ಕಾಂಗ್ರೆಸ್, ಬಿಜೆಪಿಗೆ ತಲಾ ಒಂದು ಸ್ಥಾನ
Team Udayavani, Jun 1, 2019, 3:08 AM IST
ಬೆಂಗಳೂರು: ಬಿಬಿಎಂಪಿಯ ಎರಡು ವಾರ್ಡ್‌ಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಾಗೂ ಬಿಜೆಪಿಗೆ ತಲಾ ಒಂದು ವಾರ್ಡ್‌ನಲ್ಲಿ ಗೆಲುವು ಸಿಕ್ಕಿದ್ದು, ಕಾವೇರಿಪುರದಲ್ಲಿ ಸೋತ ಜೆಡಿಎಸ್ ತೀವ್ರ ಮುಖಭಂಗ ಅನುಭವಿಸಿದೆ.
ಪಾಲಿಕೆ ಸದಸ್ಯರ ಅಕಾಲಿಕ ಮರಣದಿಂದ ತೆರವಾಗಿದ್ದ ಕಾವೇರಿಪುರ ಹಾಗೂ ಸಗಾಯಪುರ ವಾರ್ಡ್‌ಗಳ ಸದಸ್ಯ ಸ್ಥಾನಕ್ಕೆ ಮೇ 29ರಂದು ನಡೆದ ಉಪಚುನಾವಣೆ ಫಲಿತಾಂಶ ಶುಕ್ರವಾರ ಹೊರಬಿದ್ದಿದ್ದು, ಕಾವೇರಿಪುರ ವಾರ್ಡ್ ಬಿಜೆಪಿ ಪಾಲಾಗಿದೆ. ಸಗಾಯಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ.
ಕಾವೇರಿಪುರ ವಾರ್ಡ್‌ನಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದರಿಂದ ಅಂತಿಮ ಸುತ್ತಿನವರೆಗೆ ಯಾರು ಗೆಲ್ಲುತ್ತಾರೆ ಎಂದು ಹೇಳಲಾಗಲಿಲ್ಲ. ಮೊದಲ ಮೂರು ಸುತ್ತುಗಳಲ್ಲಿ ಬಿಜೆಪಿಯ ಪಲ್ಲವಿ ಮುನ್ನಡೆ ಕಾಯ್ದುಕೊಂಡರೆ, ನಾಲ್ಕನೇ ಸುತ್ತಿನಲ್ಲಿ ಜೆಡಿಎಸ್‌ನ ಸುಶೀಲಾ ಮುನ್ನಡೆ ಕಾಯ್ದುಕೊಂಡರು.
ಬಳಿಕ ಎಲ್ಲ ಸುತ್ತುಗಳಲ್ಲಿ ಪಲ್ಲವಿ ಅವರು ಮುನ್ನಡೆ ಕಾಯ್ದುಕೊಂಡರೂ ಅಂತರ ಮಾತ್ರ ಕಡಿಮೆಯಿತ್ತು. ಅಂತಿಮವಾಗಿ 9ನೇ ಸುತ್ತಿನ ಮತ ಏಣಿಕೆ ಪೂರ್ಣಗೊಂಡಾಗ ಪಲ್ಲವಿ ಅವರು ಕೇವಲ 78 ಮತಗಳಿಂದ ಸುಶೀಲಾ ಅವರನ್ನು ಪರಾಭವಗೊಳಿಸಿದರು.
ಇನ್ನು ಸಗಾಯಪುರ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಪಳನಿಅಮ್ಮಾಳ್ ಪಕ್ಷೇತರ ಅಭ್ಯರ್ಥಿ ಮಾರಿಮುತ್ತು ವಿರುದ್ಧ 3,039 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆದರೆ, ಬಿಜೆಪಿಯಿಂದ ಕಣಕ್ಕಿಳಿದು ಭಾರಿ ನಿರೀಕ್ಷೆ ಹುಟ್ಟಿಸಿದ್ದ ಪೌರಕಾರ್ಮಿಕ ಮುಖಂಡ ಎ.ಜೇಯರಿಮ್ ಕೇವಲ 639 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡರು.
ಉಪಚುನಾವಣೆಗೂ ಮೊದಲು ಪಾಲಿಕೆಯಲ್ಲಿ ಪಕ್ಷೇತರ ಅಭ್ಯರ್ಥಿ ಮಮತಾ ಸರವಣ ಬೆಂಬಲದೊಂದಿಗೆ ಬಿಜೆಪಿ 101 ಸದಸ್ಯರ ಬಲ ಹೊಂದಿತ್ತು. ಇದೀಗ ಕಾವೇರಿಪುರದಲ್ಲಿ ಗೆಲುವು ಸಾಧಿಸುವ ಮೂಲಕ ಸಂಖ್ಯಾಬಲವನ್ನು 102ಕ್ಕೆ ಹೆಚ್ಚಿಸಿಕೊಂಡಿದೆ. ಸಗಾಯಪುರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೂ, ಕಾವೇರಿಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಸೋತ ಪರಿಣಾಮ ದೋಸ್ತಿ ಪಕ್ಷಗಳ ಸಂಖ್ಯಬಲ ಕುಸಿದಿದೆ.
ಕೊನೆಯ ಅವಧಿಗೆ ಬಿಜೆಪಿ ಮೇಯರ್?: ಕಳೆದ ನಾಲ್ಕು ವರ್ಷಗಳಿಂದ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಾಲಿಕೆಯ ಆಡಳಿತ ಚುಕ್ಕಾಣಿ ಹಿಡಿಯುತ್ತಾ ಬಂದಿದ್ದು, ಕೊನೆಯ ಅವಧಿಯ ಮೇಯರ್ ಸ್ಥಾನ ಬಿಜೆಪಿ ಪಾಲಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಉಪಚುನಾವಣೆಯಲ್ಲಿ ಬಿಜೆಪಿ ಒಂದು ಸ್ಥಾನ ಹೆಚ್ಚಿಸಿಕೊಂಡು, ಮೈತ್ರಿ ಒಂದು ಸ್ಥಾನ ಕಳೆದುಕೊಂಡಿದೆ. ಇದರೊಂದಿಗೆ ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ ಹಾಗೂ ವೀರಪ್ಪ ಮೊಯ್ಲಿ ಲೋಕಸಭಾ ಚುನಾವಣೆಯಲ್ಲಿ ಸೋತ್ತಿದ್ದಾರೆ. ಪರಿಣಾಮ ಮೈತ್ರಿ ಸಂಖ್ಯಾಬಲ ಕಡಿಮೆಯಾಗಿದೆ.
ಜೆಡಿಎಸ್ ಪಾಲಿಕೆ ಸದಸ್ಯರಾದ ಮಂಜುಳಾ ನಾರಾಯಣಸ್ವಾಮಿ ಹಾಗೂ ದೇವದಾಸ್ ಕಳೆದ ಬಾರಿ ಬಹಿರಂಗವಾಗಿಯೇ ಬಿಜೆಪಿಗೆ ಬೆಂಬಲ ಸೂಚಿಸಿದ್ದರು. ಮುಂದಿನ ಮೇಯರ್ ಚುನಾವಣೆಯಲ್ಲೂ ಅವರು ಬಿಜೆಪಿ ಬೆಂಬಲಿಸುವ ಸಾಧ್ಯತೆಯಿದ್ದು, ಬಿಜೆಪಿ ಸಂಖ್ಯಾಬಲ ಹೆಚ್ಚಲಿದೆ. ಪರಿಣಾಮ ಕೊನೆಯ ಅವಧಿಯಲ್ಲಿ ಮೇಯರ್ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಯುವ ಸಾಧ್ಯತೆಗಳಿವೆ.
ಅಭ್ಯರ್ಥಿಗಳು ಪಡೆದ ಮತಗಳ ವಿವರ
ಕಾವೇರಿಪುರ ವಾರ್ಡ್
ಅಭ್ಯರ್ಥಿ ಪಕ್ಷ ಪಡೆದ ಮತಗಳು
ಪಲ್ಲವಿ ಚನ್ನಪ್ಪ ಬಿಜೆಪಿ 9,507
ಎನ್.ಸುಶೀಲಾ ಸುರೇಶ್ ಜೆಡಿಎಸ್ 9,429
ಕನಲಮ್ಮ ಪಕ್ಷೇತರ 275
ಡಿ.ತೇಜಸ್ವಿನಿ ಪಕ್ಷೇತರ 110
ನೋಟಾ – 149
ಒಟ್ಟು ಮತಗಳು – 19,470
ಗೆಲುವಿನ ಅಂತರ: 78 ಮತಗಳು
ಸಗಾಯಪುರ ವಾರ್ಡ್
ಅಭ್ಯರ್ಥಿ ಪಕ್ಷ ಪಡೆದ ಮತಗಳು
ವಿ.ಪಳನಿಅಮ್ಮಾಳ್ ಕಾಂಗ್ರೆಸ್ 7,182
ಮಾರಿಮುತ್ತು ಪಕ್ಷೇತರ 4,143
ಮುಜಮ್ಮಿಲ್ ಪಾಷ ಎಸ್‌ಡಿಪಿಐ 1,683
ಎ.ಜೇಯಿರಿಮ್ ಬಿಜೆಪಿ 639
ನೋಟಾ – 53
ಒಟ್ಟು ಮತಗಳು – 14,310
ಗೆಲುವಿನ ಅಂತರ: 3,039
ಬಿಬಿಎಂಪಿಯಲ್ಲಿ ಪಕ್ಷಗಳ ಸಂಖ್ಯಾಬಲ
ಬಿಜೆಪಿ: 102
ಕಾಂಗ್ರೆಸ್: 76
ಜೆಡಿಎಸ್: 14
ಪಕ್ಷೇತರರು: 6
ಶಾಸಕ ವಿ.ಸೋಮಣ್ಣ ಅವರ ಬೆಂಬಲ ಹಾಗೂ ವಾರ್ಡ್ ಮತದಾರರ ಆಶೀರ್ವಾದದಿಂದ ಗೆದ್ದಿದ್ದೇನೆ. ಗೆಲುವಿಗಾಗಿ ದುಡಿದ ಗೋವಿಂದರಾಜನಗರ ಕ್ಷೇತ್ರದ ಬಿಜೆಪಿ ಪಾಲಿಕೆ ಸದಸ್ಯರಿಗೆ ಧನ್ಯವಾದಗಳು. ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ವಾರ್ಡ್ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ.
-ಪಲ್ಲವಿ ಚನ್ನಪ್ಪ, ಕಾವೇರಿಪುರ ವಾರ್ಡ್ ನೂತನ ಸದಸ್ಯೆ
ಗೆಲುವಿಗೆ ಸಹಕಾರ ನೀಡಿದ ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರಿಗೆ ಧನ್ಯವಾದಗಳು. ನನ್ನ ತಮ್ಮ ಏಳುಮಲೈ ಆರಂಭಿಸಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಶ್ರಮಿಸುತ್ತೇನೆ. ವಾರ್ಡ್‌ನಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಿಸುವುದು ನನ್ನ ಮೊದಲ ಆದ್ಯತೆ.
-ವಿ.ಪಳನಿಅಮ್ಮಾಳ್, ಸಗಾಯಪುರ ವಾರ್ಡ್ ನೂತನ ಸದಸ್ಯೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.