ನಯನ ಸಭಾಂಗಣಕ್ಕೆ ಹೊಸ ರೂಪ
Team Udayavani, Jun 20, 2018, 11:56 AM IST
ಬೆಂಗಳೂರು: ಸಾಹಿತ್ಯಾಸಕ್ತರಿಗೆ ಅಚ್ಚುಮೆಚ್ಚಾಗಿರುವ ಕನ್ನಡ ಭವನದ ನಯನ ಸಭಾಂಗಣವನ್ನು ಆಧುನಿಕತೆಗೆ ತಕ್ಕಂತೆ ಅಭಿವೃದ್ಧಿಪಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಂತಿಸಿದೆ. ರವೀಂದ್ರ ಕಲಾಕ್ಷೇತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದ ಸೌಕರ್ಯ ಒದಗಿಸಿದ ಬೆನ್ನಲ್ಲೇ ನಯನ ಸಭಾಂಗಣದ ಅಭಿವೃದ್ಧಿಗೂ ಇಲಾಖೆ ಮುಂದಾಗಿದೆ.
ರವೀಂದ್ರ ಕಲಾಕ್ಷೇತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದ ಧ್ವನಿವರ್ಧಕ ಹಾಗೂ ಬೆಳಕಿನ ವ್ಯವಸ್ಥೆ ಮಾತ್ರ ಅಭಿವೃದ್ಧಿ ಪಡಿಸಲಾಗಿದೆ. ಆದರೆ, ನಯನ ಸಭಾಂಗಣಕ್ಕೆ ಪೂರ್ಣ ದುರಸ್ತಿ ಮಾಡಿ ಹೊಸ ರೂಪ ನೀಡುವ ಉದ್ದೇಶ ಇಲಾಖೆ ವ್ಯಕ್ತಪಡಿಸಿದೆ.
ನಯನ ಇತಿಹಾಸ: ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪುರಭವನ, ರವೀಂದ್ರ ಕಲಾಕ್ಷೇತ್ರಗಳಿದ್ದರೂ ಸಣ್ಣ ಮಟ್ಟದ ಕಾರ್ಯಕ್ರಮ ಆಯೋಜಿಸಲು ಸೂಕ್ತ ಸಭಾಂಗಣದ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಜೆ.ಎಚ್.ಪಟೇಲ್ ಮುಖ್ಯಮಂತ್ರಿ ಹಾಗೂ ಸುಗಮ ಸಂಗೀತ ಗಾಯಕ ಮುದ್ದುಕೃಷ್ಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾಗಿದ್ದ ಕಾಲದಲ್ಲಿ ಒಂದು ಸಭಾಂಗಣದ ಅವಶ್ಯಕತೆ ಪೂರೈಸಲು ನಯನ ಸಭಾಂಗಣ ನಿರ್ಮಿಸಲಾಗಿತ್ತು. ಪ್ರಸ್ತುತ ಬೆಂಗಳೂರಿನ ಬಹುತೇಕ ಅಕಾಡೆಮಿಗಳು ಸಮಾರಂಭವನ್ನು ಆಯೋಜಿಸಲು ನಯನ ಸಭಾಂಗಣಕ್ಕೆ ಮೊದಲ ಆದ್ಯತೆ ನೀಡುತ್ತಿವೆ.
ನಯನ ಸಭಾಂಗಣದಲ್ಲಿ ತಿಂಗಳಿನಲ್ಲಿ ಕನಿಷ್ಠ 5ರಿಂದ 10 ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಬಹುತೇಕ ಕಾರ್ಯಕ್ರಮಗಳಲ್ಲಿ ಸಭಾಂಗಣ ತುಂಬಿರುತ್ತದೆ. ಅಷ್ಟೇ ಅಲ್ಲದೆ, 200ರವರೆಗೆ ತಲುಪಿರುವ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮ ಇಲ್ಲಿಯವರೆಗೂ ನಡೆದಿದ್ದು ನಯನ ಸಭಾಂಗಣದಲ್ಲಿಯೇ ಎಂಬುದು ವಿಶೇಷ.
ಸಮಸ್ಯೆಗಳು ಕಾಡುತ್ತಿವೆ: ನಯನ ಸಭಾಂಗಣದಲ್ಲಿ ಹವಾನಿಯಂತ್ರಣದ ವ್ಯವಸ್ಥೆಯಿಲ್ಲದ ಕಾರಣ ಸೆಖೆಗೆ ಪ್ರೇಕ್ಷಕರು ಕಾರ್ಯಕ್ರಮ ಮುಗಿಯುವವರೆಗೆ ಕೂರುವುದು ಕಷ್ಟ. ಕುಳಿತುಕೊಳ್ಳುವ ಆಸನಗಳು ಹಳೆಯದಾದ ಕಾರಣ ಪ್ರೇಕ್ಷಕರು ಸ್ಪಂದಿಸುವರೇ ಎಂದು ಆಯೋಜಕರು ಯೋಚಿಸುವುದುಂಟು.
ಬಿಬಿಎಂಪಿಗೆ ಸಂಬಂಧಿಸಿದ ಪೈಪ್‌ಗ್ಳು ನಯನ ಸಭಾಂಗಣದ ಪಕ್ಕ ಹಾದುಹೋಗಿರುವುದರಿಂದ ಮಳೆಗಾಲದಲ್ಲಿ ಸಭಾಂಗಣಕ್ಕೆ ನೀರು ನುಗ್ಗುವ ಸಮಸ್ಯೆಯೂ ಇದೆ. ಸಭಾಂಗಣದ ಅಕ್ಕ ಪಕ್ಕ ಇರುವ ಗ್ರೀನ್ ರೂಂ ಹಾಗೂ ವೇದಿಕೆ ಕೆಳಗೆ ನೀರು ನುಗ್ಗಿ ಕಾರ್ಯಕ್ರಮ ನಡೆಸಲು ಸಮಸ್ಯೆಯುಂಟಾಗುತ್ತಿದೆ. ಅಲ್ಲದೆ, ಸಭಾಂಗಣ ನೆಲಮಟ್ಟದಕ್ಕಿಂತ ಕೆಳಗಿರುವುದರಿಂದ ಈ ಸಮಸ್ಯೆ ಹೆಚ್ಚು.
ಏನೆಲ್ಲಾ ಬದಲಾವಣೆ?: ನಯನ ಸಭಾಂಗಣವನ್ನು ನೂತನವಾಗಿ ಅಭಿವೃದ್ಧಿ ಪಡಿಸಲು ಇಲಾಖೆ ಕ್ರಿಯಾಯೋಜನೆ ರೂಪಿಸಿದೆ. ಆದರೆ, ಸಭಾಂಗಣವನ್ನು ಮುಚ್ಚದೆ ದುರಸ್ತಿ ಕಾರ್ಯ ನಡೆಸಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದೆ.
ಈ ಹಿಂದೆ ರವೀಂದ್ರ ಕಲಾಕ್ಷೇತ್ರವನ್ನು 2 ಕೋಟಿ ರೂ. ವೆಚ್ಚದಲ್ಲಿ ಬದಲಾವಣೆ ಮಾಡಲಾಗಿತ್ತು. ಈಗ ನಯನ ಸಭಾಂಗಣಕ್ಕೆ ಧ್ವನಿವರ್ಧಕ, ಬೆಳಕಿನ ವ್ಯವಸ್ಥೆ, ಏರ್ ಕಂಡಿಷನಿಂಗ್ ಮತ್ತು ನೂತನ ಆಸನಗಳ ವ್ಯವಸ್ಥೆ ಮಾಡಿಸಲು ಅಂದಾಜು 30-50 ಲಕ್ಷ ರೂ. ಖರ್ಚಾಗುವ ಸಾಧ್ಯತೆ ಇದೆ.
ಬಜೆಟ್ ಅಧಿವೇಶನ ಮುಗಿದ ಬಳಿಕ ಅಂದರೆ ಆಗಸ್ಟ್ ಅಂತ್ಯದ ವೇಳೆಗೆ ಟೆಂಡರ್ ಕೆರಯಲಾಗುವುದು. ಧ್ವನಿವರ್ಧಕ, ಬೆಳಕು ಹಾಗೂ ಆಸನಗಳ ಬದಲಾವಣೆಗೆ ಪ್ರತ್ಯೇಕ ಟೆಂಡರ್ ಕರೆಯಲಾಗುವುದು. ಅವುಗಳ ನಿರ್ವಹಣೆ ಕಡೆಗೂ ಗಮನ ನೀಡಲಾಗುವುದು. ಇದರೊಂದಿಗೆ ನೀರು ನುಗ್ಗುವ ಸಮಸ್ಯೆ ಬಗೆಹರಿಸಲೂ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯ ನಿದೇರ್ಶಕರು ತಿಳಿಸಿದ್ದಾರೆ.
ನಯನ ಸಭಾಂಗಣದಲ್ಲಿ ನೀರು ನಿಲ್ಲುವುದರ ಸಂಬಂಧ ಬಿಬಿಎಂಪಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಮಳೆಗಾಲ ಮುಗಿದ ನಂತರ ಸಮಸ್ಯೆ ಬಗೆಹರಿಸುವುದಾಗಿ ಬಿಬಿಎಂಪಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
-ಎನ್.ಆರ್.ವಿಶುಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ
* ಶ್ರುತಿ ಮಲೆನಾಡತಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.