ನಲಪಾಡ್‌ಗೆ ಮೂರು ದಿನ ಜೈಲೇ ಗತಿ
Team Udayavani, Feb 24, 2018, 12:48 PM IST
![nalapad.jpg](https://www.udayavani.com/wp-content/uploads/2018/02/24/nalapad.jpg)
![nalapad.jpg](https://www.udayavani.com/wp-content/uploads/2018/02/24/nalapad.jpg)
ಬೆಂಗಳೂರು: ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿರುವ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಹಾಗೂ ಸಹಚರರು ಇನ್ನೂ ಮೂರು ದಿನ ಜೈಲಿನಲ್ಲಿ ಕಳೆಯಬೇಕಿದೆ.
ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ನಡೆಸಿದ 63ನೇ ಸಿಸಿಎಚ್ ನ್ಯಾಯಾಲಯ ವಿಚಾರಣೆಯನ್ನು ಫೆ.26ಕ್ಕೆ ಮುಂದೂಡಿದೆ. ಪ್ರಕರಣದ ವಿಶೇಷ ಅಭಿಯೋಜಕ ಶ್ಯಾಮ್‌ಸುಂದರ್ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದರು. ತೀವ್ರ ಗಾಯಗೊಂಡಿರುವ ವಿದ್ವತ್ ಪರಿಸ್ಥಿತಿ ಚಿಂತಾಜನಕವಾಗಿದೆ.
ಆರೋಪಿ ರಾಜಕೀಯ ಹಾಗೂ ಹಣ ಬಲ ಹೊಂದಿದ್ದಾನೆ. ಒಂದು ವೇಳೆ ಜಾಮೀನು ನೀಡಿದರೆ ತನ್ನ ಪ್ರಭಾವದಿಂದ ಸಾಕ್ಷಾಧಾರಗಳನ್ನು ನಾಶ ಪಡಿಸಲಿದ್ದಾನೆ. ಜತೆಗೆ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಳ್ಳುವ ಸಾಧ್ಯತೆಯಿದೆ ಎಂದು ನ್ಯಾಯಾಲಯಕ್ಕೆ ವಿವರಣೆ ನೀಡಿದರು.
ತಮ್ಮನ್ನು ಸರ್ಕಾರ ವಿಶೇಷ ಅಭಿಯೋಜಕರಾಗಿ ನೇಮಕ ಮಾಡಿರುವುದರಿಂದ ಹೆಚ್ಚುವರಿ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಶ್ಯಾಮಸುಂದರ್ ಕೋರ್ಟ್‌ಗೆ ಮನವಿ ಮಾಡಿದರು. ಇದಕ್ಕೆ ಆರೋಪಿಗಳ ಪರ ವಕೀಲ ಟಾಮಿ ಸೆಬಾಸ್ಟಿನ್ ಆಕ್ಷೇಪ ವ್ಯಕ್ತಪಡಿಸಿದರು.
ಘಟನೆ ಸಂಬಂಧ ಆರಂಭದಲ್ಲಿ ಕೊಲೆ ಯತ್ನ (307) ಪ್ರಕರಣ ದಾಖಲಿಸಿರಲಿಲ್ಲ. ರಾಜಕಾರಣಿಗಳ ಒತ್ತಡದಿಂದ ಘಟನೆ ನಡೆದ ಹಲವು ಗಂಟೆಗಳ ಬಳಿಕ ಕೊಲೆ ಯತ್ನ ಆರೋಪ ಸೇರಿಸಲಾಗಿದೆ. ಆದ್ದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ವಾದಿಸಿದರು.
ಈ ನಡುವೆ ಪ್ರಕರಣದ ವಿಶೇಷ ಅಭಿಯೋಜಕರಾಗಿ ಶ್ಯಾಮ್‌ಸುಂದರ್‌ರನ್ನು ನೇಮಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದ್ದರಿಂದ ಸರ್ಕಾರಿ ಅಭಿಯೋಜಕ ನರೇಂದ್ರ ಅವರು ಪ್ರಕರಣದಿಂದ ನಿವೃತ್ತರಾಗುವುದಾಗಿ ತಿಳಿಸಿದರು. ಇದೇ ವೇಳೆ ಸರ್ಕಾರವೇ ಪ್ರಕರಣದಲ್ಲಿ ವಿಶೇಷ ಅಭಿಯೋಜಕರನ್ನಾಗಿ ನೇಮಿಸಿರುವುದರಿಂದ ಖಾಸಗಿಯಾಗಿ ವಿದ್ವತ್ ಪರ ವಕಾಲತ್ತಿಗೆ ಗುರುವಾರ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯುತ್ತೇನೆ ಎಂದು ಶ್ಯಾಮ್‌ಸುಂದರ್ ತಿಳಿಸಿದರು.
ಆಲಂ ಪಾಷ ತಕರಾರು ಅರ್ಜಿ: ವಿದ್ವತ್ ಮೇಲಿನ ಹಲ್ಲೆ ಸಾರ್ವಜನಿಕ ಅಪರಾಧ. ಪ್ರಕರಣದಲ್ಲಿ ತಮ್ಮನ್ನು ಪ್ರತಿವಾದಿಯನ್ನಾಗಿಸಬೇಕು ಎಂದು “ದಿ ಹೆಲ್ಪಿಂಗ್ ಸಿಟಿಜನ್ ಮತ್ತು ಪೀಪಲ್ಸ್ ಸಂಘಟನೆ ಸಂಸ್ಥಾಪಕ, ವಕೀಲ ಆಲಂ ಪಾಷ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.
ಈ ಮಧ್ಯಂತರ ಅರ್ಜಿ ಕಾನೂನು ರೀತ್ಯಾ ಇದೆ ಎಂದು ಪಾಷ ಪರ ದಯಾನಂದ್ ಡಿ. ನಾಯಕ್ ವಾದಿಸಿದರು. ಇದಕ್ಕೆ ಆಕ್ಷೇಪಿಸಿದ ಟಾಮಿ ಸೆಬಾಸ್ಟಿನ್, ಪ್ರಕರಣದ ವಿಚಾರಣೆ ಪ್ರಾಥಮಿಕ ಹಂತದಲ್ಲಿದ್ದು, ಸರ್ಕಾರದ ಪ್ರತಿನಿಧಿಯಲ್ಲದ, ಸಂತ್ರಸ್ತ ಕುಟುಂಬದವರೂ ಅಲ್ಲದ ಮೂರನೇ ವ್ಯಕ್ತಿ ಮಧ್ಯ ಪ್ರವೇಶಕ್ಕೆ ಅವಕಾಶವಿಲ್ಲ. ಆದ್ದರಿಂದ ಮಧ್ಯಂತರ ಅರ್ಜಿ ರದ್ದು ಮಾಡಬೇಕು ಎಂದು ವಾದಿಸಿದರು.
ಸದ್ಯ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ತನಿಖೆ ಪೂರ್ಣಗೊಂಡು ಆರೋಪ ಪಟ್ಟಿ ಸಲ್ಲಿಸಲಾಗಿಲ್ಲ. ಈ ಹಂತದಲ್ಲಿ 3ನೇ ವ್ಯಕ್ತಿ ಮಧ್ಯ ಪ್ರವೇಶಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಮದ್ರಾಸ್ ಹಾಗೂ ಪಂಜಾಬ್ ಹೈಕೋರ್ಟ್‌ನ ಕೆಲ ತೀರ್ಪುಗಳನ್ನು ಅವರು ಉಲ್ಲೇಖೀಸಿದರು. ಈ ಸಂಬಂಧ ಈ ಪ್ರಕರಣದಲ್ಲಿ ಮೂರನೇ ವ್ಯಕ್ತಿ ಮಧ್ಯ ಪ್ರವೇಶಿಸುವ ಬಗ್ಗೆ ಕೋರ್ಟ್ ಶನಿವಾರಕ್ಕೆ ತೀರ್ಪು ಕಾಯ್ದಿರಿಸಿದೆ.
ಆಕ್ಷೇಪಣೆ ಸಲ್ಲಿಸಲು ಪೈಪೋಟಿ: ವಿಚಾರಣೆ ಆರಂಭವಾಗುತ್ತಿದ್ದಂತೆ ಜಾಮೀನು ನೀಡದಂತೆ ಸರ್ಕಾರಿ ಅಭಿಯೋಜಕ ನರೇಂದ್ರ ವಾದ ಮಂಡಿಸಲು ಮುಂದಾದರು. ಇದಕ್ಕೆ ಆಕ್ಷೇಪಿಸಿದ ವಿಶೇಷ ಅಭಿಯೋಜಕ ಶ್ಯಾಮ್‌ಸುಂದರ್, “ಸರ್ಕಾರ ನನ್ನ ಮೇಲೆ ನಂಬಿಕೆ ಇಟ್ಟು ವಿಶೇಷ ಅಭಿಯೋಜಕರನ್ನಾಗಿ ನೇಮಕ ಮಾಡಿದ್ದು, ನಾನೇ ವಾದ ಮಂಡಿಸುತ್ತೇನೆ’ ಎಂದರು.
ಇದಕ್ಕೆ ಆಕ್ಷೇಪಿಸಿದ ವಕೀಲ ಸೆಬಾಸ್ಟಿನ್, ಒಂದೇ ಪ್ರಕರಣಕ್ಕೆ ಇಬ್ಬರು ವಕೀಲರು ವಾದಿಸುವಂತಿಲ್ಲ. ಶ್ಯಾಮ್‌ಸುಂದರ್ ಸರ್ಕಾರಿ ಅಭಿಯೋಜಕ ನರೇಂದ್ರ ಅವರಿಗೆ ಸಹಾಯಕ ವಕೀಲರಾಗಿ ಕೆಲಸ ಮಾಡಬಹುದು ಎಂದು ಸಲಹೆ ನೀಡಿದರು.
ಈ ಹಿನ್ನೆಲೆಯಲ್ಲಿ ಸರ್ಕಾರಿ ಅಭಿಯೋಜಕ ನರೇಂದ್ರ ಅವರು, ತಾವು ಈಗಾಗಲೇ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿದ್ದೇನೆ. ನ್ಯಾಯಾಲಯ ಪರಿಗಣಿಸಬೇಕು ಎಂದು ಮನವಿ ಮಾಡಿದರು. ಇದನ್ನು ಗಮನಿಸಿದ ನ್ಯಾಯಾಧೀಶರು, ನರೇಂದ್ರ ಅವರ ಆಕ್ಷೇಪಣೆಯನ್ನು ಪರಿಗಣಿಸಬೇಕೋ ಅಥವಾ ತಾವು ಪ್ರತ್ಯೇಕ ಅರ್ಜಿ ಸಲ್ಲಿಸುತ್ತೀರಾ ಎಂದು ಶ್ಯಾಮ್‌ಸುಂದರ್‌ರನ್ನು ಕೇಳಿದರು.
ಇದಕ್ಕೆ ಉತ್ತರಿಸಿದ ಶ್ಯಾಮ್‌ಸುಂದರ್, ಪ್ರತ್ಯೇಕವಾಗಿ ಸಲ್ಲಿಸಲು ನ್ಯಾಯಾಲಯ ಅವಕಾಶ ನೀಡಬೇಕು. ಇಲ್ಲವೇ ಅದೇ ಅರ್ಜಿಯನ್ನು ಪರಿಗಣಿಸುತ್ತೇನೆ ಎಂದರೆ ವಾದ ಮಂಡಿಸುತ್ತೇನೆ ಎಂದರು. ಕೊನೆಗೆ ನ್ಯಾಯಾಧೀಶರು ಪ್ರತ್ಯೇಕ ಅರ್ಜಿ ಸಲ್ಲಿಸಲು ಅವಕಾಶ ನೀಡಿ ಸೋಮವಾರ ವಿಚಾರಣೆ ಮುಂದೂಡಿದರು.