ಒಎಫ್ಸಿ ಗುಂಡಿ ದುರಸ್ತಿಗೆ ದುಬಾರಿ ದರ!
Team Udayavani, Dec 8, 2019, 3:09 AM IST
ಬೆಂಗಳೂರು: ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್ಸಿ) ಅಳವಡಿಕೆ ವೇಳೆ ಉಂಟಾಗುವ ರಸ್ತೆ ಗುಂಡಿಗಳ ದುರಸ್ತಿಗಾಗಿ ಬಿಬಿಎಂಪಿಯು ಈ ಮೊದಲು ಸೂಚಿಸಿರುವ ಎಸ್‌ಆರ್ ದರಕ್ಕಿಂತ ಎರಡೂವರೆಪಟ್ಟು ಹೆಚ್ಚು ಶುಲ್ಕ ವಿಧಿಸಿದ್ದು, ಈ ಬಗ್ಗೆ ಟೆಲಿಕಾಂ ಸೇವಾ ಪ್ರದಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಪುನಃಶ್ಚೇತನ ಕಾರ್ಯವು ಮತ್ತೆ ಕಗ್ಗಂಟಾಗುವ ಸಾಧ್ಯತೆ ಇದೆ.
ರಸ್ತೆ ಗುಂಡಿಗಳು ಹೆಚ್ಚಾಗಿರುವುದರಿಂದ ನಗರದ ರಸ್ತೆಗಳ ನಿರ್ವಹಣೆ ಹೊಣೆಯನ್ನು ಹೈಕೋರ್ಟ್ ಬಿಬಿಎಂಪಿಗೆ ವಹಿಸಿತ್ತು. ಹಾಗೂ ಅದಕ್ಕಾಗಿ ತಗಲುವ ಪೂರ್ಣ ಮೊತ್ತವನ್ನು ಆಯಾ ಸಂಸ್ಥೆಗಳಿಂದಲೇ ಭರಿಸಿಕೊಳ್ಳುವಂತೆ ಸೂಚಿಸಿತ್ತು. ಅದರಂತೆ ಪರವಾನಗಿ ಮತ್ತು ಮೇಲ್ವಿಚಾರಣೆ ಶುಲ್ಕಗಳ ಜತೆಗೆ ರಸ್ತೆ ಪುನಃಶ್ಚೇತನ ಶುಲ್ಕವನ್ನೂ ಪಡೆಯುವ ಸಂಬಂಧ ಈಚೆಗೆ ಬಿಬಿಎಂಪಿ ಆದೇಶ ಹೊರಡಿಸಿದ್ದು, ಪ್ರತಿ ಗುಂಡಿಗೆ 10 ಸಾವಿರ ರೂ. ನಿಗದಿಪಡಿಸಲಾಗಿದೆ. ಆದರೆ ಇದಕ್ಕೆ ಟೆಲಿಕಾಂ ಸಂಸ್ಥೆಗಳಿಂದ ಅಪಸ್ವರ ಕೇಳಿಬರುತ್ತಿದೆ.
ಪಾಲಿಕೆಯು ಏಕಪಕ್ಷೀಯವಾಗಿ ಈ ದರವನ್ನು ನಿಗದಿಪಡಿಸಿದೆ ಹಾಗೂ ಅದು ಅವೈಜ್ಞಾನಿಕವಾ ಗಿದೆ. ರಸ್ತೆ ನಿರ್ಮಾಣ ಗುತ್ತಿಗೆದಾರರಿಗೆ ಪ್ರತಿ ಗುಂಡಿಗೆ ವಿಧಿಸಿರುವ ದರಕ್ಕಿಂತ ದುಪ್ಪಟ್ಟು ದರ ನಮ್ಮಿಂದ ವಸೂಲಿ ಮಾಡಲಾಗುತ್ತಿದೆ. ಎಸ್‌ಆರ್ ದರಕ್ಕೆ ಹೋಲಿಸಿದಾಗಲೂ ಇದು ಎರಡೂವರೆಪಟ್ಟಾಗುತ್ತದೆ. ಈ ತಾರತಮ್ಯ ಯಾಕೆ? ಅಷ್ಟಕ್ಕೂ ಈ ಮೊದಲು ಟೆಲಿಕಾಂ ಪ್ರೊವೈಡರ್ ಸಂಸ್ಥೆಗಳೊಂದಿಗೆ ನಡೆದ ಸಭೆಯಲ್ಲಿ ನಿಗದಿಪಡಿಸಲು ಉದ್ದೇಶಿಸಿದ್ದ ಶುಲ್ಕ ಅಂದಾಜು 4ರಿಂದ 5 ಸಾವಿರ ರೂ. ಆದರೆ, ಈಗ ಆದೇಶದಲ್ಲಿ ಅದರ ದುಪ್ಪಟ್ಟಿದೆ ಎಂದು ಕಂಪನಿಗಳು ಕ್ಯಾತೆ ತೆಗೆದಿವೆ.
ಆದರೆ, ಪ್ರತಿ ಗುಂಡಿ ಮುಚ್ಚಲು ತಗಲುವ ವೆಚ್ಚವನ್ನೆಲ್ಲಾ ಪರಿಗಣಿಸಿಯೇ ಟೆಲಿಕಾಂ ಕಂಪನಿಗಳಿಗೆ ಶುಲ್ಕ ನಿಗದಿಪಡಿಸಲಾಗಿದೆ. ಹಾಗೇ ಬೇಕಾಬಿಟ್ಟಿ ವಿಧಿಸಲು ಬರುವುದಿಲ್ಲ. ಗುಂಡಿಗೆ ಮಣ್ಣು, ಕಲ್ಲಿನಚೂರುಗಳು, ಬಿಟುಮಿನ್, ಇದಕ್ಕಾಗಿ ಬಳಸುವ ಕಾರ್ಮಿಕರ ವೇತನ ಸೇರಿದಂತೆ ಪ್ರತಿಯೊಂದು ಖರೀದಿಯಲ್ಲೂ ನಾವು ಮಾಡುವ ಖರ್ಚು-ವೆಚ್ಚ ತಾಳೆ ಹಾಕಿಯೇ ವಿಧಿಸಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಿರಿಯ ಎಂಜಿನಿಯರೊಬ್ಬರು “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.
ಇನ್ನು ಈ ತಿಕ್ಕಾಟದಲ್ಲಿ ಬಿಬಿಎಂಪಿ ಇಕ್ಕಟ್ಟಿಗೆ ಸಿಲುಕಿದೆ. ಹೀಗೆ ಓಎಫ್ಸಿ ಕೇಬಲ್ ಅಳವಡಿಕೆಗಾಗಿ ಅಗೆದಿರುವ ಗುಂಡಿಗಳು ಸೇರಿದಂತೆ ರಸ್ತೆ ಪುನಃಶ್ಚೇತನ ಕಾರ್ಯ ಕೈಗೊಳ್ಳದಿದ್ದರೆ ಅತ್ತ ಹೈಕೋರ್ಟ್ ಚಾಟಿ ಬೀಸುತ್ತದೆ ಎಂಬ ಆತಂಕ. ಇತ್ತ ನಿಗದಿಪಡಿಸಿರುವ ಶುಲ್ಕದ ಬಗ್ಗೆ ಟೆಲಿಕಾಂ ಸರ್ವಿಸ್ ಪ್ರೊವೈಡರ್‌ಗಳು ತಕರಾರು ತೆಗೆದಿವೆ. ಕೂಡಲೇ ಈ ದರ ಪರಿಷ್ಕರಿಸುವಂತೆ ಪಾಲಿಕೆ ಮೇಲೆ ಒತ್ತಡ ಹಾಕಲಾಗುವುದು. ಪೂರಕ ಸ್ಪಂದನೆ ಸಿಗದಿದ್ದರೆ, ಕಾನೂನು ಹೋರಾಟದ ಎಚ್ಚರಿಕೆಯನ್ನು ವಿವಿಧ ಟೆಲಿಕಾಂ ಕಂಪನಿಗಳು ನೀಡಿವೆ ಎನ್ನಲಾಗಿದೆ.
ಯಾವ್ಯಾವ ಕಂಪನಿಗಳು?: ನಗರದಾದ್ಯಂತ ರಿಲಾಯನ್ಸ್ ಜಿಯೊ, ಏರ್‌ಟೆಲ್, ಟಾಟಾ ಟೆಲಿಕಾಂ ಸರ್ವಿಸಸ್, ಎಸಿಟಿ, ವೊಡಾಫೋನ್, ಹ್ಯಾಥ್‌ವೇ ಸೇರಿದಂತೆ ಆರೆಂಟು ಟೆಲಿಕಾಂ ಸರ್ವಿಸ್ ಪ್ರೊವೈಡರ್‌ಗಳಿದ್ದು, ಈ ಎಲ್ಲ ಕಂಪನಿಗಳು ಅಂದಾಜು 500ರಿಂದ 600 ಕಿ.ಮೀ.ನಷ್ಟು ಓಎಫ್ಸಿ ಅಳವಡಿಕೆಗೆ ಪರವಾನಗಿ ಕೇಳಿವೆ. ಓಎಫ್ಸಿಗಾಗಿ ಪ್ರತಿ ಕಿ.ಮೀ.ಗೆ ಸರಾಸರಿ 10ರಿಂದ 13 ಗುಂಡಿಗಳು ನಿರ್ಮಾಣವಾಗಲಿವೆ. ಪಾಲಿಕೆ ಈಗ ನಿಗದಿಪಡಿಸಿರುವ ಪ್ರಕಾರ ಕಿ.ಮೀ.ಗೆ 1.20ರಿಂದ 1.30 ಲಕ್ಷ ರೂ. ಪಾವತಿಸಬೇಕಾಗುತ್ತದೆ. ಇದರಲ್ಲಿ ರಿಲಾಯನ್ಸ್ ಜಿಯೊ ಮತ್ತು ಏರ್‌ಟೆಲ್ ಕಂಪನಿಗಳ ಜಾಲ ವಿಸ್ತಾರವಾಗಿದ್ದು, ಈ ಎರಡೂ ಕಂಪನಿಗಳೇ ಸುಮಾರು 400 ಕಿ.ಮೀ. ಓಎಫ್ಸಿ ಅಳವಡಿಕೆಗೆ ಪರವಾನಗಿ ಪಡೆದಿವೆ ಎಂದು ಮೂಲಗಳು ತಿಳಿಸಿವೆ.
ಈ ಮೊದಲು ಆಯಾ ಟೆಲಿಕಾಂ ಕಂಪನಿಗಳು ಸಮರ್ಪಕವಾಗಿ ಮತ್ತು ನಿಗದಿತ ಅವಧಿಯಲ್ಲಿ ಗುಂಡಿಗಳನ್ನು ಮುಚ್ಚುತ್ತಿರಲಿಲ್ಲ. ಇದರಿಂದ ವಾಹನ ಸವಾರರಿಗೆ ಸಮಸ್ಯೆ ಆಗುತ್ತಿತ್ತು. ಈ ಮಧ್ಯೆ ಹೈಕೋರ್ಟ್‌ನಲ್ಲಿ ಬಿಬಿಎಂಪಿ ವ್ಯಾಪ್ತಿಯ ರಸ್ತೆ ಗುಂಡಿಗಳ ಬಗ್ಗೆ ಸಾರ್ವಜನಿಕ ಹಿತಾಸಕ್ತಿಗಳು ಕೂಡ ಹೆಚ್ಚು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ರಸ್ತೆ ಪುನಃಶ್ಚೇತನ ಜವಾಬ್ದಾರಿಯನ್ನು ಬಿಬಿಎಂಪಿ ವಹಿಸಿಕೊಂಡು, ಪ್ರಮಾಣೀಕ ರಿಸುವಂತೆ ಕೋರ್ಟ್ ಸೂಚಿಸಿತ್ತು.
ಪಾಲಿಕೆ ಆದೇಶದಲ್ಲಿ ಏನಿದೆ?: ಎಚ್‌ಡಿಡಿ ಮಾದರಿಯ 1×1 ಮೀಟರ್ ಅಳತೆಯ ಪ್ರತಿ ಗುಂಡಿಗೆ 10 ಸಾವಿರ ರೂ. ಮೂಲ ದರ ಪಡೆಯಬೇಕು. ಸದರಿ ಮೊತ್ತವನ್ನು ಪ್ರಧಾನ ಎಂಜಿನಿಯರ್‌ಗಳು ಪ್ರತಿ ಮೂರು ತಿಂಗಳಿಗೊಮ್ಮೆ ಪರಾಮರ್ಶಿಸಿ, ಮೊತ್ತ ಸೂಕ್ತವಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ರಸ್ತೆ ಪುನಃಶ್ಚೇತನಕ್ಕೆ ಪಡೆದುಕೊಂಡ ಮೊತ್ತಕ್ಕಿಂತ ಹೆಚ್ಚು ವೆಚ್ಚ ಆಗುತ್ತಿದ್ದರೆ, ತಕ್ಷಣ ಹೆಚ್ಚುವರಿ ಡಿಮ್ಯಾಂಡ್ ನೋಟ್ ಜಾರಿಗೊಳಿಸಿ,
ಹೆಚ್ಚುವರಿ ಮೊತ್ತ ಪಡೆಯಬೇಕು. ರಸ್ತೆ ಕತ್ತರಿಸುವ ಸಂಸ್ಥೆ/ ವ್ಯಕ್ತಿಗಳಿಂದ ರಸ್ತೆ ಪುನಃಶ್ಚೇತನ ಮೊತ್ತವನ್ನು ಪಡೆದುಕೊಂಡ ನಂತರ ರಸ್ತೆ ಕತ್ತರಿಸುವುದರಿಂದ ಉದ್ಭವವಾಗುವ ಎಲ್ಲ ಗುಂಡಿ ಮತ್ತು ಟ್ರೆಂಚ್‌ಗಳನ್ನು ಮುಚ್ಚುವ ಜವಾಬ್ದಾರಿ ಪಾಲಿಕೆಯದ್ದಾಗಿರುತ್ತದೆ. ಅನಧಿಕೃತವಾಗಿ ಅಳವಡಿಕೆ ನಡೆಯುವಾಗ ತಟಸ್ಥವಾಗಿರುವ ಅಧಿಕಾರಿಗಳ ಧೋರಣೆಯನ್ನು ಕರ್ತವ್ಯ ನಿರ್ಲಕ್ಷ್ಯ ಎಂದು ಪರಿಗಣಿಸುವುದಾಗಿ ಆದೇಶದಲ್ಲಿ ಎಚ್ಚರಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ದರ ನಿರ್ಧಾರ ನಿರಂಕುಶವಾಗಿ ಮಾಡಿದ್ದಲ್ಲ. ಪ್ರತಿಯೊಂದಕ್ಕೂ ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸಿ, ವೈಜ್ಞಾನಿಕವಾಗಿ ನಿಗದಿಪಡಿಸಲಾಗಿ ರುತ್ತದೆ. ಅಷ್ಟಕ್ಕೂ ಕಂಪನಿಗಳಿಗೆ ಈ ಬಗ್ಗೆ ಯಾವುದೇ ಆಕ್ಷೇಪಗಳಿದ್ದರೆ, ಪಾಲಿಕೆ ಗಮನಕ್ಕೆ ತರಬೇಕು. ಅವುಗಳನ್ನೂ ಪರಿಶೀಲಿಸಲಾಗುವುದು.
-ರವಿಕುಮಾರ ಸುರಪುರ, ಬಿಬಿಎಂಪಿ ವಿಶೇಷ ಆಯುಕ್ತರು (ಯೋಜನೆ)
* ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.