ಮುಷ್ಕರ ನಡುವೆಯೂ ಒಪಿಡಿ ಸೇವೆ
Team Udayavani, Nov 18, 2017, 11:27 AM IST
ಬೆಂಗಳೂರು: ತಿದ್ದುಪಡಿ ವಿಧೇಯಕ ಅನುಷ್ಠಾನ ವಿರೋಧಿಸಿ ಖಾಸಗಿ ಆಸ್ಪತ್ರೆ ವೈದ್ಯರು ನಡೆಸಿದ ಪ್ರತಿಭಟನೆಯ ಮಧ್ಯೆಯೂ ಶುಕ್ರವಾರ ನಗರದ ಖಾಸಗಿ ಆಸ್ಪತ್ರೆಗಳು ಹೊರರೋಗಿಗಳ ವಿಭಾಗದ ಸೇವೆ ಒದಗಿಸಿದವು. ಆದರೆ ಬಹುತೇಕ ಕಡೆ ವೈದ್ಯರ ಕೊರತೆ ತಲೆದೋರಿತು.
ಕಿಮ್ಸ್ ಸೇರಿದಂತೆ ಹಲವು ಖಾಸಗಿ ಆಸ್ಪತ್ರೆಯಲ್ಲಿ ಮಧ್ಯಾಹ್ನದ ನಂತರ ಒಪಿಡಿ ಸೇವೆಯನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿತ್ತು. ಇನ್ನೊಂದೆಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ರಜೆ ಪಡೆಯದೆ ಹೆಚ್ಚುವರಿ ಸೇವೆ ನೀಡಿದರು. ಕಳೆದ ನಾಲ್ಕೈದು ದಿನದಲ್ಲಿ ನಗರದ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಶೇ.10ರಿಂದ 15 ರಷ್ಟು ಏರಿಕೆಯಾಗಿದೆ.
ಹೈಕೋರ್ಟ್ ನಿರ್ದೇಶನಕ್ಕೆ ಮಣಿದ ಖಾಸಗಿ ಆಸ್ಪತ್ರೆಗಳು ಒಪಿಡಿ ಸೇವೆ ಆರಂಭಿಸಿದ್ದವಾದರೂ, ತಿದ್ದುಪಡಿ ವಿಧೇಯಕ ಜಾರಿ ಸಂಬಂಧ ಸರ್ಕಾರ ಮತ್ತು ವೈದ್ಯರ ನಡುವಿನ ಕಚ್ಚಾಟ ನಿಲ್ಲದೇ ಇದ್ದುದ್ದರಿಂದ ಶುಕ್ರವಾರ ಸಂಜೆಯ ತನಕವೂ ಖಾಸಗಿ ಆಸ್ಪತ್ರೆಯ ಸೇವೆಯಲ್ಲಿ ಗೊಂದಲ ಮುಂದುವರೆದಿತ್ತು. ವೈದ್ಯರು ಹಾಗೂ ಸಿಬ್ಬಂದಿ ತಮ್ಮ ಸೇವೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿಲ್ಲ ಎಂಬುದು ರೋಗಿಗಳ ಕುಟುಂಬದವರ ಆಕ್ಷೇಪವಾಗಿತ್ತು.
ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಧ್ಯಾಹ್ನದ ಊಟದ ಸಮಯದಲ್ಲೂ ಒಪಿಡಿ ಸೇವೆ ನೀಡಿ, ಸಂಜೆ 4 ಗಂಟೆವರೆಗಿನ ಸೇವೆ 5 ಗಂಟೆವರೆಗೂ ವಿಸ್ತರಿಸಿದ್ದರು. 1137 ಹೊರ ರೋಗಿಗಳು ಹಾಗೂ 89 ಒಳ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಬೌರಿಂಗ್ ಮತ್ತು ಲೇಡಿ ಖರ್ಜನ್‌ನಲ್ಲಿ 992 ಹಾಗೂ ಗೋಷಾ ಆಸ್ಪತ್ರೆಯಲ್ಲಿ 220 ಸೇರಿ 1,212 ಮಂದಿ ಹೊರ ರೋಗಿಗಳು ಹಾಗೂ 59 ಮಂದಿ ಒಳರೋಗಿಗಳು, ವಾಣಿವಿಲಾಸದಲ್ಲಿ ಎರಡು ದಿನಗಳಲ್ಲಿ 500ಕ್ಕೂ ಹೆಚ್ಚು ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ.
ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕೆ ಆಗ್ರಹ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ(ಕೆಪಿಎಂಇ)ಅನುಷ್ಠಾನಕ್ಕೆ ಒತ್ತಾಯಿಸಿ ಕರ್ನಾಟಕ ಜನಶಕ್ತಿ, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಸೇರಿ 20ಕ್ಕೂ ಅಧಿಕ ಸಂಘಟನೆಯ ಕಾರ್ಯಕರ್ತರು ಪುರಭವನದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ವೈದ್ಯರ ಪ್ರತಿಭಟನೆ ಅರ್ಥಹೀನವಾಗಿದ್ದು, ಸರ್ಕಾರ ಕಾಯ್ದೆಯ ತಿದ್ದುಪಡಿಗೆ ಚಿಂತನೆ ನಡೆಸಿದೆಯೇ ವಿನಃ ಅನುಷ್ಠಾನ ಮಾಡಿಲ್ಲ. ರೋಗಿಯ ಸೇವೆಯ ವೈದ್ಯನ ಪರಮೋತ್ಛ ಧ್ಯೇಯವಾಗಬೇಕು. ಆದರೆ, ಕರ್ನಾಟಕದ ವೈದ್ಯರು ರೋಗಿಯ ವಿರೋಧಿಯಂತೆ ವರ್ತಿಸುತ್ತಿದ್ದಾರೆ. ವೈದ್ಯ ವೃತ್ತಿ ವ್ಯಾಪಾರೀಕರಣವಾಗಿದೆ. ಡಾಕ್ಟರ್‌ಗಳು ಸೇವೆಗೆ ಬರುತ್ತಿಲ್ಲ, ಬಿಸಿನೆಸ್‌ಗಾಗಿ ಈ ಕ್ಷೇತ್ರಕ್ಕೆ ಬರುತ್ತಿದ್ದಾರೆ ಎಂದು ಡಾ.ಸೆಲ್ವಿಯಾ ಆಕ್ರೋಶ ವ್ಯಕ್ತಪಡಿಸಿದರು.
ಆರೋಗ್ಯ ಮತ್ತು ರಕ್ಷಣೆ ಸೇವೆಯಾಗಬೇಕೇ ಹೊರತು ಹಣ ವಸೂಲಿಯ ದಂಧೆಯಾಗಬಾರದು. ಪ್ರತಿ ಚಿಕಿತ್ಸೆಗೂ ದರ ನಿಗದಿ ಮಾಡಿ, ಆಸ್ಪತ್ರೆಯ ಸೂಚನಾ ಫಲಕದಲ್ಲಿ ಅಳವಡಿಸಬೇಕು. ಆದರೆ ಆರೋಗ್ಯ ಸೇವೆಗೆ ದರ ನಿಗಧಿಪಡಿಸುವುದನ್ನೇ ವೈದ್ಯರ ವಿರೋಧಿಸುತ್ತಿದ್ದಾರೆ. ಸರ್ಕಾರ ಮಂಡಿಸಲು ಮುಂದಾಗಿರುವ ವಿಧೇಯಕ ಕ್ರಾಂತಿಕಾರಿ ಮಸೂದೆಯಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಜನಪ್ರತಿನಿಧಿಗಳ ಮಕ್ಕಳು, ಅವರ ಸಂಬಂಧಿಕರೇ ಬಹಪಾಲು ವೈದ್ಯಕೀಯ ಕ್ಷೇತ್ರವನ್ನು ಅತಿಕ್ರಮಿಸಿಕೊಂಡಿದ್ದಾರೆ. ಹಲವು ಪ್ರತಿಷ್ಠಿತ ಆಸ್ಪತ್ರೆಗಳು ಇವರ ಸುಪರ್ದಿಯಲ್ಲಿವೆ. ಆದ್ದರಿಂದ ವಿಧೇಯಕ ಮಂಡನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಜನಪ್ರತಿನಿಧಿಗಳ ವಿರುದ್ಧ ಗುಡುಗಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪರ ಕಾಳಜಿಯಿಂದ ವಿಧೇಯಕ ಜಾರಿಗೆ ಮುಂದಾಗಿದ್ದಾರೆ. ವೈದ್ಯರ ಲಾಬಿಗೆ ಮಣಿಯಬಾರದು, ತಿದ್ದುಪಡಿ ವಿಧೇಯಕವನ್ನು ಯಥಾವತ್ತು ಜಾರಿಗೆ ತರಬೇಕು. ಆರೋಗ್ಯ ವ್ಯವಸ್ಥೆಯನ್ನು ಬಲಗೊಳಿಸುವ ಸಲುವಾಗಿ ನ್ಯಾಯಬದ್ಧ ಹೋರಾಟ ಮುಂದುವರಿಸಲಾಗುವುದು ಎಂದು ಪ್ರತಿಭಟನಾಕಾರರು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.