ಮಿ ಟೂಗೆ ವಾಣಿಜ್ಯ ಮಂಡಳಿ ಸಂಧಾನ
Team Udayavani, Oct 23, 2018, 6:00 AM IST
ಬೆಂಗಳೂರು: ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿರುವ ಆರೋಪ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿ ಸಂಧಾನ ಸಮಿತಿ ರಚಿಸಲು ನಿರ್ಧರಿಸಿದೆ. ಕಲಾವಿದರ ಸಂಘ, ನಿರ್ದೇಶಕರ ಸಂಘ ಮತ್ತು ನಿರ್ಮಾಪಕರ ಸಂಘದ ಪ್ರತಿನಿಧಿಗಳ ನೇತೃತ್ವದಲ್ಲಿ ಸಂಧಾನ ಸಮಿತಿ ರಚನೆಯಾಗಲಿದೆ. ಗುರುವಾರವೇ ಸಂಧಾನ ಸಭೆ ನಡೆಯಲಿದೆ.
ಸೋಮವಾರವಷ್ಟೇ ಅರ್ಜುನ್ ಸರ್ಜಾ ಮಾವ, ಹಿರಿಯ ನಟ ರಾಜೇಶ್ ಅವರು ಶೃತಿ ಹರಿಹರನ್ ವಿರುದ್ಧ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದು, ಇದರನ್ವಯ ಸಮಿತಿ ರಚಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ ಚಿನ್ನೇಗೌಡ ಅವರು ಮಂಡಳಿ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಜತೆಗೆ ಆರೋಪದ ವಿಷಯವನ್ನು ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್ ಅವರ ಗಮನಕ್ಕೆ ತಂದು ಈ ಪ್ರಕರಣಕ್ಕೆ ಅಂತ್ಯ ನೀಡುವ ತೀರ್ಮಾನಕ್ಕೆ ಬರಲಾಗಿದೆ. ಸದ್ಯಕ್ಕೆ ಅಂಬರೀಷ್ ಅವರು ಬೆಂಗಳೂರಿನಲ್ಲಿ ಇಲ್ಲದ ಕಾರಣ, ಅವರು ಹಿಂದಿರುಗುತ್ತಿದ್ದಂತೆ, ಅವರ ಸಮ್ಮುಖದಲ್ಲಿ ಚರ್ಚಿಸಿ, ಈ ಪ್ರಕರಣಕ್ಕೆ ಅಂತ್ಯ ಹಾಡುವ ನಿರ್ಧಾರವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಸಭೆ ಬಳಿಕ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ಈ ವಿಷಯಕ್ಕೆ ಸಂಬಂಧಿಸಿದಂತೆ ನಟ ರಾಜೇಶ್ ಅವರು ದೂರು ನೀಡಿದ್ದಾರೆ. ಹಾಗಾಗಿ ಅರ್ಜುನ್ ಸರ್ಜಾ ಮತ್ತು ಶ್ರುತಿಹರಿಹರನ್ ಅವರಿಬ್ಬರನ್ನು ಮಂಡಳಿಗೆ ಕರೆಸಿ ಮಾತಾಡುತ್ತೇವೆ. ಒಂದು ವೇಳೆ ನಾವು ಬರುವುದಿಲ್ಲ, ಎಲ್ಲವನ್ನೂ ಕೋರ್ಟ್‌ನಲ್ಲೇ ಇತ್ಯರ್ಥಪಡಿಸಿಕೊಳ್ಳುತ್ತೇವೆ ಅಂದರೆ, ಅಲ್ಲಿಗೇ ಹೋಗಲಿ. ಚಿತ್ರರಂಗದ ಯಾವುದೇ ಸಮಸ್ಯೆ ಇದ್ದರೂ, ಅದನ್ನು ಮಂಡಳಿಯಲ್ಲಿ ಚರ್ಚಿಸಿ, ಇತ್ಯರ್ಥಪಡಿಸಿಕೊಳ್ಳಬೇಕು. ಅದು ಬಿಟ್ಟು, ಬೇರೆ ವೇದಿಕೆಗೆ ಹೋಗಿ ಸಿನಿಮಾ ವಿಷಯ ಚರ್ಚಿಸುವುದು ಸರಿಯಲ್ಲ.
ಡಾ.ರಾಜಕುಮಾರ್ ಅವರಂತಹ ಮೇರುನಟರು ಸಹ ವಾಣಿಜ್ಯ ಮಂಡಳಿಯನ್ನು ಗೌರವಿಸುತ್ತಿದ್ದರು. ಆದರೆ, ಈಗಿನವರಿಗೆ ಆ ಸಂಯಮವಿಲ್ಲ. ಏನೇ ಇದ್ದರೂ, ಮಂಡಳಿಗೆ ಬಂದು ಮಾತನಾಡಬೇಕು ಎಂದರು.
ಫೈರ್‌ಗೂ ನಮಗೂ ಸಂಬಂಧವಿಲ್ಲ
ಫೈರ್‌ನಲ್ಲಿರುವ ಆಂತರಿಕ ದೂರು ಸಮಿತಿ (ಐಸಿಸಿ)ಗೂ ಮತ್ತು ನಮ್ಮ ಮಂಡಳಿಗೂ ಯಾವುದೇ ಸಂಬಂಧವಿಲ್ಲ. ಮಂಡಳಿ ವ್ಯಾಪ್ತಿಯಲ್ಲಿ ಕಲಾವಿದರ ಸಂಘ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ ಹಾಗು ವಿತರಕರ ಸಂಘಗಳಷ್ಟೇ ಬರಲಿವೆ. ಚಿತ್ರರಂಗದಲ್ಲಿದ್ದುಕೊಂಡು ಈ ರೀತಿ ವಿನಾಕಾರಣ ಆರೋಪ ಮಾಡಿದವರ ಮೇಲೆ ಚಿತ್ರರಂಗ ಗಂಭೀರವಾಗಿ ಪರಿಗಣಿಸಿ, ಮುಂದಿನ ದಿನಗಳಲ್ಲಲಿ ಸೂಕ್ತ ಕ್ರಮ ಜರುಗಿಸಲಿದೆ ಎಂದೂ ಮಂಡಳಿಯ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ಎಚ್ಚರಿಸಿದರು.
ಚೇತನ್ ವಿರುದ್ಧ ಕಿಡಿ
ಸಭೆಯಲ್ಲಿ ಮಾತನಾಡಿದ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ನಟ ಚೇತನ್ ಅವರು ನನ್ನ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ. ನನ್ನ ಕೊಡುಗೆ ಬಗ್ಗೆ ಅವರ ಬಳಿ ಹೇಳುವ ಅಗತ್ಯ ನನಗಿಲ್ಲ. ನನ್ನ ಹೋರಾಟ ಬಗ್ಗೆ ಕೇಳುವ ಆಸಕ್ತಿ ಅವರಿಗಿದ್ದರೆ, ಬರಲಿ, ನಾನೇ ನನ್ನ ಇಷ್ಟು ವರ್ಷಗಳ ಹೋರಾಟ ಮತ್ತು ಚಿತ್ರರಂಗಕ್ಕೆ ಏನೆಲ್ಲಾ ಮಾಡಿದ್ದೇನೆ ಎಂಬು ಕುರಿತು ಒಂದು ಪುಸ್ತಕ ಬರೆದುಕೊಡುತ್ತೇನೆ. ಅವರಿಗೆ ನನ್ನ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದರು.
ಸಂಜನಾ ಆರೋಪ ಸರಿ ಇಲ್ಲ
ಇದೇ ವೇಳೆ ಸಭೆಯಲ್ಲಿದ್ದ ನಿರ್ದೇಶಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಜನಾ ಅವರು ಸಹ ಗಂಡ ಹೆಂಡತಿ ಚಿತ್ರದ ನಿರ್ದೇಶಕರ ಮೇಲೆ ಆರೋಪ ಮಾಡಿದ್ದಾರೆ. ಅವರ ಆರೋಪ ಸರಿ ಇಲ್ಲ. 2006 ರಲ್ಲಿ ಅವರೇ ಕೊಟ್ಟ ಹೇಳಿಕೆ ನಮ್ಮಲ್ಲಿದೆ. ಹಿಂದೆ ಅವರೇ ಚಿತ್ರದಲ್ಲಿ ಖುಷಿಯಿಂದ ನಟಿಸಿದ್ದಾಗಿ ಹೇಳಿಕೊಂಡಿದ್ದು, ಎಲ್ಲದ್ದಕ್ಕೂ ಒಪ್ಪಿ ಕೆಲಸ ಮಾಡಿದ್ದರ ದಾಖಲೆಯೂ ಆ ನಿರ್ದೇಶಕರ ಬಳಿ ಇದ್ದು, ಅದೆಲ್ಲವನ್ನೂ ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿ ನಿರ್ದೇಶಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಹೇಳಿದರು. ಶೃತಿ ಹರಿಹರನ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಅಕ್ಟೋಬರ್ 25 ರಂದು ಸಂಧಾನ ಸಭೆ ನಡೆಯಲಿದೆ.
ಸಭೆಯಲ್ಲಿ ಭಾ.ಮ.ಹರೀಶ್, ಕರಿಸುಬ್ಬು, ಕೆ.ಎಂ.ವೀರೇಶ್, ಚಂದ್ರಶೇಖರ್, ಕೆ.ಮಂಜು ಸೇರಿದಂತೆ ಮಂಡಳಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.