ಮಾಹಿತಿ ನೀಡದಿದ್ದರೆ ಅಧಿಕಾರಿಗಳ ವೇತನ ಕಡಿತ
Team Udayavani, Jan 16, 2019, 6:26 AM IST
ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆಯ ಸಮರ್ಪಕವಾಗಿ ಅನುಷ್ಠಾನಕ್ಕೆ ಮುಂದಾಗಿರುವ ಬಿಬಿಎಂಪಿ, ಸಾರ್ವಜನಿಕರಿಗೆ ಮಾಹಿತಿ ನೀಡಲು 502 ಮಾಹಿತಿ ಅಧಿಕಾರಿ ಹಾಗೂ ಮೇಲ್ಮನವಿ ಪ್ರಾಧಿಕಾರಿಗಳನ್ನು ನೇಮಿಸಿದೆ. ಜತೆಗೆ ಮಾಹಿತಿ ನೀಡದ ಅಧಿಕಾರಿಗಳ ವೇತನದಿಂದ ದಂಡ ಕಡಿತಗೊಳಿಸಲು ತೀರ್ಮಾನಿಸಿದೆ.
ಪಾಲಿಕೆಯ ಕೇಂದ್ರ ಕಚೇರಿ ಸೇರಿದಂತೆ ವಲಯ ಹಾಗೂ ವಾರ್ಡ್ ಮಟ್ಟದ ಅಧಿಕಾರಿಗಳು ಸಹ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಮಾಹಿತಿ ನೀಡುತ್ತಿಲ್ಲ. ಇದರೊಂದಿಗೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳಾಗಿ ನೇಮಕವಾಗಿರುವವರೂ ತಮಗೂ ಮಾಹಿತಿ ನೀಡುವುದಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ಕಂಡುಬಂದಿದೆ.
ನಗರದಲ್ಲಿ ಕೇಂದ್ರ, ರಾಜ್ಯ ಹಾಗೂ ಪಾಲಿಕೆಯ ಅನುದಾನದಲ್ಲಿ ವಾರ್ಷಿಕ ಸಾವಿರಾರು ಕೋಟಿ ರೂ.ಗಳ ಕಾಮಗಾರಿಗಳು ನಡೆಯುತ್ತವೆ. ಆ ಹಿನ್ನೆಲೆಯಲ್ಲಿ ಕಾಮಗಾರಿಗಳು ಪಾರದರ್ಶಕತೆಯಿಂದ ಕೂಡಿವೆಯೇ ಎಂಬುದು ಮಾಹಿತಿ ಹಕ್ಕಿನಡಿ ಕೇಳುವ ಮಾಹಿತಿಯಿಂದ ಬಯಲಾಗುತ್ತವೆ. ಆದರೆ, ತಾವು ಮಾಡಿದ ತಪ್ಪುಗಳನ್ನು ಮುಚ್ಚಿಕೊಳ್ಳಲು ಅಧಿಕಾರಿಗಳು ಮಾಹಿತಿ ನೀಡಲು ಮುಂದಾಗುತ್ತಿಲ್ಲ ಎಂದು ಮಾಹಿತಿ ಹಕ್ಕು ಕಾರ್ಯಕರ್ತರು ಆರೋಪಿಸುತ್ತಾರೆ.
ಹೀಗಾಗಿ ಪಾಲಿಕೆಯಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಸಮಪರ್ಕವಾಗಿ ಜಾರಿಗೊಳಿಸುವ ಉದ್ದೇಶದಿಂದ ಪಾಲಿಕೆಯ ಆಯುಕ್ತರು, ಪಾಲಿಕೆಯಲ್ಲಿನ 502 ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಮೇಲ್ಮನವಿ ಪ್ರಾಧಿಕಾರಿಗಳು ತಮ್ಮ ಕಚೇರಿಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿ ತಮ್ಮ ಹುದ್ದೆ, ವಿಳಾಸ ಹಾಗೂ ದೂರವಾಣಿ ಸಂಖ್ಯೆಯಿರುವ ನಾಮಫಲಕ ಅಳವಡಿಸಿಕೊಳ್ಳಬೇಕೆಂದು ಆದೇಶಿಸಿದ್ದಾರೆ.
ವಿಚಾರಣೆಗೆ ಖುದ್ದು ಹಾಜರಾಗಬೇಕು: ಮಾಹಿತಿ ಹಕ್ಕು ಆಯೋಗದಲ್ಲಿ ದಾಖಲಾದ ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಸಂಬಂಧಪಟ್ಟ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಖುದ್ದಾಗಿ ಆಯೋಗದ ಮುಂದೆ ಹಾಜರಾಗಬೇಕು. ಸೂಕ್ತ ಕಾರಣಗಳಿದ್ದಾಗ ಮಾತ್ರವೇ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಜರಾಗಲು, ತಮ್ಮ ಪರವಾಗಿ ಹಾಜರಾಗಲು ಸಮರ್ಪಕ ಮಾಹಿತಿ ಹೊಂದಿರುವ ಅಧಿಕಾರಿಗಳನ್ನು ನಿಯೋಜಿಸಿ ಅಧಿಕಾರ ಪತ್ರವನ್ನು ತಪ್ಪದೇ ನೀಡಬೇಕು. ಆದರೆ, ಯಾವುದೇ ಕಾರಣಕ್ಕೂ ಕೆಳ ಹಂತದ ಸಿಬ್ಬಂದಿಗಳನ್ನು ನಿಯೋಜಿಸಬಾರದು ಎಂದು ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ವೆಬ್‌ಸೈಟ್‌ಗೆ ಅಪ್‌ಲೋಡ್: ಮಾಹಿತಿ ಹಕ್ಕು ಕಾಯ್ದೆ 2005ರ ಪ್ರಕರಣ 5(1)ರಡಿಯಲ್ಲಿ ಮಾಹಿತಿ ಕೋರಿ ನಿತ್ಯ ಸಲ್ಲಿಕೆಯಾದ ಅರ್ಜಿಗಳ ಸಂಪೂರ್ಣ ಮಾಹಿತಿಯನ್ನು ಆನ್‌ಲೈನ್‌ಗೆ ಅಳವಡಿಸಬೇಕು. ಅದರಂತೆ ಸಲ್ಲಿಕೆಯಾದ ಅರ್ಜಿಗಳು, ಮಾಹಿತಿ ನೀಡಿ ವಿಲೇವಾರಿ ಮಾಡಿದ ಅರ್ಜಿಗಳು, ಬಾಕಿಯಿರುವ ಅರ್ಜಿಗಳು ಹಾಗೂ ಮಾಹಿತಿ ನೀಡಲಾಗದ ಅರ್ಜಿಗಳನ್ನು ಕಾರಣ ಸಮೇತವಾಗಿ ಪಾಲಿಕೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಳವಡಿಸಬೇಕು ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಆದೇಶದಲ್ಲಿ ಉಲ್ಲೇಖೀಸಿದ್ದಾರೆ.
ವೇತನದಲ್ಲಿ ದಂಡ ಕಡಿತ: ರಾಜ್ಯ ಮಾಹಿತಿ ಹಕ್ಕು ಆಯೋಗದ ಆದೇಶದಂತೆ ಮಾಹಿತಿ ಒದಗಿಸದ ಪ್ರಕರಣಗಳಲ್ಲಿ ವಿಧಿಸಲಾದ ದಂಡ ಮೊತ್ತವನ್ನು ಅರ್ಜಿಗಳು ಸ್ವೀಕರಿಸಿದ ಬಟವಾಡೆ ಅಧಿಕಾರಿಗಳು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ವೇತನದಿಂದ ಕಡಿತಗೊಳಿಸಬೇಕು. ಜತೆಗೆ ಅಧಿಕಾರಿಗಳಿಂದ ದಂಡದ ರೂಪದಲ್ಲಿ ಪಡೆದಿರುವ ಮೊತ್ತವನ್ನು ಆಯೋಗಕ್ಕೆ ಜಮೆ ಮಾಡಿ ವರದಿಯನ್ನು ಮಾಹಿತಿ ಆಯೋಗಕ್ಕೆ ಸಲ್ಲಿಸಬೇಕೆಂದು ಸೂಚನೆ ನೀಡಿದ್ದಾರೆ.
ಸಾರ್ವಜನಿಕರಿಗೆ ಮಾಹಿತಿ ಸುಲಭವಾಗಿ ದೊರೆಯಬೇಕೆಂಬ ಉದ್ದೇಶದಿಂದ 502 ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಮೇಲ್ಮನವಿ ಪ್ರಾಧಿಕಾರಿಗಳನ್ನು ನೇಮಿಸಲಾಗಿದೆ. ಆದರೂ, ಸಾರ್ವಜನಿಕರಿಗೆ ಮಾಹಿತಿ ದೊರೆಯುತ್ತಿಲ್ಲ ಎಂಬ ದೂರುಗಳು ಬಂದಿವೆ. ಹೀಗಾಗಿ ಅಧಿಕಾರಿಗಳು ತಮ್ಮ ಕಚೇರಿಯ ಮುಂಭಾಗದಲ್ಲಿ ತಮ್ಮ ಹುದ್ದೆ, ವಿಳಾಸ ಹಾಗೂ ದೂರವಾಣಿ ಸಂಖ್ಯೆ ಸಹಿತ ನಾಮಫಲಕ ಅಳವಡಿಸಬೇಕು.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತರು
* ವೆಂ.ಸುನೀಲ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.