ತ್ಯಾಜ್ಯ ನಿರ್ವಹಣೆಗೆ ಸ್ವಂತ ವಾಹನ
Team Udayavani, Jan 30, 2019, 6:49 AM IST
ಬೆಂಗಳೂರು: ನಗರದಲ್ಲಿ ಪದೇ ಪದೆ ಸೃಷ್ಟಿಯಾಗುವ ಕೃತಕ ತ್ಯಾಜ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬಿಬಿಎಂಪಿಯು ಭವಿಷ್ಯದಲ್ಲಿ ತ್ಯಾಜ್ಯ ವಿಲೇವಾರಿಯ ಸಂಪೂರ್ಣ ಜವಾಬ್ದಾರಿ ತಾನೇ ವಹಿಸಿಕೊಳ್ಳಲು ಸಜ್ಜಾಗುತ್ತಿದೆ. ಪಾಲಿಕೆಯ ಮಾಸಿಕ ಸಭೆಯಲ್ಲಿ ವಾರ್ಡ್‌ವಾರು ತ್ಯಾಜ್ಯ ವಿಲೇವಾರಿಗೆ ಆಹ್ವಾನಿಸಿರುವ ಟೆಂಡರ್ ಪ್ರಕ್ರಿಯೆಯಲ್ಲಿನ ಲೋಪಗಳ ಕುರಿತ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಆಯುಕ್ತ ಎನ್.ಮಂಜುನಾಥ ಪ್ರಸಾದ್, ತ್ಯಾಜ್ಯ ಸಮಸ್ಯೆ ಪರಿಹಾರಕ್ಕಾಗಿ ಟ್ರಾನ್ಸ್‌ಫರ್ ಸ್ಪೇಷನ್, ಸ್ವಂತ ಆಟೋ ಟಿಪ್ಪರ್, ಕಾಂಪ್ಯಾಕ್ಟರ್‌ಗಳ ಖರೀದಿಸುವ ಬಗ್ಗೆ ಪ್ರಸ್ತಾಪಿಸಿದರು.
ವಾರ್ಡ್‌ಗಳಿಗೆ ಸ್ಟೇಷನ್: ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಡೆಯಲು 100 ವಾರ್ಡ್‌ಗಳಿಗೆ ಅನುಕೂಲವಾಗುವಂತೆ 50 ಕಡೆಗಳಲ್ಲಿ ತ್ಯಾಜ್ಯ ಸಂಗ್ರಹಿಸುವ ಟ್ರಾನ್ಸ್‌ಫರ್ ಸ್ಟೇಷನ್ ಸ್ಥಾಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಒಪ್ಪಿಗೆ ನೀಡಿದರೆ 198 ವಾರ್ಡ್‌ಗಳಿಗೂ ಸ್ಟೇಷನ್ ನಿರ್ಮಿಸಲಾಗುವುದು. ಜತೆಗೆ ತ್ಯಾಜ್ಯ ನಿರ್ವಹಣೆ ಗುತ್ತಿಗೆದಾರರು ಪ್ರತಿಭಟನೆಗೆ ಮುಂದಾದಾಗ ತ್ಯಾಜ್ಯ ಸಮಸ್ಯೆ ಸೃಷ್ಟಿಯಾಗದಂತೆ ಅಗತ್ಯವಿರುವ ವಾಹನ ಖರೀದಿಸಲು ನಿರ್ಧರಿಸಿದ್ದು, ಆ ಮೂಲಕ ತ್ಯಾಜ್ಯ ವಿಲೇವಾರಿಗೆ ಗುತ್ತಿಗೆದಾರರ ಮೇಲೆ ಅವಲಂಬನೆ ಕಡಿಮೆ ಮಾಡಲು ಯತ್ನಿಸಲಾಗುವುದು ಎಂದು ಹೇಳಿದರು.
ವಿಷಯ ಪ್ರಸ್ತಾಪಿಸಿದ ಪಾಲಿಕೆ ವಿರೋಧ ಪಕ್ಷ ನಾಯಕ ಪದ್ಮನಾಭರೆಡ್ಡಿ, ಟೆಂಡರ್ ಆಹ್ವಾನಿಸುವ ಮೊದಲು ಸ್ಥಾಯಿ ಸಮಿತಿ ಹಾಗೂ ಕೌನ್ಸಿಲ್ ಗಮನಕ್ಕೆ ತಂದು ಸಲಹೆಗಳನ್ನು ಪಡೆಯಬೇಕಿತ್ತು. ಜತೆಗೆ ಟೆಂಡರ್‌ನಲ್ಲಿ ಕೇವಲ ಹಸಿ ತ್ಯಾಜ್ಯ ಹಾಗು ಸ್ಯಾನಿಟರಿ ತ್ಯಾಜ್ಯವನ್ನು ಮಾತ್ರ ಉಲ್ಲೇಖೀಸಿದ್ದು, ಒಣತ್ಯಾಜ್ಯವನ್ನು ಸಂಗ್ರಹಿಸುವವರು ಯಾರು? ಎಂದರು.
2010-11ರಲ್ಲಿ ತ್ಯಾಜ್ಯ ನಿರ್ವಹಣೆ ವೆಚ್ಚ 223 ಕೋಟಿ ರೂ.ಗಳಿದ್ದರೆ, 2017-18ಕ್ಕೆ 799.56 ಕೋಟಿ ರೂ.ಗಳಾಗಿವೆ. ಇದೀಗ ಕೇವಲ ಹಸಿ ತ್ಯಾಜ್ಯ ಸಂಗ್ರಹಕ್ಕೆ ಗುತ್ತಿಗೆ ಮೊತ್ತವನ್ನು 426.32 ಕೋಟಿ ರೂ. ನಿಗದಿ ಮಾಡಲಾಗಿದೆ. ಇನ್ನು ಮಿಶ್ರ ತ್ಯಾಜ್ಯ ವಿಲೇವಾರಿ ಘಟಕ, ತ್ಯಾಜ್ಯ ಸಂಸ್ಕರಣಾ ಘಟಕಗಳ ನಿರ್ವಹಣೆ, ಪೌರಕಾರ್ಮಿಕರಿಗೆ ವೇತನ ಪಾವತಿ ಸೇರಿ ತ್ಯಾಜ್ಯ ನಿರ್ವಹಣಾ ಮೊತ್ತ ಇನ್ನಷ್ಟು ಹೆಚ್ಚಲಿದೆ. ಅಧಿಕಾರಿಗಳು ವೆಚ್ಚವನ್ನು ಕಡಿಮೆ ಮಾಡಬೇಕೇ ಹೊರತು, ಹೆಚ್ಚಿಸಬಾರದು. ಟೆಂಡರ್ ಅಂಶಗಳು ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ ಎಂದು ಆರೋಪಿಸಿದರು.
ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯ ಮಂಜುನಾಥ ರಾಜ್, ಜನಸಂಖ್ಯೆಗೆ ಅನುಗುಣವಾಗಿ ಆಟೋ ಹಾಗೂ ಕಾಂಪ್ಯಾಕ್ಟರ್‌ಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಕಡಿಮೆ ಜನಸಂಖ್ಯೆಯಿರುವ ವಾರ್ಡ್‌ಗೆ ಹೆಚ್ಚು ಆಟೋ, ಕಾಂಪ್ಯಾಕ್ಟರ್ ನೀಡಲಾಗಿದೆ ಎಂದು ದೂರಿದರು. ಇದಕ್ಕೆ ಸಿಟ್ಟಾದ ವಿಶೇಷ ಆಯುಕ್ತ ರಂದೀಪ್ ಅಧಿಕಾರಿಗಳ ಗ್ಯಾಲರಿ ಇಳಿದು ಸಮಜಾಯಿಶಿ ನೀಡಲು ಮುಂದಾದರು. ಸದಸ್ಯರು ಅವರ ಮಾತನ್ನು ಕೇಳದ ಕಾರಣ ವಾಪಸ್ ತೆರಳಿದರು.
ಶಾಸಕ ಸತೀಶ್ ರೆಡ್ಡಿ ಮಾತನಾಡಿ, ತ್ಯಾಜ್ಯ ವಿಂಗಡಣೆಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ. ಆದರೆ, ಏಕಾಏಕಿ ಹಸಿ ತ್ಯಾಜ್ಯ ಮಾತ್ರ ಸಂಗ್ರಹಿಸುತ್ತೇವೆಂದು ಹೇಳಿದರೆ, ಜನರಿಗೆ ತೊಂದರೆಯಾಗುತ್ತದೆ. ಹೀಗಾಗಿ ಒಂದು ಎರಡು ತ್ಯಾಜ್ಯ ಸಂಗ್ರಹವನ್ನು ಒಬ್ಬರಿಗೆ ಕೊಟ್ಟು ನಂತರದಲ್ಲಿ ಈ ವ್ಯವಸ್ಥೆ ತಂದರೆ ಒಳ್ಳೆಯದು ಎಂದರು.
ಕಠಿಣ ಕ್ರಮ ಕಡ್ಡಾಯ: ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್, ತ್ಯಾಜ್ಯ ನಿರ್ವಹಣೆ ಕುರಿತಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಆದೇಶ ಎರಡು ವಾರದಲ್ಲಿ ಜಾರಿಗೊಳಿಸಬೇಕೆಂದು ಆದೇಶಿಸಿದೆ (ಎನ್‌ಜಿಟಿ) ಹಾಗೂ ಹೈಕೋರ್ಟ್ ಹಲವಾರು ಆದೇಶಗಳನ್ನು ನೀಡಿವೆ. ಜತೆಗೆ ಎನ್‌ಜಿಟಿ ಪಾಲಿಕೆಗೆ 5 ಕೋಟಿ ರೂ. ದಂಡ ವಿಧಿಸಿದ್ದು, ನಗರದಲ್ಲಿ ತ್ಯಾಜ್ಯ ವಿಂಗಡಣೆಗೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಜನರು ಕಸ ವಿಂಗಡಿಸಿ ಕೊಟ್ಟರೂ ಗುತ್ತಿಗೆದಾರರು ಅದನ್ನು ಮಿಶ್ರಣ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ಹೀಗಾಗಿ ಕೇವಲ ಹಸಿ ತ್ಯಾಜ್ಯ ಸಂಗ್ರಹಕ್ಕೆ ಟೆಂಡರ್ ಆಹ್ವಾನಿಸಿದ್ದು, ಒಣ ತ್ಯಾಜ್ಯವನ್ನು ಚಿಂದಿ ಆಯುವವರು, ಸ್ವಯಂ ಸೇವಾ ಸಂಘಗಳು ಹಾಗೂ ಸ್ವಶಕ್ತಿ ಸಂಘಗಳಿಗೆ ವಹಿಸಲಾಗುವುದು. ಅದರಂತೆ ವಾರದಲ್ಲಿ ಎರಡು ಬಾರಿ ಒಣ ತ್ಯಾಜ್ಯ ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.