ಉಚಿತ ಚಿಕಿತ್ಸೆ ಕಲ್ಪಿಸುವ ಹೊಸ ಹೆಲ್ತ್ ಕಾರ್ಡ್: ರಮೇಶ್ ಕುಮಾರ್
Team Udayavani, Jul 4, 2017, 3:45 AM IST
ಬೆಂಗಳೂರು: ರಾಜ್ಯದ ಎಲ್ಲ ನಾಗರೀಕರಿಗೂ ಆರೋಗ್ಯ ಭಾಗ್ಯ ಒದಗಿಸಲು ರಾಜ್ಯ ಸರ್ಕಾರದಿಂದ ಯುನಿವರ್ಸಲ್ ಹೆಲ್ತ್ ಕಾರ್ಡ್ ನೀಡಲಾಗುವುದು ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 1 ಕೋಟಿ 30 ಲಕ್ಷ ಕುಟುಂಬಗಳಿಗೆ ಈ ಯೋಜನೆ ಅನ್ವಯ ಆಗಲಿದೆ. ಎಪಿಎಲ್, ಬಿಪಿಎಲ್ ಕಾರ್ಡ್ ಹೊಂದಿದ ಎಲ್ಲ ನಾಗರೀಕರಿಗೂ ಈ ಯೋಜನೆ ಫಲ ದೊರೆಯಲಿದೆ ಎಂದು ಹೇಳಿದರು.
ಸರ್ವರಿಗೂ ಆರೋಗ್ಯ ಭಾಗ್ಯ ನೀಡುವ ಯೋಜನೆ ಸಿದ್ದಪಡಿಸಲಾಗಿದ್ದು, ಶೀಘ್ರವೇ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಈ ಯೋಜನೆ ಅಡಿಯಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆ ಮತ್ತು ಒಂದು ತಿಂಗಳ ಔಷಧ ಉಚಿತವಾಗಿ ವಿತರಿಸಲಾಗುವುದು. ಈ ಯೋಜನೆಯ ಫಲಾನುಭವಿಗಳು ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಯಲ್ಲಿಯೇ ಮೊದಲು ಚಿಕಿತ್ಸೆ ಪಡೆಯಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅಗತ್ಯ ಸೌಲಭ್ಯ ದೊರೆಯದಿದ್ದರೆ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಅವರು ಹೇಳಿದರು. ಯುನಿವರ್ಸಲ್ ಹೆಲ್ತ್ ಕಾರ್ಡ್ ಪಡೆಯುವವರ ಮಾಹಿತಿಯನ್ನು ಆಧಾರ್ ಲಿಂಕ್ ಮಾಡಲಾಗುವುದು ಎಂದು ರಮೇಶ್ ಕುಮಾರ್ ಹೇಳಿದರು.
ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ: ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಡೆಂಗ್ಯೂ ಜ್ವರ ಪ್ರಕರಣಗಳು ಹೆಚ್ಚಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಸರ್ಕಾರ ಡೆಂಗ್ಯೂ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಮೈಸೂರು, ಬೆಂಗಳೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ರೋಗ ತಡೆಗಟ್ಟಲು ಇಲಾಖೆ ಮೂಲಕ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಮೇಶ್ ಕುಮಾರ್ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.