ಜೈನ ಧರ್ಮದ ಅಹಿಂಸಾ ತತ್ವ ಹೆಚ್ಚು ಪ್ರಸ್ತುತ
Team Udayavani, Jan 27, 2018, 12:43 PM IST
ಬೆಂಗಳೂರು: ಧರ್ಮ, ಸಂಸ್ಕೃತಿ, ಆಚರಣೆಗಳನ್ನು ಉಳಿಸಬೇಕಾದ ಇಂದಿನ ಸಂದರ್ಭದಲ್ಲಿ ಜೈನ ಧರ್ಮದ ಅಹಿಂಸಾ ತತ್ವ ಹೆಚ್ಚು ಪ್ರಸ್ತುತವೆನಿಸಿದೆ ಎಂದು ಕೊಳದ ಮಠದ ಡಾ.ಶಾಂತವೀರ ಸ್ವಾಮೀಜಿ ಹೇಳಿದರು.
ದಕ್ಷಿಣ ಕನ್ನಡ ಜೈನ ಮೈತ್ರಿ ಕೂಟವು ನಗರದ ಬಸವನಗುಡಿಯಲ್ಲಿನ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಜಿರೆಯ ಎಸ್‌ಡಿಎಂ ಕಾಲೇಜಿನ ಡಾ.ಹಾಮನಾ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಎಸ್.ಡಿ.ಶೆಟ್ಟಿ ಅವರಿಗೆ “ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದರು.
ಎಲ್ಲ ಧರ್ಮದ ಸಾರ, ಮೂಲ ತತ್ವ ಒಂದೇ ಆಗಿದೆ. ಪ್ರತಿಯೊಬ್ಬರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದರೆ ಸಮಸ್ಯೆಯೇ ಉದ್ಬವಿಸುವುದಿಲ್ಲ. ಆದರೆ ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಭಯ, ಆತಂಕದ ವಾತಾವರಣ ಸೃಷ್ಟಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಎಲ್ಲ ಧರ್ಮಗಳನ್ನು ರಕ್ಷಿಸಲು ಸಹಕಾರಿಯಾದ ಅಹಿಂಸಾ ತತ್ವ ಜೈನ ಧರ್ಮದಲ್ಲಿದೆ. ಎಲ್ಲ ಧರ್ಮಗಳ ಸಾರವೆನಿಸಿರುವ ಮಾನವೀಯತೆ ಪಾಲನೆಗೆ ಒತ್ತು ನೀಡಬೇಕಿದೆ ಎಂದು ಹೇಳಿದರು.
ಡಾ.ಎಸ್.ಡಿ.ಶೆಟ್ಟಿ ಅವರು ಆಳ ಅಧ್ಯಯನ ನಡೆಸಿ ಸಾಕಷ್ಟು ಸಂಶೋಧನೆ ನಡೆಸಿದ್ದು, ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಉತ್ತಮವಾಗಿದೆ. ಇಡೀ ವಿಶ್ವಕ್ಕೆ ಧರ್ಮಸ್ಥಳದ ಮಹತ್ವ ಸಾರುತ್ತಿರುವ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಡಿ.ಸುರೇಂದ್ರ ಕುಮಾರ್ ಅವರು ಸರಳ ಜೀವಿಗಳು, ಕರ್ಮ ಜೀವಿಗಳು. ಕರ್ಮ ಸಿದ್ಧಾಂತವನ್ನು ಪಾಲಿಸುತ್ತ ತಮ್ಮ ಸೇವೆ ಮುಂದುವರಿಸಿರುವುದು ಅನುಕರಣೀಯ. ಜೈನ ಧರ್ಮದ ಬಗ್ಗೆ ಅಧ್ಯಯನ ನಡೆಸುವವರಿಗೆ ಅಗತ್ಯ ಪುಸ್ತಕ, ವಿದ್ಯಾರ್ಥಿ ವೇತನ ನೀಡುವತ್ತ ಗಮನ ಹರಿಸಬಹುದು ಎಂದು ತಿಳಿಸಿದರು.
ಪ್ರಶಸ್ತಿ ಪುರಸ್ಕೃತ ಎಸ್.ಡಿ.ಶೆಟ್ಟಿ ಮಾತನಾಡಿ, “ಪುಸ್ತಕಕ್ಕಿಂತ ದೊಡ್ಡ ಆಸ್ತಿ ಬೇರೊಂದಿಲ್ಲ. ಭಾರತೀಯ ಸಂಸ್ಕೃತಿ ಹಾಗೂ ಕನ್ನಡ ಭಾಷೆ ಇಷ್ಟು ಉಳಿಯಲು ಪುಸ್ತಕ ಸಂಸ್ಕೃತಿಯೇ ಕಾರಣ. ಪ್ರಪಂಚದಲ್ಲಿರುವ ಎಲ್ಲ ಭಾಷೆಗಳು ಸಮಾನವಾಗಿವೆ. ಹಾಗೆಯೇ ಧರ್ಮಗಳಲ್ಲಿ ಮಾನವತೆಯ ಧರ್ಮ ಶ್ರೇಷ್ಠವಾದುದು. ಆ ಮೂಲಕ ಅಖಂಡತೆ, ಏಕತೆಯನ್ನು ಪಾಲಿಸುತ್ತಾ ಸಾಗಬೇಕು ಎಂದು ಹೇಳಿದರು.
ಪುಸ್ತಕ ಓದುತ್ತಿಲ್ಲ: ದಕ್ಷಿಣ ಕನ್ನಡದ ಜೈನ ಧರ್ಮೀಯರು ಬಹಳ ಬುದ್ದಿವಂತರು. ಆದರೆ ಜೈನ ಸಾಹಿತ್ಯ ಅಧ್ಯಯನ, ಹಸ್ತಪ್ರತಿ ಸಂಗ್ರಹ, ಪುಸ್ತಕ ಓದುವ, ಖರೀದಿಸುವಲ್ಲಿ ಹಿಂದುಳಿದಿದ್ದಾರೆ. ಹೆಚ್ಚು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಎಸ್‌ಡಿಎಂ ಸಂಸ್ಥೆಗೆ ಪ್ರಾಧ್ಯಾಪಕನಾಗಿ ಸೇರಿದ ನನಗೆ ಸಾಕಷ್ಟು ಜವಾಬ್ದಾರಿಗಳನ್ನು ಸಂಸ್ಥೆ ನೀಡಿದೆ. ಹಾಗಾಗಿ ಈ ಪ್ರಶಸ್ತಿಯನ್ನು ನನ್ನ ಗುರುಗಳು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸೇರಿದಂತೆ ಎಲ್ಲ ಪದಾಧಿಕಾರಿಗಳಿಗೆ ಅರ್ಪಿಸುತ್ತೇನೆ ಎಂದು ಭಾವುಕರಾದರು.
ಇದೇ ಸಂದರ್ಭದಲ್ಲಿ ಬಿಡುಗಡೆಯಾದ ಧಾರಿಣಿದೇವಿಯವರ “ರತ್ನಾಕರ ಗೀತಾರ್ಥ’ ಭಾಗ-2 ಕೃತಿ ಕುರಿತು ಮಾತನಾಡಿದ ಎಸ್.ವಿಮಲಾ ಸುಮತಿಕುಮಾರ್, ಧಾರಿಣಿದೇವಿಯವರು 60 ವರ್ಷಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರೂ ಅವರನ್ನು ಗುರುತಿಸುವ ಕೆಲಸ ಆಗಿಲ್ಲ. ಪುರಾಣದ ರೋಚಕ ಪ್ರಸಂಗಗಳನ್ನು ನೃತ್ಯ ನಾಟಕ, ಲೇಖನಗಳ ಮೂಲಕ ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ವ ಕಾಲಕ್ಕೂ ಸ್ಮರಣೀಯರು: ಕೂಟದ ಅಧ್ಯಕ್ಷ ಡಿ.ಸುರೇಂದ್ರ ಕುಮಾರ್ ಮಾತನಾಡಿ, ಕವಿಗಳು ಸರ್ವ ಕಾಲಕ್ಕೂ ಸ್ಮರಣೀಯರು. ಆ ಹಿನ್ನೆಲೆಯಲ್ಲಿ ಮಹಾಕವಿ ರತ್ನಾಕರವರ್ಣಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಾ ಬರಲಾಗಿದೆ. ರತ್ನಾಕರವರ್ಣಿಯ ಪ್ರತಿಮೆ ಸಿದ್ಧವಾಗಿದ್ದು, ಮೂಡಬಿದಿರೆಯಲ್ಲಿ ಮಂಟಪವೂ ಸಿದ್ಧವಾಗಿದೆ. ಮಾರ್ಚ್‌ನಲ್ಲಿ ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದು. ಮನಸ್ಸು ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆ ತಂದಿದ್ದು, ಆ ಕೆಲಸ ಮುಂದುವರಿಸಲಾಗುವುದು ಎಂದು ಹೇಳಿದರು. ಸುಗುಣಾ ಎಸ್.ಬಿ.ಶೆಟ್ಟಿ, ಅನಿತಾ ಸುರೇಂದ್ರ ಕುಮಾರ್ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.