ಮತದಾನ ಒಂದು ದಿನ; ಪರಿಣಾಮ ಐದು ವರ್ಷ
Team Udayavani, Apr 4, 2019, 3:00 AM IST
ಬೆಂಗಳೂರು: ಕ್ರಿಕೆಟ್ ಮ್ಯಾಚ್‌ನಲ್ಲಿ ಒಂದು ರನ್ ಹೇಗೆ ಮ್ಯಾಚ್ ಬದಲಾಯಿಸಬಲ್ಲದೋ ಅದೇ ರೀತಿ, ಒಂದು ಮತ ಕೂಡ ಫಲಿತಾಂಶವನ್ನೇ ಬದಲಿಸಬಲ್ಲದು. ಹೀಗಾಗಿ, ಪ್ರತಿ ಮತವೂ ಅಮೂಲ್ಯ ಮತ್ತು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದರು.
ಬಸವನಗುಡಿಯ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಬಿಎಂಪಿ, ರೋಟರಿ ಕ್ಲಬ್, ಬಿಎಂಎಸ್‌ಇ ಮತ್ತು ಕಾಲೇಜಿನ ಸಹಯೋಗದಲ್ಲಿ ಸ್ಥಾಪಿಸಲಾಗಿರುವ “ಚುನಾವಣಾ ಸಾಕ್ಷರತಾ ಕ್ಲಬ್’ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ದೇಶದಲ್ಲಿ ಸುಶಿಕ್ಷಿತರೆನಿಸಿಕೊಂಡವರೇ ಮತದಾನ ಮಾಡದಿರುವುದು ಬೇಸರದ ಸಂಗತಿ. ಉನ್ನತ ವಿದ್ಯಾಭ್ಯಾಸ ಮಾಡಿದವರು ಅನಕ್ಷರಸ್ಥರನ್ನು ಮತಗಟ್ಟೆಗೆ ಕೆರೆದುಕೊಂಡು ಬರಬೇಕು. ಆದರೆ, ಹೆಚ್ಚು ಓದಿದ ಪ್ರಜ್ಞಾವಂತರು ಹೆಚ್ಚಾಗಿರುವ ಪ್ರದೇಶಗಳಲ್ಲೇ ಮತದಾನ ಪ್ರಮಾಣ ಕಡಿಮೆಯಿದೆ.
ಪ್ರತಿ ಕ್ಷೇತ್ರದ ಅಭ್ಯರ್ಥಿಯ ನಾಮಪತ್ರ ಸಲ್ಲಿಸುವಾಗ ನೀಡುವ ಅಫಿಡವಿಟ್ ಚುನಾವಣಾ ಆಯೋಗದ ವೆಬ್‌ಸೈಟ್ www.ceokarnataka.com ನಲ್ಲಿ ಲಭ್ಯವಿದ್ದು, ಮತದಾರರು ತಮ್ಮ ಕ್ಷೇತ್ರದ ಅಭ್ಯರ್ಥಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ತಿಳಿಯಬಹುದು. ಇದರ ಆಧಾರದ ಮೇಲೆ ಅರ್ಹರಿಗೆ ಮತದಾನ ಮಾಡಬಹುದು’ ಎಂದು ಹೇಳಿದರು.
“ಬೆಂಗಳೂರಿನಲ್ಲಿ ಅರ್ಧದಷ್ಟು ಜನ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿಲ್ಲ. ಮತದಾನ ಪ್ರಕ್ರಿಯೆ ಒಂದು ದಿನದ ಕೆಲಸ. ಆದರೆ, ಅದರ ಪರಿಣಾಮ ಐದು ವರ್ಷಗಳ ವರೆಗೆ ಇರಲಿದೆ ಎನ್ನುವುದು ನೆನಪಿನಲ್ಲಿ ಇಟ್ಟುಕೊಂಡು ಮತದಾನ’ ಮಾಡಿ ಎಂದು ಹೇಳಿದರು.
ಬಿಬಿಎಂಪಿ ಆಯುಕ್ತ ಮತ್ತು ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್, ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಬಿ.ವಿ. ರವಿಶಂಕರ್ ಮತ್ತು ಚುನಾವಣಾ ಸಾಕ್ಷರತಾ ಕ್ಲಬ್‌ನ ವಿದ್ಯಾರ್ಥಿ ರಾಯಭಾರಿ ಸಿಂಚನಾ ಮತ್ತಿತರರು ಉಪಸ್ಥಿತರಿದ್ದರು.
ನಾಟಕ ಪ್ರದರ್ಶನ: ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರವೃತ್ತಿ ನಾಟಕ ತಂಡದ ವಿದ್ಯಾರ್ಥಿಗಳು ಮತದಾನದ ಮಹತ್ವದ ಬಗ್ಗೆ ನಾಟಕದ ಮೂಲಕ ಜಾಗೃತಿ ಮೂಡಿಸಿದರು.
ಚುನಾವಣಾ ಜಾಗೃತಿಗೆ ಕ್ಲಬ್: ಕಾಲೇಜಿನಲ್ಲಿ ಚುನಾವಣಾ ಜಗೃತಿ ಮೂಡಿಸುವ ಉದ್ದೇಶದಿಂದ ಚುನಾವಣಾ ಸಾಕ್ಷರತಾ ಕ್ಲಬ್ ಸ್ಥಾಪಿಸಲಾಗಿದೆ. ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಮತ್ತು ಇಬ್ಬರು ಪ್ರಾಧ್ಯಾಪಕರು ಕ್ಲಬ್ ರಾಯಭಾರಿಗಳಾಗಿದ್ದು, ಕ್ಲಬ್‌ನ ಮೂಲಕ ಮತದಾನ ಜಾಗೃತಿ ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.