ಶ್ವಾನ ಪಾಲನೆಗೆ ಬೇಕು ಲೈಸೆನ್ಸ್
Team Udayavani, Jun 1, 2018, 11:55 AM IST
ಬೆಂಗಳೂರು: ರಾಜಧಾನಿ ಜನರು ಇನ್ನು ಮುಂದೆ ತಮ್ಮ ಮನೆಗಳಲ್ಲಿ ನಾಯಿ ಸಾಕಲು ಕಡ್ಡಾಯವಾಗಿ ಬಿಬಿಎಂಪಿಯಿಂದ ಪರವಾನಗಿ ಪಡೆಯಬೇಕಾಗಿದ್ದು, ಅಪಾರ್ಟ್‌ಮೆಂಟ್‌ಗಳ ಫ್ಲ್ಯಾಟ್ ನಿವಾಸಿಗಳು ಒಂದಕ್ಕಿಂತ ಹೆಚ್ಚು ನಾಯಿ ಸಾಕಲು ನಿರ್ಬಂಧ ವಿಧಿಸಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಸಾಕು ನಾಯಿಗಳಿಗೆ ಕಡ್ಡಾಯವಾಗಿ ಪರವಾನಗಿ ನೀಡುವ ಸಂಬಂಧ ಪಾಲಿಕೆಯಿಂದ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ. ಆ ಹಿನ್ನೆಲೆಯಲ್ಲಿ ನಾಯಿ ಸಾಕುವ ಸಂಬಂಧ ನೂತನ ನಿಯಮಾವಳಿಗಳನ್ನು ಜೂನ್‌ನಿಂದಲೇ ಅನುಷ್ಠಾನಗೊಳಿಸಲು ಬಿಬಿಎಂಪಿ ಯೋಜನೆ ರೂಪಿಸಿದೆ.
ಬಿಬಿಎಂಪಿ ಪಶುಪಾಲನಾ ವಿಭಾಗದ ವತಿಯಿಂದ ನಾಯಿ ಸಾಕಣೆಗೆ ನಿಯಮಾವಳಿ ರೂಪಿಸಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ನಗರಾಭಿವೃದ್ಧಿ ಇಲಾಖೆ ಈ ಹಿಂದೆ ತಿರಸ್ಕರಿಸಿತ್ತು. ಕೆಲ ಮಾರ್ಪಾಡುಗಳ ನಂತರ ಸಲ್ಲಿಸಿದ ಪ್ರಸ್ತಾವನೆಗೆ ಕೊನೆಗೂ ಸರ್ಕಾರ ಅನುಮೋದನೆ ದೊರಕಿದೆ.
2017ರಲ್ಲಿ ಒಟ್ಟು 405 ನಾಯಿಗಳಿಗೆ ಪರವಾನಗಿ ಪಡೆದಿದ್ದು, ಪ್ರಸಕ್ತ ವರ್ಷದಲ್ಲಿ 100 ಮಂದಿ ನಾಯಿ ಸಾಕಣೆಗೆ ಪರವಾನಗಿ ನವೀಕರಿಸಿದ್ದಾರೆ. ಇನ್ನು ಇತ್ತೀಚೆಗೆ ಕೆಲ ಸ್ವಯಂ ಸೇವಾ ಸಂಸ್ಥೆಗಳು ಪರವಾನಗಿ ನೀಡುವ ಮೇಳ ನಡೆಸಿದ್ದಾರೆ. ಈ ವೇಳೆ ಭಾರತ ಕ್ರಿಕೆಟ್ ತಂಡ ನಾಯಕ ವಿರಾಟ್ ಕೊಹ್ಲಿ ದತ್ತು ಪಡೆದಿದ್ದ ಬೀದಿ ನಾಯಿಗಳಿಗೂ ಪರವಾನಗಿ ನೀಡಲಾಗಿದೆ.
ಆನ್‌ಲೈನ್‌ನಲ್ಲಿ ಲಭ್ಯ: ಜನರಿಗೆ ಸುಲಭವಾಗಿ ಪರವಾನಗಿ ದೊರೆಯಲು ನಾಯಿ ಸಾಕುವವರಿಗೆ ಆನ್‌ಲೈನ್‌ನಲ್ಲೇ ಪರವಾನಗಿ ನೀಡುವ ವ್ಯವಸ್ಥೆ ಜಾರಿಗೆ ಪಾಲಿಕೆ ಮುಂದಾಗಿದೆ. ಅದರಂತೆ ನಾಯಿ ವಿವರ ಹಾಗೂ ಮಾಲೀಕರ ವಿವರದೊಂದಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ನಿಗದಿತ ಶುಲ್ಕ ಪಾವತಿಸಿದರೆ ಆನ್‌ಲೈನ್‌ನಲ್ಲಿಯೇ ಪರವಾನಗಿ ಲಭ್ಯವಾಗಲಿದೆ.
ಫ್ಲ್ಯಾಟ್‌ಗೊಂದು, ಮನೆಗೆ ಮೂರು: ಅಪಾರ್ಟ್‌ಮೆಂಟ್‌ಗಳ ಫ್ಲ್ಯಾಟ್‌ಗಳಲ್ಲಿ ನೆಲೆಸಿದವರಿಗೆ ಒಂದು ನಾಯಿ ಹಾಗೂ ಇತರೆಡೆ ಮನೆಗೆ 3 ನಾಯಿ ಸಾಕಲು ಬಿಬಿಎಂಪಿ ಅವಕಾಶ ನೀಡಿದೆ. ಇನ್ನು ನಾಯಿ ಮಾರಾಟಗಾರರಿಗೆ ಗರಿಷ್ಠ 10 ನಾಯಿ ಸಾಕಲು ಅವಕಾಶ ನೀಡಿದ್ದು, ನಗರದ ಕೇಂದ್ರ ಭಾಗದಲ್ಲಿ ಸಂತಾನ ವೃದ್ಧಿಗೆ ಕಡಿವಾಣ ಹಾಕಲಾಗಿದೆ. ನಾಯಿ ಸಾಕುವವರು ಪ್ರತಿ ನಾಯಿಗೆ 110 ರೂ. ವಾರ್ಷಿಕ ಶುಲ್ಕ ಪಾವತಿಸಿ ಪರವಾನಗಿ ಪಡೆಯಬೇಕಿದೆ.
ಲೈಸೆನ್ಸ್ ಇಲ್ಲದ ನಾಯಿಗಳು ಪಾಲಿಕೆ ವಶಕ್ಕೆ: ನಾಯಿಗಳಿಗೆ ಪರವಾನಗಿ ಕಡ್ಡಾಯ ನಿಯಮ ಜಾರಿ ಬಳಿಕ ಪರವಾನಗಿ ಪಡೆಯಲು ನಿಗದಿತ ಕಾಲಾವಕಾಶ ನೀಡಲಾಗುತ್ತದೆ. ಅದರ ನಂತರವೂ ಮಾಲೀಕರು ಪರವಾನಗಿ ಪಡೆಯದಿದ್ದರೆ, ಅಂತಹವರಿಗೆ 1,000 ರೂ. ದಂಡ ವಿಧಿಸಲಾಗುತ್ತದೆ. ಇಲ್ಲದಿದ್ದರೆ ನಾಯಿಯನ್ನು ವಶಕ್ಕೆ ಪಡೆಯಲಿದ್ದಾರೆ ಎಂದು ಪಶುಪಾಲನಾ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನಾಯಿಗಳಿಗೆ ಕಾಲರ್ ಐಡಿ: ನಿಯಮ ಜಾರಿಯಾದ ಬಳಿಕ ಪ್ರತಿಯೊಂದು ವಲಯದಲ್ಲಿಯೂ ಪಾಲಿಕೆಯ ಸಿಬ್ಬಂದಿ ತಪಾಸಣೆ ನಡೆಸಲಿದ್ದು, ನಾಯಿ ಸಾಕಣೆದಾರರು ಪರವಾನಗಿ ಪಡೆದಿರುವ ಕುರಿತು ಪರಿಶೀಲಿಸಲಿದ್ದಾರೆ. ಈ ವೇಳೆ ನಾಯಿ ವಿವರ ಹಾಗೂ ಮಾಲೀಕರ ವಿವರ ಪಡೆದು ಕಾಲರ್ ಐಡಿ ನೀಡಲು ಪಾಲಿಕೆ ಯೋಜನೆ ರೂಪಿಸಿದೆ.
ಪರವಾನಗಿ ಉದ್ದೇಶವೇನು?: ಬಿಬಿಎಂಪಿಯಿಂದ ಕಾರ್ಯಾಚರಣೆ ನಡೆಸಿದ ವೇಳೆ ಸಾಕು ನಾಯಿಗಳನ್ನು ಹಿಡಿದಿರುವುದು ಹೆಚ್ಚಿನ ಪ್ರಕರಣಗಳಲ್ಲಿ ನಡೆದಿದೆ. ಹೀಗಾಗಿ ನಾಯಿಗಳಿಗೆ ಪರವಾನಗಿ ಕೊಟ್ಟು ಕಾಲರ್ ಐಡಿ ಹಾಕಿದರೆ ಅದು ಸಾಕು ನಾಯಿ ಎಂಬುದು ಗೊತ್ತಾಗಲಿದೆ. ಜತೆಗೆ ನಾಯಿಗಳು ಕಾಣೆಯಾದರೆ ಮಾಲೀಕರಿಗೆ ನಾಯಿಗಳನ್ನು ತಲುಪಿಸಲು ಅನುಕೂಲವಾಗಲಿದೆ. ಪ್ರತಿವರ್ಷ ಪರವಾನಗಿ ನವೀಕರಣದ ವೇಳೆ ನಾಯಿಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಕಿಸಿರುವ ಮಾಹಿತಿ ತಿಳಿಯಬಹುದಾಗಿದೆ ಎಂಬುದು ಪಾಲಿಕೆಯ ಅಧಿಕಾರಿಗಳ ವಾದವಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಸಾಕು ನಾಯಿಗಳಿಗೆ ಪರವಾನಗಿ ಕಡ್ಡಾಯಗೊಳಿಸುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದ್ದು, ನಿಯಮ ಜಾರಿಗೆ ಅನುಮತಿ ಕೋರಿ ಕಡತವನ್ನು ಆಯುಕ್ತರಿಗೆ ಕಳುಹಿಸಲಾಗಿದೆ. ಆಯುಕ್ತರು ಅನುಮತಿ ನೀಡಿದ ಕೂಡಲೇ ಪರವಾನಗಿ ಕಡ್ಡಾಯ ಕುರಿತು ಸಾರ್ವಜನಿಕ ಪ್ರಕಟಣೆ ನೀಡಲಾಗುವುದು.
-ಡಾ.ಆನಂದ್, ಬಿಬಿಎಂಪಿ ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕ
* ವೆಂ.ಸುನೀಲ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Darshan; ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ನಟ: ಬಿಗಿ ಪೊಲೀಸ್ ಬಂದೋಬಸ್ತ್
Tulu Cinema: ವಿನೀತ್ ಕುಮಾರ್ ನಟನೆಯ “90 ಎಮ್ ಎಲ್” ಸಿನಿಮಾ ಮುಹೂರ್ತ
Hosanagara: ಬಿಸಿ ಟೀ ಮೈ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಎರಡು ವರ್ಷದ ಮಗು ಸಾವು
Tulu Cinema: “ಪಿಲಿಪಂಜ” ಹೊಸ ತುಳು ಸಿನಿಮಾದ ಶಿರ್ಷಿಕೆ ಬಿಡುಗಡೆ
Defence Secretary: ರಕ್ಷಣಾ ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.