ಅಬ್ಬರವಿಲ್ಲ; ನಗರದಲ್ಲಿ ಹದವಾದ ಮಳೆ
Team Udayavani, Sep 7, 2017, 11:44 AM IST
ಬೆಂಗಳೂರು: ನಗರದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ತಡರಾತ್ರಿ ಮತ್ತು ಬುಧವಾರ ಮಧ್ಯಾಹ್ನದ ಮಳೆ ನಗರದ ಜನಜೀವನವನ್ನು ಮತ್ತೆ ಅಸ್ತವ್ಯಸ್ತಗೊಳಿಸಿತು. ಮಂಗಳವಾರ ರಾತ್ರಿ 12.30ರ ಹೊತ್ತಿಗೆ ಆರಂಭವಾದ ಮಳೆ ಬೆಳಗ್ಗೆ 4.30ರವರೆಗೆ ಸತತವಾಗಿ ಸುರಿದೆ. ಸಣ್ಣದಾಗಿ ಜಡಿ ಹಿಡಿದಿದ್ದ ಮಳೆ ಒಂದೊಂದು ಬಾರಿ ತೀವ್ರವಾಗುತ್ತಿತ್ತು.
ಹೀಗಾಗಿ ಈ ಹಿಂದಿನಷ್ಟು ಅವಾಂತರ, ಅನಾಹುತಗಳು ಸಂಭವಿಸಿಲ್ಲ. ನಗರದ ಎಲ್ಲೂ ನೀರು ನುಗ್ಗಿದ ಬಗ್ಗೆ ವರದಿಯಾಗಿಲ್ಲ. ಆದರೆ, ಜನ ಆತಂಕದಲ್ಲೇ ರಾತ್ರಿ ಕಳೆದಿರುವುದಂತೂ ಸತ್ಯ. ಸೋಮವಾರದ ದಿಢೀರ್ ನೆರೆಯಿಂದ ನಗರ ಇನ್ನೂ ಎಚ್ಚೆತ್ತುಕೊಳ್ಳುವಷ್ಟರಲ್ಲಿ ತಡರಾತ್ರಿಯ ಮಳೆ ಜನರ ನಿದ್ದೆಗೆಡಿಸಿತು.
ರಾತ್ರಿ ಇಡೀ ಸುರಿದಿದ್ದ ಮಳೆ ಬುಧವಾರ ಬೆಳಗ್ಗೆ ಹೊತ್ತಿಗೆ ನಿಂತಿತ್ತು. ಮಧ್ಯಾಹ್ನದ ವರೆಗೆ ಬಿಸಿಲಿದ್ದರೂ, ನಂತರ ಮತ್ತೆ ಮಳೆ ಆರಂಭವಾಯಿತು. ಹೀಗಾಗಿ ಪ್ರಮುಖ ರಸ್ತೆಗಳಲ್ಲಿ ನೀರು ನಿಂತು, ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ಮಡಿವಾಳ, ಬೊಮ್ಮಸಂದ್ರ, ಯಶವಂತಪುರ, ಓಕಳೀಪುರ ಮತ್ತಿತರ ಕಡೆಗಳಲ್ಲಿ ಕೆಲಹೊತ್ತು ಸಂಚಾರದಟ್ಟಣೆ ಇತ್ತು. ಇದರಿಂದ ಜನ ಪರದಾಡಿದರು.
ನಗರದ ಉತ್ತರದ ಶಿವಕೋಟೆಯಲ್ಲಿ ಬುಧವಾರ ಮಧ್ಯಾಹ್ನ ಗರಿಷ್ಠ 74.5 ಮಿ.ಮೀ. ಮಳೆ ದಾಖಲಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ. ನಿರಂತರ ಮಳೆ ಮತ್ತು ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ರಸ್ತೆಗಳಲ್ಲಿ ಭಾರಿ ಪ್ರಮಾಣದ ಹೊಂಡಗಳು ಸೃಷ್ಟಿಯಾಗಿವೆ. ಇದು ಕೂಡ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಯಿತು. ನೀರು ತುಂಬಿದ ಗುಂಡಿಗಳು ಗೊತ್ತಾಗುತ್ತಿರಲಿಲ್ಲ.
ಒಂದೆಡೆ ಸಂಚಾರದಟ್ಟಣೆ ಮತ್ತೂಂದೆಡೆ ಧಾರಾಕಾರ ಮಳೆ ಹಾಗೂ ಈ ಮಧ್ಯೆ ರಸ್ತೆ ಗುಂಡಿಗಳು. ಇದರಿಂದ ವಾಹನಸವಾರರು ಬಿಬಿಎಂಪಿಗೆ ಹಿಡಿಶಾಪ ಹಾಕಿದರು. ಕೆಲವೇ ಹೊತ್ತಿನಲ್ಲಿ ಮಳೆ ಇಳಿಮುಖವಾಗಿದ್ದರಿಂದ ಅಷ್ಟಾಗಿ ಸಮಸ್ಯೆ ಆಗಲಿಲ್ಲ. ಬಿಬಿಎಂಪಿ ನಿಯಂತ್ರಣ ಕೊಠಡಿಯಲ್ಲಿ ಮಳೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳು ದಾಖಲಾಗಿಲ್ಲ.
ವಾಡಿಕೆ ಮೀರಲು ಇನ್ನೊಂದು ಮಳೆ ಸಾಕು
ನಗರದಲ್ಲಿ ಕಳೆದ ಆರು ದಿನಗಳಲ್ಲಿ 201.7 ಮಿ.ಮೀ. ಮಳೆ ದಾಖಲಾಗಿದ್ದು, ಇದು ಹೆಚ್ಚು-ಕಡಿಮೆ ಇಡೀ ತಿಂಗಳ ವಾಡಿಕೆ ಮಳೆಗೆ ಸಮವಾಗಿದೆ. ನಗರದಲ್ಲಿ ಸೆಪ್ಟೆಂಬರ್ ವಾಡಿಕೆ ಮಳೆ 211.5 ಮಿ.ಮೀ. ಈ ಪೈಕಿ ಕಳೆದ ಆರು ದಿನಗಳಲ್ಲಿ (ಸೆ. 1-6) 201.7 ಮಿ.ಮೀ. ಮಳೆಯಾಗಿದ್ದು, ಇನ್ನೊಂದು ದಿನದಲ್ಲಿ ಅನಾಯಾಸವಾಗಿ ನಗರದಲ್ಲಿ ವಾಡಿಕೆ ಮಳೆ ಪ್ರಮಾಣ ಮೀರಲಿದೆ. ಬುಧವಾರ ಬೆಳಿಗ್ಗೆ 19.8 ಮಿ.ಮೀ. ಮಳೆಯಾಗಿದೆ. ಈ ಮಧ್ಯೆ ಮಧ್ಯಾಹ್ನ ಕೂಡ ಮಳೆ ಆಗಿದ್ದು, ಸಂಜೆ 5.30ಕ್ಕೆ 6 ಮಿ.ಮೀ. ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಕೆಎಸ್‌ಎನ್‌ಡಿಎಂಸಿ ಪ್ರಕಾರ ನಗರದ ವಿವಿಧ ಭಾಗಗಳಲ್ಲಿ ಬುಧವಾರ ಗರಿಷ್ಠ 60ರಿಂದ 70 ಮಿ.ಮೀ.ವರೆಗೂ ಮಳೆಯಾಗಿದೆ. ನಗರದ ಉತ್ತರದ ಶಿವಕೋಟೆ 74.5 ಮಿ.ಮೀ., ಹೆಸರಘಟ್ಟ 51, ಅರಕೆರೆ 49.5, ಬಂಡಿಕೊಡಿಗೇನಹಳ್ಳಿ 43.5, ಪೀಣ್ಯ ಕೈಗಾರಿಕಾ ಪ್ರದೇಶ 27, ದೊಡ್ಡಬಿದರಕಲ್ಲು 23, ಯಲಹಂಕ 29.5, ವೆಂಕಟಗಿರಿಕೋಟೆ 58.5, ಸಂಪಂಗಿರಾಮನಗರ 25.5, ಕೋರಮಂಗಲ 17.5 ಮಿ.ಮೀ. ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ತಿಳಿಸಿದೆ.
ಇಂದು ಕೂಡ ಮಳೆ?
ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಗುರುವಾರ ಕೂಡ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಎಸ್.ಎಂ. ಮೆಟ್ರಿ ತಿಳಿಸಿದ್ದಾರೆ. ಲಕ್ಷ್ಯದ್ವೀಪ ಸುತ್ತಮುತ್ತ ಮತ್ತು ಬಂಗಾಳ ಕೊಲ್ಲಿಯ ನೈರುತ್ಯದಿಂದ ತಮಿಳುನಾಡಿನ ಕರಾವಳಿ ನಡುವೆ ಮೇಲ್ಸೆ ಸುಳಿಗಾಳಿ ಇರುವುದರಿಂದ ಈ ಮಳೆ ಆಗುತ್ತಿದೆ. ನಗರ ಸೇರಿದಂತೆ ಕೆಲವೆಡೆ ಭಾರಿ ಮಳೆ ಆಗುವ ಲಕ್ಷಣವೂ ಇದೆ ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.