ಶೀಘ್ರದಲ್ಲೇ ರಾಷ್ಟ್ರೀಯ ದತ್ತಾಂಶ ಕೋಶ ಸ್ಥಾಪನೆ
Team Udayavani, Jan 19, 2018, 11:23 AM IST
ಬೆಂಗಳೂರು: ಪ್ರಸ್ತುತ ಸಂದರ್ಭದಲ್ಲಿ ಸಾಂಖ್ಯಿಕ ವಿವರಗಳು ಮಹತ್ವದ್ದಾಗಿದ್ದು, ಎಲ್ಲ ಪ್ರಮುಖ ಇಲಾಖೆಗಳ ದತ್ತಾಂಶ, ಸಾಂಖ್ಯಿಕ ವಿವರ ಒಂದೇ ಕಡೆ ಲಭ್ಯವಾಗುವಂತೆ ರಾಷ್ಟ್ರೀಯ ದತ್ತಾಂಶ ಕೋಶ (ನ್ಯಾಷನಲ್ ಡಾಟಾ ವೇರ್‌ಹೌಸ್) ಸದ್ಯದಲ್ಲೇ ಆರಂಭಿಸಲಾಗುವುದು ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.
ನಗರದಲ್ಲಿ ಗುರುವಾರ ಆಯೋಜಿಸಿದ್ದ ಕೇಂದ್ರ ಮತ್ತು ರಾಜ್ಯ ಸಾಂಖ್ಯಿಕ ಸಂಸ್ಥೆಗಳ ಒಕ್ಕೂಟದ 25ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, “ಇಂದು ವಸ್ತುನಿಷ್ಠ ಸಾಂಖ್ಯಿಕ ವಿವರವು ನೀತಿ ನಿರೂಪಣೆ, ಯೋಜನೆ ಅನುಷ್ಠಾನ, ಶ್ರೇಯಾಂಕ ಸ್ಥಿತಿಗತಿ ತಿಳಿಯಲು ಉಪಯುಕ್ತವೆನಿಸಿದೆ.
ಆ ಹಿನ್ನೆಲೆಯಲ್ಲಿ ಈಗಾಗಲೇ ಸುಧಾರಿತ ತಂತ್ರಜ್ಞಾನ ಬಳಕೆ ಮೂಲಕ ವಸ್ತುನಿಷ್ಠ ದತ್ತಾಂಶ ಸಂಗ್ರಹಕ್ಕೆ ಒತ್ತು ನೀಡಲಾಗಿದೆ. ಜತೆಗೆ ಎಲ್ಲ ಇಲಾಖೆಗಳ ದತ್ತಾಂಶ ಒಂದೆಡೆ ಲಭ್ಯವಾಗುವಂತೆ ರಾಷ್ಟ್ರೀಯ ದತ್ತಾಂಶ ಕೋಶ ತೆರೆಯಲಾಗುವುದು ಎಂದು ತಿಳಿಸಿದರು.
ತಿರುಚಲು ಅವಕಾಶವಿಲ್ಲ: ವಿಶ್ವಸಂಸ್ಥೆಯ ಮೂಲಭೂತ ಅಧಿಕೃತ ಸಾಂಖ್ಯಿಕ ತತ್ವಗಳನ್ನು 2016ರಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಸಮೀಕ್ಷೆ, ಮಾಹಿತಿ ಸಂಗ್ರಹಣೆಯ ಯಾವ ಹಂತದಲ್ಲೂ ಮಾಹಿತಿ ತಿರುಚಲು ಅವಕಾಶವಿರುವುದಿಲ್ಲ. ಈ ದತ್ತಾಂಶದ ಪರಿಣಾಮಕಾರಿ ಬಳಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಮಾಹಿತಿ ವಿನಿಮಯದಲ್ಲಿ ಸಮನ್ವಯತೆ ಮುಖ್ಯ ಎಂದು ಹೇಳಿದರು.
ಯೋಜನೆ ರೂಪಿಸಲು ಸಹಕಾರಿ: ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದ ರಾಜ್ಯ ಸಚಿವ ವಿಜಯ್ ಗೋಯೆಲ್ ಮಾತನಾಡಿ, ಸ್ಥಳೀಯ ಮಟ್ಟದಿಂದ ಜಾಗತಿಕ ಮಟ್ಟದವರೆಗೆ ಸಾಂಖ್ಯಿಕ ವಿವರಗಳು ಮಹತ್ವದ್ದೆನಿಸಿವೆ. ಅದರಲ್ಲೂ ಸ್ಥಳೀಯ ಮಟ್ಟದಲ್ಲಿ ಸಂಗ್ರಹಿಸುವ ಅಂಕಿಸಂಖ್ಯೆಗಳಿಂದ ಸಾಮಾಜಿಕ- ಆರ್ಥಿಕ ಸ್ಥಿತಿಗತಿಯ ವಸ್ತುಸ್ಥಿತಿ ಅರಿವಾಗುತ್ತದೆ.
ಮೂಲ ಸೌಕರ್ಯ, ಆರೋಗ್ಯ, ಶಿಕ್ಷಣ, ಸಾಮಾಜಿಕ- ಆರ್ಥಿಕ ಸ್ಥಿತಿಗತಿ ಸಾಂಖ್ಯಿಕ ವಿವರಗಳು ಮುಂದೆ ಕೈಗೊಳ್ಳಬೇಕಾದ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಹೊಸ ಪ್ರಯೋಗಕ್ಕೂ ಅನುಕೂಲ: ರಾಜ್ಯ ಯೋಜನಾ ಮತ್ತು ಸಾಂಖ್ಯಿಕ ಸಚಿವ ಎಂ.ಆರ್. ಸೀತಾರಾಂ ಮಾತನಾಡಿ, ಆಡಳಿತಾತ್ಮಕ ದಾಖಲೆ ರಾಜ್ಯಗಳ ಸ್ಥಿತಿಗತಿ, ಹೊಸ ಪ್ರಯೋಗಗಳ ಕುರಿತು ತಿಳಿಯಲು ಸಹಕಾರಿ ಎನಿಸಿವೆ. ಕೇಂದ್ರ, ರಾಜ್ಯ ಸರ್ಕಾರಗಳ ಆಡಳಿತ ನಿರ್ವಹಣೆಗೂ ಉಪಯುಕ್ತವಾಗಿದೆ.
ಹಾಗೆಯೇ ಸಾಂಖ್ಯಿಕ ವಿವರ ಆಧರಿಸಿ ನಾನಾ ಇಲಾಖೆಗಳಲ್ಲಿ ಬಳಕೆಯಾಗದೆ ಉಳಿದ ಅನುದಾನವನ್ನು ಒಟ್ಟುಗೂಡಿಸಿ ಅದನ್ನು ಮೂಲ ಸೌಕರ್ಯ ಕಾರ್ಯಕ್ಕೆ ಬಳಸಲು ಒತ್ತು ನೀಡಲಾಗಿದೆ ಎಂದು ಹೇಳಿದರು. ಸಚಿವಾಲಯದ ಕಾರ್ಯದರ್ಶಿ ಡಾ.ಟಿ.ಸಿ.ಎ.ಅನಂತ್, ರಾಜ್ಯ ಸಾಂಖ್ಯಿಕ ಇಲಾಖೆ ಕಾರ್ಯದರ್ಶಿ ಚಕ್ರವರ್ತಿ ಮೋಹನ್ ಇತರರು ಹಾಜರಿದ್ದರು.
ತಮ್ಮ ಕ್ಷೇತ್ರದ ವ್ಯಾಪ್ತಿಕ್ಕೆ ಸಂಬಂಧಪಟ್ಟ ಸಾಂಖ್ಯಿಕ ವಿವರ ಜನಪ್ರತಿನಿಧಿಗಳಿಗೆ ಸಿಗಬೇಕು. ಏಕೆಂದರೆ ಬಹಳಷ್ಟು ಜನಪ್ರತಿನಿಧಿಗಳಿಗೆ ತಮ್ಮ ಕ್ಷೇತ್ರದ ವಸ್ತುಸ್ಥಿತಿ ತಿಳಿಸುವ ಅಂಕಿಸಂಖ್ಯೆ ಇರುವುದಿಲ್ಲ. ಅವರಿಗೆ ಸಾಂಖ್ಯಿಕ ವಿವರ ಲಭ್ಯವಿದ್ದರೆ ತಮ್ಮ ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯವನ್ನು ನಿರ್ಧರಿಸಲು ಉಪಯುಕ್ತವಾಗಲಿದೆ. ಅಲ್ಲದೇ ಆ ಅಂಕಿಸಂಖ್ಯೆಗಳ ಆಧಾರದ ಮೇಲೆ ಕಲಾಪಗಳಲ್ಲೂ ಮನವರಿಕೆ ಮಾಡಲು ಅನುಕೂಲವಾಗಲಿದೆ.
-ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.