ಮೃತ್ಯುಕೂಪವಾಗಿರುವ ರಸ್ತೆಗೆ ತುರ್ತು ಬೇಕಿದೆ ಮೇಲ್ಸೇತುವೆ
Team Udayavani, Jun 21, 2023, 2:38 PM IST
ಕೆ.ಆರ್.ಪುರ: ನಗರದಲ್ಲೇ ಅತಿ ಹೆಚ್ಚು ಸಂಚಾರ ದಟ್ಟಣೆ ಉಂಟಾಗುವ ಹಾಗೂ ಅತ್ಯಂತ ಅಪಾಯಕಾರಿ ರಸ್ತೆ ಎಂಬ ಕುಖ್ಯಾತಿ ಹೊಂದಿರುವ ಹಳೇ ಮದ್ರಾಸ್ ರಸ್ತೆಯ ಟಿನ್ ಫ್ಯಾಕ್ಟರಿಯಿಂದ ಮೇಡಹಳ್ಳಿಯವರೆಗೂ ಮೇಲ್ಸೇತುವೆಯನ್ನು ನಿರ್ಮಿಸುವಂತೆ ಈ ಭಾಗದ ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಗರದಿಂದ ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ರಾಜ್ಯಗಳಿಗೆ ಸಂಪರ್ಕಿಸುವ ಮಾರ್ಗ ಇದಾಗಿದ್ದು, ಕೋಲಾರ, ಕೆಜಿಎಫ್, ಚಿಂತಾಮಣಿ, ಶ್ರೀನಿವಾಸಪುರದಿಂದ ಮಹಾನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ನಿತ್ಯ 2 ಲಕ್ಷಕ್ಕೂ ಅಧಿಕ ವಾಹನಗಳು ಓಡಾಡುತ್ತವೆ. ಹೀಗಾಗಿ ಇಲ್ಲಿ ಸಂಚಾರದಟ್ಟಣೆಯಲ್ಲಿ ಸವಾರರು ಸಿಲುಕಿಕೊಂಡು ಗಂಟೆಗಟ್ಟಲೆ ಕಾಯಬೇಕಾದ ಪರಿ ಸ್ಥಿತಿ ಇದೆ. ಈ ಕಾರಣಕ್ಕಾಗಿ ಎಲಿವೇಟೆಡ್ ಕಾರಿ ಡಾರ್ ನಿರ್ಮಾಣ ಆಗಬೇಕು ಎಂಬುದು ಇಲ್ಲಿನ ನಾಗರಿಕರು ಬಹುವರ್ಷಗಳ ಬೇಡಿಕೆ ಆಗಿದೆ.
ರಾಜಧಾನಿಯಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಉಂಟಾಗುವ ಹಾಗೂ ಅತ್ಯಂತ ಅಪಾಯಕಾರಿ ರಸ್ತೆ ಎಂದೇ ಕುಖ್ಯಾತಿ ಪಡೆದುಕೊಂಡಿರುವ ಮಾರ್ಗದಲ್ಲಿ ಅಪಘಾತಗಳು ನಡೆದು ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅನೇಕ ಮಂದಿ ಕೈಕಾಲು ಕಳೆದುಕೊಂಡು ಅಂಗವಿಕಲರಾಗಿದ್ದಾರೆ. ಇಂತಹ ಮೃತ್ಯುಕೂಪದಲ್ಲಿ ಶೀಘ್ರ ಮೇಲ್ಸೇತುವ ನಿರ್ಮಿಸಿದರೆ ಸಂಚಾರ ದಟ್ಟಣೆ ನಿವಾರಣೆ ಜತ ಅಪಘಾತಗಳನ್ನು ತಡೆಬಹುದಾಗಿದೆ.
ಕೆಲವೊಮ್ಮೆ ಕಿ.ಮೀ.ಗಳಷ್ಟು ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿ ಸಂಚಾರ ಪೊಲೀಸರು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಳೇ ಮದ್ರಾಸ್ ರಸ್ತೆಯಲ್ಲಿ ಮೇಲ್ಸೇತುವೆ ಮಾಡಬೇಕೆಂದು ಇಲ್ಲಿನ ನಾಗರೀಕರು ಹತ್ತಾರು ವರ್ಷಗಳ ಹೋರಾಟದಿಂದ ಎಚ್ಚೆತ್ತುಕೊಂಡ ಸ್ಥಳೀಯ ಶಾಸಕ ಬೈರತಿ ಬಸವರಾಜ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಎಂ ಗಮನಕ್ಕೆ ತಂದಿದ್ದರು. ಹೀಗಾಗಿ ಇದೇ ಫೆಬ್ರವರಿ 17ರಂದು ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿ ಅವರು ತಮ್ಮ ಕಡೆ ಬಜೆಟ್‌ನಲ್ಲಿ 350 ಕೋಟಿ ರೂ. ವೆಚ್ಚದಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಿಸುವುದಾಗಿ ಘೋಷಿಸಿದ್ದರು. ಇದೀಗ ಬಿಜೆಪಿ ಅಧಿಕಾರ ಕಳೆದುಕೊಂಡಿರುವುದರಿಂದ ಈ ಮೇಲ್ಸೇತುವೆ ಯೋಜನೆ ಅನುಷ್ಠಾನಕ್ಕೆ ಬರುವುದು ಅನುಮಾನವಾಗಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದ ನಂತರ ಹಿಂದಿನ ಬಿಜೆಪಿ ಸರ್ಕಾರದ ಎಲ್ಲಾ ಯೋಜನೆ ಹಾಗೂ ಅನುದಾನಗಳಿಗೆ ತಡೆ ನೀಡಿರುವುದರಿಂದ ಹಿಂದಿನ ಸರ್ಕಾರ ಕೈಗೊಂಡಿರುವ ಮೇಲ್ಸೇತುವೆ ಯೋಜನೆ ಮುಂದುವರೆಯುತ್ತಾ ಇಲ್ಲವೋ ಎಂಬ ಆತಂಕ ಈ ಭಾಗದ ಜನರಲ್ಲಿ ಕಾಡತೊಡಗಿದೆ. ಇಲ್ಲಿನ ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿ ಸರ್ಕಾರ ಶಾಶ್ವತ ಪರಿಹಾರ ಮಾಡುವ ನಿಟ್ಟಿನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುವ ಮೂಲಕ ಅದಷ್ಟೂ ಬೇಗ ಕಾಮಗಾರಿಯನ್ನು ಆರಂಭಿಸಬೇಕು ಎಂಬುದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಅನುದಾನ ಸ್ಥಗಿತಗೊಳಿಸಿದೆ: ಬೈರತಿ: ಟಿನ್ ಪ್ಯಾಕ್ಟರಿಯಿಂದ ಮೇಡಹಳಿಯವರೆಗೂ ಮೇಲ್ಸೇತುವೆ ನಿರ್ಮಾಣ ಮಾಡಬೇಕೆಂಬುದು ನನ್ನ ಮಹಾದಾಸೆ. ಸಂಚಾರ ದಟ್ಟಣೆ ಕಡಿಮೆ ಮಾಡಲು ಬಹಳ ಮುಖ್ಯವಾಗಿ ಸೇತುವೆ ಅಗಬೇಕಿದೆ. ಹೀಗಾಗಿ ನಮ್ಮ ಸರ್ಕಾರದ ಅವಧಿಯಲ್ಲಿ ಯೋಜನೆ ಕುರಿತಂತೆ ಅನುದಾನ ಒದಗಿಸಲಾಗಿತ್ತು. ಆದರೆ, ಈಗಿನ ಸರ್ಕಾರ ಯೋಜನೆಯ ಅನುದಾನವನ್ನು ಸ್ಥಗಿತ ಮಾಡಿದೆ ಎಂದು ಸ್ಥಳೀಯ ಶಾಸಕ ಬೈರತಿ ಬಸವರಾಜ ತಿಳಿಸಿದ್ದಾರೆ. ಉಪಮುಖ್ಯಮುಂತ್ರಿ ಡಿ.ಕೆ. ಶಿವಕುಮಾರ್ ಅವರು ಟಿನ್ ಫ್ಯಾಕ್ಟರಿಯ ಸಂಚಾರ ದಟ್ಟಣೆ ಸಮಸ್ಯೆಯನ್ನು ಕಣ್ಣಾರೆ ನೋಡಿದ್ದಾರೆ. ಮುಂದೆ ಏನು ಮಾಡುತ್ತಾರೋ ಎಂಬುದು ಕಾದು ನೋಡಬೇಕಾಗಿದೆ. ಮೇಲ್ಸೇತುವೆ ನಿರ್ಮಾಣ ಮಾಡದಿದ್ದರೆ ಮತ್ತೆ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಮನವಿ ಮಾಡಲಾಗುವುದು ಎಂದರು.
ಹಳೇ ಮದ್ರಾಸ್ ರಸ್ತೆಯಲ್ಲಿರುವ ಕೆ. ಆರ್.ಪುರ ಎಕ್ಸ್‌ಟೆಂನÒನ್, ಬಿಬಿಎಂಪಿ ಕಚೇರಿ ಮುಂದೆ, ಟಿಸಿಪಾಳ್ಯ ಭಟ್ಟರಹಳ್ಳಿ ಜಂಕ್ಸನ್‌ಗಳು ಮೃತ್ಯಕೂಪವಾಗಿ ಮಾರ್ಪಟ್ಟಿದ್ದು, ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸುವುದರಿಂದ ಜನರು ಜೀವ ಭಯದಲ್ಲೇ ಓಡಾಡಬೇಕಿದೆ. ●ಸಂತೋಷ್, ವಾಹನ ಸವಾರ
ಈ ರಸ್ತೆಯಲ್ಲಿ ಲಕ್ಷಾಂತರ ವಾಹನ ಗಳು ಸಂಚರಿಸುತ್ತವೆ. ಇಲ್ಲಿನ ರಸ್ತೆ ಸಾಕಷ್ಟು ಕಿರಿದಾಗಿದೆ. ಟಿನ್ ಫ್ಯಾಕ್ಟರಿ ಯಿಂದ ಮೇಡಹಳ್ಳಿ ಮೇಲ್ಸೇತುವೆ ನಿರ್ಮಿಸಿದರೆ ಸಮಸ್ಯೆ ನೀಗಲಿದೆ. ●ಎಲ್‌ಐಸಿ ವೆಂಕಟೇಶ್, ಕೆ.ಆರ್.ಪುರದ ನಿವಾಸಿ
ಈ ಭಾಗದಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿದೆ. ಆದಷ್ಟು ಬೇಗ ಮೇಲ್ಸೇತುವೆ ಯೋಜನೆ ಕೈಗೆತ್ತಿಕೊಂಡು ನಾವು ನಿತ್ಯ ಎದುರಿಸುತ್ತಿರುವ ಸಂಚಾರ ದಟ್ಟಣೆಯಿಂದ ಮುಕ್ತಿ ಕೊಡಬೇಕಿದೆ.-ಕೆ.ಪಿ.ಕೃಷ್ಣ, ಕೆ.ಆರ್.ಪುರ ನಿವಾಸಿ
-ಗಿರೀಶ್.ಕೆ.ಆರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.