಮಗೌಡ ನಿಧನ ಹಿನ್ನೆಲೆಯಲ್ಲಿ ಒಂದು ಸ್ಥಾನ ಕಡಿಮೆಯಾಗಿದೆ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.