200 ಕೋಟಿಗೂ ಅಧಿಕ ತೆರಿಗೆ ನಷ್ಟ
Team Udayavani, Jul 14, 2018, 12:15 PM IST
ಬೆಂಗಳೂರು: ತೆರಿಗೆ ಸಂಗ್ರಹಕ್ಕೆ ಬಿಬಿಎಂಪಿ ಅಧಿಕಾರಿಗಳು ತೋರಿದ ನಿರ್ಲಕ್ಷ್ಯಕ್ಕೆ ಕಳೆದ ಒಂದು ವರ್ಷದಲ್ಲಿ ಪಾಲಿಕೆಗೆ ನೂರಾರು ಕೋಟಿ ನಷ್ಟವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದಲ್ಲಿ ಪ್ರತಿವರ್ಷ ನಿರ್ಮಾಣವಾಗುವ ಕಟ್ಟಡಗಳಿಗೆ ಪಾಲಿಕೆಯಿಂದ ಸ್ವಾಧೀನಾನುಭವ ಪ್ರಮಾಣ ಪತ್ರ (ಒಸಿ) ನೀಡಲಾಗುತ್ತಿದೆ. ಆದರೆ, ಕಟ್ಟಡಗಳಿಗೆ ಅಧಿಕಾರಿಗಳು ತೆರಿಗೆ ನಿಗದಿಪಡಿಸದ ಹಿನ್ನೆಲೆಯಲ್ಲಿ ಸಾವಿರಾರು ಕಟ್ಟಡಗಳಿಂದ ಪಾಲಿಕೆಗೆ ಬರಬೇಕಿದ್ದ ತೆರಿಗೆ ಕೈತಪ್ಪಿದಂತಾಗಿದೆ.
ಬಿಬಿಎಂಪಿ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಲವು ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಆದರೆ, ಕೆಳಹಂತದ ಅಧಿಕಾರಿಗಳು ಕಟ್ಟಡಗಳಿಗೆ ತೆರಿಗೆ ನಿಗದಿಪಡಿಸದೆ ವಿಳಂಬ ನೀತಿ ಅನುಸರಿಸುವ ಮೂಲಕ ಖಾಸಗಿಯವರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಹೇಳಲಾಗಿದೆ.
ಪಾಲಿಕೆಯ ವ್ಯಾಪ್ತಿಯಲ್ಲಿ 2017-18ನೇ ಸಾಲಿನಲ್ಲಿ 160 ಕಟ್ಟಡಗಳ 23,232 ಆಸ್ತಿಗಳಿಗೆ ಒಸಿ ನೀಡಲಾಗಿದೆ. ಆದರೆ, ಆ ಪೈಕಿ ಕೇವಲ 4 ಕಟ್ಟಡಗಳ 761 ಆಸ್ತಿಗಳಿಗೆ ಮಾತ್ರ ತೆರಿಗೆ ನಿಗದಿಪಡಿಸಿದ್ದು, ಉಳಿದ 156 ಕಟ್ಟಡಗಳ 22,471 ಆಸ್ತಿಗಳಿಗೆ ತೆರಿಗೆ ನಿಗದಿಪಡಿಸಿಲ್ಲ. ಪ್ರಮುಖವಾಗಿ ಮಹದೇವಪುರ ವಲಯದಲ್ಲಿಯೇ ಅತಿಹೆಚ್ಚು ಆಸ್ತಿಗಳಿಗೆ ಒಸಿ ನೀಡಲಾಗಿದ್ದರೂ, ಒಂದೇ ಒಂದು ಆಸ್ತಿಗೂ ತೆರಿಗೆ ನಿಗದಿಪಡಿಸದಿರುವುದು ದಾಖಲೆಗಳಿಂದ ಬಯಲಾಗಿದೆ.
200 ಕೋಟಿ ನಷ್ಟ: ಪಾಲಿಕೆಯ ಅಧಿಕಾರಿಗಳು 22,471 ಆಸ್ತಿಗಳಿಗೆ ತೆರಿಗೆ ನಿಗದಿಪಡಿಸದ ಹಿನ್ನೆಲೆಯಲ್ಲಿ ಒಂದು ವರ್ಷದಲ್ಲಿ ಪಾಲಿಕೆಯಿಂದ ಸುಮಾರು 200 ಕೋಟಿ ರೂ. ಹೆಚ್ಚಿನ ತೆರಿಗೆ ನಷ್ಟವಾಗಿದೆ. ಪ್ರಮುಖವಾಗಿ 156 ಕಟ್ಟಡಗಳು ಬಹುಮಹಡಿಯಾಗಿರುವುದರಿಂದ ಪಾಲಿಕೆಗೆ ಹೆಚ್ಚಿನ ತೆರಿಗೆ ಬರಬೇಕಿತ್ತು. ಅಧಿಕಾರಿಗಳು ಆಸ್ತಿ ಮಾಲಿಕರೊಂದಿಗೆ ಶಾಮೀಲಾಗಿ ತೆರಿಗೆ ನಿಗದಿಪಡಿಸುತ್ತಿಲ್ಲ ಎಂದು ತಿಳಿದುಬಂದಿದೆ.
ಆಯುಕ್ತರಿಗೆ ಪತ್ರ: ಈ ಮಧ್ಯೆ, ಪಾಲಿಕೆಯ ಎಲ್ಲ ಎಂಟೂ ವಲಯಗಳಲ್ಲಿ ಅಧಿಕಾರಿಗಳು ಸಾವಿರಾರು ಕಟ್ಟಡಗಳಿಗೆ ಒಸಿ ನೀಡಿದ್ದಾರೆ. ಆದರೆ, ಆಸ್ತಿಗಳಿಗೆ ತೆರಿಗೆ ನಿಗದಿಪಡಿಸಿಲ್ಲ. ಇದರಿಂದ ಪಾಲಿಕೆಗೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ. ಮಹದೇವಪುರದ ಹೊರಮಾವು ಹಾಗೂ ಕೊತ್ತನೂರಿನಲ್ಲಿ 3 ಅಪಾರ್ಟ್‌ಮೆಂಟ್‌ಗಳ 623 ಫ್ಲಾಟ್‌ಗಳಿಗೆ ಒಂದು ವರ್ಷ ಹಿಂದೆಯೇ ಒಸಿ ನೀಡಿದರೂ, ಈವರೆಗೆ ತೆರಿಗೆ ನಿಗದಿಗೊಳಿಸಿಲ್ಲ. ಹೀಗಾಗಿ ತೆರಿಗೆ ನಿಗದಿಪಡಿಸಲು ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಡಳಿತ ಪಕ್ಷ ನಾಯಕ ಎಂ.ಶಿವರಾಜ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಆಸ್ತಿ ಮಾಲಿಕರು ಒಸಿ ಅಥವಾ ವಿದ್ಯುತ್ ಸಂಪರ್ಕ ಯಾವುದು ಮೊದಲು ಪಡೆಯುತ್ತಾರೆಯೋ ಆ ದಿನಾಂಕದಿಂದಲೇ ಅವರು ತೆರಿಗೆ ಪಾವತಿಸಬೇಕಾಗುತ್ತದೆ. ಒಸಿ ನೀಡಿದ ನಂತರವೂ ತೆರಿಗೆ ನಿಗದಿಪಡಿಸಿದ ಆಸ್ತಿಗಳ ಕುರಿತು ಮಾಹಿತಿ ಪಡೆದು, ಅಂತಹ ಕಟ್ಟಡಗಳಿಂದ ತೆರಿಗೆ ಸಂಗ್ರಹಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ
2017-18ನೇ ಸಾಲಿನಲ್ಲಿ ಒಸಿ ಪಡೆದ ಆಸ್ತಿಗಳ ಮಾಹಿತಿ
ವಲಯ ಕಟ್ಟಡಗಳು ಆಸ್ತಿಗಳ ಸಂಖ್ಯೆ
-ಮಹದೇವಪುರ 56 9,833
-ಯಲಹಂಕ 18 1,392
-ಪೂರ್ವ 21 3,545
-ದಾಸರಹಳ್ಳಿ 02 512
-ಬೊಮ್ಮನಹಳ್ಳಿ 32 4,961
-ದಕ್ಷಿಣ 13 688
-ಪಶ್ಚಿಮ 11 786
-ರಾಜರಾಜೇಶ್ವರಿ ನಗರ 07 1,514
-ಒಟ್ಟು 160 23,232
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.