ಮೋದಿ, ಶಾ ಆಧಾರ ರಹಿತ ಆರೋಪ: ಸಿದ್ದರಾಮಯ್ಯ
Team Udayavani, Apr 9, 2018, 12:07 PM IST
ಬೆಂಗಳೂರು: “ಜನಾಶೀರ್ವಾದ ಯಾತ್ರೆ’ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ತೀವ್ರ ವಾಗ್ಧಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ, ಜೈಲಿಗೆ ಹೋಗಿ ಬಂದ ಬಿ.ಎಸ್ ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ ಹಾಗೂ ಅಮಿತ್ ಶಾಗೆ ಮಾನ ಮರ್ಯಾದೆ ಇದೆಯೇ? ಎಂದು ಗುಡುಗಿದ್ದಾರೆ.
ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಆಧಾರ ರಹಿತ ಆರೋಪಗಳನ್ನು ಮಾಡುತ್ತಾರೆ. ಇಬ್ಬರೂ ಸುಳ್ಳುಗಳನ್ನೇ ಹೇಳುತ್ತಾ ಹೋಗುತ್ತಾರೆ. ಸ್ವತಂತ್ರ ಭಾರತದಲ್ಲಿ ಸುಳ್ಳನ್ನೇ ಹೇಳುವ ಮಹಾನ್ ಸುಳ್ಳುಗಾರ ಪ್ರಧಾನಿ ಮೋದಿ ಎಂದು ಆರೋಪಿಸಿದರು.
ಬಿ.ಎಸ್.ಯಡಿಯೂರಪ್ಪ ವಿರುದ್ಧ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 4 ಕೋಟಿ ರೂ. ಲಂಚ ತೆಗೆದುಕೊಂಡಿರುವ ಬಗ್ಗೆ ಆಧಾರ ಸಹಿತ ದಾಖಲೆಗಳಲ್ಲಿ ಬಿಡುಗಡೆಗೊಳಿಸಿದ್ದೇವೆ. ಆದರೆ, ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ ಎಂದು ಬಿಜೆಪಿ ಹೇಳುತ್ತಿದೆ. ಬಿಜೆಪಿಯ ಮಿಷನ್ 150 ಗುರಿ ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪಚುನಾವಣೆ ಬಳಿಕ ಠುಸ್ ಆಗಿ ಮಿಷನ್ 50 ಆಗಿದೆ ಎಂದು ಲೇವಡಿ ಮಾಡಿದರು.
ಜೆಡಿಎಸ್‌ನವರು ಮಹಾನ್ ಅವಕಾಶವಾದಿಗಳು. ಅವರು ಯಾವತ್ತೂ ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿ ಜತೆ ಸೇರಿ ಅಧಿಕಾರ ನಡೆಸಲು ಕಾಯುತ್ತಿದ್ದಾರೆ. ಜೆಡಿಎಸ್‌ಗೆ ಮತ ಹಾಕಿದರೆ ಪರೋಕ್ಷವಾಗಿ ಕೋಮುವಾದಿ ಬಿಜೆಪಿಗೆ ಮತ ಹಾಕಿದಂತೆ ಎಂದು ಟೀಕಿಸಿದರು.
ರಾಜ್ಯ ವಿಧಾನಸಭಾ ಚುನಾವಣೆ ದೇಶದ ರಾಜಕೀಯ ದೃಷ್ಟಿಯಿಂದ ಬಹಳ ಪ್ರಮುಖವಾಗಿದೆ. ರಾಜ್ಯದ ಜನರ ಅಭಿವೃದ್ಧಿ ದೃಷ್ಟಿಯಿಂದಲೂ ಮಹತ್ವ ಪೂರ್ಣವಾಗಿದೆ. ನಮ್ಮ ಆಡಳಿತಾವಧಿಯಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ್ದೇವೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಈ ಬಾರಿ 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದರು.
ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕಾಂಗ್ರೆಸ್ ಸಂಸತ್ ಕಲಾಪಕ್ಕೆ ಅಡ್ಡಿಯುಂಟು ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಆದರೆ, ಕಾಂಗ್ರೆಸ್ ಎಂದಿಗೂ ಅಂತಹ ಕೆಲಸ ಮಾಡುವುದಿಲ್ಲ. ಕೇಂದ್ರ ಸಚಿವ ಅನಂತಕುಮಾರ್ ಅನಂತ ಸುಳ್ಳುಗಳನ್ನೇ ಹೇಳುತ್ತಾರೆಂದು ಟೀಕಿಸಿದರು.
ಕೇಂದ್ರ ಸರ್ಕಾರವೇ ವೈಎಸ್‌ಆರ್, ಟಿಡಿಪಿ, ಎಐಡಿಎಂಕೆ ಮೊದಲಾದ ಪಕ್ಷಗಳನ್ನು ಎತ್ತಿಕಟ್ಟಿ ಸಂಸತ್ ಕಲಾಪ ನಡೆಯದಂತೆ ನೋಡಿಕೊಳ್ಳುತ್ತಿದೆ. ಜತೆಗೆ ಹಣ ಬಲ, ತೋಳ್ಬಲ, ಸೇಡಿನ ರಾಜಕಾರಣದ ಮೂಲಕ ಅಧಿಕಾರಕ್ಕೆ ಬರಲು ಬಿಜೆಪಿ ಪ್ರಯತ್ನಿಸುತ್ತಿದೆ ಆರೋಪಿಸಿದರು.
ಕಟೌಟ್ ಬಿದ್ದು ಮೂವರಿಗೆ ಗಾಯ: ಸಮಾವೇಶದ ವೇದಿಕೆ ಎಡಭಾಗದಲ್ಲಿ ಹಾಕಲಾಗಿದ್ದ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಗುಂಡೂರಾವ್ ಭಾವಚಿತ್ರದ ಕಟೌಟ್ ಮುರಿದು ಬಿದ್ದು ಮೂವರು ಗಾಯಗೊಂಡಿದ್ದಾರೆ. ಕಾರ್ಯಕ್ರಮ ಆರಂಭವಾಗುವ ಮುನ್ನ ಕಟೌಟ್ ಮುರಿದುಬಿದ್ದಿದೆ. ಇದರಿಂದ ಹೆದರಿ ಜನ ಅಲ್ಲಿಂದ ಓಡಿಹೋಗಿದ್ದಾರೆ. ಅದರ ಮಧ್ಯೆಯೂ ಮೂವರ ಮೇಲೆ ಕಟೌಟ್ ಬಿದ್ದುದ್ದು, ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ನಾವು ನೀಡಿದ್ದ ಭರವಸೆಗಳನ್ನು ಜಾರಿಗೊಳಿಸಿದ್ದೇವೆ .ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿ ಹಿಡಿದಿದ್ದೇವೆ. ಹೀಗಾಗಿ ಬಿಜೆಪಿಯನ್ನು ಮನೆಗೆ ಕಳುಹಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಸೂರ್ಯ, ಚಂದ್ರ ಎಷ್ಟು ಸತ್ಯವೋ ನಾವು ಅಧಿಕಾರಕ್ಕೆ ಬರೋದು ಅಷ್ಟೇ ಸತ್ಯ.
-ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ
ಮೋದಿ ಮತ್ತು ಮೊಗ್ಯಾಂಬೋಗೆ (ಅಮಿತ್ ಶಾ ) ಕನಸಿನಲ್ಲೂ ಬಂದು ಯಾರಾದರೂ ಭಯಪಡಿಸುತ್ತಾರೆ ಎಂದರೆ ಅದು ಸಿದ್ದರಾಮಯ್ಯ ಮಾತ್ರ. ಮೊಗ್ಯಾಂಬೋ ಮತ್ತು ಮಿತ್ರೋಂ ಸೇರಿ ದೇಶದ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಅವರ ಅಂತ್ಯವನ್ನು ಕರ್ನಾಟಕದಿಂದಲೇ ಬರೆಯಬೇಕು.
-ಅಮರೇಂದ್ರ ಸಿಂಗ್, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ
ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಸಮತೋಲನ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದ್ದೇವೆ.
-ಡಿ.ಕೆ ಶಿವಕುಮಾರ್ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.