ಕಂಟೋನ್ಮೆಂಟ್ ಮೆಟ್ರೋ ಸ್ಥಳಾಂತರಕ್ಕೆ ವಿರೋಧ
Team Udayavani, Sep 26, 2017, 11:29 AM IST
ಬೆಂಗಳೂರು: ಕಂಟೋನ್ಮೆಂಟ್ ಮೆಟ್ರೋ ನಿಲ್ದಾಣ ಸ್ಥಳಾಂತರವನ್ನು ಬಿಎಂಆರ್‌ಸಿ ಸಮರ್ಥಿಸಿಕೊಂಡ ಬೆನ್ನಲ್ಲೇ ಇದನ್ನು ತಳ್ಳಿಹಾಕಿರುವ ಸಂಸದ ಪಿ.ಸಿ. ಮೋಹನ್, ಪ್ರಯಾಣಿಕರ ಹಿತದೃಷ್ಟಿಯಿಂದ ಕಂಟೋನ್ಮೆಂಟ್ ಬಳಿ ನಿಲ್ದಾಣ ನಿರ್ಮಿಸುವುದೇ ಸೂಕ್ತ ಹಾಗೂ ಮೂಲ ವಿನ್ಯಾಸವನ್ನೇ ಅನುಸರಿಸಲು ಸೂಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಪಿ.ಸಿ. ಮೋಹನ್, ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿ ಬರುವ ಕಂಟೋನ್ಮೆಂಟ್ ಮೆಟ್ರೋ ನಿಲ್ದಾಣ ಸ್ಥಳಾಂತರಕ್ಕೆ ಬಿಎಂಆರ್‌ಸಿ ನೀಡಿರುವ ಕಾರಣಗಳು ಸತ್ವರಹಿತವಾಗಿದ್ದು, ಸಮಗ್ರ ಪರಿಶೀಲನೆ ಇಲ್ಲದೆ ಸ್ಥಳಾಂತರಕ್ಕೆ ಮುಂದಾಗಿದೆ. ಇದರಿಂದ ಕಂಟೋನ್ಮೆಂಟ್ ರೈಲು ನಿರ್ಮಾಣದ ಎಲ್ಲ ಕಸರತ್ತುಗಳು ವಿಫಲವಾಗಲಿವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ನಿಲ್ದಾಣ ಸ್ಥಳಾಂತರಕ್ಕೆ ನಿಗಮವು ನೀಡಿದ ತಾಂತ್ರಿಕ, ಸುರಕ್ಷತೆ ಮತ್ತು ಆರ್ಥಿಕ ಕಾರಣಗಳಿಗೆ ತಮ್ಮ ಪತ್ರದಲ್ಲಿ ತಿರುಗೇಟು ನೀಡಿರುವ ಸಂಸದರು, ನಿಗಮದ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಕಂಟೋನ್ಮೆಂಟ್ ಬಳಿ ಮೆಟ್ರೋ ನಿಲ್ದಾಣಕ್ಕೆ 30 ಮೀಟರ್ ಆಳದಲ್ಲಿ ಸುರಂಗ ಕೊರೆಯಬೇಕು ಎಂದು ಬಿಎಂಆರ್‌ಸಿ ತಿಳಿಸಿದೆ. ಅಲ್ಲದೆ, ಇಲ್ಲಿ ಅತಿಯಾದ ತಿರುವು ಇರುವುದರಿಂದ ಮೆಟ್ರೋ ವೇಗ 100 ಕಿ.ಮೀ.ನಿಂದ 30 ಕಿ.ಮೀ.ಗೆ ತಗ್ಗಲಿದೆ ಎಂದು ಬಿಎಂಆರ್‌ಸಿ ತಿಳಿಸಿದೆ.
ಆದರೆ, 30 ಮೀಟರ್ ಆಳದಲ್ಲಿ ಸುರಂಗ ನಿರ್ಮಾಣ ಕೊರೆಯಲು ರೈಲ್ವೆ ಆದೇಶ ಪ್ರತಿ ಇದೆಯೇ? ಇದ್ದರೆ ದಯವಿಟ್ಟು ಕೊಡಬೇಕು ಎಂದು ಕೇಳಿದ್ದಾರೆ. ಇನ್ನು ವೇಗದ ಪ್ರಶ್ನೆ ಬಂದಾಗ, ಸ್ಥಳಾಂತರಗೊಂಡ ನಿಲ್ದಾಣಕ್ಕೂ ಇದು ಅನ್ವಯಿಸುತ್ತದೆ. ರೈಲು ನಿಲ್ದಾಣಗಳ ಅಂತರ ಕೇವಲ 1 ಕಿ.ಮೀ. ಇರುವುದರಿಂದ ವೇಗದ ಪ್ರಶ್ನೆಗೆ ಉದ್ಭವಿಸುವುದೇ ಇಲ್ಲ. ಅದೇ ರೀತಿ, ನೂತನ ಮಾರ್ಗದಲ್ಲಾದರೆ ಸಾವಿರ ಕೋಟಿ ರೂ. ಉಳಿತಾಯ ಮಾಡಬಹುದು ಎನ್ನುತ್ತದೆ ಬಿಎಂಆರ್‌ಸಿ.
ಆದರೆ, 2014ರ ಫೆಬ್ರವರಿಯಲ್ಲೇ ಕೇಂದ್ರ ಸರ್ಕಾರ 2ನೇ ಹಂತದ ಯೋಜನೆಗೆ ಅನುಮೋದನೆ ನೀಡಿತ್ತು. ಮೂರು ವರ್ಷಗಳು ಟೆಂಡರ್ ಪ್ರಕ್ರಿಯೆ ವಿಳಂಬವಗಿದೆ. ಆದ್ದರಿಂದ ಮೂಲ ವಿನ್ಯಾಸಕ್ಕೇ ಬದ್ಧರಾಗಬೇಕು ಎಂದು ಮನವಿ ಮಾಡಿದ್ದಾರೆ. ಇನ್ನು ದೆಹಲಿಯಲ್ಲಿ ಸಾಕಷ್ಟು ಉದ್ದದ ಸುರಂಗ ಮಾರ್ಗವನ್ನು ಜನದಟ್ಟಣೆ ಇರುವ ಪ್ರದೇಶದ ಕೆಳಗೆಯೇ ನಿರ್ಮಿಸಲಾಗಿದೆ. ಅಷ್ಟಕ್ಕೂ 40 ಮೀ. ಆಳದಲ್ಲಿ ಸುರಂಗ ಕೊರೆಯಲು ಇಂದಿನ ತಾಂತ್ರಿಕತೆ ಸಮರ್ಥವಾಗಿದೆ.
ಲಂಡನ್ ಟ್ಯೂಬ್, ಮಾಸ್ಕೊ, ದೆಹಲಿ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಸೇರಿದಂತೆ ಜಗತ್ತಿನ ಯಾವುದೇ ಮೆಟ್ರೋ ಸುರಂಗ ಮಾರ್ಗಗಳನ್ನು 40 ಮೀ. ಆಳದಲ್ಲೇ ನಿರ್ಮಿಸಿರುವ ಉದಾಹರಣೆಗಳಿವೆ. ಹಾಗಾಗಿ, ನಿಗಮದ ವಾದ ಸಮರ್ಥನೀಯವಲ್ಲ ಎಂದು ಸಂಸದ ಪಿ.ಸಿ. ಮೋಹನ್ ಪ್ರತಿಪಾದಿಸಿದ್ದಾರೆ. ಈ ಎಲ್ಲ ಹಿನ್ನೆಲೆಗಳಲ್ಲಿ ಹಾಗೂ ಪ್ರಯಾಣಿಕರ ಬೇಡಿಕೆ ಮೇರೆಗೆ ಕಂಟೋನ್ಮೆಂಟ್ ಬಳಿಯೇ ಮೆಟ್ರೋ ನಿಲ್ದಾಣ ನಿರ್ಮಿಸಲು ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.
ನಮ್ಮನ್ನು ಮೂರ್ಖರ ಮಾಡಬೇಡಿ!: “ಬೆಂಗಳೂರಿಗರನ್ನು ಮೂರ್ಖರನ್ನಾಗಿ ಮಾಡುವುದನ್ನು ದಯವಿಟ್ಟು ನಿಲ್ಲಿಸಿ. “ನಮ್ಮ ಮೆಟ್ರೋ’ ಯೋಜನೆಯಲ್ಲಿ ಪಾರದರ್ಶಕತೆ ಪಾಲಿಸಿ…’ ಕಂಟೋನ್ಮೆಂಟ್ ನಿಲ್ದಾಣ ಸ್ಥಳಾಂತರಕ್ಕೆ ಕಾರಣ ನೀಡಿದ ಬಿಎಂಆರ್‌ಸಿ ವಿರುದ್ಧ ಇಂತಹದ್ದೊಂದು ಅಭಿಯಾನವನ್ನು ರೈಲ್ವೆ ಹೋರಾಟಗಾರರ ವೇದಿಕೆ ಕೈಗೆತ್ತಿಕೊಂಡಿದೆ. ಮೆಟ್ರೋ ಯೋಜನೆಗೆ “ನಮ್ಮ ಮೆಟ್ರೋ’ ಎಂದು ನಾಮಕರಣ ಮಾಡಲಾಗಿದೆ. ಇದರರ್ಥ ಈ ಮೆಟ್ರೋ ಯೋಜನೆ ನಮ್ಮದು. ಅ
ರ್ಥಾತ್ ಬೆಂಗಳೂರಿಗರದ್ದು. ಆದರೆ, ಬಿಎಂಆರ್‌ಸಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸದೆ, ಜನಪ್ರತಿನಿಧಿಗಳನ್ನೂ ಲೆಕ್ಕಿಸದೆ, ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಮನಬಂದಂತೆ ಮೆಟ್ರೋ ಮಾರ್ಗಗಳ ವಿನ್ಯಾಸ ಬದಲಿಸುತ್ತಿದೆ ಎಂದು ವೇದಿಕೆಯ ಸಂಜೀವ ದ್ಯಾಮಣ್ಣವರ ಮತ್ತು ರಾಜಕುಮಾರ್ ದುಗ್ಗರ್ ಆರೋಪಿಸಿದ್ದಾರೆ. ಅಲ್ಲದೆ, ಬಿಎಂಆರ್‌ಸಿ ನೀಡಿದ ಸಮಜಾಯಿಷಿಗಳನ್ನು ತಳ್ಳಿಹಾಕುವ ಮೂಲಕ ತಮ್ಮ ಅಭಿಯಾನದಲ್ಲಿ ಪ್ರತ್ಯುತ್ತರಗಳನ್ನು ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.