ಉಪನ್ಯಾಸಕರಿಗೆ ಕೋವಿಡ್ ಪರೀಕ್ಷೆಗೆ ಸೂಚನೆ
ಕಾಲೇಜು, ಹಾಸ್ಟೆಲ್ ಆರಂಭ ಹಿನ್ನೆಲೆ ಆರ್‌ಟಿಪಿಸಿಆರ್ ಮಾದರಿಯಲ್ಲಿ ಪರೀಕ್ಷೆಗೆ ಆದೇಶ
Team Udayavani, Nov 14, 2020, 2:07 PM IST
ಬೆಂಗಳೂರು: ರಾಜ್ಯದಲ್ಲಿ ಪದವಿ ಕಾಲೇಜುಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಆರ್ ಟಿಪಿಸಿಆರ್ ಮಾದರಿಯಲ್ಲಿ ಸೋಂಕು ಪರೀಕ್ಷೆ ನಡೆಸಬೇಕು ಎಂದು ಆರೋಗ್ಯ ಇಲಾಖೆ ಆದೇಶಿಸಿದೆ.
ನ.17ರ ನಂತರ ರಾಜ್ಯದಲ್ಲಿ ಪದವಿ ಕಾಲೇಜುಗಳು ಹಾಗೂ ಹಾಸ್ಟೆಲ್‌ಗಳು ಪ್ರಾರಂಭವಾಗಲಿವೆ. ಸರ್ಕಾರದ ಸೂಚನೆ ಮೇರೆಗೆ ಉಪನ್ಯಾಸಕರು,ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಪರೀಕ್ಷೆ ನಡೆಸಿ 72 ಗಂಟೆಯೊಳಗೆ ಸೋಂಕು ಕುರಿತು ವರದಿ ಸಲ್ಲಿಸಬೇಕು. ಇದಕ್ಕಾಗಿ ಜಿಲ್ಲಾಧಿಕಾರಿಗಳು, ವಿಶೇಷ ಆಯುಕ್ತರು, ಬಿಬಿಎಂಪಿ ಆಯುಕ್ತರು ಸ್ಥಳೀಯಮಟ್ಟದ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚಿನ ಪರೀಕ್ಷೆ ನಡೆಸಲು ಕ್ರಮಕೈಗೊಳ್ಳಬೇಕು. ಅಗತ್ಯ ಆರೋಗ್ಯ ಸಿಬ್ಬಂದಿ, ಪರೀಕ್ಷಾ ಕಿಟ್‌ಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಸೋಂಕು ಪರೀಕ್ಷೆಗೆ ಬಂದವರ ಮೂಗು ಮತ್ತು ಗಂಟಲು ದ್ರವದ ಮಾದರಿ ಸಂಗ್ರಹಿಸಿ, ಪ್ರಯೋಗಾಲಯಗಳಿಗೆ ರವಾನಿಸಬೇಕು. ವರದಿಯ ಫಲಿತಾಂಶವನ್ನು ವ್ಯಕ್ತಿಯ ದೂರವಾಣಿ ಸಂಖ್ಯೆಗೂ ಕಳಿಸಬೇಕು. ಕಡ್ಡಾಯವಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ (ಐಸಿಎಂಆರ್) ಪೋರ್ಟಲ್‌ನಲ್ಲಿ ದಾಖಲಿಸಬೇಕು ಎಂದು ತಿಳಿಸಲಾಗಿದೆ.
ಪೂಲ್ ವಿಧಾನದಲ್ಲಿ ಪರೀಕ್ಷೆ : ಸಂಗ್ರಹಿಸಿದ ಮೂಗು ಮತ್ತು ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಗಳು 1:5 ಪೂಲ್ ವಿಧಾನದಲ್ಲಿ ಪರೀಕ್ಷೆಗೊಳಪಡಿಸ ಬೇಕು. ಅಂದರೆ, ಐದು ಮಾದರಿ ಸೇರಿಸಿ ಒಮ್ಮೆಗೆ ಪರೀಕ್ಷೆ ನಡೆಸುವುದು. ಈ ರೀತಿ ಪರೀಕ್ಷೆ ನಡೆಸಿದಾಗ ವರದಿ ನೆಗೆಟಿವ್ ಬಂದರೆ ಎಲ್ಲಾ ಮಾದರಿಗಳ ವರದಿಯೂ ನೆಗೆಟಿವ್ ಆಗಿರುತ್ತದೆ. ಒಂದು ವೇಳೆ ಪಾಸಿಟಿವ್ ಬಂದರೆ ಮತ್ತೂಮ್ಮೆ ಪ್ರತ್ಯೇಕವಾಗಿ ಆ ಐದು ಮಾದರಿಗಳನ್ನು ಪರೀಕ್ಷೆಗೊಳಪಡಿಸಿ ನಿಖರವಾಗಿ ಯಾವ ವ್ಯಕ್ತಿಗೆ ಸೋಂಕು ತಗುಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳ ಲಾಗುತ್ತದೆ. ಸೋಂಕಿನ ಪಾಸಿಟಿವಿಟಿ ದರ ಕಡಿಮೆ ಇದ್ದ ಪ್ರದೇಶದಲ್ಲಿ ಈ ರೀತಿ ಪೂಲ್ ವಿಧಾನದಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಇದರಿಂದ ಪರೀಕ್ಷೆಗಳು ವೇಗವಾಗುವ ಜತೆಗೆ ವೆಚ್ಚವೂಕಡಿಮೆಯಾಗಲಿದೆ ಎಂದು ಆರೋಗ್ಯ ಇಲಾಖೆ ನಿರ್ದೇಶಕ ಡಾ.ಓಂ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.