ಮೇಯರ್ ಆಯ್ಕೆಗೆ ಸಮಿತಿ ರಚಿಸಿಲ್ಲ
Team Udayavani, Sep 26, 2019, 3:08 AM IST
ಬೆಂಗಳೂರು: ಬಿಬಿಎಂಪಿ ಮೇಯರ್ ಅಭ್ಯರ್ಥಿ ಆಯ್ಕೆ ಸಂಬಂಧ ಶಾಸಕ ಎಸ್.ರಘು ನೇತೃತ್ವದಲ್ಲಿ ಸಮಿತಿ ರಚನೆಯಾಗಿರುವುದಕ್ಕೆ ಬಿಜೆಪಿಯಲ್ಲಿ ಅಪಸ್ವರ ಕೇಳಿಬಂದಿದ್ದು, ಪಕ್ಷದ ಹಿರಿಯ ನಾಯಕರಲ್ಲೇ ಹೊಂದಾಣಿಕೆ ಕೊರತೆಯನ್ನು ಎತ್ತಿ ತೋರಿದಂತಿದೆ.
ಮುಖ್ಯಮಂತ್ರಿಗಳ ಸೂಚನೆಯಂತೆ ಸೋಮವಾರ ಎಸ್.ರಘು ನೇತೃತ್ವದಲ್ಲಿ ರಚನೆಯಾಗಿದ್ದ ಸಮಿತಿ ಎರಡು ಸಭೆ ನಡೆಸಿದೆ. ಈ ನಡುವೆ ಮೇಯರ್ ಆಯ್ಕೆ ಸಂಬಂಧ ಪಕ್ಷ ಯಾವುದೇ ಸಮಿತಿ ರಚನೆ ಮಾಡಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೇಯರ್ ಆಯ್ಕೆ ಕುರಿತಂತೆ ಪಕ್ಷದ ಹಿರಿಯ ನಾಯಕರು ಭಿನ್ನ ನಿಲುವು ತಳೆದಿರುವುದು ಗೊಂದಲಕ್ಕೆ ಕಾರಣವಾಗಿದೆ.
ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆಗೆ ಸೆ.27ರಂದು ಚುನಾವಣೆ ನಿಗದಿಯಾಗಿತ್ತು. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಗೃಹ ಕಚೇರಿ “ಕೃಷ್ಣಾ’ದಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಬೆಂಗಳೂರಿನ ಕೆಲ ಸಚಿವರು, ಶಾಸರಕರೊಂದಿಗೆ ಸಭೆ ನಡೆಸಿ ಮೇಯರ್ ಆಯ್ಕೆ ಕುರಿತು ಚರ್ಚಿಸಿದರು.
ಬಳಿಕ ಪ್ರತಿಕ್ರಿಯಿಸಿದ್ದ ಆರ್.ಅಶೋಕ್, ಮುಖ್ಯಮಂತ್ರಿಗಳು ಎಸ್. ರಘು ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದು, ಆ ಸಮಿತಿಯು ಮೇಯರ್, ಉಪಮೇಯರ್ ಸೇರಿದಂತೆ ಇತರೆ ಸ್ಥಾನಕ್ಕೆ ಸಂಬಂಧಪಟ್ಟಂತೆ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ ಸಲ್ಲಿಸದೆ ಎಂದು ಹೇಳಿದ್ದರು. ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಕೊಠಡಿಯಲ್ಲಿ ಎಸ್.ರಘು ಸಮಿತಿ ಸಭೆ ನಡೆಸಿ ಏಳು ಮಂದಿ ಮೇಯರ್ ಆಕಾಂಕ್ಷಿಗಳಿಂದ ಮಾಹಿತಿ, ಅಭಿಪ್ರಾಯ ಸಂಗ್ರಹಿಸಿತ್ತು. ಬುಧವಾರ ಸಹ ಸಮಿತಿ ಕಚೇರಿಯಲ್ಲಿ ಪಾಲಿಕೆ ಸದಸ್ಯರ ಅಭಿಪ್ರಾಯ ಆಲಿಸಿದೆ.
ಪಕ್ಷ ಸಮಿತಿ ರಚಿಸಿಲ್ಲ: ಈ ನಡುವೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಬಿಬಿಎಂಪಿ ಮೇಯರ್ ಚುನಾವಣೆ ದೃಷ್ಟಿಯಿಂದ ಪಕ್ಷವು ಯಾವುದೇ ಸಮಿತಿ ರಚನೆ ಮಾಡಿಲ್ಲ. ಪತ್ರಿಕೆಗಳಲ್ಲಿ ಪ್ರಕಟವಾಗಿರುವಂತೆ ಬಿಬಿಎಂಪಿ ಮೇಯರ್ ಚುನಾವಣೆಗೆ ಪಕ್ಷದ ಆಯ್ಕೆ ಸಮಿತಿ ರಚನೆಯಾಗಿರುವುದು ಸತ್ಯಕ್ಕೆ ದೂರುವಾದುದು. ಬೆಂಗಳೂರು ಪ್ರಮುಖರೊಮದಿಗೆ ಸಮಾಲೋಚನೆ ಮಾಡಿ ಮೇಯರ್ ಅಭ್ಯರ್ಥಿ ಆಯ್ಕೆಯನ್ನು ರಾಜ್ಯ ಬಿಜೆಪಿ ಮಾಡಲಿ ಎಂಬುದಾಗಿ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ಸೂಚಿಸಿದಂತೆ ರಚನೆಯಾಗಿದ್ದ ಎಸ್.ರಘು ನೇತೃತ್ವ ದಸಮಿತಿ ಸಭೆ ನಡೆಸಿದ್ದರೆ, ಆ ರೀತಿಯ ಸಮಿತಿಯನ್ನೇ ರಚಿಸಿಲ್ಲ ಎಂದು ರಾಜ್ಯಾಧ್ಯಕ್ಷರು ಹೇಳಿರುವುದು ಪಕ್ಷದ ಹಿರಿಯ ನಾಯಕರಲ್ಲೇ ಸಮನ್ವಯವಿಲ್ಲವೇ ಎಂಬ ಪ್ರಶ್ನೆ ಮೂಡಿಸಿದೆ. ಅಲ್ಲದೇ ಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ ಇನ್ನಷ್ಟು ಗೊಂದಲ ಸೃಷ್ಟಿಯಾಗುವ ಲಕ್ಷಣ ಕಾಣುತ್ತಿದೆ.
ಬುಧವಾರವೂ ನಡೆದ ಸಭೆ: ಎಸ್.ರಘು ನೇತೃತ್ವದ ಸಮಿತಿಯು ಬುಧವಾರ ಪಾಲಿಕೆ ಬಿಜೆಪಿ ಸದಸ್ಯರ ಅಭಿಪ್ರಾಯ ಪಡೆಯಿತು. 102 ಸದಸ್ಯರ ಪೈಕಿ 84 ಮಂದಿ ಸಭೆಗೆ ಹಾಜರಾಗಿ ಅಭಿಪ್ರಾಯ, ಸಲಹೆ ನೀಡಿದರು. ಹಲವರು ಅನುಮತಿ ಪಡೆದು ಗೈರಾಗಿದ್ದು, ಸಮಿತಿ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ತಿಳಿಸಿದ್ದರು ಎಂದು ಮೂಲಗಳು ಹೇಳಿವೆ. ಈ ಮಧ್ಯೆ, ಕೋರ್ ಕಮಿಟಿಯಲ್ಲಿ ಮೇಯರ್- ಉಪ ಮೇಯರ್ ಆಯ್ಕೆ ಸಂಬಂಧ ಚರ್ಚೆಯಾಗಿದ್ದು, ಸೆ.30 ರಂದು ಅಂತಿಮಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ಹೊಸ ಸಂಪ್ರದಾಯಕ್ಕೆ ಆಕ್ಷೇಪ: ಮೇಯರ್ ಆಯ್ಕೆಗೆ ಸಂಬಂಧಪಟ್ಟಂತೆ ಸಮಿತಿ ರಚಿಸಿ ಅಭಿಪ್ರಾಯ ಪಡೆದು ಆಯ್ಕೆ ಮಾಡುವ ಸಂಪ್ರದಾಯ ಪಕ್ಷದಲ್ಲಿ ಇಲ್ಲ. ಈ ಹಿಂದೆಯೂ ಆ ರೀತಿಯ ವಿಧಾನವನ್ನು ಅನುಸರಿಸಿಲ್ಲ. ನಗರದ ಪ್ರಭಾವಿ ಸಚಿವರೊಬ್ಬರು ಪ್ರಭಾವ ಬೀರಿ ಈ ರೀತಿ ಸಮಿತಿ ರಚನೆಗೆ ಮುಂದಾಗಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಆ ಕಾರಣಕ್ಕೆ ಸಮಿತಿಯನ್ನು ಪಕ್ಷದಿಂದ ಅಧಿಕೃತವಾಗಿ ರಚಿಸಿಲ್ಲ ಎಂಬುದನ್ನು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ರಾಜ್ಯ ಬಿಜೆಪಿಯನ್ನು ಕತ್ತಲೆಯಲ್ಲಿಟ್ಟು ಏಕಪಕ್ಷೀಯ ತೀರ್ಮಾನ ಕೈಗೊಳ್ಳುವ, ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುವುದಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ ಎನ್ನಲಾಗಿದೆ.
ಸಮಿತಿ ಬರ್ಖಾಸ್ತುಗೊಂಡಿದೆ: ಮೇಯರ್ ಆಯ್ಕೆಗೆ ಸಂಬಂಧಪಟ್ಟಂತೆ ಸಮಿತಿಯೊಂದು ರಚನೆಯಾಗಿತ್ತು. ಇದೀಗ ಆ ಸಮಿತಿಯನ್ನು ಬರ್ಖಾಸ್ತುಗೊಳಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
***
ಸ್ಥಾಯಿ ಸಮಿತಿ ಚುನಾವಣೆಗೆ ವಿರೋಧ
ಬೆಂಗಳೂರು: ಬಿಬಿಎಂಪಿಯ ಮೇಯರ್ ಹಾಗೂ ಉಪಮೇಯರ್ ಚುನಾವಣೆ ನಡೆಯುವ ದಿನವೇ 12 ಸ್ಥಾಯಿ ಸಮಿತಿಗಳ ಚುನಾವಣೆ ನಡೆಸಲು ಪ್ರಾದೇಶಿಕ ಚುನಾವಣಾ ಆಯುಕ್ತರು ಅಧಿಸೂಚನೆ ಹೊರಡಿಸಿರುವುದನ್ನು ವಿರೋಧಿಸಿ ಹಾಲಿ ಸ್ಥಾಯಿ ಸಮಿತಿ ಅಧ್ಯಕ್ಷರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಬಿಬಿಎಂಪಿಯ 12 ಸ್ಥಾಯಿ ಸಮಿತಿಯ ಅಧಿಕಾರ ಅವಧಿ ಡಿ.4ರಂದು ಪೂರ್ಣಗೊಳ್ಳಲಿದೆ. ಆದರೆ, ಎರಡು ತಿಂಗಳು ಮುಂಚಿತವಾಗಿ ಅ.1ರಂದು ನಡೆಯುವ ಮೇಯರ್ ಮತ್ತು ಉಪಮೇಯರ್ ಚುನಾವಣೆಯ ಜತೆಗೆ ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆಗೆ ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ಹಾಲಿ ಸಮಿತಿಗಳ ಅಧಿಕಾರ ಅವಧಿ ಮೊಟಕುಗೊಳ್ಳಲಿದೆ. ಹೀಗಾಗಿ, ಪ್ರಾದೇಶಿಕ ಆಯುಕ್ತರು ಅಧಿಸೂಚನೆ ರದ್ದುಗೊಳಿಸಬೇಕು ಎಂಬುದು ಅವರ ವಾದ. ಹೈಕೋರ್ಟ್‌ನಲ್ಲಿ ಗುರುವಾರ ಅರ್ಜಿ ವಿಚಾರಣೆ ಬರುವ ಸಾಧ್ಯತೆ ಇದೆ.
ಮೇಯರ್ ಚುನಾವಣೆ ಪ್ರಕ್ರಿಯೆ ಪ್ರಾರಂಭವಾದ ಸಂದರ್ಭದಲ್ಲೇ ಸ್ಥಾಯಿ ಸಮಿತಿ ಚುನಾವಣೆ ನಡೆಸಬೇಕು ಎಂದು ವಿರೋಧ ಪಕ್ಷದ ನಾಯಕರು ಪಟ್ಟು ಹಿಡಿದಿದ್ದರು. ಈ ಮಧ್ಯೆ ಮೇಯರ್ ಚುನಾವಣೆ ಜತೆ ಸ್ಥಾಯಿ ಸಮಿತಿಗಳ ಚುನಾವಣೆ ನಡೆಸುವ ಬಗ್ಗೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯು ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗಿತ್ತು.
ಕಾನೂನು ತಜ್ಞರು ಮೇಯರ್ ಚುನಾವಣೆ ಜತೆಗೆ ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಡೆಸುವುದು ಸೂಕ್ತ ಎಂದು ಸಲಹೆ ನೀಡಿದ್ದ ಹಿನ್ನೆಲೆಯಲ್ಲಿ ಪ್ರಾದೇಶಿಕ ಚುನಾವಣಾ ಆಯುಕ್ತರು ಸೆ.27 ರಂದು ನಡೆಸಲು ಉದ್ದೇಶಿಸಿದ್ದ ಮೇಯರ್ ಹಾಗೂ ಉಪಮೇಯರ್ ಚುನಾವಣೆ ರದ್ದುಗೊಳಿಸಿ, ಅ.1 ರಂದು ಮೇಯರ್ ಚುನಾವಣೆ ಜತೆಗೆ 12 ಸ್ಥಾಯಿ ಸಮಿತಿಗೆ ಚುನಾವಣೆ ನಡೆಸುವುದಕ್ಕೆ ಮರು ಅಧಿಸೂಚನೆ ಹೊರಡಿಸಿದ್ದಾರೆ.
ದೂರ ಉಳಿದ ಹೇಮಲತಾ ಗೋಪಾಲಯ್ಯ ಹಾಗೂ ವೇಲು ನಾಯ್ಕರ್: ಅ.1ಕ್ಕೆ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಸಂದರ್ಭದಲ್ಲೇ ಸ್ಥಾಯಿ ಸಮಿತಿ ಚುನಾವಣೆ ನಡೆಸುವುದನ್ನು ವಿರೋಧಿಸುವುದಕ್ಕೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿರುವ ಎಸ್.ಪಿ ಹೇಮಲತಾ ಹಾಗೂ ಲೆಕ್ಕ ಪತ್ರ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿರುವ ಎಂ. ವೇಲುನಾಯಕರ್ ಅವರು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.