ಕಾನೂನು ಉಲ್ಲಂಘನೆ ಆಗಿಲ್ಲ
Team Udayavani, Feb 20, 2020, 3:08 AM IST
ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಾಟಕ ಪ್ರದರ್ಶಿಸಿದ್ದಕ್ಕೆ ದೇಶದ್ರೋಹ ಆರೋಪದ ಹಿನ್ನೆಲೆಯಲ್ಲಿ ಬೀದರ್ ನಗರದ ಶಾಹಿನ್ ಶಿಕ್ಷಣ ಸಂಸ್ಥೆಯ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಮಕ್ಕಳನ್ನು ವಿಚಾರಣೆಗೊಳಪಡಿಸಿದಾಗ ಪೊಲೀಸರಿಂದ ಯಾವುದೇ ಕಾನೂನು ಮತ್ತು ನಿಯಮಗಳ ಉಲ್ಲಂಘನೆ ಆಗಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಹೇಳಿದೆ.
ಈ ಕುರಿತು ವಕೀಲೆ ನಯನ ಜ್ಯೋತಿ ಝಾವರ್ ಹಾಗೂ ಮಾನವ ಹಕ್ಕುಗಳ ಸಂಘಟನೆ ‘ಸಿಕ್ರೆಮ್’ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು. ಆಗ, ಸರ್ಕಾರದ ಪರ ವಕೀಲರು ಅರ್ಜಿಗೆ ಸಂಬಂಧಿಸಿದಂತೆ ಪೊಲೀಸರ ಆಕ್ಷೇಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ಈ ವೇಳೆ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಅವರು ಪ್ರಕರಣದಲ್ಲಿ ಪೊಲೀಸರ ಕ್ರಮವನ್ನು ಸಮರ್ಥಿಸಿಕೊಳ್ಳುತ್ತ, ಮಕ್ಕಳನ್ನು ವಿಚಾರಣೆಗೊಳಪಡಿಸಿದಾಗ ಯಾವುದೇ ಕಾನೂನು ಮತ್ತು ನಿಯಮಗಳ ಉಲ್ಲಂಘನೆ ಆಗಿಲ್ಲ. ಸತ್ಯಕ್ಕೆ ದೂರವಾದ ಮಾಧ್ಯಮಗಳ ವರದಿಗಳನ್ನು ಆಧರಿಸಿ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಮಕ್ಕಳ ಹಕ್ಕುಗಳ ಆಯೋಗಕ್ಕೆ ನೀಡಿರುವ ದೂರಿನಲ್ಲಿ ಪೊಲಿಸರ ವಿರುದ್ಧ ಮಾಡಲಾಗಿರುವ ಆರೋಪಗಳು ನಿಜವಲ್ಲ ಎಂದರು.
ದೂರಿನ ಹಿನ್ನೆಲೆಯಲ್ಲಿ ವಿಚಾರಣೆಯ ಉದ್ದೇಶದಿಂದ ಪೊಲೀಸ್ ಅಧಿಕಾರಿಗಳು ಶಾಲೆಗೆ ಭೇಟಿ ಕೊಟ್ಟು ಅಪ್ರಾಪ್ತ ಶಾಲಾ ಮಕ್ಕಳನ್ನು ಆಪ್ತ ಸಮಾಲೋಚನೆ (ಕೌನ್ಸೆಲಿಂಗ್)ಗೆ ಒಳಪಡಿಸಿದ್ದಾರೆ. ತನಿಖಾಧಿಕಾರಿಗಳು ಸಾದಾ ಸಿವಿಲ್ ಸಮವಸ್ತ್ರ ಧರಿಸಿದ್ದರು. ಶಾಲಾ ಆಡಳಿತ ಮಂಡಳಿ ಸದಸ್ಯರು, ಮುಖ್ಯ ಶಿಕ್ಷಕರು, ವರ್ಗ ಶಿಕ್ಷಕರು, ಮಕ್ಕಳ ರಕ್ಷಣಾಧಿಕಾರಿ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು, ವಿಶೇಷ ಮಕ್ಕಳ ಪೊಲೀಸ್ ಘಟಕದ ಸದಸ್ಯರ ಸಮ್ಮುಖದಲ್ಲಿ ಮಕ್ಕಳ ಹೇಳಿಕೆಗಳನ್ನು ಪಡೆದುಕೊಳ್ಳಲಾಗಿದೆ.
ಈ ಸದಂರ್ಭದಲ್ಲಿ ಅಪ್ರಾಪ್ತ ಮಕ್ಕಳನ್ನು ವಿಚಾರಣೆಗೊಳಪಡಿಸುವಾಗ ಪೊಲೀಸ್ ಕೈಪಿಡಿಯಲ್ಲಿ ಸೂಚಿಸಲಾಗಿರುವ ನಿಯಮಗಳನ್ನು ಮತ್ತು ಬಾಲ ನ್ಯಾಯ ಕಾಯ್ದೆಯ ಅನುಸಾರ ನಡೆದುಕೊಳ್ಳಲಾಗಿದೆ ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ತನಿಖಾಧಿಕಾರಿಯವರ ಹೇಳಿಕೆಯನ್ನು ಅಡ್ವೊಕೇಟ್ ಜನರಲ್ ನ್ಯಾಯಪೀಠದ ಗಮನಕ್ಕೆ ತಂದರು.
ಅಡ್ವೊಕೇಟ್ ಜನರಲ್ ಅವರು “ಆಪ್ತ ಸಮಾಲೋಚನೆ’ ಪದ ಬಳಸಿದ್ದಕ್ಕೆ ಆಪ್ತ ಸಮಾಲೋಚನೆ (ಕೌನ್ಸೆಲಿಂಗ್”) ಮಾಡುವುದು ಪೊಲೀಸರ ಕೆಲಸವೇ, ಅವರಿಗೆ ಅದರ ತರಬೇತಿ ನೀಡಲಾಗಿದೆಯೇ ಎಂದು ಪ್ರಶ್ನಿಸಿತು. ಅದಕ್ಕೆ, ಬಾಲ ನ್ಯಾಯ ಕಾಯ್ದೆಯಡಿ “ಕೌನ್ಸೆಲಿಂಗ್’ ಪದ ಬಳಸಲಾಗಿದೆ. ಹಾಗಾಗಿ, ಪೊಲೀಸರ ಆಕ್ಷೇಪಣಾ ಪತ್ರದಲ್ಲಿ ಅದನ್ನು ಹೇಳಲಾಗಿದೆ ಎಂದು ಅಡ್ವೊಕೇಟ್ ಜನರಲ್ ಸ್ಪಷ್ಟನೆ ನೀಡಿದರು. ಪೊಲೀಸರ ಆಕ್ಷೇಪಣಾಪತ್ರಕ್ಕೆ ಮರು ಆಕ್ಷೇಪಣೆ ಸಲ್ಲಿಸಲು ಅರ್ಜಿದಾರರಿಗೆ ಕಾಲಾವಕಾಶ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಮಾ.9ಕ್ಕೆ ಮುಂದೂಡಿತು.
ನ್ಯಾಯಾಲಯಕ್ಕೆ ಸರ್ಕಾರ ಹೇಳಿದ್ದೇನು?: ನಗರದ ಶಹಾಪುರಗೇಟ್‌ನ ಶಾಹಿನ್ ಪ್ರಾಥಮಿಕ ಶಾಲೆಯಲ್ಲಿ ಜ.21ರಂದು ನಡೆದ ಕಾರ್ಯಕ್ರಮದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಕ್ಕಳ ನಾಟಕ ಪ್ರದರ್ಶಿಸಿದರು. ಇದರಲ್ಲಿ ಪ್ರಧಾನಿಯವರ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನು ಆಡಲಾಗಿದೆ ಎಂದು ಆರೋಪಿಸಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ನಿಲೇಶ್ ರಕ್ಷ್ಯಾಲ್ ಎಂಬುವರು ಜ.26ರಂದು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಅದರಂತೆ ಪ್ರಕರಣ ದಾಖಲಿಸಿಕೊಳ್ಳಲಾಯಿತು.
ಈ ಸಂಬಂಧ ಆಪ್ತ ಸಮಾಲೋಚನೆ ಅಥವಾ ತಪಾಸಣೆಗೊಳಪಡಿಸಲು ಮಕ್ಕಳನ್ನು ಹಾಜರುಪಡಿಸುವಂತೆ ಶಾಲಾ ಆಡಳಿತ ಮಂಡಳಿಗೆ ತನಿಖಾಧಿಕಾರಿಗಳು ಮನವಿ ಮಾಡಿಕೊಂಡರು. ಇದಕ್ಕೆ ಒಪ್ಪದ ಆಡಳಿತ ಮಂಡಳಿ, ಮಕ್ಕಳನ್ನು ಹಾಜರುಪಡಿಸುವುದಿಲ್ಲ, ಬದಲಿಗೆ ಶಾಲೆಯಲ್ಲೇ ವಿಚಾರಣೆ ನಡೆಸುವಂತೆ ಕೋರಿದರು. ಆದ್ದರಿಂದ ಜ.28ರಂದು ತನಿಖಾಧಿರಿಗಳು ಮಕ್ಕಳ ರಕ್ಷಣ ಅಧಿಕಾರಿ ಗೌರಿಶಂಕರ್, ವಿಶೇಷ ಮಕ್ಕಳ ಪೊಲೀಸ್ ಘಟಕದ (ಎಸ್‌ಜೆಪಿಯು) ಸದಸ್ಯೆ ಜಗದೇವಿ, ಶಾಲಾ ಸಿಬ್ಬಂದಿ, ಓರ್ವ ಮಗುವಿನ ಪೋಷಕರ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಯಿತು.
ತನಿಖಾಧಿಕಾರಿಗಳು ಸಾದಾ ಸಿವಿಲ್ ಸಮವಸ್ತ್ರದಲ್ಲಿ ಇದ್ದರು, ಇಬ್ಬರು ಪೊಲೀಸ್ ಸಿಬ್ಬಂದಿ ಸಮಸ್ತ್ರದಲ್ಲಿ ಇದ್ದರು. ಇದನ್ನು ಗಮನಿಸಿದ ಮಕ್ಕಳ ರಕ್ಷಣ ಅಧಿಕಾರಿ, ಸಿವಿಲ್ ಸಮವಸ್ತ್ರ ಧರಿಸುವಂತೆ ಸೂಚಿಸಿ ದರು. ಇಡೀ ಪ್ರಕ್ರಿಯೆಯಲ್ಲಿ ಕಾನೂನು- ನಿಯಮಗಳ ಉಲ್ಲಂಘನೆ ಎಲ್ಲಿಯೂ ಆಗಿಲ್ಲ. ಪೊಲೀಸ್ ಕೈಪಿಡಿ ಹಾಗೂ ಬಾಲ ನ್ಯಾಯ ಕಾಯ್ದೆ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸಲಾಗಿದೆ ಎಂದು ಸರ್ಕಾರ ಆಕ್ಷೇಪಣಾ ಪತ್ರದಲ್ಲಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.