ಸಮ್ಮಿಶ್ರ ಸಂಪುಟಕ್ಕೆ ಇಪ್ಪತ್ತೈದರ ಚೈತನ್ಯ
Team Udayavani, Jun 7, 2018, 6:00 AM IST
ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ಸ್ಥಾನ ಪಡೆದಿರುವ 25 ಶಾಸಕರಲ್ಲಿ ಹಿರಿಯರು, ಅನುಭವಿಗಳು, ಹೋರಾಟಗಾರರು, ಚಿತ್ರರಂಗ, ಉದ್ಯಮ, ಚಳವಳಿ ಹಿನ್ನೆಲೆಯುಳ್ಳವರಿದ್ದಾರೆ. ಆರ್.ವಿ.ದೇಶಪಾಂಡೆ ಇಡೀ ಸಂಪುಟದಲ್ಲೇ ಅತ್ಯಂತ ಹಿರಿಯ ಹಾಗೂ ಅನುಭವಿ ಸಚಿವರು. ಪ್ರಿಯಾಂಕ್ ಖರ್ಗೆ ಅತ್ಯಂತ ಕಿರಿಯ ಸಚಿವರು. ಉಳಿದಂತೆ ಹೋರಾಟ-ಚಳವಳಿ ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿದ, ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಉತ್ತುಂಗದ ನಟಿ, ರೈತ ಹೋರಾಟಗಾರರು ಸಂಪುಟದಲ್ಲಿದ್ದಾರೆ.
4ನೇ ಸಲ ಎಚ್.ಡಿ.ರೇವಣ್ಣ
ಪಕ್ಷ: ಜೆಡಿಎಸ್
ಜಿಲ್ಲೆ: ಹಾಸನ
ಸಮುದಾಯ: ಒಕ್ಕಲಿಗ
ವಯಸ್ಸು: 60
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಪುತ್ರ. ಕುಮಾರಸ್ವಾಮಿ ಅವರು ಹಾಸನ ಜಿಲ್ಲೆಯಿಂದ ತಮ್ಮ ರಾಜಕೀಯವನ್ನು ರಾಮನಗರ ಜಿಲ್ಲೆಗೆ ಸ್ಥಳಾಂತರಿಸಿದ ಬಳಿಕ ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಶಕ್ತಿ ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಎಲ್ಲಾ ಪಕ್ಷಗಳಲ್ಲೂ ಸ್ನೇಹಿತರನ್ನು ಹೊಂದಿರುವ ರೇವಣ್ಣ ಅವರು ಯಾವುದೇ ಖಾತೆ ನೀಡಿದರೂ ಅದನ್ನು ನಿರ್ವಹಿಸುವಲ್ಲಿ ನಿಪುಣರು. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಇಂಧನ ಮತ್ತು ಲೋಕೋಪಯೋಗಿ ಖಾತೆಗಳ ಹೆಸರು ಹೇಳಿದರೆ ಮೊದಲು ನೆನಪಿಗೆ ಬರುವುದು ರೇವಣ್ಣ ಹೆಸರು. ಶಾಸಕರಾಗಿ 6ನೇ ಬಾರಿ ಆಯ್ಕೆಯಾಗಿದ್ದಾರೆ.
ಎಚ್.ಡಿ.ದೇವೇಗೌಡರ ಹಿರಿಯ ಪುತ್ರ ಮತ್ತು ಮುಖ್ಯಮಂತ್ರಿ ಅವರ ಹಿರಿಯ ಸಹೋದರ. ಜೆಡಿಎಸ್‌ನ ಪ್ರಭಾವಿ ನಾಯಕರಲ್ಲಿ ಒಬ್ಬರು. ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಸಚಿವ ಸ್ಥಾನ ಮತ್ತು ಪ್ರಮುಖ ಖಾತೆ ಅವರಿಗೆ ಕಾಯ್ದಿರಿಸಲಾಗುತ್ತದೆ.
2ನೇ ಸಲ: ಬಂಡೆಪ್ಪ ಕಾಶೆಂಪೂರ
ಪಕ್ಷ: ಜೆಡಿಎಸ್
ಜಿಲ್ಲೆ: ಬೀದರ್
ವಯಸ್ಸು: 53
ಜೆಡಿಎಸ್ ಕುರಿತಾದ ನಿಷ್ಠೆ. ಹಿಂದೆ ಜೆಡಿಎಸ್ ಒಡೆದು ಸಿದ್ದರಾಮಯ್ಯ ಸೇರಿದಂತೆ ಪ್ರಮುಖರು ಕಾಂಗ್ರೆಸ್ ಸೇರಿದಾಗ ದೇವೇಗೌಡ, ಕುಮಾರಸ್ವಾಮಿ ಜತೆ ಸೇರಿ ಪಕ್ಷಕ್ಕಾಗಿ ದುಡಿದರು. 2006ರಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದಾಗ ಯಾವುದೇ ವಿವಾದಕ್ಕೆ ಎಡೆಮಾಡಿಕೊಡದೇ ಖಾತೆ ನಿರ್ವಹಿಸಿದ್ದರು. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಸ್ವಲ್ಪ ಮಟ್ಟಿಗೆ ಶಕ್ತಿ ಉಳಿಸಿಕೊಂಡಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಬಂಡೆಪ್ಪ ಕಾಶೆಂಪೂರ. ಸರಳ ವ್ಯಕ್ತಿಯಾಗಿ ಎಲ್ಲರೊಡನೆ ಬೆರೆಯುವ ಗುಣ ಅವರದ್ದು. ಎರಡನೇ ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಶಾಸಕರಾಗಿ ಮೂರನೇ ಬಾರಿ ಆಯ್ಕೆಯಾಗಿದ್ದಾರೆ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಜತೆಗಿನ ಆತ್ಮೀಯತೆ. ಹೈದರಾಬಾದ್ ಕರ್ನಾಟಕದಲ್ಲಿ ಜೆಡಿಎಸ್ ಬಲಪಡಿಸಲು ಆ ಭಾಗಕ್ಕೆ ಸಚಿವ ಸ್ಥಾನ ನೀಡಲೇಬೇಕಾದ ಕಾರಣ ಹಾಗೂ ಕುರುಬ ಕೋಟಾದಡಿ ಸಚಿವರಾಗಿದ್ದಾರೆ.
2ನೇ ಸಲ: ಜಿ.ಟಿ.ದೇವೇಗೌಡ
ಪಕ್ಷ: ಜೆಡಿಎಸ್
ಜಿಲ್ಲೆ: ಮೈಸೂರು
ಸಮುದಾಯ: ಒಕ್ಕಲಿಗ
ವಯಸ್ಸು: 68
ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ಸೆಡ್ಡು ಹೊಡೆದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾರೀ ಅಂತರದಿಂದ ಸೋಲಿಸಿದ್ದು ಸಚಿವ ಸ್ಥಾನ ಸಿಗಲು ಪ್ರಮುಖ ಕಾರಣ. ಮೇಲಾಗಿ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಪಕ್ಷ ಬೆಳೆಸುವಲ್ಲಿಯೂ ಸಹಕರಿಸಿದ್ದರು. ಈ ಹಿಂದೆ ಸಹಕಾರ ಖಾತೆ ಸಚಿವರಾಗಿ ಕೆಲಸ ಮಾಡಿದ್ದರು. ದೇವೇಗೌಡ ಮತ್ತು ಕುಮಾರಸ್ವಾಮಿ ಇಬ್ಬರಿಗೂ ಆತ್ಮೀಯರಾಗಿದ್ದರು. ಶಾಸಕರಾಗಿ ಮೂರನೇ ಬಾರಿ ಆಯ್ಕೆಯಾಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಸೋಲಿಸುವ ಮೂಲಕ ದೇವೇಗೌಡ ಮತ್ತು ಕುಮಾರಸ್ವಾಮಿಗೆ ಇನ್ನಷ್ಟು ಆತ್ಮೀಯರಾದರು. ಒಕ್ಕಲಿಗರು ಜೆಡಿಎಸ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಿದ್ದರಿಂದ ಒಕ್ಕಲಿಗ ಕೋಟಾದಡಿ ಸ್ಥಾನ ಸಿಕ್ಕಿದೆ.
1ನೇ ಸಲ: ಡಿ.ಸಿ.ತಮ್ಮಣ್ಣ
ಪಕ್ಷ: ಜೆಡಿಎಸ್
ಜಿಲ್ಲೆ: ಮಂಡ್ಯ
ಸಮುದಾಯ: ಒಕ್ಕಲಿಗ
ವಯಸ್ಸು: 73
ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಬಂದು ಗೆದ್ದಿದ್ದ ಅವರು ನಂತರ ಯಾವತ್ತೂ ಪಕ್ಷದಿಂದ ದೂರ ಸರಿದಿರಲಿಲ್ಲ. ಚೆಲುವರಾಯಸ್ವಾಮಿ ಜೆಡಿಎಸ್ ತೊರೆದ ಮೇಲೆ ಮಂಡ್ಯ ಜಿಲ್ಲೆಯಲ್ಲಿ ಪಕ್ಷ ಕಟ್ಟಲು ಶ್ರಮಿಸಿದ್ದರು. ಪಕ್ಷಕ್ಕೆ ನಿಷ್ಠೆಯಿಂದ ಇದ್ದ ಕಾರಣ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ಸಂಬಂಧಿಯೂ ಹೌದು. ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಒಕ್ಕಲಿಗರ ಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದರು. ಆರಂಭದಲ್ಲಿ ಸಚಿವ ಸ್ಥಾನಕ್ಕೆ ಹೆಸರು ಕೇಳಿಬಂದಿರಲಿಲ್ಲವಾದರೂ ಕೊನೇ ಕ್ಷಣದಲ್ಲಿ ಅಚ್ಚರಿಯ ಆಯ್ಕೆಯಾದರು. ಶಾಸಕರಾಗಿ ನಾಲ್ಕನೇ ಬಾರಿ ಆಯ್ಕೆಯಾಗಿದ್ದಾರೆ. ದೇವೇಗೌಡರ ಕುಟುಂಬದ ಸಂಬಂಧಿ ಆಗಿರುವುದರಿಂದ ಕುಟುಂಬ ಸದಸ್ಯರಿಂದ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೆಚ್ಚಾಯಿತು. ಮೇಲಾಗಿ ಒಕ್ಕಲಿಗ ಕೋಟಾದಲ್ಲಿ ಮಂಡ್ಯ ಜಿಲ್ಲೆಗೆ ಪ್ರಾತಿನಿಧ್ಯ ನೀಡಬೇಕಾದುದು ವರಿಷ್ಠರಿಗೆ ಅನಿವಾರ್ಯವಾಗಿತ್ತು.
2ನೇ ಸಲ:ಎಂ.ಸಿ.ಮನಗೂಳಿ
ಪಕ್ಷ: ಜೆಡಿಎಸ್
ಜಿಲ್ಲೆ: ವಿಜಯಪುರ
ಸಮುದಾಯ: ಲಿಂಗಾಯತ
ವಯಸ್ಸು: 82
ಮುಂಬೈ ಕರ್ನಾಟಕದಿಂದ ಆಯ್ಕೆಯಾಗಿರುವ ಜೆಡಿಎಸ್‌ನ ಇಬ್ಬರು ಶಾಸಕರ ಪೈಕಿ ಒಬ್ಬರು ಮಾತ್ರವಲ್ಲ, ಪಕ್ಷದ ಅತ್ಯಂತ ಹಿರಿಯ ವ್ಯಕ್ತಿ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರೂ ಆರಂಭದಲ್ಲಿ ಇವರ ಹೆಸರು ಪಟ್ಟಿಯಲ್ಲಿರಲಿಲ್ಲ. ಆದರೆ, ಮುಂಬೈ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡಬೇಕು ಮತ್ತು ಪಕ್ಷದ ಹಿರಿಯರಾಗಿರುವುದರಿಂದ ಅವಕಾಶ ಕಲ್ಪಿಸಬೇಕು ಎಂಬ ಕಾರಣಕ್ಕೆ ಕೊನೇ ಕ್ಷಣದಲ್ಲಿ ಅವರನ್ನು ಆಯ್ಕೆ ಮಾಡಲಾಯಿತು. ಆ ಮೂಲಕ ಲಿಂಗಾಯತ ಕೋಟಾಕ್ಕೂ ಆದ್ಯತೆ ನೀಡಿದಂತಾಯಿತು ಎಂಬ ಚಿಂತನೆ. ಶಾಸಕರಾಗಿ ನಾಲ್ಕನೇ ಬಾರಿ ಆಯ್ಕೆಯಾಗಿದ್ದಾರೆ. ಲಿಂಗಾಯತರು ಜೆಡಿಎಸ್‌ನಿಂದ ದೂರವಾಗುತ್ತಿದ್ದಾರೆ ಎಂಬ ಆರೋಪದಿಂದ ಮುಕ್ತವಾಗುವುದು. ಜತೆಗೆ ಬೆಂಬಲಿಗರೊಂದಿಗೆ ದೇವೇಗೌಡರ ಮನೆ ಮುಂದೆ ಧರಣಿ ಮಾಡುವುದಾಗಿ ಬೆದರಿಸಿದ್ದರಿಂದ ಕೊನೇ ಕ್ಷಣದಲ್ಲಿ ಅವಕಾಶ ಸಿಕ್ಕಿತು.
1ನೇ ಸಲ:ಎಸ್.ಆರ್. ಶ್ರೀನಿವಾಸ್
ಪಕ್ಷ: ಜೆಡಿಎಸ್
ಜಿಲ್ಲೆ: ತುಮಕೂರು
ಸಮುದಾಯ: ಒಕ್ಕಲಿಗ
ವಯಸ್ಸು: 57
ತುಮಕೂರು ಜಿಲ್ಲೆಯಿಂದ ಸಚಿವ ಸ್ಥಾನಕ್ಕೆ ಶ್ರೀನಿವಾಸ್ ಮತ್ತು ಶಿರಾ ಶಾಸಕ ಸತ್ಯನಾರಾಯಣ ಹೆಸರು ಕೇಳಿಬರುತ್ತಿದ್ದರೂ ಮುಂಚೂಣಿಯಲ್ಲಿದ್ದುದು ಸತ್ಯನಾರಾಯಣ ಹೆಸರು. ಆದರೆ, ಈ ಬಾರಿ ಜಿಲ್ಲೆಯಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಕೈ ಹಿಡಿದಿದ್ದರಿಂದ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಆತ್ಮೀಯರಾಗಿದ್ದರಿಂದ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ಸಿಕ್ಕಿತು. ಅಲ್ಲದೆ, 2004ರಿಂದ ಸತತವಾಗಿ ಗುಬ್ಬಿ ಕ್ಷೇತ್ರದಿಂದ ಆಯ್ಕೆಯಾಗಿ ಬಂದಿದ್ದು ಕೂಡ ಅವರಿಗೆ ನೆರವಾಯಿತು. ಶಾಸಕರಾಗಿ ನಾಲ್ಕನೇ ಬಾರಿ ಆಯ್ಕೆಯಾಗಿದ್ದಾರೆ.ಒಕ್ಕಲಿಗ ಸಮುದಾಯದಿಂದ ಆಯ್ಕೆಯಾಗಿರುವುದರ ಜತೆಗೆ ತುಮಕೂರು ಜಿಲ್ಲೆಗೆ ಆದ್ಯತೆ ನೀಡುವುದು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಆಪ್ತರಾಗಿದ್ದು ಕೊನೇ ಕ್ಷಣದಲ್ಲಿ ಶ್ರೀನಿವಾಸ್ ಸಚಿವರಾಗಿ ಆಯ್ಕೆಯಾಗಲು ಕಾರಣ.
1ನೇ ಸಲ: ವೆಂಕಟರಾವ್ ನಾಡಗೌಡ
ಪಕ್ಷ: ಜೆಡಿಎಸ್
ಜಿಲ್ಲೆ: ರಾಯಚೂರು
ಸಮುದಾಯ: ಲಿಂಗಾಯತ
ವಯಸ್ಸು: 64
ರಾಯಚೂರು ಜಿಲ್ಲೆಯಲ್ಲಿ ಜೆಡಿಎಸ್‌ನ ಅನೇಕರು ಪಕ್ಷ ತೊರೆದರೂ ಗಟ್ಟಿಯಾಗಿ ನಿಂತು ಪಕ್ಷ ಕಟ್ಟಿದರು. ಮೇಲಾಗಿ ದೇವೇಗೌಡ ಮತ್ತು ಕುಮಾರಸ್ವಾಮಿ ಇಬ್ಬರಿಗೂ ಆಪ್ತರಾಗಿದ್ದಾರೆ. ಅಲ್ಲದೆ, ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಆ ಭಾಗದಲ್ಲಿ ಪಕ್ಷವನ್ನು ಉಳಿಸಿಕೊಳ್ಳಲು ಸಮುದಾಯಕ್ಕೆ ಸಚಿವ ಸ್ಥಾನ ನೀಡಲೇಬೇಕಾಗಿತ್ತು. ಮೇಲಾಗಿ ಹೈದರಾಬಾದ್ ಕರ್ನಾಟಕದಲ್ಲಿ ಪಕ್ಷ ಬಲಪಡಿಸಲು ಇಬ್ಬರಿಗೆ ಸಟಿವ ಸ್ಥಾನ ನೀಡಬೇಕು ಎಂಬುದು ಮೊದಲೇ ನಿರ್ಧಾರವಾಗಿತ್ತು. ಶಾಸಕರಾಗಿ 2ನೇ ಬಾರಿ ಆಯ್ಕೆಯಾಗಿದ್ದಾರೆ. ಪಕ್ಷಕ್ಕೆ ನಿಷ್ಠರಾಗಿದ್ದ ಕಾರಣ ಸಹಜವಾಗಿಯೇ ಸಚಿವಾಕಾಂಕ್ಷಿಯಾಗಿದ್ದರು. ಒಂದೊಮ್ಮೆ ಸಚಿವ ಸ್ಥಾನ ನೀಡದಿದ್ದರೆ ಪಕ್ಷ ತೊರೆಯುವ ಆತಂಕವಿತ್ತು. ಮೇಲಾಗಿ ಲಿಂಗಾಯತ ಲಾಬಿಯೂ ಪರಿಣಾಮ ಬೀರಿದೆ.
1ನೇ ಸಲ: ಸಿ.ಎಸ್.ಪುಟ್ಟರಾಜು
ಪಕ್ಷ: ಜೆಡಿಎಸ್
ಜಿಲ್ಲೆ: ಮಂಡ್ಯ
ಸಮುದಾಯ: ಒಕ್ಕಲಿಗ
ವಯಸ್ಸು: 56
ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಶಕ್ತಿ ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಒಮ್ಮೆ ಶಾಸಕರಾಗಿ ಮತ್ತು ಒಮ್ಮೆ ಸಂಸದರಾಗಿಯೂ ಕೆಲಸ ಮಾಡಿದ್ದರು. ಚೆಲುವರಾಯಸ್ವಾಮಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ನಂತರ ಜಿಲ್ಲೆಯಲ್ಲಿ ಪಕ್ಷದ ಉಸ್ತುವಾರಿ ವಹಿಸಿಕೊಂಡಿದ್ದರು. ಮಂಡ್ಯ ಜಿಲ್ಲೆಯಲ್ಲಿ ಈ ಬಾರಿಯೂ ಒಕ್ಕಲಿಗರು ಜೆಡಿಎಸ್ ಕೈಹಿಡಿದಿದ್ದರಿಂದ ಸಹಜವಾಗಿಯೇ ಒಕ್ಕಲಿಗ ಕೋಟಾದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ನೆರವಾಯಿತು. ಅಲ್ಲದೆ, ಪಕ್ಷದ ಮಾತಿನ ಮನೆಯ ಮುಂಚೂಣಿಯಲ್ಲಿದ್ದಾರೆ. ಶಾಸಕರಾಗಿ ಎರಡನೇ ಬಾರಿ ಆಯ್ಕೆಯಾಗಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಹೆಚ್ಚು ಆತ್ಮೀಯ. ಒಕ್ಕಲಿಗರಾಗಿರುವುದರಿಂದ ಸಮುದಾಯ ಅವರ ಬೆಂಬಲಕ್ಕೆ ನಿಂತು ಒತ್ತಡ ಹೇರಿದ್ದರು.
1 ನೇ ಸಲ: ಸಾ.ರಾ.ಮಹೇಶ್
ಪಕ್ಷ: ಜೆಡಿಎಸ್
ಜಿಲ್ಲೆ: ಮೈಸೂರು
ಸಮುದಾಯ: ಒಕ್ಕಲಿಗ
ವಯಸ್ಸು: 52
ಒಕ್ಕಲಿಗ ಸಮುದಾಯ ಈ ಬಾರಿ ಜೆಡಿಎಸ್ ಬೆಂಬಲಿಸಿರುವುದರಿಂದ ಸಮುದಾಯಕ್ಕೆ ಹೆಚ್ಚಿನ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಡದಿಂದಾಗಿ ಸಾ.ರಾ.ಮಹೇಶ್ ಸಚಿವರಾದರು. ಮಂಡ್ಯ ಜಿಲ್ಲೆಯಲ್ಲಿ ಇಬ್ಬರಿಗೆ ಸಚಿವ ಸ್ಥಾನ ನೀಡಿದಾಗ ಅದಕ್ಕಿಂತ ದೊಡ್ಡ ಜಿಲ್ಲೆ ಮೈಸೂರಿಗೂ ಎರಡು ಸ್ಥಾನ ನೀಡಬೇಕಾದ ಪರಿಸ್ಥಿತಿ ಬಂತು. ಹೀಗಾಗಿ ಆರಂಭದಲ್ಲಿ ಸಚಿವರ ಪಟ್ಟಿಯಲ್ಲಿ ಮಹೇಶ್ ಹೆಸರು ಇಲ್ಲದೇ ಇದ್ದರೂ ಕೊನೇ ಕ್ಷಣದಲ್ಲಿ ಹೆಸರು ಸೇರಿಸಲಾಯಿತು. ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅಭಯ ಹಸ್ತದಿಂದ ಸಚಿವ ಸ್ಥಾನ ದಕ್ಕಿಸಿಕೊಂಡರು. ಅಲ್ಲದೆ, ಒಕ್ಕಲಿಗ ಲಾಬಿಯೂ ಕೆಲಸ ಮಾಡಿತು. ಮೇಲಾಗಿ ಮಹೇಶ್ ಅವರ ನಿಷ್ಠುರ ನಡೆಯೂ ಅವರಿಗೆ ಲಾಭವಾಯಿತು.
1 ನೇ ಸಲ: ಎನ್.ಮಹೇಶ್ (ಬಿಎಸ್‌ಪಿ)
ಪಕ್ಷ: ಜೆಡಿಎಸ್
ಜಿಲ್ಲೆ: ಚಾಮರಾಜನಗರ
ಸಮುದಾಯ: ದಲಿತ
ವಯಸ್ಸು: 62
ಜೆಡಿಎಸ್ ಮತ್ತು ಬಿಎಸ್‌ಪಿ ರಾಜ್ಯದಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿತ್ತು. ಹೀಗಾಗಿ ಬಿಎಸ್‌ಪಿಯಿಂದ ಆಯ್ಕೆಯಾದ ಏಕೈಕ ಶಾಸಕ ಮಹೇಶ್‌ಗೆ ಸಚಿವ ಸ್ಥಾನ ಒಲಿದು ಬಂತು. ಆದರೆ, ಅಧಿಕಾರಿಯಾಗಿದ್ದು ರಾಜೀನಾಮೆ ನೀಡಿ ರಾಜಕೀಯಕ್ಕೆ ಬಂದ ಮಹೇಶ್ ಶಾಸಕರಾಗುವ ಮುನ್ನ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದರು. ದಲಿತ ವರ್ಗಕ್ಕೆ ಸೇರಿರುವ ಅವರು ಸಮುದಾಯಕ್ಕಾಗಿ ಹೋರಾಟ ಮಾಡಿದ್ದರು. ಅವರ ಈ ಅನುಭವದ ಲಾಭ ಪಡೆಯುವುದು ಕೂಡ ಸಚಿವರಾಗಿ ಆಯ್ಕೆ ಮಾಡುವುದರಲ್ಲಿ ಸೇರಿದೆ. ಇದೇ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ದಲಿತ ಸಮುದಾಯ ಮತ್ತು ಹೋರಾಟದ ಅನುಭವಗಳು. ಉತ್ತರ ಪ್ರದೇಶ ಹೊರತುಪಡಿಸಿದರೆ ದೇಶದ ಏಕೈಕ ಬಿಎಸ್‌ಪಿ ಸಚಿವರಾಗುತ್ತಾರೆ ಎನ್ನುವುದೂ ಆಯ್ಕೆಗೆ ಮಾನದಂಡವಾಗಿದೆ.
1ನೇ ಸಲ: ರಾಜಶೇಖರ ಪಾಟೀಲ್
ಪಕ್ಷ: ಕಾಂಗ್ರೆಸ್
ಜಿಲ್ಲೆ;ಬೀದರ್
ಸಮುದಾಯ: ವೀರಶೈವ ಲಿಂಗಾಯತ
ವಯಸ್ಸು: 53
ಹಿರಿಯ ನಾಯಕರಾಗಿದ್ದ ದಿವಂಗತ ಬಸವರಾಜ್ ಪಾಟೀಲ್ ಹುಮ್ನಾಬಾದ್ ಅವರ ಪುತ್ರರಾಗಿದ್ದು, ಐದು ಬಾರಿ ವಿಧಾನಸಭಾ ಶಾಸಕರಾಗಿ ಆಯ್ಕೆಯಾಗಿರುವ ರಾಜಶೇಖರ್ ಪಾಟೀಲ್, ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಪ್ರಮುಖವಾಗಿ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿಯೇ ಸಚಿವ ಸ್ಥಾನ ಸಿಗುವ ನಿರೀಕ್ಷೆ ಹೊಂದಿದ್ದರು. ಆದರೆ, ಈಶ್ವರ್ ಖಂಡ್ರೆ ಅವರಿಗೆ ಅವಕಾಶ ಕಲ್ಪಿಸಿದ್ದರಿಂದ ರಾಜಶೇಖರ್ ಪಾಟೀಲ್ ಸಚಿವ ಸ್ಥಾನ ವಂಚಿತರಾಗಿದ್ದರು. ಅಲ್ಲದೇ ಬಿಜೆಪಿಯಿಂದ ಆಪರೇಶನ್ ಕಮಲದ ಒತ್ತಡ ಇದ್ದರೂ, ಗಟ್ಟಿಯಾಗಿ ಪಕ್ಷ ನಿಷ್ಠೆ ತೋರಿರುವುದು ಸಂಪುಟದಲ್ಲಿ ಸ್ಥಾನ ದೊರೆಯಲು ಸಾಧ್ಯವಾಗಿದೆ.ಸಚಿವ ಸ್ಥಾನ ಸಿಗದ್ದಿರೆ ಬಂಡಾಯ ಏಳುವ ಭಯ ಇದ್ದ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
2ನೇ ಸಲ ಪ್ರಿಯಾಂಕ್ ಖರ್ಗೆ
ಪಕ್ಷ: ಕಾಂಗ್ರೆಸ್
ಜಿಲ್ಲೆ; ಕಲಬುರಗಿ
ಸಮುದಾಯ: ದಲಿತ (ಬಲಗೈ)
ವಯಸ್ಸು: 39
ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಪುತ್ರರಾಗಿರುವ ಪ್ರಿಯಾಂಕ್ ಖರ್ಗೆ ಕಳೆದ ಬಾರಿ ಸಿದ್ದರಾಮಯ್ಯ ಸಂಪುಟದಲ್ಲಿ ಅರ್ಧ ಅವಧಿಗೆ ಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದು, ಈ ಬಾರಿ ಸಂಪುಟದಲ್ಲಿ ಸ್ಥಾನ ಪಡೆಯಲು ನೆರವಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಪ್ರಾತಿನಿಧ್ಯ ನೀಡಲು ಅವಕಾಶ ಕಲ್ಪಿಸಲಾಗಿದೆ. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪತ್ರನ ಪರ ಲಾಬಿ ಮಾಡಿದ್ದು ಇವರ ನೆರವಿಗೆ ಬಂದಿದೆ.ಜತೆಗೆ ನಾಯಕತ್ವದ ಗುಣ, ಯುವಕರಿಗೆ ನೀಡ ಬೇಕೆನ್ನುವ ಕೂಗು ಸಚಿವರಾಗಲು ಸಹಕಾರಿಯಾಗಿದೆ.
2ನೇ ಸಲ: ರಮೇಶ್ ಜಾರಕಿಹೊಳಿ
ಪಕ್ಷ: ಕಾಂಗ್ರೆಸ್
ಜಿಲ್ಲೆ;ಬೆಳಗಾವಿ
ಸಮುದಾಯ: ಎಸ್ಟಿ (ನಾಯಕ ಸಮುದಾಯ)
ವಯಸ್ಸು: 56
ಕಳೆದ ಬಾರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಕೊನೆಯ ಅರ್ಧ ಸಮಯ ಮಾತ್ರ ಸಚಿವರಾಗುವ ಅವಕಾಶ ಒದಗಿ ಬಂದಿತ್ತು. ಜಿಲ್ಲೆಯ ಕಾಂಗ್ರೆಸ್‌ನ ಪ್ರಭಾವಿ ನಾಯಕ. ಅವರ ಸಹೋದರ ಸತೀಶ್ ಜಾರಕಿಹೊಳಿ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್ ಪ್ರಭಲ ಆಕಾಂಕ್ಷಿಯಾಗಿದ್ದರೂ, ಅವರಿಬ್ಬರ ನಡುವಿನ ಗೊಂದಲ ತಪ್ಪಿಸಲು ರಮೇಶ್ ಜಾರಕಿಹೊಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿದು ಬಂದಿದೆ. ಪಕ್ಷದ ನಾಯಕ ಡಿ.ಕೆ.ಶಿವಕುಮಾರ್ ಪ್ರಭಾವ ಬೀರಿದ್ದಾರೆ ಎನ್ನಲಾಗಿದೆ. ಸತೀಶ್ ಜಾರಕಿಹೊಳಿ ಸಮ್ಮಿಶ್ರ ಸರ್ಕಾರದಲ್ಲಿ ಹೊಂದಾಣಿಕೆಯಾಗುವುದು ಕಷ್ಟ ಎನ್ನುವ ಕಾರಣಕ್ಕೆ ಇವರ ಪರ ಲಾಬಿ ನಡೆದಿರುವ ಸಾಧ್ಯತೆ ಇದೆ.
6ನೇ ಸಲ: ಆರ್.ವಿ. ದೇಶಪಾಂಡೆ
ಪಕ್ಷ: ಕಾಂಗ್ರೆಸ್
ಜಿಲ್ಲೆ;ಉತ್ತರ ಕನ್ನಡ
ಸಮುದಾಯ: ಬ್ರಾಹ್ಮಣ
ವಯಸ್ಸು: 71
ಬ್ರಾಹ್ಮಣ ಸಮುದಾಯದ ಹಿರಿಯ ಶಾಸಕರಾಗಿರುವ ಆರ್.ವಿ.ದೇಶಪಾಂಡೆ, ಜಾತಿ ಮತ್ತು ಜಿಲ್ಲಾ ಪ್ರಾತಿನಿಧ್ಯದ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಹಿರಿಯ ಶಾಸಕರಾಗಿದ್ದಾರೆ. ಬ್ರಾಹ್ಮಣ ಸಮುದಾಯದಲ್ಲಿ ದಿನೇಶ್ ಗುಂಡೂರಾವ್ ಅವರು ಪೈಪೋಟಿ ನಡೆಸಿದ್ದರೂ, ಅನುಭವಿ ಹಾಗೂ ಹಿರಿಯರು ಎಂಬ ಕಾರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಿರಿಯರಿಗೆ ಸಂಪುಟಕ್ಕೆ ಸೇರಲು ವಿರೋಧ ವ್ಯಕ್ತವಾಗಿದ್ದರೂ ಹೈ ಕಮಾಂಡ್ ಮಟ್ಟದಲ್ಲಿ ತಮ್ಮದೇ ಪ್ರಭಾವ ಬಳಸಿ ಸಂಪುಟ ಸೇರ್ಪಡೆಯಾಗಿದ್ದಾರೆ.
5ನೇ ಸಲ: ಡಿ.ಕೆ. ಶಿವಕುಮಾರ್
ಪಕ್ಷ: ಕಾಂಗ್ರೆಸ್
ಜಿಲ್ಲೆ;ರಾಮನಗರ
ಸಮುದಾಯ: ಒಕ್ಕಲಿಗ
ವಯಸ್ಸು: 56
ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಏಕೈಕ ಶಾಸಕ. ಏಳು ಬಾರಿ ಶಾಸಕರಾಗಿರುವ ಡಿ.ಕೆ. ಶಿವಕುಮಾರ್ ಕಾಂಗ್ರೆಸ್‌ನ ಪ್ರಭಾವಿ ನಾಯಕರಾಗಿದ್ದು, ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಪಕ್ಷದಲ್ಲಿನ ಹಿರಿತನ ಹಾಗೂ ಪಕ್ಷ ನಿಷ್ಠೆಗೆ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿದ್ದಾಗಲೆಲ್ಲಾ ಪಕ್ಷದ ನೆರವಿಗೆ ಬಂದಿರುವುದು, ಐಟಿ ದಾಳಿ, ಸಿಬಿಐ ದಾಳಿ ನಡುವೆಯೂ ಎದೆಗುಂದದರೆ ಪಕ್ಷ ಸೂಚಿಸಿದ ಕೆಲಸ ಮಾಡಿರುವುದಕ್ಕೆ ಅವಕಾಶ ನೀಡಲಾಗಿದೆ. ಹೈಕಮಾಂಡ್ ಮಟ್ಟದಲ್ಲಿ ತಮ್ಮದೇ ಪ್ರಭಾವ ಬಳಸಿ ಸಂಪುಟ ಸೇರಿದ್ದಾರೆ.ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯದ ಪ್ರಬಲ ಸಮುದಾಯವೊಂದರ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
4ನೇ ಸಲ: ಕೆ.ಜೆ. ಜಾರ್ಜ್
ಪಕ್ಷ: ಕಾಂಗ್ರೆಸ್
ಜಿಲ್ಲೆ; ಬೆಂಗಳೂರು ನಗರ
ಸಮುದಾಯ: ಕ್ರಿಶ್ಚಿಯನ್
ವಯಸ್ಸು: 71
ಕಾಂಗ್ರೆಸ್‌ನಲ್ಲಿ ಹಿರಿಯ ಶಾಸಕರಾಗಿದ್ದು, ಆರು ಬಾರಿ ಗೆಲುವ ಪಡೆದಿದ್ದಾರೆ. ಅಲ್ಲದೇ ಅಲ್ಪ ಸಂಖ್ಯಾತ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿರುವುದು ಸಂಪುಟ ಸೇರಲು ಪ್ರಮುಖ ಕಾರಣವಾಗಿದೆ. ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿರುವುದರಿಂದ ಹಿರಿಯರನ್ನು ಕೈ ಬಿಡಬೇಕೆಂಬ ಒತ್ತಡ ಇದ್ದರೂ ಜಾರ್ಜ್ ಸಂಪುಟದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿದೆ. ಹೈಕಮಾಂಡ್ ಮಟ್ಟದಲ್ಲೂ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರ್ಜ್‌ರನ್ನು ಸಂಪುಟಕ್ಕೆ ಸೇರಿಸಲು ಒತ್ತಡ ಹೇರಿದ್ದರು. ಅಲ್ಲದೇ ಸೋನಿಯಾ ಗಾಂಧಿ ಮೂಲಕ ಜಾರ್ಜ್ ಸಂಪುಟ ಸೇರಲು ಲಾಬಿ ನಡೆಸಿದ್ದರು.
2ನೇ ಸಲ: ಜಮೀರ್ ಅಹಮದ್ ಖಾನ್
ಪಕ್ಷ: ಕಾಂಗ್ರೆಸ್
ಜಿಲ್ಲೆ;ಬೆಂಗಳೂರು ನಗರ
ಸಮುದಾಯ: ಅಲ್ಪ ಸಂಖ್ಯಾತ (ಮುಸ್ಲಿಂ)
ವಯಸ್ಸು: 53
ಜೆಡಿಎಸ್‌ನಿಂದ ಬಂಡಾಯವೆದ್ದು ಕಾಂಗ್ರೆಸ್ ಸೇರಿದ್ದ ಶಾಸಕರ ಮುಂಚೂಣಿ ನಾಯಕರಾಗಿದ್ದರು. ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಕ್ಷೇತ್ರದಲ್ಲಿ ಒಂದು ದಿನ ಮಾತ್ರ ಪ್ರಚಾರ ಮಾಡಿ ಉಳಿದಂತೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿ ಅಲ್ಪಸಂಖ್ಯಾತ ಸಮುದಾಯದ ಮತಗಳು ಅತಿ ಹೆಚ್ಚು ಬರುವಂತೆ ಶ್ರಮಿಸಿದ್ದರು. ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ್ದು ಆ ಕೋಟಾದಡಿ ಸಂಪುಟದಲ್ಲಿ ಸ್ಥಾನ ಪಡೆಯಲು ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪ್ರಭಾವ ಬಳಸಿ ಸಂಪುಟದಲ್ಲಿ ಸ್ಥಾನ ಕೊಡಿಸಲು ಯಶಸ್ವಿಯಾಗಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ನಿಂತು ಪ್ರಮುಖ ಪಾತ್ರವಹಿಸಿದ್ದರು.
2ನೇ ಸಲ: ಕೃಷ್ಣ ಬೈರೇಗೌಡ
ಪಕ್ಷ: ಕಾಂಗ್ರೆಸ್
ಜಿಲ್ಲೆ;ಬೆಂಗಳೂರು ನಗರ
ಸಮುದಾಯ: ಒಕ್ಕಲಿಗ
ವಯಸ್ಸು: 45
ನಾಲ್ಕು ಬಾರಿ ಶಾಸಕರಾಗಿರವ ಇವರು, ಬೆಂಗಳೂರು ನಗರದಲ್ಲಿ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ, ಒಕ್ಕಲಿಗೆ ಹಾಗೂ ಯುವಕರ ಕೋಟಾದಲ್ಲಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಉತ್ತಮ ಕಾರ್ಯ ಮಾಡಿದ್ದು, ರಾಮಲಿಂಗಾರೆಡ್ಡಿ, ಎಂ. ಕೃಷ್ಣಪ್ಪ ಅವರಂತ ಹಿರಿಯರನ್ನು ಕೈ ಬಿಟ್ಟು ಕೃಷ್ಣ ಬೈರೇಗೌಡರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಸಚಿವರಾಗಿ ಉತ್ತಮ ಕಾರ್ಯನಿರ್ವಹಿಸಿದ್ದಾರೆನ್ನುವ ಶಹಬ್ಟಾಸ್ ಗಿರಿ ಇವರದ್ದು. ರಾಜ್ಯ ನಾಯಕರು ಅವರ ಹೆಸರಿಗೆ ಸಮ್ಮತಿ ಸೂಚಿಸಿದ್ದರು. ಅಲ್ಲದೇ, ತಮ್ಮದೇ ಆದ ಲಾಬಿಯನ್ನೂ ನಡೆಸಿ ಅವಕಾಶ ದಕ್ಕಿಸಿಕೊಂಡಿದ್ದಾರೆ.
1ನೇ ಸಲ: ಶಿವಶಂಕರ ರೆಡ್ಡಿ
ಪಕ್ಷ: ಕಾಂಗ್ರೆಸ್
ಜಿಲ್ಲೆ;ಚಿಕ್ಕಬಳ್ಳಾಪುರ
ಸಮುದಾಯ: ಒಕ್ಕಲಿಗ (ರೆಡ್ಡಿ)
ವಯಸ್ಸು: 64
ರೆಡ್ಡಿ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಶಿವಶಂಕರ ರೆಡ್ಡಿ ನಾಲ್ಕು ಬಾರಿ ಶಾಸಕರಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲಾ ಪ್ರಾತಿನಿಧ್ಯ ಹಾಗೂ ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಹಿರಿಯ ಶಾಸಕರಾಗಿರುವುದರಿಂದ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಒಕ್ಕಲಿಗರ ಯುವ ಕೋಟಾದಲ್ಲಿ ಸಾಕಷ್ಟು ಪೈಪೋಟಿ ನಡೆಸಿದ್ದರು. ಜತೆಗೆ ಒಕ್ಕಲಿಗ ರೆಡ್ಡಿಗಳ ಮತ ಬ್ಯಾಂಕ್ ಕಾಂಗ್ರೆಸ್‌ಗೆ ಉಳಿಸಿಕೊಳ್ಳಬೇಕಿತು.ಚಿಕ್ಕಬಳ್ಳಾಪುರ ಸಂಸದರಾಗಿರುವ ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯಿಲಿ ಲೋಕಸಭೆ ಚುನಾವಣೆಯ ದೃಷ್ಠಿಯಲ್ಲಿಟ್ಟುಕೊಂಡು ತಮ್ಮ ಪ್ರಭಾವ ಬಳಸಿ ಸಚಿವ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
2ನೇ ಸಲ: ಯು.ಟಿ.ಖಾದರ್
ಪಕ್ಷ: ಕಾಂಗ್ರೆಸ್
ಜಿಲ್ಲೆ;ದಕ್ಷಿಣ ಕನ್ನಡ
ಸಮುದಾಯ: ಅಲ್ಪ ಸಂಖ್ಯಾತ (ಮುಸ್ಲಿàಂ)
ವಯಸ್ಸು: 48
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯ್ಕೆಯಾಗಿರುವ ಏಕೈಕ ಕಾಂಗ್ರೆಸ್ ಶಾಸಕರಾಗಿದ್ದು, ಜಿಲ್ಲಾ ಪ್ರಾತಿನಿಧ್ಯ ಹಾಗೂ ಅಲ್ಪ ಸಂಖ್ಯಾತ ಕೋಟಾದಡಿ ಸಂಪುಟದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ. ಕಳೆದ ಸಿದ್ದರಾಮಯ್ಯ ಸರ್ಕಾರದಲ್ಲಿ ಆರೋಗ್ಯ ಹಾಗೂ ಆಹಾರ ಮತ್ತು ನಾಗಾರಿಕ ಪೂರೈಕೆ ಸಚಿವರಾಗಿ ಉತ್ತಮ ಕಾರ್ಯ ನಿರ್ವಹಿಸಿರುವುದು ಈ ಬಾರಿ ಸಂಪುಟ ಸೇರಲು ಸಹಕಾರಿಯಾಗಿದೆ. ಐವಾನ್ ಡಿಸೋಜಾ ಪೈಪೋಟಿ ನಡೆಸಿದ್ದರೂ, ಜನರಿಂದ ಆಯ್ಕೆಯಾದವರಿಗೆ ಅವಕಾಶ ಕಲ್ಪಿಸಲು ಖಾದರ್‌ಗೆ ಸ್ಥಾನ ನೀಡಲಾಗಿದೆ. 3ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಖಾದರ್ ಪರ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು.
1ನೇ ಸಲ: ಶಿವಾನಂದ ಪಾಟೀಲ್
ಪಕ್ಷ: ಕಾಂಗ್ರೆಸ್
ಜಿಲ್ಲೆ;ವಿಜಯಪುರ
ಸಮುದಾಯ: ವೀರಶೈವ ಲಿಂಗಾಯತ
ವಯಸ್ಸು: 56
ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿರುವ ಶಿವಾನಂದ ಪಾಟೀಲರಿಗೆ ಬಂಡಾಯದ ಬೆದರಿಕೆ ಹಾಕಿರುವುದು ಸಂಪುಟದಲ್ಲಿ ಸ್ಥಾನ ದೊರೆಯಲು ಕಾರಣವಾಗಿದೆ. ನಾಲ್ಕು ಬಾರಿ ಶಾಸಕರಾಗಿದ್ದರೂ ಸಂಪುಟದಲ್ಲಿ ಅವಕಾಶ ನೀಡದಿರುವುದಕ್ಕೆ ಬೇಸತ್ತಿದ್ದ ಅವರು, ಸಂಪುಟದಲ್ಲಿ ಸ್ಥಾನ ಸಿಗದ್ದಿದ್ದರೆ, ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವ ಬೆದರಿಕೆ ಹಾಕಿದ್ದರು. ಜಿಲ್ಲೆಯ ಪ್ರಭಾವಿ ನಾಯಕರಾಗಿರುವ ಹಿಂದಿನ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವ ಸ್ಥಾನ ಹೊಂದಿದ್ದ ಬಬಲೇಶ್ವರ ಕ್ಷೇತ್ರದ ಶಾಸಕ ಎಂ.ಬಿ. ಪಾಟೀಲ್ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರೂ, ಒತ್ತಡಕ್ಕೆ ಮಣಿದು ಸಂಪುಟದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಒತ್ತಡ ಹೇರಿದ್ದರು. ಜತೆಗೆ ವೀರಶೈವರನ್ನು ಸಮಾಧಾನ ಪಡಿಸುವ ಒತ್ತಡವೂ ಪಕ್ಷದ ಮೇಲಿತ್ತು.
2ನೇ ವೆಂಕಟರಮಣಪ್ಪ
ಪಕ್ಷ: ಕಾಂಗ್ರೆಸ್
ಜಿಲ್ಲೆ;ತುಮಕೂರು
ಸಮುದಾಯ: ಬೋವಿ ಸಮುದಾಯ (ಎಸ್ಸಿ)
ವಯಸ್ಸು: 76
ಹಿರಿಯ ಶಾಸಕರಾಗಿರುವ ವೆಂಕಟರಮಣಪ್ಪ ಬೋವಿ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಸಮುದಾಯಕ್ಕೆ ಪ್ರಾತಿನಿಧ್ಯದ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಕಾಂಗ್ರೆಸ್‌ನಲ್ಲಿ ಬೋವಿ ಸಮುದಾಯದಿಂದ ಮೂವರು ಆಯ್ಕೆಯಾಗಿದ್ದು ಅವರಲ್ಲಿ ಹಿರಿಯರಾಗಿರುವುದರಿಂದ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ನಾಲ್ಕನೇ ಬಾರಿಗೆ ಒಂದು ಸಮುದಾಯವನ್ನು ಪ್ರತಿನಿಧಿಸಿ ಆಯ್ಕೆಯಾಗಿ ಪ್ರಭಾವಶಾಲಿ ನಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಪರಮೇಶ್ವರ್ ಇವರ ಪರ ಬ್ಯಾಟಿಂಗ್ ಮಾಡಿದ್ದಾರೆ. ಜತೆಗೆ ಬಂಡಾಯದ ಬಿಸಿ ಭುಗಿಲೇಳಬಹುದು ಎನ್ನುವ ಭಯವಿತ್ತು.
1ನೇ ಸಲ: ಪುಟ್ಟರಂಗ ಶೆಟ್ಟಿ
ಪಕ್ಷ: ಕಾಂಗ್ರೆಸ್
ಜಿಲ್ಲೆ; ಚಾಮರಾಜನಗರ
ಸಮುದಾಯ: ಉಪ್ಪಾರ (ಹಿಂದುಳಿದ ವರ್ಗ)
ವಯಸ್ಸು: 63
ಹಿಂದುಳಿದ ಚಾಮರಾಜ ನಗರ ಜಿಲ್ಲೆಯಿಂದ ನಾಲ್ಕು ಬಾರಿ ಶಾಸಕರಾಗಿದ್ದು ಹಿಂದುಳಿದ ವರ್ಗದ ಉಪ್ಪಾರ ಸಮುದಾಯಕ್ಕೆ ಸೇರಿದವರಾಗಿದ್ದು, ಜಿಲ್ಲೆ ಹಾಗೂ ಜಾತಿ ಪ್ರಾತಿನಿಧ್ಯದ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಹನೂರು ಕ್ಷೇತ್ರದ ಆರ್. ನರೇಂದ್ರ ಪೈಪೋಟಿ ನಡೆಸಿದ್ದರೂ, ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಇಬ್ಬರಲ್ಲಿ ಹಿರಿಯರಾಗಿರುವುದರಿಂದ ಸಂಪುಟ ಸೇರಲು ಅವಕಾಶ ಪಡೆದಿದ್ದಾರೆ. 4ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಿಂದುಳಿದವರ ಪರ ಧ್ವನಿ ಎತ್ತುವ ಸಿದ್ದರಾಮಯ್ಯ ಅವರ ಪರ ಬ್ಯಾಟಿಂಗ್ ಮಾಡಿದ್ದರು.
1ನೇ ಸಲ: ಆರ್.ಶಂಕರ್
ಪಕ್ಷ: ಕಾಂಗ್ರೆಸ್
ಜಿಲ್ಲೆ;ಹಾವೇರಿ
ಸಮುದಾಯ: ಕುರುಬ
ವಯಸ್ಸು: 52
ಬೆಂಗಳೂರು ಮೂಲದವರಾದ ಆರ್. ಶಂಕರ್ ರಾಣೆಬೆನ್ನೂರಿನಿಂದ ಕೆಪಿಜೆಪಿ ಪಕ್ಷದಿಂದ ಆಯ್ಕೆಯಾಗಿ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿರುವುದರಿಂದ ಕಾಂಗ್ರೆಸ್ ಅನಿವಾರ್ಯವಾಗಿ ಸಂಪುಟದಲ್ಲಿ ಸ್ಥಾನ ನೀಡಲೇಬೇಕಿದ್ದರಿಂದ ಅವಕಾಶ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಕೆಪಿಜೆಪಿ ಅಭ್ಯರ್ಥಿಯಾಗಿ ಸ್ಪಧೇì ಮಾಡಿದ್ದ ಆರ್.ಶಂಕರ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರಾಗಿದ್ದು, ಅಲ್ಲದೇ ಕುರುಬ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಸಂಪುಟದಲ್ಲಿ ಮಂತ್ರಿ ಸ್ಥಾನ ಪಡೆದಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ಇವರಿಗೆ ಸಂಪುಟ ಸ್ಥಾನ ನೀಡುವ ಭರವಸೆ ನೀಡಿದ್ದರು. ಅದರಂತೆ ಸ್ಥಾನ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
1ನೇ ಸಲ: ಜಯಮಾಲ:ವಿಧಾನ ಪರಿಷತ್ ಸದಸ್ಯೆ
ಪಕ್ಷ: ಕಾಂಗ್ರೆಸ್
ಜಿಲ್ಲೆ;ಬೆಂಗಳೂರು ನಗರ
ಸಮುದಾಯ: ಈಡಿಗ (ಹಿಂದುಳಿದ ವರ್ಗ)
ವಯಸ್ಸು: 59
ಸಂಪುಟ ಸೇರಿದವರಲ್ಲಿ ಅಚ್ಚರಿಯ ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈಡಿಗ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎನ್ನುವ ಕಾರಣಕ್ಕೆ ಜಯಮಾಲಾಗೆ ಅವಕಾಶ ಕಲ್ಪಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಸೇರಿದಂತೆ ನಾಲ್ಕೈದು ಜಿಲ್ಲೆಗಳಲ್ಲಿ ಈಡಿಗ ಸಮುದಾಯ ಹೆಚ್ಚಿರುವುದರಿಂದ ಲೋಕಸಭಾ ಚುನಾವಣೆಗೆ ಸಮುದಾಯದ ಮತ ಸೆಳೆಯಲು ಅನುಕೂಲವಾಗುತ್ತದೆ ಎನ್ನುವ ಕಾರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಾಂಗ್ರೆಸ್‌ನಲ್ಲಿ ಈಡಿಗ ಸಮುದಾಯದಿಂದ ಯಾವುದೇ ಶಾಸಕರು ಆಯ್ಕೆಯಾಗಿಲ್ಲ.
ಲಾಬಿ:ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹಾಗೂ ಬಿ.ಕೆ. ಹರಿಪ್ರಸಾದ್ ಇವರ ಪರ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಬೀರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!
Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.