ನೋಟು ಅಮಾನ್ಯದ ಲಾಭ ಜಿಎಸ್‌ಟಿಯಿಂದ ಕಡಿತ?
Team Udayavani, Jun 12, 2017, 12:08 PM IST
ಬೆಂಗಳೂರು: ನೋಟು ಅಮಾನ್ಯದಿಂದ ಬಂದ ತೆರಿಗೆ ಲಾಭ ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ (ಜಿಎಸ್‌ಟಿ) ಹೋಗಲಿದೆಯೇ?
ಹೌದು, ರಾಜ್ಯದಲ್ಲಿ ಕಳೆದ ಎರಡು ತಿಂಗಳಲ್ಲಿ ವಾಣಿಜ್ಯ ತೆರಿಗೆ ಮತ್ತು ಮೋಟಾರು ವಾಹನ ತೆರಿಗೆಯಲ್ಲಿ ಶೇ. 20ಕ್ಕಿಂತ ಹೆಚ್ಚು ಏರಿಕೆ ಕಂಡುಬಂದಿದೆ. ಆದರೆ, ಜಿಎಸ್‌ಟಿ ಜಾರಿಗೆ ಬಂದ ಮೇಲೆ (ಜುಲೈನಿಂದ) ಕೇಂದ್ರದಿಂದ ರಾಜ್ಯಕ್ಕೆ ಹಂಚಿಕೆಯಾಗುವ ತೆರಿಗೆ ಹಿಂದಿನ ವರ್ಷ ಸಂಗ್ರಹವಾದ ತೆರಿಗೆಯಿಂದ ಶೇ. 14ರಷ್ಟು ಮಾತ್ರ.
ಹೀಗಾಗಿ ನೋಟು ಅಮಾನ್ಯದಿಂದ ರಾಜ್ಯದಲ್ಲಿ ವಾಣಿಜ್ಯ ತೆರಿಗೆ ಸಾಕಷ್ಟು ಹೆಚ್ಚಾಗಿದ್ದರೂ ಜುಲೈನಿಂದ ಜಿಎಸ್‌ಟಿ ಹಂಚಿಕೆ ಶುರುವಾಗಿ ರಾಜ್ಯಕ್ಕೆ ಸ್ವಲ್ಪ ಪ್ರಮಾಣದಲ್ಲಿ ನಷ್ಟವಾಗಲಿದೆ ಎಂದು ಹೇಳಲಾಗುತ್ತಿದೆ. ಕೇಂದ್ರ ಸರ್ಕಾರದ ನೋಟು ಅಮಾನ್ಯ ಆರ್ಥಿಕ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರಿದೆ ಎಂದು ರಾಜ್ಯ ಸರ್ಕಾರ ಹೇಳಿತ್ತು. ಆದರೆ, ಅದರ ಪರಿಣಾಮ ಈಗ ರಾಜ್ಯಕ್ಕೆ ಲಾಭವಾಗಿದೆ.
ರಾಜ್ಯದ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದ್ದು, 2017-18ನೇ ಸಾಲಿನ ಮೊದಲೆರಡು ತಿಂಗಳಲ್ಲಿ ತೆರಿಗೆ ಸಂಗ್ರಹ ಪ್ರಮಾಣ ಶೇ.20ಕ್ಕಿಂತ ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಏಪ್ರಿಲ್‌ನಲ್ಲಿ ವಾಣಿಜ್ಯ ತೆರಿಗೆ ಸಂಗ್ರಹ ಪ್ರಮಾಣ ಶೇ. 20.2ರಷ್ಟಿದೆ. ಹಿಂದಿನ ವರ್ಷಗಳ ತೆರಿಗೆ ಸಂಗ್ರಹ ಆಧರಿಸಿ ಲೆಕ್ಕ ಹಾಕುವುದಾದರೆ ವರ್ಷಾಂತ್ಯದ ವೇಳೆ ವಾಣಿಜ್ಯ ತೆರಿಗೆ ಸಂಗ್ರಹ ಪ್ರಮಾಣ ಶೇ. 22ರಿಂದ 23 ರಷ್ಟು ಹೆಚ್ಚಳವಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ವಾಣಿಜ್ಯ ತೆರಿಗೆ ಸಂಗ್ರಹ ವಾರ್ಷಿಕವಾಗಿ ಶೇ. 12ರಿಂದ ಶೇ.14ರಷ್ಟು ಏರಿಕೆಯಾಗುತ್ತಿತ್ತು. ಆರ್ಥಿಕ ವರ್ಷಾರಂಭದಲ್ಲಿ ಇದು ಶೇ. 12ರಷ್ಟಿದ್ದರೆ ವರ್ಷಾಂತ್ಯದ ವೇಳೆ ಶೇ.13ರಿಂದ ಗರಿಷ್ಠ ಶೇ.14ರವರೆಗೆ ತಲುಪುತ್ತಿತ್ತು. ಆದರೆ, 2017ರ ಏಪ್ರಿಲ್‌ನಲ್ಲಿ ವಾಣಿಜ್ಯ ತೆರಿಗೆ ಸಂಗ್ರಹ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.20.2ರಷ್ಟು ಏರಿಕೆ ಕಂಡುಬಂದಿದೆ. ಮೇ ನಲ್ಲೂ ಈ ಪ್ರಮಾಣ ಶೇ. 20ಕ್ಕಿಂತ ಹೆಚ್ಚಾಗಿಯೇ ಇದೆ ಎಂದು ಹಣಕಾಸು ಇಲಾಖೆ ಮೂಲಗಳು ಹೇಳಿವೆ.
ಕಳೆದ ವರ್ಷದ ನವೆಂಬರ್‌ನಲ್ಲಿ ನೋಟು ಅಮಾನ್ಯದ ನಂತರ ಬಹುತೇಕ ವ್ಯವಹಾರಗಳು ಬ್ಯಾಂಕಿಂಗ್ ಕ್ಷೇತ್ರದ ಮೂಲಕ ನಡೆದು ತೆರಿಗೆ ವ್ಯಾಪ್ತಿಗೆ ಬಂದಿರುವುದೇ ಈ ಬೆಳವಣಿಗೆಗೆ ಕಾರಣ ಎಂದು ಹೇಳಲಾಗುತ್ತಿದೆ. ಜೂನ್‌ನಲ್ಲೂ ಇದೇ ಮಾದರಿಯಲ್ಲಿ ತೆರಿಗೆ ಸಂಗ್ರಹ ಮುಂದುವರಿಯಲಿದೆ ಎಂದೂ ಮೂಲಗಳು ತಿಳಿಸಿವೆ.
2016-17ನೇ ಸಾಲಿನಲ್ಲಿ 51338 ಕೋಟಿ ರೂ. ಸಂಗ್ರಹಿಸುವ ಗುರಿ ಇಟ್ಟುಕೊಂಡಿದ್ದು, ಏಪ್ರಿಲ್‌ನಲ್ಲಿ 4525 ಕೋಟಿ ರೂ. ಸಂಗ್ರಹವಾಗಿತ್ತು. ಇದು ಒಟ್ಟು ಗುರಿಯ ಶೇ.8.8 ರಷ್ಟಾಗಿತ್ತು. 2017-18ನೇ ಸಾಲಿನಲ್ಲಿ ಒಟ್ಟು 55000 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹದ ಗುರಿ ಹಾಕಿಕೊಳ್ಳಲಾಗಿದ್ದು, ಏಪ್ರಿಲ್‌ನಲ್ಲಿ 5,440 ಕೋಟಿ ರೂ. ಸಂಗ್ರಹವಾಗಿದೆ. ಇದು ಒಟ್ಟು ತೆರಿಗೆ ಗುರಿಯ ಶೇ.9.9ರಷ್ಟಿದೆ. ಅಂದರೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಬಜೆಟ್ ಗುರಿಯ ಶೇ.1.1ರಷ್ಟು ಹೆಚ್ಚುವರಿ ತೆರಿಗೆ ಈ ವರ್ಷದ ಏಪ್ರಿಲ್ ನಲ್ಲಿ ಸಂಗ್ರಹವಾಗಿದೆ.
ಅದೇ ರೀತಿ ಮೋಟಾರು ವಾಹನ ತೆರಿಗೆ ಸಂಗ್ರಹದಲ್ಲೂ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 26.9ರಷ್ಟು ಹೆಚ್ಚಳವಾಗಿದೆ. ಒಂದು ವರ್ಷದಲ್ಲಿ 6,006 ಕೋಟಿ ರೂ. ತೆರಿಗೆ ಸಂಗ್ರಹದ ಗುರಿಗೆ ಬದಲಾಗಿ ಏಪ್ರಿಲ್‌ನಲ್ಲಿ 486 ಕೋಟಿ ರೂ. ಸಂಗ್ರಹವಾಗಿದೆ. ಇತರೆ ತೆರಿಗೆ ಸಂಗ್ರಹದಲ್ಲೂ ಶೇ. 25.2ರಷ್ಟು ಏರಿಕೆಯಾಗಿದೆ. ಮೇನಲ್ಲೂ ಇದೇ ಪ್ರಮಾಣದ ಬೆಳವಣಿಗೆ ಕಂಡುಬಂದಿದೆ ಎಂದು ಹೇಳಲಾಗಿದೆ.
ಕುಸಿದ ಅಬಕಾರಿ ತೆರಿಗೆ, ಮುದ್ರಾಂಕ,
ನೋಂದಣಿ ಶುಲ್ಕ: ವಾಣಿಜ್ಯ ತೆರಿಗೆ ಮತ್ತು ಮೋಟಾರು ವಾಹನ ತೆರಿಗೆಯಲ್ಲಿ ಪ್ರಸಕ್ತ ಸಾಲಿನಲ್ಲಿ ತೆರಿಗೆ ಸಂಗ್ರಹ ಪ್ರಮಾಣ ಏರಿಕೆಯಾಗಿದ್ದರೂ ಅಬಕಾರಿ ತೆರಿಗೆ ಮತ್ತು ಮುದ್ರಾಂಕ ಮತ್ತು ನೋಂದಣಿ ಶುಲ್ಕದಲ್ಲಿ ಕುಸಿತ
ಕಂಡುಬಂದಿದೆ.
ಅದರಲ್ಲೂ ಮುದ್ರಾಂಕ ಮತ್ತು ನೋಂದಣಿ ಶುಲ್ಕದಲ್ಲಿ ಸಾಕಷ್ಟು ಇಳಿಕೆಯಾಗಿದ್ದು, ನೋಟು ಅಮಾನ್ಯದ ನಂತರ ಕುಸಿದ ರಿಯಲ್ ಎಸ್ಟೇಟ್ ಕ್ಷೇತ್ರದ ವ್ಯವಹಾರ ಇನ್ನೂ ಚೇತರಿಸಿಕೊಂಡಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.
ವಾರ್ಷಿಕ ಶೇ. 5ರಿಂದ ಶೇ.8ರಷ್ಟು ಏರಿಕೆಯಾಗುತ್ತಿದ್ದ ಅಬಕಾರಿ ತೆರಿಗೆ ಸಂಗ್ರಹ 2017ರ ಏಪ್ರಿಲ್‌ನಲ್ಲಿ ಶೇ. 0.6ರಷ್ಟು ಇಳಿಕೆಯಾಗಿದೆ. ಆದರೆ, ಮೇ ತಿಂಗಳಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಕಂಡುಬಂದಿದ್ದು, ಜೂನ್‌ನಿಂದ ಯಥಾಸ್ಥಿತಿಗೆ ಬರಬಹುದು ಎಂದು ಹೇಳಲಾಗುತ್ತಿದೆ. ಏಪ್ರಿಲ್‌ನಲ್ಲಿ 998 ಕೋಟಿ ರೂ. ಮಾತ್ರ ಅಬಕಾರಿ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1003 ಕೋಟಿ ರೂ. ಸಂಗ್ರಹವಾಗಿತ್ತು.
ನೋಂದಣಿ ಮತ್ತು ಮುದ್ರಾಂಕ ಶುಲ್ಕದಲ್ಲಿ ಶೇ. 16.9ರಷ್ಟು ಇಳಿಮುಖವಾಗಿದೆ. ಸಾಮಾನ್ಯವಾಗಿ ವಾರ್ಷಿಕ ಈ ತೆರಿಗೆ ಸಂಗ್ರಹದಲ್ಲಿ ಇದು ಶೇ.20ಕ್ಕಿಂತ ಹೆಚ್ಚು ಬೆಳವಣಿಗೆ ಕಾಣಿಸುತ್ತಿತ್ತು. ಆದರೆ, ಮುಂದಿನ ದಿನಗಳಲ್ಲಿ ಇದು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
– ಪ್ರದೀಪ್ ಕುಮಾರ್ ಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ
Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್ ಕೇರ್ ವಿಭಾಗ ಆರಂಭ
Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.