ವಿಕಿಪೀಡಿಯಾ ಮಾಹಿತಿ ಆಧರಿಸಿದ್ದ ಆಯುಕ್ತರ ಆದೇಶ ರದ್ದು
Team Udayavani, Sep 18, 2017, 7:15 AM IST
ಬೆಂಗಳೂರು: ವಿಕಿಪೀಡಿಯಾ ಮಾಹಿತಿ ಆಧರಿಸಿ “ರಕ್ತನಿಧಿ ಕೇಂದ್ರಗಳಲ್ಲಿ’ ಬಳಸುವ ರೆಫ್ರಿಜರೇಟರ್ ಮತ್ತಿತರ ಉಪಕರಣಗಳಿಗೆ ಶೇ.12.5 ಮೌಲ್ಯವರ್ಧಿತ ತೆರಿಗೆ ವಿಧಿಸಿದ್ದ ವಾಣಿಜ್ಯ ಇಲಾಖೆ ಆಯುಕ್ತರ ಆದೇಶವನ್ನು ರದ್ದುಗೊಳಿಸಿರುವ ಹೈಕೋರ್ಟ್, ಆಯುಕ್ತರ ಕಾರ್ಯ ವೈಖರಿಗೆ ಛೀಮಾರಿ ಹಾಕಿದೆ.
ವಾಣಿಜ್ಯ ತೆರಿಗೆ ಆಯುಕ್ತರ ಆದೇಶ ರದ್ದು ಕೋರಿ ರಕ್ತನಿಧಿ ಕೇಂದ್ರಗಳಿಗೆ ಅಗತ್ಯ ಉಪಕರಣ ಪೂರೈಸುವ ಖಾಸಗಿ ಕಂಪನಿಯೊಂದು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ಪೀಠ, ಆಯುಕ್ತರ ಆದೇಶವನ್ನು ರದ್ದುಗೊಳಿಸಿದೆ. ರಕ್ತನಿಧಿ ಕೇಂದ್ರಗಳಲ್ಲಿ ಬಳಕೆಯಾಗುವ ಉಪಕರಣಗಳಿಗೂ “ವೈದ್ಯಕೀಯ ಸಾಧನಗಳು, ಉಪಕರಣಗಳು, ಆಂತರಿಕ ಬಳಕೆ ಉಪಕರಣಗಳ ನಿಯಮಾವಳಿ 61ರಂತೆ ಶೇ.4 ತೆರಿಗೆ ವಿಧಿಸಬೇಕು ಎಂದು ಸೆ.11ರಂದು ತೀರ್ಪು ನೀಡಿದೆ.
ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರು ವಿಕಿಪೀಡಿಯಾದಲ್ಲಿನ ಮಾಹಿತಿ ಆಧರಿಸಿ ರಕ್ತನಿಧಿ ಕೇಂದ್ರಗಳ ಉಪಕರಣಗಳು ಹಾಗೂ ವೈದ್ಯಕೀಯ ಉಪಕರಣಗಳನ್ನು ಪ್ರತ್ಯೇಕಿಸಿ ನೋಡಿರುವುದರಿಂದಲೇ ಇಂತಹ ನಿಯಮಬಾಹಿರ ಆದೇಶ ಹೊರಡಿಸಲು ಸಾಧ್ಯವಾಗಿದೆ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಜತೆಗೆ ರಕ್ತ ಸಂರಕ್ಷಣೆಗೆ ರೆಫ್ರಿಜರೇಟರ್ ಹಾಗೂ ಇತರೆ ಉಪಕರಣಗಳನ್ನು ವಿಶೇಷ ವಿನ್ಯಾಸದಡಿ ರೂಪಿಸಲಾಗಿರುತ್ತದೆ ಎಂಬ ಅಂಶವನ್ನೂ ಪರಿಗಣಿಸದಿರುವುದು ಎದ್ದು ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದೆ.
ರಕ್ತ ಅತ್ಯಮೂಲ್ಯವಾಗಿದ್ದು ಅದನ್ನು ಸುರಕ್ಷಿತವಾಗಿಡುವುದು, ಅಗತ್ಯವಿದ್ದವರಿಗೆ ಸಕಾಲದಲ್ಲಿ ಒದಗಿಸುವ ಪ್ರಕ್ರಿಯೆಗಳಲ್ಲಿ ಸಾಕಷ್ಟು ಸೂಕ್ಷ್ಮತೆ ಹಾಗೂ ಮುನ್ನೆಚ್ಚರಿಕೆ ಕೈಗೊಳ್ಳಬೇಕಾಗಿರುತ್ತದೆ. ಅಲ್ಲದೆ ರಕ್ತನಿಧಿ ಕೇಂದ್ರಗಳು, ಆಸ್ಪತ್ರೆಗಳು, ಡಯಾಗ್ನಾಸ್ಟಿಕ್ ಕೇಂದ್ರಗಳು ಸಂಪರ್ಕ ಕೊಂಡಿಗಳಾಗಿ ಕಾರ್ಯನಿರ್ವಹಿಸಲಿವೆ. ಹೀಗಾಗಿ ರಕ್ತನಿಧಿ ಕೇಂದ್ರಗಳಲ್ಲಿ ಬಳಸುವ ಉಪಕರಣಗಳು ವೈದ್ಯಕೀಯ ಉಪಕರಣಗಳಾಗಿಯೇ ಪರಿಗಣಿತವಾಗಲಿವೆ ಎಂಬುದನ್ನು ಗ್ರಹಿಸದೇ ಹೊರಡಿಸಿರುವ ಆಯುಕ್ತರ ಆದೇಶ ಕಾನೂನುಬಾಹಿರ ಎಂದು ನ್ಯಾಯಪೀಠ ತಿಳಿಸಿದೆ.
ರಕ್ತನಿಧಿ ಕೇಂದ್ರಗಳಿಗೆ ಉಪಕರಣಗಳನ್ನು ಮಾತ್ರ ಪೂರೈಸುವ ಅರ್ಜಿದಾರ ಕಂಪನಿ ಇತರೆ ಉಪಕರಣಗಳ ಮಾರಾಟದಲ್ಲಿ ತೊಡಗಿಸಿಕೊಂಡಿಲ್ಲ. ಅಲ್ಲದೆ ಇದೇ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಇತರ ಕಂಪನಿಗಳಿಗೆ ಮೌಲ್ಯವರ್ಧಿತ ತೆರಿಗೆ ವಿಧಿಸದ ಆಯುಕ್ತರು ಈ ಕಂಪನಿಗೆ ಮಾತ್ರ ವಿಧಿಸಿರುವ ಕ್ರಮ ಸರಿಯಾಗಿಲ್ಲ. ಈ ಪ್ರಕರಣದಲ್ಲಿ ಆಯುಕ್ತರು ಜವಾಬ್ದಾರಿಯುತವಾಗಿ ನಡೆದುಕೊಂಡಿಲ್ಲ. ಒಂದೇ ಇಲಾಖೆ ಭಿನ್ನ ಆದೇಶ ಹೊರಡಿಸುವುದು ಕಾನೂನು ಬಾಹಿರವಾಗಿದ್ದು ಈ ಪ್ರಕರಣದಲ್ಲಿನ ಆಯುಕ್ತರ ಆದೇಶ ಕಾನೂನು ಮಾನ್ಯತೆ ಹೊಂದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಕೇಂದ್ರಗಳಲ್ಲಿ ಬಳಕೆಯಾಗುವ ರೆಫ್ರಿಜರೇಟರ್, ಪ್ಲಾಸ್ಮಾ ಎಕ್ಸಪ್ರಸರ್, ಕ್ರಯೋಬಾತ್ಸ್ ಸೇರಿದಂತೆ ಇತರೆ ಉಪಕರಣಗಳನ್ನೂ ವೈದ್ಯಕೀಯ ಉಪಕರಣಗಳ ನಿಯಮಾವಳಿಗಳಿಗೆ ಅನ್ವಯವಾಗುವಂತೆ ಶೇ.4 ಮಾತ್ರ ತೆರಿಗೆ ವಿಧಿಸಬೇಕು ಎಂದು ಕಂದಾಯ ಇಲಾಖೆ ಸೇರಿದಂತೆ ಸಕ್ಷಮ ಪ್ರಾಧಿಕಾರಗಳಿಗೆ ನ್ಯಾಯಾಲಯ ಆದೇಶಿಸಿದೆ.
ಪ್ರಕರಣ ಏನು?
ಬೆಂಗಳೂರಿನ ಬಸವನಗುಡಿಯ ಆದಿತ್ಯ ಸರ್ಜಿಕಲ್ ಕಂಪನಿಯು ರಕ್ತನಿಧಿ ಕೇಂದ್ರಗಳಿಗೆ ರೆಫ್ರಿಜರೇಟರ್, ಕ್ರಯೋಬಾತ್ ಸೇರಿದಂತೆ ಇನ್ನಿತರೆ ಉಪಕರಣಗಳು ಸರಬರಾಜು ಮಾಡಿದ್ದು, ಈ ಉಪಕರಣಗಳು ವಿಕಿಪೀಡಿಯಾದ ವೈದ್ಯಕೀಯ ಉಪಕರಣಗಳ ಪಟ್ಟಿಯಲ್ಲಿಲ್ಲ. ಹಾಗಾಗಿ ಈ ಉಪಕರಣಗಳಿಗೆ ಶೇ.12.5 ಮೌಲ್ಯವರ್ಧಿತ ತೆರಿಗೆ ಪಾವತಿಸುವಂತೆ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರು 2016ರ ಜೂನ್ 27ರಂದು ಆದೇಶ ಹೊರಡಿಸಿದ್ದರು. ಈ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಕಂಪನಿ, ವಿಕಿಪೀಡಿಯಾದ ಮಾಹಿತಿ ಆಧರಿಸಿರುವ ವಾಣಿಜ್ಯ ಇಲಾಖೆ ಆಯುಕ್ತರ ಆದೇಶ ಕಾನೂನು ಬಾಹಿರವಾಗಿದ್ದು, ಆಯುಕ್ತರ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು.
– ಮಂಜುನಾಥ ಲಘುಮೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.