ಪುರಭವನದೆದುರು ಧರಣಿ ನಿಷೇಧಕ್ಕೆ ಆಕ್ರೋಶ
Team Udayavani, Mar 4, 2020, 3:08 AM IST
ಬೆಂಗಳೂರು: ನಗರದ ಸರ್.ಪುಟ್ಟಣ್ಣಚೆಟ್ಟಿ ಪುರಭವನದ ಎದುರು ಪ್ರತಿಭಟನೆಗೆ ನಿಷೇಧ ಹೇರಿರುವ ಪಾಲಿಕೆಯ ಆಡಳಿತ ಪಕ್ಷ ನಿರ್ಣಯ ವಿರೋಧಿಸಿ ಮಂಗಳವಾರ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆಯ ಸಾಮಾನ್ಯ ಸಭೆಗೂ ಮುನ್ನಾ ಪಾಲಿಕೆಯ ಕಟ್ಟಡದ ಎದುರು ಪ್ರತಿಭಟಿಸಿದ ಪಾಲಿಕೆಯ ಕಾಂಗ್ರೆಸ್- ಜೆಡಿಎಸ್ ಸದಸ್ಯರು ಮೇಯರ್ ಎಂ. ಗೌತಮ್‌ಕುಮಾರ್ ವಿರುದ್ಧ ಧಿಕ್ಕಾರ ಕೂಗಿದರು. ಮೇಯರ್ ಆರ್‌ಎಸ್‌ಎಸ್‌ನ ಅಜೆಂಡಾದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಸಭೆ ಪ್ರಾರಂಭದಲ್ಲಿ ವಿರೋಧ ಪಕ್ಷದ ನಾಯಕ ಅಬ್ದುಲ್‌ವಾಜಿದ್ ವಿಷಯ ಪ್ರಸ್ತಾಪಿಸಿ, ಪುರಭವನದ ಮುಂದೆ ಪ್ರತಿಭಟನೆ ಮಾಡಬಾರದು ಎಂದು ಸ್ವಯಂ ಪ್ರೇರಿತವಾಗಿ ನಿರ್ಣಯ ಅಂಗೀಕಾರ ಮಾಡಲಾಗಿದೆ. ಪೊಲೀಸ್ ಅಧಿಕಾರಿಗಳು ಏನು ಪತ್ರ ಬರೆದಿದ್ದಾರೆ. ನಿರ್ಣಯದ ಬಗ್ಗೆ ಕಾನೂನು ಕೋಶದ ಅಧಿಕಾರಿ ಗಳಿಂದ ಉತ್ತರ ಕೊಡಿಸಬೇಕು ಎಂದು ಪಟ್ಟು ಹಿಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಎಂ.ಗೌತಮ್‌ಕುಮಾರ್, ಬಿಬಿಎಂಪಿ ಆಯುಕ್ತರು ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ ಎಂದಾಗ, ಪದ್ಮನಾಭರೆಡ್ಡಿ ಸೇರಿದಂತೆ ವಿರೋಧ ಪಕ್ಷದವರು ನಿಯಮ 51ರ ಅನ್ವಯ ವಿಷಯ ಮಂಡನೆ ಮಾಡಲಿ ಎಂದರು. ಅಬ್ದುಲ್‌ವಾಜಿದ್ ಮಾತನಾಡಿ, ಆಡಳಿತ ಪಕ್ಷದವರಿಂದ ಹೇಳಿಸಿಕೊಳ್ಳಬೇಕಾದ ಅವಶ್ಯಕತೆಯಿಲ್ಲ. ನಮಗೆ ಏನು ಮಾಡಬೇಕು ಎಂದು ಗೊತ್ತಿದೆ ಎಂದರು. ಈ ವೇಳೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ನಿರ್ಣಯಕ್ಕೆ ಕಾನೂನಿನಲ್ಲಿ ಅವಕಾಶ: ಕಾನೂನು ಕೋಶದಿಂದ ಉತ್ತರ ನೀಡುವಂತೆ ಸಭೆಯ ಬಾವಿಗಿಳಿದು ವಿರೋಧ ಪಕ್ಷದ ಸದಸ್ಯರು ಧರಣಿ ನಡೆಸಿದರು. ಸಭೆಗೆ ಉತ್ತರ ನೀಡಿದ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್, ಪುರಭವನದ ಮುಂದೆ ಪ್ರತಿಭಟನೆ ನಡೆಸುವುದರಿಂದ ಇಲ್ಲಿನ ಆಸ್ಪತ್ರೆಗಳಿಗೆ ಸಮಸ್ಯೆಯಾಗುತ್ತಿದೆ. ಪಾಲಿಕೆಯ ಆದಾಯವೂ ಕಡಿಮೆಯಾಗಿದೆ. ಪೊಲೀಸ್ ಆಯುಕ್ತರೊಂದಿಗೂ ಚರ್ಚೆ ಮಾಡಲಾಗಿದೆ. ಪ್ರತಿಭಟನೆಗೆ ಸ್ವಾತಂತ್ರ್ಯ ಉದ್ಯಾನ, ಮೌರ್ಯವೃತ್ತದಲ್ಲಿ ಅವಕಾಶವಿದೆ.
ನಿರ್ಣಯ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಎಂದು ಸ್ಪಷ್ಟಪಡಿಸಿದರು. ಆಯುಕ್ತರ ಉತ್ತರಕ್ಕೂ ಸಮಾಧಾನಗೊಳ್ಳದೆ ಘೋಷಣೆ ಕೂಗಲು ವಿರೋಧ ಪಕ್ಷದವರು ಮುಂದಾದಾಗ ಮೇಯರ್ ಸಭೆಯನ್ನು ಮಧ್ಯಾಹ್ನ 2ಗಂಟೆಗೆ ಮುಂದೂಡಿದರು. ಮತ್ತೆ ಸಭೆ ಪ್ರಾರಂಭವಾಗುತ್ತಿದ್ದಂತೆ ಮಾಜಿ ಮೇಯರ್ ಮಂಜುನಾಥ ರೆಡ್ಡಿ ಹಾಗೂ ಅಬ್ದುಲ್‌ವಾಜಿದ್ ಪುರಭವನದ ಮುಂದೆ ಪ್ರತಿಭಟನೆ ವಿಚಾರವಾಗಿ ನಿಲುವಳಿ ಮಂಡಿಸಿದರು.
ನಿಲುವಳಿ ತಿರಸ್ಕಾರಕ್ಕೆ ಆಡಳಿತ ಪಕ್ಷದ ಸದಸ್ಯರು ಮೇಯರ್ ಮೇಲೆ ಒತ್ತಡ ಹಾಕಿದರು. ಮಂಜುನಾಥ ರೆಡ್ಡಿ ಮಧ್ಯಪ್ರವೇಶಿಸಿ ಕೆಎಂಸಿ ಕಾಯ್ದೆ ಅನ್ವಯ ನಡೆದುಕೊಳ್ಳಿ ಎಚ್ಚರಿಸಿದರು. ಮೇಯರ್, ನಿಲುವಳಿಯನ್ನು ತಿರಸ್ಕರಿಸಲಾಗಿದೆ ಎಂದು ಘೋಷಿಸಿದರು. ಮೇಯರ್ ನಿರ್ಧಾರಕ್ಕೆ ವಿರೋಧ ಪಕ್ಷದ ಸದಸ್ಯರು ನಿರ್ಣಯ ಪ್ರತಿಯನ್ನು ಹರಿದು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿ, ಸಭಾತ್ಯಾಗ ಮಾಡಿದರು. ಆಡಳಿತ ಪಕ್ಷದವರು ಬೆಂಗಳೂರು ವಿರೋಧಿಗಳಿಗೆ ಧಿಕ್ಕಾರ ಕೂಗಿದರು.
ಭಿತ್ತಿಪತ್ರ ಕಿತ್ತುಹಾಕಿ: ವಿರೋಧ ಪಕ್ಷದ ಸದಸ್ಯರು ಪುರಭವನದ ಎದುರು ಪ್ರತಿಭಟನೆಗೆ ನಿಷೇಧ ಹೇರಿರುವುದನ್ನು ವಿರೋಧಿಸುವ ಬರಹವುಳ್ಳ ಭಿತ್ತಿಪತ್ರಗಳನ್ನು ಸಭೆಗೆ ತಂದಿದ್ದನ್ನು ಮೇಯರ್ ವಿರೋಧಿಸಿದರು. ಭಿತ್ತಿಫಲಕ ಹೊರಕ್ಕೆ ಹಾಕಲು ಆಯುಕ್ತರಿಗೆ ಸೂಚಿಸಿದರು. ಭಿತ್ತಿಪಲಕ ತರುವುದು ಪಾಲಿಕೆಗೆ ಮಾಡುವ ಅವಮಾನ ಎಂದರು. ಮಧ್ಯ ಪ್ರವೇಶಿಸಿದ ಎಂ.ಶಿವರಾಜು, ಬಿಜೆಪಿ ವಿರೋಧ ಪಕ್ಷದಲ್ಲಿ ಇದ್ದಾಗ ಚೊಂಬು, ಬಕೆಟ್‌ತಂದಿದ್ದರು. ಕಾನೂನು ಎಲ್ಲರಿಗೂ ಒಂದೇ ಎಂದು ತಿರುಗೇಟು ನೀಡಿದರು.
ಪರಿಶೀಲನೆ ನಡೆಸಲು ಮನವಿ: ನಗರದ ಮೂಲಸೌಕರ್ಯ ಅಭಿವೃದ್ಧಿ ದೃಷ್ಟಿಯಿಂದ ನಗರಕ್ಕೆ ಬರುವ ಹೊರ ರಾಜ್ಯ ಮತ್ತು ಜಿಲ್ಲೆಗಳ ವಾಹನಗಳಿಂದ ಶುಲ್ಕ ವಿಧಿಸುವ ಕುರಿತು ಸರ್ಕಾರದೊಂದಿಗೆ ಚರ್ಚೆ ನಡೆಸಿ, ಶುಲ್ಕ ಹೆಚ್ಚಿಸಿದರೆ ಆದಾಯದ ಪ್ರಮಾಣ ಹೆಚ್ಚಾಗಲಿದೆ. ಇನ್ನು ಬಿಬಿಎಂಪಿಯ ವಿಶೇಷ ಆಯುಕ್ತರ ಕಚೇರಿಯಲ್ಲಿ ಯಾವುದೇ ಕಾರ್ಯ ಸರಿಯಾಗಿ ನಡೆಯುತ್ತಿಲ್ಲವೆಂಬ ದೂರುಗಳಿವೆ ಪರಿಶೀಲನೆ ನಡೆಸಿ. ಮೆಟ್ರೋ ನಿಲ್ದಾಣಗಳ ಬಗ್ಗೆ ಹಾಗೂ ಯೋಜನೆಗಳ ಬಗ್ಗೆ ಪಾಲಿಕೆಯ ಯಾವುದೇ ಸದಸ್ಯರಿಗೆ ಮಾಹಿತಿ ಇಲ್ಲ. ಬಿಎಂಆರ್‌ಸಿಎಲ್‌ನಿಂದ ಮಾಹಿತಿ ಕೊಡಿಸಿ ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಸಭೆಯಲ್ಲಿ ಮನವಿ ಮಾಡಿದರು.
ಸದನದಲ್ಲಿ ಕೇಳಿಬಂದದ್ದು
ಇಂದಿರಾ ಕ್ಯಾಂಟೀನ್‌ಗಳ ಮೇಲ್ವಿಚಾರಣೆಗೆ ಮಾರ್ಷಲ್‌ಗಳ ನೇಮಕ ಮಾಡಲಾಗಿದೆ. ಇವರ ಜವಾಬ್ದಾರಿ ಏನು? ನಗರದ ವಿವಿಧೆಡೆ ಕಸದ ಬಿನ್‌ಗಳನ್ನು ಅಳವಡಿಸಲಾಗಿದೆ. ಇದರ ನಿರ್ವಹಣೆ ಯಾರ ಹೊಣೆ?
-ಉಮೇಶ್ ಶೆಟ್ಟಿ, ಪಾಲಿಕೆ ಸದಸ್ಯ
ಉದ್ದಿಮೆಗಳಿಗೆ ಆನ್‌ಲೈನ್ ಪರವಾನಗಿ ನೀಡುವುದನ್ನು ನಿಲ್ಲಿಸಬೇಕು. ಇದರಿಂದ ಸಮಸ್ಯೆಯಾಗು ತ್ತದೆ. ನಿಯಮ ಉಲ್ಲಂಘನೆ ಮಾಡಿ ಪರ ವಾನಗಿ ತೆಗೆದುಕೊಂಡರೆ ಉದ್ದಿಮೆದಾರ ರನ್ನು ಪಾಲಿಕೆ ಪ್ರಶ್ನೆ ಮಾಡಲು ಆಗುವುದಿಲ್ಲ.
-ಕಟ್ಟೆ ಸತ್ಯನಾರಾಯಣ, ಮಾಜಿ ಮೇಯರ್
ಪುರಭವನದ ಮುಂದೆ ಪ್ರತಿಭಟನೆಗೆ ನಿಷೇಧ ಹೇರಿರುವುದನ್ನು ಸಾರ್ವಜನಿಕರು, ಕಲಾವಿದರು ಸ್ವಾಗತಿಸಿದ್ದಾರೆ.
-ಕಟ್ಟೆ ಸತ್ಯನಾರಾಯಣ, ಮಾಜಿ ಮೇಯರ್
ಪೌರಕಾರ್ಮಿಕರಿಗೆ ಕಸ ವಿಲೇವಾರಿಗೆ ಚೀಲ ನೀಡಲಾಗುತ್ತಿದೆ. ಉತ್ತಮ ತಳ್ಳುಗಾಡಿ ಸೌಲಭ್ಯ ನೀಡುವ ಯೋಗ್ಯತೆ ಇಲ್ಲವೇ?.
-ಡಾ.ರಾಜು, ಪಾಲಿಕೆ ಸದಸ್ಯ
60 ವರ್ಷ ಮೇಲ್ಪಟ್ಟ ಹಾಗೂ ಅಕಾ ಲಿಕ ಮೃತಪಟ್ಟ ಪೌರಕಾರ್ಮಿಕರಿಗೆ ಪರ್ಯಾಯವಾಗಿ ಅಥವಾ ಅವರ ಅವಲಂಬಿತರನ್ನು ನೇಮಿಸಿಕೊಳ್ಳಿ.
-ವೀಣಾಕುಮಾರಿ, ಪಾಲಿಕೆ ಸದಸ್ಯೆ
110ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದೆ. ಈ ಸಂಬಂಧ ಜಲ ಮಂಡಳಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ.
-ನರಸಿಂಹ ನಾಯಕ್, ಪಾಲಿಕೆ ಸದಸ್ಯ
ಪೌರಕಾರ್ಮಿಕರನ್ನು ನೇಮಿಸಿಕೊಳ್ಳುವ ಸಂಬಂಧ ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ)ರಿಗೆ ಸೂಚನೆ ನೀಡಲಾಗಿದೆ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪಾಲಿಕೆಯ ಶಿಕ್ಷಕರಿಗೆ, ವಿದ್ಯುತ್‌ಚಿತಾಗಾರ ಹಾಗೂ ರುದ್ರಭೂಮಿ ಸಿಬ್ಬಂದಿಗಳ ವೇತನ ನೀಡುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ.
-ಬಿ.ಎಚ್.ಅನಿಲ್‌ಕುಮಾರ್, ಬಿಬಿಎಂಪಿ ಆಯುಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.