ನಮ್ಮ ಮೆಟ್ರೋ ಜಾಗ ನಮ್ಮದಲ್ಲ!
Team Udayavani, Sep 23, 2018, 12:58 PM IST
ಬೆಂಗಳೂರು: “ನಮ್ಮ ಮೆಟ್ರೋ’ ರೈಲು ನಿತ್ಯ ಲಕ್ಷಾಂತರ ಜನರನ್ನು ಹೊತ್ತು ನಾಲ್ಕೂ ದಿಕ್ಕುಗಳಲ್ಲಿ ಸಂಚರಿಸುತ್ತದೆ. ಆದರೆ, ಆ ರೈಲು ಮಾರ್ಗದ ಜಾಗವು ಇನ್ನೂ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) ಸೇರಿಯೇ ಇಲ್ಲ! ಖಾಸಗಿ ವ್ಯಕ್ತಿಗಳೇ ಅದರ ಮಾಲಿಕತ್ವ ಹೊಂದಿರುವುದು ತಡವಾಗಿ ಬೆಳಕಿಗೆಬಂದಿದೆ.
ಮೆಟ್ರೋ ಮೊದಲ ಹಂತದ ಮಾರ್ಗ ನಿರ್ಮಾಣಕ್ಕಾಗಿ 800 ಆಸ್ತಿಗಳಿಂದ ಮೂರು ಲಕ್ಷ ಚದರ ಮೀ. ಜಾಗವನ್ನು ಸ್ವಾಧೀನಪಡಿಸಿಕೊಂಡಾಗಿದೆ. ಇದಕ್ಕೆ ಪ್ರತಿಯಾಗಿ ಸಂತ್ರಸ್ತರಿಗೆ ಸುಮಾರು 900 ಕೋಟಿ ರೂ. ಪರಿಹಾರವನ್ನೂ ನೀಡಲಾಗಿದೆ. ಯೋಜನೆ ಪೂರ್ಣಗೊಂಡು ವರ್ಷದ ಮೇಲಾಗಿದೆ. ಆದರೆ, ಹೀಗೆ ವಶಪಡಿಸಿಕೊಂಡ ಪೈಕಿ 200 ಆಸ್ತಿಗಳ ಮೇಲೆ ಬಿಎಂಆರ್‌ಸಿ ಇನ್ನೂ ಸಂಪೂರ್ಣ ಮಾಲಿಕತ್ವ ಹೊಂದಿಲ್ಲ. ಅವೆಲ್ಲವೂ ಸಂತ್ರಸ್ತರ ಹೆಸರಿನಲ್ಲೇ ಇವೆ!
ಇದೆಲ್ಲವೂ ಖಾತಾ ಬದಲಾವಣೆಯಲ್ಲಿನ ವಿಳಂಬ ಧೋರಣೆಯಿಂದಾದ ಯಡವಟ್ಟು. ಮೂರ್‍ನಾಲ್ಕು ವರ್ಷಗಳ ಹಿಂದೆಯೇ ವಶಪಡಿಸಿಕೊಂಡ ಭೂಮಿಯ ಖಾತಾ ಬದಲಾವಣೆ ಮಾಡಿಕೊಡುವಂತೆ ಬಿಬಿಎಂಪಿಗೆ ಸಂಬಂಧಪಟ್ಟ ಎಲ್ಲ ದಾಖಲಾತಿಗಳನ್ನೂ ನೀಡಲಾಗಿದೆ. ಆದರೆ, ಇದುವರೆಗೆ ಈ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಇದಕ್ಕಾಗಿ ಪಾಲಿಕೆ ಕಚೇರಿಗೆ ನಿತ್ಯ ಬಿಎಂಆರ್‌ಸಿ ಸಿಬ್ಬಂದಿ ಅಲೆದಾಡುತ್ತಿದ್ದಾರೆ ಎಂದು ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ಎಲ್ಲ 800 ಆಸ್ತಿಗಳ ಭೂಸ್ವಾಧೀನಕ್ಕಾಗಿ ಸರ್ಕಾರ ಹೊರಡಿಸಿದ್ದ ಅಂತಿಮ ಅಧಿಸೂಚನೆ, ಆಸ್ತಿಯ ಯಾವ ಭಾಗ ವಶಪಡಿಸಿಕೊಂಡಿದೆ ಎಂಬುದರ ದಾಖಲೆ, ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ)ಯಿಂದ ಪಡೆದ ಹಸ್ತಾಂತರ ಪತ್ರ, ಪರಿಹಾರ ನೀಡಿದ ಬಗ್ಗೆ ದಾಖಲೆ ಜತೆಗೆ ಶುಲ್ಕವನ್ನು ಪಾಲಿಕೆಗೆ ಈ ಹಿಂದೆಯೇ ಪಾವತಿಸಲಾಗಿದೆ.
ಇದುವರೆ 600 ಆಸ್ತಿಗಳು ಬಿಎಂಆರ್‌ಸಿ ಹೆಸರಿಗೆ ಬದಲಾವಣೆಗೊಂಡಿವೆ. ಉಳಿದ 200 ಆಸ್ತಿಗಳ ಖಾತಾ ಬದಲಾವಣೆ ಆಗಬೇಕಾಗಿದೆ. ಈ ಬಾಕಿ ಇರುವ ಆಸ್ತಿಗಳು ನಗರದ ಪೂರ್ವ, ದಕ್ಷಿಣ, ಉತ್ತರ ಮತ್ತು ದಾಸರಹಳ್ಳಿ ವಲಯದಲ್ಲಿ ಬರುತ್ತವೆ ಎಂದು ನಿಗಮದ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಏನಾಗುತ್ತದೆ?: ಯಾವೊಂದು ಜಾಗದ ಮೇಲೆ ಸಂಪೂರ್ಣ ಹಕ್ಕು ಹೊಂದಿರದಿದ್ದಾಗ, ಆ ಜಾಗವನ್ನು ನಿರಾತಂಕವಾಗಿ ಅಭಿವೃದ್ಧಿಪಡಿಸಲು ಆಗುವುದಿಲ್ಲ. ಆ ಹಕ್ಕಿಲ್ಲದ ಆಸ್ತಿ ಮೇಲೆ ಸಾಲ ಪಡೆಯಲು ಆಗುವುದಿಲ್ಲ. “ನಮ್ಮ ಮೆಟ್ರೋ’ ಮೊದಲ ಹಂತದ ಮಾರ್ಗದಲ್ಲಿ ಎದುರಾಗಿರುವ ಸಮಸ್ಯೆಯೂ ಇದೇ ಆಗಿದೆ.
ತಾನು ಸಂಪೂರ್ಣ ಹಕ್ಕನ್ನೇ ಹೊಂದಿರದ ಜಾಗಗಳಲ್ಲಿ ಆಸ್ತಿಯನ್ನು ಅಭಿವೃದ್ಧಿಪಡಿಸಲು (ಪ್ರಾಪರ್ಟಿ ಡೆವಲಪ್‌ಮೆಂಟ್) ಸಹಜವಾಗಿ ಬಿಎಂಆರ್‌ಸಿ ಹಿಂದೇಟು ಹಾಕಬೇಕಾಗುತ್ತದೆ. ಈ ತಾಂತ್ರಿಕ ಸಮಸ್ಯೆ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೂ ತರಲಾಗಿದೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಯುವ ವಿಶ್ವಾಸ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸುತ್ತಾರೆ.
ಇದಲ್ಲದೆ, ಉದ್ದೇಶಿತ ಆಸ್ತಿಗಳಿಗೆ ಬಿಬಿಎಂಪಿ ತೆರಿಗೆ ವಿಧಿಸಬೇಕಾಗುತ್ತದೆ. ಬಿಎಂಆರ್‌ಸಿ ಈ ಆಸ್ತಿಯ ಮೇಲೆ ಹಕ್ಕು ಹೊಂದಿಲ್ಲ ಎಂದಾದರೆ, ತೆರಿಗೆ ಪಾವತಿಗೆ ಸಂಬಂಧಿಸಿದ ನೋಟಿಸ್ ಅನ್ನು ಮಾಲಿಕರಿಗೆ ಜಾರಿ ಮಾಡಬೇಕಾಗುತ್ತದೆ. ನಿರ್ಮಿತ ಪ್ರದೇಶದಲ್ಲಿರುವ ಈ ಆಸ್ತಿಗಳಿಗೆ ತೆರಿಗೆ ಮೊತ್ತ ಲಕ್ಷಾಂತರ ರೂ. ಆಗುತ್ತದೆ. ಪರಿಣಾಮ ಸಂತ್ರಸ್ತರು ಪೇಚೆಗೆ ಸಿಲುಕುವ ಸಾಧ್ಯತೆಯೂ ಇದೆ. ಆದರೆ, ಇದುವರೆಗೆ ಇಂತಹ ಪ್ರಕರಣಗಳು ನಮ್ಮ ಗಮನಕ್ಕೆ ಬಂದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಅಲ್ಪಸ್ವಲ್ಪ ಬಾಕಿ ಇರಬೇಕು-ಎಂಡಿ: ಈ ಹಿಂದೆ ಮ್ಯಾನ್ಯುವಲ್ ಆಗಿಯೇ ಖಾತಾ ಬದಲಾವಣೆ ಆಗುತ್ತಿತ್ತು. ಪ್ರಸ್ತುತ ಆನ್‌ಲೈನ್‌ನಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ. ಮೊದಲ ಹಂತದ ಮಾರ್ಗದಲ್ಲಿ ವಶಪಡಿಸಿಕೊಂಡ ಆಸ್ತಿಗಳ ಖಾತಾ ಬದಲಾವಣೆ ಅಲ್ಪಸ್ವಲ್ಪ ಬಾಕಿ ಇರಬೇಕು. ಎಷ್ಟು ಬಾಕಿ ಇವೆ ಎಂಬುದು ನಿಖರವಾದ ಮಾಹಿತಿ ಸದ್ಯಕ್ಕಿಲ್ಲ. ಉಳಿದಂತೆ ಎರಡನೇ ಹಂತದ ಮಾರ್ಗದಲ್ಲಿನ ಆಸ್ತಿಗಳ ಖಾತಾ ಬದಲಾವಣೆಯನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಈಗಾಗಲೇ ಗಡುವು ವಿಧಿಸಲಾಗಿದೆ ಎಂದು ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇs… ಸ್ಪಷ್ಟಪಡಿಸುತ್ತಾರೆ.
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.