55 ಸಾವಿರ ಗ್ರಾಪಂ ನೌಕರರಿಗೆ ವರ್ಷದಿಂದ ವೇತನವೇ ಇಲ್ಲ
Team Udayavani, Mar 27, 2017, 3:00 AM IST
ಬೆಂಗಳೂರು: ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡಲು ಹಗಲಿರುಳು ಶ್ರಮಿಸುತ್ತಿರುವ ಗ್ರಾಮ ಪಂಚಾಯತ್‌ನ ಸುಮಾರು 55 ಸಾವಿರ ನೌಕರರಿಗೆ ರಾಜ್ಯ ಸರಕಾರ ಒಂದು ವರ್ಷ ದಿಂದ ವೇತನವನ್ನೇ ನೀಡಿಲ್ಲ. ರಾಜ್ಯದ 6,022 ಗ್ರಾಮ ಪಂಚಾಯತ್‌ಗಳ ಅರ್ಧ ಲಕ್ಷಕ್ಕೂ ಹೆಚ್ಚು ನೌಕರರು ಕಳೆದ ಒಂದು ವರ್ಷದಿಂದ ಸಂಬಳ ಇಲ್ಲದೆ ಪರದಾಡುತ್ತಿದ್ದಾರೆ. ಸರಕಾರಕ್ಕೆ ಹಲವು ಬಾರಿ ಮನವಿ ಮಾಡಿ ಬೇಸತ್ತಿರುವ ಈ ನೌಕರರು, ಇತ್ತೀಚೆಗೆ ಅಂಗನವಾಡಿ ಕಾರ್ಯಕರ್ತೆಯರು ನಡೆಸಿದ ಅಹೋರಾತ್ರಿ ಧರಣಿ ಮಾದರಿಯ ಹೋರಾಟಕ್ಕೆ ಧುಮುಕುವ ಬಗ್ಗೆ ಯೋಚಿಸುತ್ತಿದ್ದಾರೆ.
ಸರಕಾರದಿಂದ ಗ್ರಾ.ಪಂ.ಗಳಿಗೆ ಬರುವ ಸುಮಾರು 12 ಲಕ್ಷ ರೂ. ಶಾಸನ ಬದ್ಧ ಅನುದಾನದಲ್ಲಿ ಶೇ. 40ರಷ್ಟು, ಅಂದರೆ, 5ರಿಂದ 6 ಲಕ್ಷ ರೂ. ನೌಕರರ ವೇತನಕ್ಕೆ ಬಳಸಿಕೊಳ್ಳಬೇಕು. ಅದೇ ರೀತಿ ತೆರಿಗೆ ಸಂಗ್ರಹದ ಶೇ. 40ರಷ್ಟು ಹಣವನ್ನು ವೇತನಕ್ಕಾಗಿ ಬಳಸಿಕೊಳ್ಳಬಹುದು ಎಂದು ನಿಯಮ ಹೇಳುತ್ತದೆ. ಶಾಸನ ಬದ್ಧ ಅನುದಾನದಲ್ಲಿ ವೇತನಕ್ಕೆ ಸಿಗುವ ಪಾಲಿನಲ್ಲಿ 3 ತಿಂಗಳು ಮತ್ತು ತೆರಿಗೆ ಸಂಗ್ರಹದಿಂದ ಬರುವ ವೇತನದ ಪಾಲಿನಲ್ಲಿ 3 ತಿಂಗಳು ವೇತನ ಕೊಡಬಹುದು. ಅದೂ ಸಹ ಪ್ರತಿ ತಿಂಗಳು ಸಿಗುವುದಿಲ್ಲ. ಉಳಿದ 6 ತಿಂಗಳು ನಮ್ಮ ಪಾಡಂತೂ ಹೇಳತೀರದು. ವೇತನಕ್ಕಾಗಿ ಭಿಕ್ಷೆ ಬೇಡಬೇಕಾಗಿದೆ. ಕಳೆದ ಒಂದು ವರ್ಷದಿಂದ ನೌಕರರನ್ನು ಅತೀ ಹೆಚ್ಚು ದುಡಿಸಿಕೊಳ್ಳಲಾಗುತ್ತಿದೆ. ಆದರೆ ಅದಕ್ಕೆ ತಕ್ಕ ವೇತನ ಮಾತ್ರ ಇಲ್ಲ ಎಂಬಂತಾಗಿದೆ. ಇದರಿಂದ ಬದುಕು ದುಸ್ತರವಾಗಿದೆ ಎಂದು ಗ್ರಾ.ಪಂ. ನೌಕರರು ಅಳಲು ತೋಡಿಕೊಳ್ಳುತ್ತಾರೆ.
ರಾಜ್ಯದ ಒಟ್ಟು ಗ್ರಾಮ ಪಂಚಾಯತ್‌ಗಳಲ್ಲಿ 12 ಸಾವಿರ ಜಾಡಮಾಲಿಗಳು (ಕಸ ಗುಡಿಸುವವರು), 26 ಸಾವಿರ ಪಂಪ್ ಆಪರೇಟರ್‌ಗಳು, 6 ಸಾವಿರ ಬಿಲ್ ಕಲೆಕ್ಟರ್, 6 ಸಾವಿರ ಜವಾನರು, 5 ಸಾವಿರ ಕಂಪ್ಯೂಟರ್ ಆಪರೇಟರ್‌ಗಳು, 3,400 ಗುಮಾಸ್ತರು ಸೇರಿ ಒಟ್ಟು 55 ಸಾವಿರ ನೌಕರರು ಕೆಲಸ ಮಾಡುತ್ತಿದ್ದಾರೆ. ಇವರನ್ನು ಗ್ರಾ.ಪಂ.ಗಳು ಸಭೆಯಲ್ಲಿ ನಡಾವಳಿ ಅಂಗೀಕರಿಸಿ ಜಿ.ಪಂ. ಸಿಇಒ ಅನುಮತಿ ಪಡೆದು ನೇಮಕ ಮಾಡಿಕೊಳ್ಳಲಾಗಿರುತ್ತದೆ. ಇದರಲ್ಲಿ ಜಾಡಮಾಲಿಗಳಿಗೆ 13 ಸಾವಿರ, ಪಂಪ್ ಆಪರೇಟರ್‌ಗಳಿಗೆ 11 ಸಾವಿರ, ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್ ಮತ್ತು ಗುಮಾಸ್ತರಿಗೆ ತಲಾ 12 ಸಾವಿರ ಮತ್ತು ಜವಾನರಿಗೆ 10 ಸಾವಿರ ರೂ. ಮಾಸಿಕ ವೇತನ ನೀಡಲಾಗುತ್ತಿದೆ.
ಶಾಸನಬದ್ಧ ಅನುದಾನ ಮತ್ತು ತೆರಿಗೆ ಸಂಗ್ರಹದಲ್ಲಿ ವೇತನ ಕೊಡುವುದು ಬೇಡ. ನಗರ ಸ್ಥಳೀಯ ಸಂಸ್ಥೆಗಳಿಗೆ ನೀಡುವಂತೆ ಗ್ರಾ.ಪಂ. ನೌಕರರಿಗೆ ವೇತನವನ್ನು ನೇರವಾಗಿ ಸರಕಾರದಿಂದಲೇ ಕೊಡಬೇಕು ಅನ್ನುವುದು ನಮ್ಮ ಬಹುಕಾಲದ ಬೇಡಿಕೆ. ಅಲ್ಲದೇ ಗ್ರಾ.ಪಂ. ನೌಕರರಿಗೆ ಸರಕಾರದಿಂದಲೇ ವೇತನ ಕೊಡಬೇಕು ಎಂದು 3ನೇ ಹಣಕಾಸು ಆಯೋಗ ಶಿಫಾರಸು ಮಾಡಿದೆ. ಇವರಿಗೆ ಕನಿಷ್ಠ ಕೂಲಿ ನಿಗದಿಪಡಿಸಿ 2016ರ ಆ. 4ರಂದು ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ. 1936ರ ವೇತನ ಪಾವತಿ ಕಾಯ್ದೆ ಮತ್ತು 1948ರ ಕನಿಷ್ಠ ಕೂಲಿ ಕಾಯ್ದೆ ಪ್ರಕಾರ ಕೇಸ್ ದಾಖಲಿಸಿದರೆ ಪಿಡಿಒ ಹಾಗೂ ಗ್ರಾ.ಪಂ. ಅಧ್ಯಕ್ಷ ಕಾನೂನು ಶಿಕ್ಷೆ ಎದುರಿಸಬೇಕಾಗುತ್ತದೆ. ಆದರೆ, ಇದೆಲ್ಲವೂ ನಮಗೆ ‘ಆಕಾಶಬುಟ್ಟಿ’ ರೀತಿ ಆಗಿದೆ. ನೋಡಲಿಕ್ಕೆ ಚೆಂದ ಮತ್ತು ದೂರ. ಪ್ರಯೋಜನ ಮಾತ್ರ ಇಲ್ಲ. ಆದ್ದರಿಂದ ವೇತನ ಹೆಚ್ಚಳಕ್ಕಾಗಿ ಇತ್ತೀಚೆಗೆ ಅಂಗನವಾಡಿ ಕಾಯಕರ್ತೆಯರು ನಡೆಸಿದ ಪ್ರತಿಭಟನೆಯಂತೆ ಹೋರಾಟ ಕೈಗೊಳ್ಳಲು ನೌಕರರು ಒತ್ತಡ ತರುತ್ತಿದ್ದಾರೆ ಎಂದು ಗ್ರಾ.ಪಂ. ನೌಕರರ ಸಂಘದ ಅಧ್ಯಕ್ಷರು ಹೇಳುತ್ತಾರೆ.
ಕಷ್ಟಪಟ್ಟು ಕೆಲಸ ಮಾಡಿದರೂ ತಿಂಗಳಿಗೆ ಸರಿಯಾಗಿ ವೇತನ ಸಿಗುತ್ತಿಲ್ಲ. ಒಂದು ವರ್ಷದಿಂದ ಗ್ರಾ.ಪಂ. ನೌಕರರು ವೇತನ ಕಂಡಿಲ್ಲ. ನಗರ ಸ್ಥಳೀಯ ಸಂಸ್ಥೆಗಳ ಮಾದರಿಯಲ್ಲಿ ಗ್ರಾ.ಪಂ. ನೌಕರರ ವೇತನಕ್ಕೆ ಸರಕಾರವೇ ಅನುದಾನ ನೀಡಬೇಕು. ಇಡೀ ತಿಂಗಳು ಕೆಲಸ ಮಾಡಿ, ಕೊನೆಗೆ ವೇತನ ಖಾತರಿ ಇಲ್ಲ ಎಂದರೆ ನೌಕರರು ಬದುಕು ಸಾಗಿಸುವುದು ಹೇಗೆ. ಸರಕಾರ ಬೇಡಿಕೆಗೆ ಸ್ಪಂದಿಸಿ, ಅಂಗನವಾಡಿ ಕಾರ್ಯಕರ್ತೆಯರು ನಡೆಸಿದ ರೀತಿಯಲ್ಲಿ ಗ್ರಾ.ಪಂ.ನೌಕರರು ಹೋರಾಟಕ್ಕೆ ಇಳಿಯುವ ಅನಿವಾರ್ಯವನ್ನು ತಪ್ಪಿಸಬೇಕು.
- ಮಾರುತಿ ಮಾನ್ಪಡೆ, ಅಧ್ಯಕ್ಷರು, ಕರ್ನಾಟಕ ರಾಜ್ಯ ಗ್ರಾ.ಪಂ. ನೌಕರರ ಸಂಘ
– ರಫೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland; ವಾಹನ ಕಂದಕಕ್ಕೆ ಬಿದ್ದು ಬೆಳಗಾವಿ ಯೋಧ ಹುತಾತ್ಮ
NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.