ವಸತಿ ಯೋಜನೆ ಅರ್ಜಿ ಸಲ್ಲಿಕೆಗೆ ಆನ್‌ಲೈನ್ ಸ್ಪರ್ಶ
Team Udayavani, Dec 6, 2017, 12:38 PM IST
ಬೆಂಗಳೂರು: ಯಾವುದೇ ಜಂಜಾಟವಿಲ್ಲದೆ, ಸರ್ಕಾರಿ ಮನೆ ಪಡೆಯಲು ಕುಳಿತಲ್ಲೇ ಅರ್ಜಿ ಸಲ್ಲಿಸುವಂತಾದರೆ ಹೇಗೆ ಎಂದುಕೊಳ್ಳುವವರಿಗೆ ಸಿಹಿಸುದ್ದಿ. “ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆಗೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಯಮ್ಮ ಚಾಲನೆ ನೀಡಿದ್ದಾರೆ.
ಇದರಲ್ಲಿ ಫಲಾನುಭವಿಗಳು ದಾಖಲೆ ನೀಡಿದರೆ ಸಾಕು. ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮವೇ ಸ್ವತಃ ಆಯಾ ಇಲಾಖೆಗಳಿಂದ ದಾಖಲೆಗಳನ್ನು ತರಿಸಿಕೊಳ್ಳುತ್ತದೆ. ಅದನ್ನು ಪರಿಶೀಲಿಸಿ, ನಂತರ ಫಲಾನುಭವಿಯ ಆಯ್ಕೆ ಮಾಡುತ್ತದೆ. ಬೆಂಗಳೂರು ಒನ್, ಬಿಬಿಎಂಪಿಯ ಎಲ್ಲ ವಾರ್ಡ್ ಕಚೇರಿಗಳಲ್ಲೂ ಅರ್ಜಿ ಸಲ್ಲಿಸಬಹುದು. ಈ ಯೋಜನೆ ಬೆಂಗಳೂರಿಗರಿಗೆ ಮಾತ್ರ ಸೀಮಿತ. ಬಿಡಿಎ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕನಿಷ್ಠ ಐದು ವರ್ಷಗಳಿಂದ ವಾಸಿಸುತ್ತಿರುವ, ವಾರ್ಷಿಕ ಗರಿಷ್ಠ 87,600ಕ್ಕಿಂತ ಕಡಿಮೆ ತಲಾದಾಯ ಇರುವ ವಸತಿರಹಿತ ಕುಟುಂಬಗಳು ಯೋಜನೆಗೆ ಅರ್ಹರು.
ಅರ್ಜಿ ಶುಲ್ಕ 100 ರೂ.ಗೆ ಇಳಿಕೆ: ಗೃಹ ಕಚೇರಿ “ಕೃಷ್ಣಾ’ದಲ್ಲಿ ಮಾತನಾಡಿದ ಅವರು, “ಇದೊಂದು ವಿಶಿಷ್ಟ ಯೋಜನೆಯಾಗಿದೆ. ಒತ್ತುವರಿಯಿಂದ ತೆರವುಗೊಳಿಸಿದ ಸರ್ಕಾರಿ ಭೂಮಿಯನ್ನು ಇದಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಸದ್ಯ 431 ಎಕರೆ ನಗರದ ವಿವಿಧೆಡೆ ಭೂಮಿಯನ್ನು ಈ ಯೋಜನೆಗೆ ನೀಡಲಾಗಿದೆ. ಆನ್‌ಲೈನ್‌ಲ್ಲೇ ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ 250 ರೂ. ಇದ್ದು, ಇದನ್ನು 100 ರೂ.ಗೆ ಇಳಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಯೋಜನೆ ಅಡಿ ಪರಿಶಿಷ್ಟ ಜಾತಿಗೆ ಮೀಸಲಾತಿಯಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ 3.50 ಲಕ್ಷ ರೂ. ಹಾಗೂ ಸಾಮಾನ್ಯರಿಗೆ 2.70 ಲಕ್ಷ ರೂ. ಸಹಾಯಧನ ನೀಡಲಾಗುವುದು. ಅರ್ಹ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು ಎಂದರು. 30 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಿಸಲಾಗುವ ಈ ಬಹುಮಹಡಿ ಮನೆಗಳು ಒಂದು ಕೊಠಡಿ, ಹಾಲ್, ಅಡುಗೆ ಕೋಣೆ, ಶೌಚಾಲಯ ಮತ್ತು ಸ್ನಾನದ ಮನೆ ಒಳಗೊಂಡಿರುತ್ತವೆ.
ಮಾಹಿತಿಗೆ ವೆಬ್‌ಸೈಟ್: http://www.ashraya.kar.nic.in/cmonelakh ಅಥವಾ ದೂ: 080- 23118888 ಸಂಪರ್ಕಿಸಬಹುದು ಎಂದರು. ಸಚಿವರಾದ ಎ. ಕೃಷ್ಣಪ್ಪ, ಕೆ.ಜೆ. ಜಾರ್ಜ್, ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭ ಇತರರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.