ಕುಣಿಗಲ್ ಮಾರ್ಗದಲ್ಲಿ ಕಾರವಾರ – ಬೆಂಗ್ಳೂರು ಸಂಚಾರ ಅಸಾಧ್ಯ
Team Udayavani, Aug 12, 2017, 8:30 AM IST
ಬೆಂಗಳೂರು: ಕಾರವಾರ- ಬೆಂಗಳೂರು ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲನ್ನು ಹೊಸದಾಗಿ ನಿರ್ಮಾಣಗೊಂಡಿರುವ ಕುಣಿಗಲ್ ರೈಲು ಮಾರ್ಗಕ್ಕೆ ಬದಲಿಸಲು ಸಾಧ್ಯವಿಲ್ಲ ಎಂದು ನೈರುತ್ಯ ರೈಲ್ವೆ ಇಲಾಖೆ ಹೈಕೋರ್ಟ್‌ಗೆ ಸ್ಪಷ್ಟಪಡಿಸಿ, ಪ್ರಮಾಣಪತ್ರ ಸಲ್ಲಿಸಿದೆ.
ಸಂಜಯ್ ರೇವಣಕರ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಿನ್ನೆಲೆಯಲ್ಲಿ ಈ ಕುರಿತು ಪರಿಶೀಲಿಸುವಂತೆ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ನೈರುತ್ಯ ರೈಲ್ವೆ ಇಲಾಖೆಗೆ ಸೂಚಿಸಿತ್ತು. ಇದಕ್ಕೆ ಇಲಾಖೆ ಪ್ರತಿಕ್ರಿಯಿಸಿ, ಈ ಪ್ರಮಾಣಪತ್ರ ಸಲ್ಲಿಸಿದೆ.
ಕುಣಿಗಲ್ ರೈಲು ಮಾರ್ಗಕ್ಕೆ ಬದಲಿಸುವುದರಿಂದ ಮಂಡ್ಯ, ರಾಮನಗರ ಮತ್ತು ಮೈಸೂರು ಜಿಲ್ಲೆಯ ನಿವಾಸಿಗಳು ಮಂಗಳೂರಿನ ಸಂಪರ್ಕ ಹೊಂದಲು ಕಷ್ಟವಾಗುತ್ತದೆ. ಜತೆಗೆ ಹಾಸನ – ಸಕಲೇಶಪುರ – ಕುಕ್ಕೆ ಸುಬ್ರಹ್ಮಣ್ಯ ಮಾರ್ಗದ ನಿಲ್ದಾಣದ ಘಟ್ಟಗಳು ಹೆಚ್ಚಿವೆ. ಮಾರ್ಗವು ಪೂರಕ ಸಾಮರ್ಥ್ಯಯ ಹೊಂದಿಲ್ಲ.
ರೈಲ್ವೇ ಮಂಡಳಿಯ ಕೆಲವು ಸದಸ್ಯರು ಈ ರೈಲಿನ ಮಾರ್ಗ ಬದಲಿಸಬಾರದೆಂದು ಸಲಹೆ ನೀಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ಬೆಂಗಳೂರು-ಕಾರವಾರ ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲನ್ನು ಕುಣಿಗಲ್ ಮಾರ್ಗಕ್ಕೆ ಬದಲಿಸಲು ಸಾಧ್ಯವಿಲ್ಲ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.
ಅರ್ಜಿದಾರರ ಆಕ್ಷೇಪ: ಅರ್ಜಿದಾರರ ಪರ ವಕೀಲ ರವೀಂದ್ರ ಜಿ.ಕೊಳ್ಳೆ, ಇದನ್ನು ತೀವ್ರವಾಗಿ ಆಕ್ಷೇಪಿಸಿದ್ದಾರೆ. ಕುಣಿಗಲ್ ಮಾರ್ಗದ ಮೂಲಕ ಕಾರವಾರಕ್ಕೆ ರೈಲು ಸೇವೆ ಆರಂಭಿಸಿದರೆ ಬೆಂಗಳೂರಿನಿಂದ ಕಾರವಾರ ತಲುಪುವ ಸಮಯದಲ್ಲಿ 4 ತಾಸು ಕಡಿತವಾಗಲಿದೆ. ಮೈಸೂರು ಮಾರ್ಗದಲ್ಲಿ ರೈಲು ಸಂಚರಿಸಬೇಕೆಂದು ಹೇಳುವುದಾದರೆ, ಆ ಮಾರ್ಗದಲ್ಲೂ ರೈಲು ಓಡಿಸಬೇಕು. ಇದೇ ವೇಳೆ ಕುಣಿಗಲ್ ಮಾರ್ಗದಲ್ಲಿಯೂ ಮತ್ತೂಂದು ರೈಲು ಸಂಚಾರ ಆರಂಭಿಸಬಹುದು ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ಮನವಿಯಂತೆ ಮಾರ್ಗ ಬದಲಾವಣೆ ಸಾಧ್ಯತೆಯನ್ನು ಮತ್ತೂಮ್ಮೆ ಪರಿಶೀಲಿಸಿ, ಮುಂದಿನ ವಿಚಾರಣೆ ವೇಳೆ ನಿಲುವು ತಿಳಿಸುವಂತೆ ರೈಲ್ವೇ ಇಲಾಖೆ ಪರ ವಕೀಲರಿಗೆ ನ್ಯಾಯಪೀಠ ತಿಳಿಸಿದೆ. ಎರಡು ವಾರಗಳ ಕಾಲ ವಿಚಾರಣೆ ಮುಂದೂಡಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.