ಸಿನಿಮೀಯ ಶೈಲಿಯಲ್ಲಿ ನಾಗನ ಸೆರೆ
Team Udayavani, May 12, 2017, 12:20 PM IST
ಬೆಂಗಳೂರು: ಬಹುಕೋಟಿ ಬ್ಲ್ಯಾಕ್ ಆ್ಯಂಡ್ ವೈಟ್ ದಂಧೆ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರಿಂದ ತಪ್ಪಿಸಿಕೊಳ್ಳಲು ತೆರೆಮರೆಯಲ್ಲಿ ನಾನಾ ಕಸರತ್ತು ನಡೆಸುತ್ತಿದ್ದ ನಾಗರಾಜ್ ಹಾಗೂ ಆತನ ಇಬ್ಬರು ಮಕ್ಕಳು ಕೊನೆಗೂ ತಮಿಳುನಾಡಿನ ವೆಲ್ಲೂರಿನಲ್ಲಿ ರಾಜ್ಯ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕಳೆದ 27 ದಿನಗಳಿಂದ ಪೊಲೀಸರ ಕಣ್ತಪ್ಪಿಸಿ ನೆರೆಯ ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದ ನಾಗರಾಜ್, ಈತನ ಮಕ್ಕಳಾದ ಶಾಸ್ತ್ರಿ, ಗಾಂಧಿ ಎಂಬುವರನ್ನು ಡಿಸಿಪಿ ಅಜಯ್ ಹಿಲೋರಿ, ಎಸಿಪಿ ರವಿಕುಮಾರ್, ಹೆಣ್ಣೂರು ಇನ್‌ಸ್ಪೆಕ್ಟರ್ ಶ್ರೀನಿವಾಸ ನೇತೃತ್ವದ ತಂಡ ಗುರುವಾರ ಸಂಜೆ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಆರ್ಕಾಟ್‌ನಲ್ಲಿ ಸಿನಿಮೀಯ ರೀತಿಯಲ್ಲಿ ಬಂಧಿಸಿದೆ. ಇದೇ ಸ್ಥಳದಲ್ಲಿ ಕೂತು ವಿಡಿಯೋಗಳನ್ನು ಚಿತ್ರಿಕರಿಸಿ ಬಿಡುಗಡೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ರಾತ್ರಿ 11.30ಕ್ಕೆ ನಾಗರಾಜ್, ಆತನ ಇಬ್ಬರ ಪುತ್ರರನ್ನು ವೆಲ್ಲೂರುನಿಂದ ಬೈಯಪ್ಪನಹಳ್ಳಿ ಠಾಣೆಯಲ್ಲಿ ಕೇಸು ದಾಖಲಿಸಿ, ರಾಮಮೂರ್ತಿ ನಗರ ಠಾಣೆಗೆ ಕರೆತರಲಾಗಿದೆ.
ಸಿಕ್ಕಿದ್ದು ಹೇಗೆ?: ನಾಗರಾಜ್ ಮತ್ತು ಮಕ್ಕಳು ಉಪಯೋಗಿಸುತ್ತಿದ್ದ ಹತ್ತಾರು ನಂಬರ್‌ಗಳ ಪೈಕಿ ಒಂದು ನಂಬರ್ ನಿರಂತರವಾಗಿ ಕಾರ್ಯಾ ನಿರ್ವಹಿಸುತ್ತಿತ್ತು. ಈ ನಂಬರ್‌ಅನ್ನು ಮನೆಯವರು ಹೊರತುಪಡಿಸಿದರೆ ಬೇರೆ ಯಾರಿಗೂ ಕೊಟ್ಟಿರಲಿಲ್ಲ. ಆದರೆ, ಎರಡು ದಿನಗಳ ಹಿಂದೆ ಈ ನಂಬರ್ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು, ಅದರ ಜಾಡು ಹಿಡಿದು ಹಿಂಬಾಲಿಸುತ್ತಿದ್ದರು. ವೆಲ್ಲೂರಿನಿಂದ 100 ಕಿ.ಮೀ. ದೂರದಲ್ಲಿರುವ ಅರಣಿ ಗ್ರಾಮದಲ್ಲಿ ಮೊಬೈಲ್ ಸಂಪರ್ಕ ಸಿಕ್ಕಿತ್ತು. ಅದನ್ನೇ ಹಿಂಬಾಲಿಸಿದ ಎರಡು ತಂಡಗಳು ಆರೋಪಿ ಇರುವ ಸ್ಥಳ ತಲುಪಿದ್ದವು.
ಇಲ್ಲಿನ ಅರಣಿ ಅಮ್ಮನ್ (ಅಂಗಾಳ ಪರಮೇಶರಿ) ದೇವಾಲಯದ ಆವರಣದಿಂದ ಮಧ್ಯಾಹ್ನ 3 ಗಂಟೆ ಸುಮಾರಿಗೆ ಓಮ್ಮಿ ಕಾರಿನಲ್ಲಿ ನಾಗರಾಜ್ ಮತ್ತು ಮಕ್ಕಳು ಹೊರ ಬರುತ್ತಿದ್ದರು. ಆಗ ಮಫ್ತಿಯಲ್ಲಿದ್ದ ಪೊಲೀಸರು ಕಾರು ನಿಲ್ಲಿಸುವಂತೆ ಆರೋಪಿಗಳಿಗೆ ಸೂಚಿಸಿದ್ದಾರೆ. ತಕ್ಷಣವೇ ಪೊಲೀಸರ ಇರುವಿಕೆಯ ಸುಳಿವು ಪಡೆದ ನಾಗರಾಜ, ವೇಗವಾಗಿ ಕಾರು ಮಾಡುವಂತೆ ಪುತ್ರ ಶಾಸ್ತ್ರಿಗೆ ಸೂಚಿಸಿದ್ದಾನೆ. ಎರಡು ವಾಹನಗಳಲ್ಲಿದ್ದ ಪೊಲೀಸರ ತಂಡ ಸುಮಾರು 50 ಕಿ.ಮೀ.ವರೆಗೆ ಹಿಂಬಾಲಿಸಿತು.
ವೇಗದಲ್ಲಿ ಕಾರು ಚಾಲನೆ ಮಾಡುತ್ತಿದ್ದ ಶಾಸ್ತ್ರಿ ಪೊಲೀಸರಿದ್ದ ಕಾರಿಗೆ ಡಿಕ್ಕಿಹೊಡೆದಿದ್ದರಿಂದ ಎಂಟು ಮಂದಿ ಪೊಲೀಸರಿದ್ದ ವಾಹನ ರಸ್ತೆ ಪಕ್ಕಕ್ಕೆ ಬಿದ್ದಿತು. ಇದೇ ವೇಳೆ ಮತ್ತೂಂದು ಪೊಲೀಸ್ ವಾಹನ ಹಿಂಬಾಲಿಸಿದೆ. ಬಳಿಕ ಎರಡು ಕಾರುಗಳು ಆರೋಪಿಗಳನ್ನು ಹಿಂಬಾಲಿಸಿ ಕೊಂಡಾವರ ಗ್ರಾಮದ ಬಳಿ ನಾಗರಾಜ್‌ನ ಕಾರಿಗೆ ಹಿಂಬದಿಯಿಂದ ಡಿಕ್ಕಿಯೊಡೆದವು. ಆದರೂ ಶಾಸ್ತ್ರಿ ಕಾರು ನಿಲ್ಲಿಸಿಲ್ಲ. ಕೊನೆಗೆ ಪೊಲೀಸರಿದ್ದ ಎರಡೂ ಕಾರುಗಳು ಓಮ್ನಿಯನ್ನು ಹಿಂದಿಕ್ಕಿ ಅಡ್ಡಲಾಗಿ ವಾಹನವನ್ನು ನಿಲ್ಲಿಸುವಲ್ಲಿ ಯಶಸ್ವಿಯಾದ ಬಳಿಕ ಪಿಸ್ತೂಲ್‌ನಿಂದ ಎಚ್ಚರಿಕೆ ನೀಡಿ ಕಾರಿನಿಂದ ಇಳಿಯುವಂತೆ ಸೂಚಿಸಿ ಬಂಧಿಸಲಾಗಿದೆ.
ಬಳಿಕ ಆತನನ್ನು ಕರೆತರಲು ಸ್ಥಳೀಯ ಪೊಲೀಸರು ಅಡ್ಡಿಪಡಿಸಿದ ವಿಷಯ ತಿಳಿಯುತ್ತಿದ್ದಂತೆ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಕೂಡಲೇ ವೆಲ್ಲೂರಿನ ಎಸ್ಪಿಗೆ ಕರೆ ಮಾಡಿ ಕರ್ನಾಟಕಕ್ಕೆ ಕಳುಹಿಸಿಕೊಡುವಂತೆ ಸೂಚಿಸಿದರು. ನಂತರ ಇಲ್ಲಿನ ಕನ್ನಮಂಗಲ ಠಾಣೆಯಲ್ಲಿ ಕಾನೂನು ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿ ಕರೆ ತರಲಾಗಿದೆ.
100ಕ್ಕೆ ಕರೆ ಮಾಡಿ ಕಿಡ್ನಾಪ್ ಎಂದು ದೂರು ನೀಡಿದ್ದ
ಪೊಲೀಸರು ಪಿಸ್ತೂಲ್ ಹಿಡಿದು ಸುತ್ತುವರಿಯುತ್ತಿದ್ದಂತೆ ನಾಗರಾಜ್ ಕೂಡಲೇ ಪೊಲೀಸ್ ಸಹಾಯವಾಣಿ 100ಕ್ಕೆ ಕರೆ ಮಾಡಿದ್ದಾನೆ. ಅಪರಿಚಿತ ವ್ಯಕ್ತಿಗಳು ಅಪಹರಣ ಮಾಡಲು ಬಂದಿದ್ದಾರೆ ಎಂದು ವೆಲ್ಲೂರು ಪೊಲೀಸ್ ನಿಯಂತ್ರಣ ಕೊಠಡಿಗೆ ದೂರಿದ್ದಾನೆ. ಅಲ್ಲದೇ ತನ್ನ ಪರ ವಕೀಲರು ಹಾಗೂ ಕೆಲ ಸಂಬಂಧಿಕರಿಗೆ ಕರೆ ಮಾಡಿದ್ದಾನೆ. ಆಗ ಸ್ಥಳೀಯ ಪೊಲೀಸರು ಕೂಡಲೇ ನೆರವಿಗೆ ಬಂದಿದ್ದಾರೆ. ಸ್ಥಳದಲ್ಲಿ ಗೊಂದಲದಿಂದಾಗಿ ಬೆಂಗಳೂರು ಮತ್ತು ವೆಲ್ಲೂರು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.
ದೇವರ ಮೊರೆ ಹೋಗಿದ್ದ ಆರೋಪಿ
ಏ.14ರಿಂದ ತಲೆಮರೆಸಿಕೊಂಡಿದ್ದ ನಾಗರಾಜ್ ತಮಿಳುನಾಡಿನ ಧರ್ಮಪುರಿ, ವೆಲ್ಲೂರಿನಲ್ಲೇ ಮಕ್ಕಳೊಂದಿಗೆ ಅಲೆಮಾರಿ ಜೀವನ ನಡೆಸುತ್ತಿದ್ದ. ಹತ್ತಿರದ ಸರ್ಕಾರಿ ಶಾಲೆ, ಕಾಲೇಜು ಹಾಗೂ ದೇವಾಲಯಗಳಲ್ಲಿ ತಂಗುತ್ತಿದ್ದ. ಅಲ್ಲದೇ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿರುವ ದೇವಾಲಯಗಳಿಗೆ ಹೆಚ್ಚಾಗಿ ಹೋಗುತ್ತಿದ್ದ. ಹೀಗೆ ಸುತ್ತಾಡಲು ತನ್ನ ಬಾಡಿಗೆ ಮನೆಯಲ್ಲಿದ್ದು, ಇದೀಗ ಬಂಧಿತನಾಗಿರುವ ಸೌಂದರ್ಯರಾಜನ್‌ನಿಂದ 5 ಕೋಟಿ ರೂ. ಹೊಸ ನೋಟುಗಳನ್ನು ತರಿಸಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.
60ಕ್ಕೂ ಹೆಚ್ಚು ಪ್ರಕರಣಗಳಿವೆ ನಾಗನ ಮೇಲೆ
ಪಾಲಿಕೆ ಮಾಜಿ ಸದಸ್ಯ ನಾಗರಾಜನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 1981 ರಿಂದ ಇದುವರೆಗೂ 60 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 47 ಪ್ರಕರಣಗಳು ಶ್ರೀರಾಮಪುರ ಠಾಣೆಯೊಂದರಲ್ಲೇ ದಾಖಲಾಗಿದೆ. ದಾಬಸ್‌ಪೇಟೆ ಮತ್ತು ಮಾಗಡಿ ರಸ್ತೆಯಲ್ಲಿ ತಲಾ 2 ಪ್ರಕರಣಗಳು ದಾಖಲಾದರೆ, ಸುಬ್ರಮಣ್ಯನಗರ, ಚಿಕ್ಕಪೇಟೆ, ಶೇಶಾದ್ರಿಪುರ, ಕಾಟನ್‌ಪೇಟೆ, ಮಲ್ಲೇಶ್ವರ ಮತ್ತು ಹೆಣ್ಣೂರು ಠಾಣೆಗಳಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿದೆ. ಇನ್ನು ಆತನ ಮಕ್ಕಳಾದ ಗಾಂಧಿ ಮತ್ತು ಶಾಸ್ತ್ರೀ ವಿರುದ್ಧ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ 5 ಪ್ರಕರಣಗಳು ಮತ್ತು ದಾಬಸ್‌ಪೇಟೆ ಹಾಗೂ ಮಾಗಡಿ ರಸ್ತೆಯಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿದೆ.
ವಾದ ಮಾಡಲು ಒಲ್ಲದ ವಕೀಲರು
ನಾಗರಾಜನ ಪರ ವಕಾಲತ್ತು ವಹಿಸುವುದಿಲ್ಲ ಎಂದು ನಾಗರಾಜ್ ಪರ ವಕೀಲರಾದ ಶ್ರೀರಾಮರೆಡ್ಡಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ನಾಗರಾಜ್‌ಗೆ ಸಾಕಷ್ಟು ಸಲಹೆಗಳನ್ನು ನೀಡಲಾಯಿತು. ಆದರೆ, ಅವರು ಕೇಳಲಿಲ್ಲ. ಕಳೆದ 20 ವರ್ಷಗಳಿಂದ ಅವರ ಪರ ವಕಾಲತ್ತು ವಹಿಸುತ್ತಿದ್ದೇನೆ. ರೌಡಿಶೀಟರ್ ಪಟ್ಟಿಯಿಂದ ಹೊರತಂದಿದ್ದೇನೆ. ಆದರೂ ನನ್ನ ಸಲಹೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ.
ಗುರುವಾರ ಬೆಳಗ್ಗೆ ಕರೆ ಮಾಡಿದಾಗಲೂ ಅವರಿಗೆ ಸೂಚಿಸಿದ್ದೇನೆ. ಪೊಲೀಸರು ಬಾರಿ ಹುಡುಕಾಟ ಆರಂಭಿಸಿದ್ದಾರೆ ಬಂಧನವಾಗದೆ ಬೇರೆ ದಾರಿಯಿಲ್ಲ ಶರಣಾಗಿ ಎಂದು ಸಲಹೆ ನೀಡಿದ್ದೇನೆ. ಅಲ್ಲದೇ ಮೂರು ದಿನಗಳ ಹಿಂದೆ ಕಚೇರಿಗೆ ಬಂದು ಹೈಕೋರ್ಟ್‌ಗೆ ಸಲ್ಲಿಸುವ ಜಾಮೀನು ಅರ್ಜಿಗೆ ಸಹಿ ಹಾಕುವಾಗಲೂ ಸಲಹೆ ನೀಡಿದ್ದೆ. ಆಗ ನಾಗರಾಜ್, ಬೇರೆ ಹಿರಿಯ ವಕೀಲರನ್ನು ನೇಮಿಸಿ, ನಾನು ಯಾವುದೇ ಕಾರಣಕ್ಕೂ ಸಿಗುವುದಿಲ್ಲ ಎಂದಿದ್ದರು. ಈ ಎಲ್ಲ ಬೆಳವಣಿಗೆಗಳಿಂದ ಬೇಸರಗೊಂಡು ಪ್ರಕರಣದಿಂದ ಹಿಂದೆ ಸರಿಯುತ್ತಿದ್ದೇನೆ. ಬೇರೆ ವಕೀಲರನ್ನು ನೇಮಿಸಿಕೊಳ್ಳಲಿ ಎಂದು ಉದಯವಾಣಿಗೆ ಪ್ರತಿಕ್ರಿಯಿಸಿದ್ದಾರೆ.
ಅಪಹರಣದ ದೂರು
ತಮಿಳುನಾಡಿನ ವೆಲ್ಲೂರಿನಲ್ಲಿ ನಾಗರಾಜ್ ಮತ್ತು ಮಕ್ಕಳು ಬಂಧನವಾಗುತ್ತಿದ್ದಂತೆ ಇತ್ತ ಆರೋಪಿಯ ಬೆಂಬಲಿಗರು, ಸಾಮಾಜಿಕ ಕಾರ್ಯಕರ್ತ ನಾಗರಾಜ್‌ನನ್ನು ಅಪಹರಣ ಮಾಡಿದ್ದಾರೆ ಎಂದು ಸ್ಥಳೀಯ ಠಾಣೆಗೆ ದೂರು ನೀಡಲು ಮುಂದಾದ ಘಟನೆಯೂ ನಡೆದಿದೆ. ಆದರೆ, ಪೊಲೀಸರು ದೂರು ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಟೈಮ್ ಲೈನ್
* ಏ.7: ಹೆಣ್ಣೂರು ಠಾಣೆಯಲ್ಲಿ ಉದ್ಯಮಿ ಉಮೇಶ್‌ರಿಂದ ಅಪಹರಣ, ದರೋಡೆ ದೂರು
* ಏ.14: ನಾಗರಾಜ್ ಮನೆ ಮೇಲೆ ದಾಳಿ, 14.80 ಕೋಟಿ ಹಳೆ ನೋಟುಗಳು ಪತ್ತೆ, ಮಕ್ಕಳೊಂದಿಗೆ ಆರೋಪಿ ನಾಪತ್ತೆ
* ಏ.19: ನಿರೀಕ್ಷಣಾ ಜಾಮೀನು ಪಡೆಯಲು 11ನೇ ಎಸಿಎಂ ನ್ಯಾಯಾಲಯಕ್ಕೆ ಅರ್ಜಿ
* ಏ.22: ನಾಗರಾಜ್‌ನಿಂದ ಮೊದಲ ವಿಡಿಯೋ ಬಿಡುಗಡೆ, ನೆಲಮಂಗಲ ವಕೀಲರಿಂದ ಠಾಣೆಗೆ ದೂರು
* ಏ.23: ಶ್ರೀರಾಮಪುರ ಠಾಣೆಯಲ್ಲಿ ರಿಯಲ್‌ಎಸ್ಟೇಟ್ ಉದ್ಯಮಿ ಅರುಣ್‌ರಿಂದ ದೂರು
* ಏ.25: ನಾಗರಾಜ್ ವಿರುದ್ಧ 76 ಲಕ್ಷ ವಂಚನೆ ಆರೋಪ ಯಶಂವಂತಪುರದ ಪ್ಲೇವುಡ್ ಅಂಗಡಿ ಮಾಲೀಕ ಸೈಯದ್ ದೂರು
* ಮೇ2: ಮತ್ತೆ ನಿರೀಕ್ಷಣಾ ಪಡೆಯಲು ಎಸಿಎಂ ನ್ಯಾಯಾಲಯಕ್ಕೆ ಅರ್ಜಿ
* ಮೇ4: ನಾಗರಾಜ್‌ನ ಮೂವರು ಸಹಚರರ ಬಂಧನ
* ಮೇ 5: ನಾಗರಾಜ್‌ನ ಇಬ್ಬರು ಸಹಚರರ ಬಂಧನ
* ಮೇ 6: ನಾಗರಾಜ್‌ನ ಸಂಬಂಧಿ ಸೆರೆ
* ಮೇ9: ನಾಗರಾಜ್‌ನ ಸಹಚರ ಬಂಧನ
* ಮೇ 8: ನಾಗರಾಜ್‌ನಿಂದ ಮತ್ತೂಂದು ವಿಡಿಯೋ ಬಿಡುಗಡೆ
* ಮೇ 11: ವೆಲ್ಲೂರಿನಲ್ಲಿ ನಾಗ ಮತ್ತು ಪುತ್ರರ ಬಂಧನ