21 ದಿನಗಳ ಬಳಿಕ ಕೊಲೆ ರಹಸ್ಯ ಬಯಲು!
Team Udayavani, Jun 8, 2019, 3:05 AM IST
ಬೆಂಗಳೂರು: ಸಕಲೇಶಪುರ ಘಾಟ್‌ನಲ್ಲಿ ಪತ್ತೆಯಾಗಿದ್ದ ಯುವತಿಯ ಮೃತದೇಹದ ಜಾಡುಹಿಡಿದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು, ಕೊಲೆ ಪ್ರಕರಣದ ರಹಸ್ಯ ಬಯಲಿಗೆಳೆದು, ಆರೋಪಿಯನ್ನು ಬಂಧಿಸಿದ್ದಾರೆ.
ಐದು ವರ್ಷ ಜತೆಯಾಗಿ ಜೀವನ ನಡೆಸಿದ್ದ ಸುನೀತಾ ಎಂಬಾಕೆಯನ್ನು ಮೇ 12ರಂದು ರಾತ್ರಿ ಕೊಲೆಮಾಡಿ ಸಕಲೇಶಪುರ ಘಾಟ್‌ನಲ್ಲಿ ಎಸೆದಿದ್ದ ಡೇವಿಡ್‌ಕುಮಾರ್ (28) ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸುನೀತಾಳನ್ನು ಕೊಲೆ ಮಾಡಿದ ಆರೋಪ ಪ್ರಕರಣದಲ್ಲಿ ಬಂಧಿತನಾಗಿರುವ ಎಚ್‌ಎಎಲ್ ನಿವಾಸಿ ಡೇವಿಡ್, ಸುನೀತಾಳನ್ನು ಕೊಲೆಗೈದ ರಹಸ್ಯ ಬಾಯ್ಬಿಟ್ಟಿದ್ದಾನೆ. ಏಳು ತಿಂಗಳ ಮಗು ಹಾಗೂ ತನಗೆ ವಾಸಿಸಲು ಪ್ರತ್ಯೇಕ ಮನೆ ಮಾಡಿಕೊಡಲು ಸುನೀತಾ ಬೇಡಿಕೆ ಇರಿಸಿದ್ದಳು.
ಹಾಗೇ, ತಾನು ಮತ್ತೂಬ್ಬ ಯುವತಿ ಜತೆ ಮದುವೆಯಾಗಿದ್ದರ ಸಂಬಂಧ ಉಂಟಾಗಿದ್ದ ವೈಮನಸ್ಸಿಗೆ ಬೇಸತ್ತು ಸುನಿತಾಳನ್ನು ಕೊಲೆ ಮಾಡಿದ್ದಾಗಿ ಆರೋಪಿ ಡೇವಿಡ್, ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುನೀತಾ ಹಾಗೂ ಡೇವಿಡ್ ನಡುವೆ ಐದು ವರ್ಷಗಳ ಹಿಂದೆ ಪ್ರೀತಿಯುಂಟಾಗಿದ್ದು ಗಂಡ ಹೆಂಡತಿಯಂತೆ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು. ಸುನೀತಾಳ ಪೋಷಕರಿಗೂ ಮದುವೆಯಾಗಿರುವುದಾಗಿ ಸುಳ್ಳು ಹೇಳಿ ನಂಬಿಸಿದ್ದರು.
ಎರಡು ವರ್ಷಗಳ ಹಿಂದೆ ಡೇವಿಡ್ ಮತ್ತೂಂದು ಮದುವೆ ಮಾಡಿಕೊಂಡಿದ್ದು, ಈ ವಿಷಯ ಸುನೀತಾಳಿಗೆ ತಿಳಿದು ಆಗಾಗ್ಗೆ ಜಗಳ ನಡೆಯುತ್ತಿತ್ತು. ಏಳು ತಿಂಗಳ ಹಿಂದೆ ಸುನೀತಾಳಿಗೆ ಗಂಡು ಮಗು ಜನಿಸಿದ್ದು, ತಾಯಿಯ ಮನೆಯಲ್ಲಿದ್ದಳು. ಇದು ನಿನ್ನದೇ ಮಗು. ನಾವಿಬ್ಬರೂ ವಾಸಿಸಲು ಪ್ರತ್ಯೇಕ ಮನೆ ಮಾಡಿಕೊಡು ಎಂದು ಡೇವಿಡ್‌ಗೆ ಸುನೀತಾ ಕೇಳಿದ್ದಳು. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು.
ಮಗು ವಾಪಾಸ್ ತಂದುಕೊಟ್ಟ!: ಮೇ 12ರಂದು ಸಂಜೆ ಸುನೀತಾಗೆ ಫೋನ್ ಮಾಡಿದ್ದ ಡೇವಿಡ್, ಮಾತನಾಡುವುದಿದೆ ಹೊರಗಡೆ ಬಾ ಎಂದು ತಿಳಿಸಿದ್ದ. ಅದರಂತೆ, ಗಂಡ ಡೇವಿಡ್ ಕಡೆಯವರು ಮೃತಪಟ್ಟಿದ್ದು, ಅಂತಿಮ ಸಂಸ್ಕಾರಕ್ಕೆ ಹೋಗಿ ಬರುತ್ತೇನೆ ಎಂದು ತನ್ನ ತಾಯಿಗೆ ಹೇಳಿ, ಮಗುವಿನ ಜತೆ ಸುನೀತಾ ಹೊರಗಡೆ ಬಂದಿದ್ದಳು.
ಪೂರ್ವ ಯೋಜನೆಯಂತೆ ಸ್ನೇಹಿತ ಶ್ರೀನಿವಾಸ ಎಂಬಾತನ ಬಳಿ ಇಂಡಿಕಾ ಕಾರು ಪಡೆದುಕೊಂಡಿದ್ದ ಡೇವಿಡ್, ಮಂಗಳೂರು ಸೇರಿದಂತೆ ಹಲವೆಡೆ ಸುತ್ತಾಡಿಕೊಂಡು ಬರೋಣ ಎಂದು ಸುನೀತಾಳನ್ನು ನಂಬಿಸಿ ಕಾರು ಹತ್ತಿಸಿಕೊಂಡಿದ್ದ. ಅದೇ ದಿನ ರಾತ್ರಿ ಪ್ರಯಾಣದಲ್ಲಿ ಸುನೀತಾ ನಿದ್ರೆಗೆ ಜಾರುತ್ತಿದ್ದಂತೆ ಆಕೆಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ ಡೇವಿಡ್, ಮೃತ ದೇಹವನ್ನು ಘಾಟ್‌ನಲ್ಲಿ ಎಸೆದು ಮಗುವಿನ ಜತೆ ನಗರಕ್ಕೆ ಬಂದಿದ್ದ.
ಮುಂಜಾನೆ 4.30ರ ಸುಮಾರಿಗೆ ಸುನೀತಾಳ ತಾಯಿಯ ಮನೆ ಬಳಿ ತೆರಳಿದ್ದ ಡೇವಿಡ್, ನಿಮ್ಮ ಮಗಳು ನೆಲಮಂಗಲ ಬಸ್‌ನಿಲ್ದಾಣದ ಬಳಿ ಜಗಳವಾಡಿಕೊಂಡು ಮಂಗಳೂರು ಬಸ್ ಹತ್ತಿಕೊಂಡು ಹೊರಟುಹೋದಳು. ಮಗುವನ್ನು ನೋಡಿಕೊಳ್ಳಿ ಆಕೆಯನ್ನು ಹುಡುಕಿಕೊಂಡು ಬರುತ್ತೇನೆ ಎಂದು ಹೇಳಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದರು.
ಮೇ 13ರಂದು ಘಾಟ್‌ನಲ್ಲಿ ಮಹಿಳೆಯ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಸಕಲೇಶಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದರು. ಆದರೆ ಕೊಲೆಯಾಗಿದ್ದ ಮಹಿಳೆಯ ಗುರುತು ಪತ್ತೆಯಾಗಿರಲಿಲ್ಲ.
ಹಲವು ದಿನ ಕಳೆದರೂ ಡೇವಿಡ್ ಮನೆಯ ಕಡೆ ಬಂದಿರಲಿಲ್ಲ. ಜತೆಗೆ ಸುನೀತಾಳ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಇದರಿಂದ ಆತಂಕಗೊಂಡ ಆಕೆಯ ಪೋಷಕರು, ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಮೇ 21ರಂದು ನಾಪತ್ತೆ ದೂರು ದಾಖಲಿಸಿದ್ದರು.
ಸಿಸಿಬಿ ತನಿಖೆಯಲ್ಲಿ ಸಿಕ್ಕಿಬಿದ್ದ ಹಂತಕ: ಸಕಲೇಶಪುರದಲ್ಲಿ ಅಪರಿಚಿತ ಮಹಿಳೆ ಕೊಲೆಯಾದ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದ ಸಿಸಿಬಿಯ ಸಂಘಟಿತ ಅಪರಾಧ ವಿಭಾಗದ ಎಸಿಪಿ ಬಿ.ಬಾಲರಾಜು ನೇತೃತ್ವದ ತಂಡ ತನಿಖೆ ಚುರುಕುಗೊಳಿಸಿತ್ತು.
ಸಕಲೇಶಪುರ ಪೊಲೀಸರಿಂದ ಸುನೀತಾಳ ಫೋಟೋ ತರಿಸಿಕೊಂಡು ನಗರದಲ್ಲಿ ನಾಪತ್ತೆಯಾಗಿದ್ದ ಮಹಿಳೆಯರ ಪೋಟೋಗಳ ಜತೆ ಪರಿಶೀಲನೆ ನಡೆಸಿದಾಗ ಕೆ.ಜಿಹಳ್ಳಿ ಪೊಲೀಸರು ನೀಡಿದ್ದ ಸುನೀತಾ ಫೋಟೋಗೆ ಹೋಲಿಕೆಯಾಯಿತು.
ಈ ಸುಳಿವು ಆಧರಿಸಿ ಸುನೀತಾಳ ಪೋಷಕರನ್ನು ವಿಚಾರಣೆ ನಡೆಸಿದಾಗ ಡೇವಿಡ್ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಕಾರು ಮೆಕ್ಯಾನಿಕ್ ಆಗಿದ್ದ ಡೇವಿಡ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಸುನೀಯಾ ಕೊಲೆಗೈದ ಸತ್ಯ ಬಾಯ್ಬಿಟ್ಟಿದ್ದಾನೆ ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.
ಈ ಪ್ರಕರಣದಲ್ಲಿ ಡೇವಿಡ್‌ಗೆ ಕಾರು ನೀಡಿದ್ದ ಶ್ರೀನಿವಾಸ್ ಪಾತ್ರವೂ ಮೇಲ್ನೋಟಕ್ಕೆ ಕಂಡು ಬಂದಿದ್ದು ತಲೆಮರೆಸಿಕೊಂಡಿರುವ ಆತನ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.